ಕೆಎಸ್ಸಾರ್ಟಿಸಿ ನಷ್ಟ ತಗ್ಗಿಸಲು ಕ್ರಮ
ಆಡಳಿತಾತ್ಮಕ ವೆಚ್ಚ ಕಡಿತದ ಜತೆಗೆ ಎಲ್ಲಾ ಬಸ್‌ಗಳು 24x7 ಕಾರ್ಯಾಚರಣೆ: ಸಚಿವ ಸವದಿ
Team Udayavani, May 28, 2020, 11:28 AM IST
ದಾವಣಗೆರೆ: ಕೋವಿಡ್-19 ಕರ್ತವ್ಯ ನಿರ್ವಹಿಸಿದ ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕರಿಗೆ ಬಸ್ ನಿಲ್ದಾಣದಲ್ಲಿ ಸಚಿವರು ಪುಷ್ಪವೃಷ್ಟಿಗೈದು ಅಭಿನಂದಿಸಿದರು.
ದಾವಣಗೆರೆ: ಕೋವಿಡ್ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಆಗಿರುವ ನಷ್ಟ ತಗ್ಗಿಸಲು ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜತೆಗೆ ರಾಜ್ಯದಲ್ಲಿ ಸಂಸ್ಥೆಯ ಎಸಿ ಬಸ್ ಸೇರಿ ಎಲ್ಲಾ ಬಸ್‌ಗಳು 24×7 ಕಾರ್ಯಾಚರಣೆ ನಡೆಸಲಿವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬುಧವಾರ ನಗರದ ಕೆಎಸ್‌ಆರ್‌ಟಿಸಿ ವಿಭಾಗ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್‌ನಿಂದ ನಾಲ್ಕು ನಿಗಮಗಳಿಗೆ 1800 ಕೋಟಿ ರೂ. ನಷ್ಟ ಆಗಿದೆ. ಇನ್ನೂ ಹೀಗೆ ಮುಂದುವರಿದಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ಚಿಂತಿಸಬೇಕಿದೆ. ಅಧಿಕಾರಿ/ನೌಕರರ ಸಂಬಳಕ್ಕೇ 326 ಕೋಟಿ ರೂ. ಅವಶ್ಯಕತೆ ಇದೆ. ಆದ್ದರಿಂದ ನಿಗಮಗಳ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಕ್ರಮ ವಹಿಸಬೇಕಿದೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 54 ಜನರು ಕೂರುವ ಬಸ್‌ನಲ್ಲಿ 30 ಮಂದಿಗೆ ಮಾತ್ರ ಅವಕಾಶ ನೀಡಬೇಕಿದ್ದು, ಈ ಕಾರಣದಿಂದ ಆದಾಯ ಕುಂಠಿತವಾಗಿದೆ. ಎಸಿ ಬಸ್‌ಗಳಿಗೆ ಅವಕಾಶ ಇಲ್ಲ. ಅಂತಾರಾಜ್ಯ ಓಡಾಟ ಇಲ್ಲ. ಜೊತೆಗೆ ಬೆಳಗಿನ ವೇಳೆಗೆ ಮಾತ್ರ ಸೀಮಿತಗೊಂಡಿರುವುದು ಕೂಡ ಆದಾಯಕ್ಕೆ ದಕ್ಕೆ ತಂದಿದೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಂಡು ಆದಾಯ ಹೆಚ್ಚಿಸುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.
ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ ಮಾತನಾಡಿ, ಪ್ರತಿ ಕಿ.ಮೀಗೆ 34 ರೂ. ಖರ್ಚು ಬರುತ್ತಿದ್ದರೆ 24 ರೂ. ಆದಾಯವಿದೆ. ಸಾಮಾಜಿಕ ಅಂತರ ಹಾಗೂ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಬಸ್ ಓಡಿಸುತ್ತಿರುವುದರಿಂದ ಶೇ. 15 ರಿಂದ 20 ಅಂದರೆ 1 ಕೋಟಿ ಆದಾಯ ಮಾತ್ರ ಬರುತ್ತಿದೆ. ಇನ್ನು ಶಾಲಾ ಕಾಲೇಜು ಆರಂಭವಾದರೆ ಸಾಮಾಜಿಕ ಅಂತರವೂ ಕಷ್ಟವಾಗುತ್ತದೆ. ಹೆಚ್ಚು ಬಸ್‌ಗಳನ್ನು ಬಿಡಬೇಕಾಗುತ್ತದೆ. ಆದರೆ ಸಾಮಾಜಿಕ ಅಂತರದ ನಿಯಮ ಅನುಸರಿಸಿ ಹೆಚ್ಚು ಬಸ್ ಬಿಟ್ಟಷ್ಟು ನಷ್ಟ ಹೆಚ್ಚಾಗಲಿದೆ. ಜೊತೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ, ಲಾಕ್‌ಡೌನ್ ಇನ್ನಷ್ಟು ಸಡಿಲಗೊಂಡಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾದಲ್ಲಿ ನಿರ್ವಹಿಸುವುದು ಕಷ್ಟ. ಈಗ ಜನರೇ ಹೆಚ್ಚು ಬರುತ್ತಿಲ್ಲ, ಹಾಗಾಗಿ ಸಾಮಾಜಿಕ ಅಂತರ ಸಾಧ್ಯವಾಗುತ್ತಿದೆ ಎಂದರು.
ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಟಾಳ್ ದಾವಣಗೆರೆ ವಿಭಾಗದ ಮಾಹಿತಿ ನೀಡಿ, ಅಂತಾರಾಜ್ಯ ಮತ್ತು ಬೆಂಗಳೂರಿಗೆ ತೆರಳುವ ಬಸ್ಸುಗಳಿಂದ ಲಾಭ ಇದೆ. ಈ ಕಾರ್ಯಾಚರಣೆ ಆರಂಭವಾದ ಮೇಲೆ ಸ್ವಲ್ಪ ಸುಧಾರಣೆ ಕಾಣಬಹುದು. ನಿಗಮದಲ್ಲಿ ಸಾಕಷ್ಟು ಜನರು ಹೊರ ಗುತ್ತಿಗೆ ಆಧಾರದಲ್ಲಿ ನೌಕರರು ಇದ್ದು, ಅಗತ್ಯವಿರುವ ಇಲಾಖೆಗಳಿಗೆ ಅವರನ್ನು ನಿಯೋಜಿಸುವ ಮೂಲಕ ಆಡಳಿತಾತ್ಮಕ ವೆಚ್ಚ ತಗ್ಗಿಸಬಹುದು ಎಂದು ಹೇಳಿದರು. ಸಿಬ್ಬಂದಿ ಮುಖ್ಯ ವ್ಯವಸ್ಥಾಪಕ ಶಿವಕುಮಾರಯ್ಯ ಮಾತನಾಡಿ, ಜಾತ್ರೆ ಮತ್ತು ಇತರೆ ಉತ್ಸವಗಳಿಗೆ ವಿಶೇಷ ಬಸ್ ಕಾರ್ಯಾಚರಣೆ ಮೂಲಕ ನಷ್ಟ ಭರಿಸಬಹುದೆಂದರು.
ಸಚಿವರು ಮಾತನಾಡಿ, ಎಸಿ ಇರುವ ವಿಮಾನ ಹಾಗೂ ಬೈಕ್ ಸವಾರಿಯಲ್ಲೂ ಸಾಮಾಜಿಕ ಅಂತರ ಇಲ್ಲ. ಕೆಎಸ್‌ಆರ್‌ಟಿಸಿ ಸೇವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡುವುದು ಕಷ್ಟವಲ್ಲದೆ ನಷ್ಟಕ್ಕೆ ಕಾರಣವಾಗುತ್ತದೆ. ಕೇಂದ್ರದ ಹೊಸ ಮಾರ್ಗಸೂಚಿಗಳು ಬಂದ ನಂತರ ಸಾಮಾಜಿಕ ಅಂತರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇನ್ನು ಬೆಳಗಿನ ಹೊತ್ತು ಮಾತ್ರ ಕೆಎಸ್‌ಆರ್‌ಟಿಸಿ ಸೇವೆಯಿಂದ ನಷ್ಟ ಹೆಚ್ಚುತ್ತಿದೆ. ಆದ ಕಾರಣ ಇನ್ನು ಮುಂದೆ 24+7 ಜೊತೆಗೆ ಸುಮಾರು ಶೇ.25 ತಾಪಮಾನದ ಎಸಿ ಯೊಂದಿಗೆ ಬಸ್‌ಗಳ ಸೇವೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಗಳೂರು ಮತ್ತು ಚನ್ನಗಿರಿಯಲ್ಲಿ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚನ್ನಗಿರಿಯಲ್ಲಿ ಜಾಗ ಸಿಗದ ಕಾರಣ ಪ್ರಸ್ತಾವನೆ ಹಾಗೆಯೇ ಇದೆ ಎಂದು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿ ತಿಳಿಸಿದರು. ಸಂಸದ ಜಿ.ಎಂ ಸಿದ್ದೇಶ್ವರ್, ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಜಾಗ ಹುಡುಕಬೇಕು. ಮಾಯಕೊಂಡದಲ್ಲಿ ಜಾಗವಿದ್ದು, ಅಲ್ಲೇ ಕೆಎಸ್‌ಆರ್‌ಟಿಸಿ ಡಿಪೋ ಆಗಬೇಕು. ಸಂತೇಬೆನ್ನೂರು ಮತ್ತು ತ್ಯಾವಣಗಿಯಲ್ಲಿ ನಿಲ್ದಾಣ ನಿರ್ಮಾಣ ಆಗಬೇಕಿದೆ. ಹಾಗೂ 14 ಕೋಟಿ ರೂ. ವೆಚ್ಚದಲ್ಲಿ ಹರಿಹರ ಬಸ್‌ನಿಲ್ದಾಣ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಹಳ್ಳಿಗಳಿಗೆ ಬಸ್ ಸಂಚಾರ ಪ್ರಾರಂಭಿಸಬೇಕೆಂದರು. ಆಗ ಸಚಿವರು ಪ್ರತಿಕ್ರಿಯಿಸಿ, ದಾವಣಗೆರೆ ವಿಭಾಗಕ್ಕೆ 63 ಹೊಸ ಬಸ್‌ಗಳನ್ನು ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ ಬಸ್
ನಿಲ್ದಾಣಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಕೈಗೊಳ್ಳಲು ಸೂಚಿಸಿದರು. ಪರಿಸರ ಮತ್ತು ಸಿಬ್ಬಂದಿ ನಿರ್ದೇಶಕಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ಮೇಯರ್ ಬಿ.ಜಿ.ಅಜಯಕುಮಾರ್, ಎಸ್‌ಪಿ ಹನುಮಂತರಾಯ, ಇತರರು ಇದ್ದರು.
ಸಾರಿಗೆ ಸಂಜೀವಿನಿ ಹಸಿರು ನಿಶಾನೆಗೆ ವಿಳಂಬ
ಕೋವಿಡ್ ಸೋಂಕು ಪತ್ತೆಗೆ ಸ್ವಾಬ್ ಸಂಗ್ರಹ ಸಂಬಂಧ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಸಿದ್ದಪಡಿಸಿದ ಮೊಬೈಲ್ ಫೀವರ್ ವಾಹನಕ್ಕೆ ಹಸಿರು ನಿಶಾನೆ ತೋರಿಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ತೀರಾ ವಿಳಂಬ ಮಾಡಿದರು. ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇ ಒಂದು ಗಂಟೆ ವಿಳಂಬವಾಗಿ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. 12 ಗಂಟೆಗೆ ಬಂದ ಸಚಿವರು, ಪ್ರಗತಿ ಪರಿಶೀಲನಾ ಸಭೆ ನಡೆಸಲು ತೆರಳಿದರು.ಸಭೆ ಮುಗಿಯುವ ಹಂತದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಆಗಮಿಸಿದ್ದರಿಂದ ಸಭೆ ಮುಂದುವರಿಯಿತು. ಹಾಗಾಗಿ ಸಾರಿಗೆ ಸಂಜೀವಿನಿ ಲೋಕಾರ್ಪಣೆಗೆ ಸಿಬ್ಬಂದಿ, ಮಾಧ್ಯಮದವರು ಎರಡೂವರೆ ತಾಸಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಕೊನೆಗೆ ಸಭೆ ಮುಗಿಸಿ ಮಧ್ಯಾಹ್ನ 1.40ಕ್ಕೆ ಬಂದ ಸಚಿವರು ಸಾರಿಗೆ ಸಂಜೀವಿನಿಗೆ ಹಸಿರು ನಿಶಾನೆ ತೋರಿಸಿ ವಾಹನದಲ್ಲಿನ ಸೌಲಭ್ಯ ವೀಕ್ಷಿಸಿದರು. ಅವರಿಗೆ ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಾಥ್ ನೀಡಿದರು.
ಕೋವಿಡ್ ವಾರಿಯರ್ಗೆ ಅಭಿನಂದನೆ
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಬುಧವಾರ ದಾವಣಗೆರೆ ಬಸ್ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಬಸವರಾಜ್ ಮತ್ತು ಸಂಸದ ಜಿ.ಎಂ ಸಿದ್ದೇಶ್ವರ್, ಮೇಯರ್ ಬಿ.ಜಿ.ಅಜಯಕುಮಾರ್, ಸಂಸ್ಥೆಯ ಅಧಿಕಾರಿಗಳು ಪುಷ್ಟವೃಷ್ಟಿಗೈದು, ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.