ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿ
ಹರಿಹರದ ರಸ್ತೆಯೊಂದಕ್ಕೆ ವಿಶ್ವಕರ್ಮರ ಹೆಸರಿಡಲಾಗುವುದು ಎಂದು ಭರವಸೆ ನೀಡಿದರು.
Team Udayavani, Jul 12, 2022, 4:36 PM IST
ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಿಶ್ವಕರ್ಮರ ಪಂಚ ಕಸುಬುಗಳು ಹಾಗೂ ಇತರೆ ಸಮಾಜದ ಕರಕುಶಲ ವಸ್ತುಗಳ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪಿಸಲು 25 ಎಕರೆ ಭೂಮಿ ನೀಡಬೇಕು ಹಾಗೂ ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ವಿಶ್ವಕರ್ಮ ಸಮಾಜ ನಿರ್ಧರಿಸಿದೆ.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಹಾಗೂ ರಾಜ್ಯ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಪೀಠಾಧಿಪತಿಗಳು ಮತ್ತು ಮಠಾಧಿಪತಿಗಳ ಒಕ್ಕೂಟದ ಸಮ್ಮಿಲನ, ಪ್ರಶಸ್ತಿ ಪ್ರದಾನ ಹಾಗೂ ವಿಶ್ವಕರ್ಮ ಜನಜಾಗೃತಿ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವಕರ್ಮ ಸಮುದಾಯಭವನ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿ ನಿಲಯಗಳ ಸ್ಥಾಪನೆಗೆ ನಿವೇಶನ ನೀಡಬೇಕು. ಸರ್ಕಾರದ ನಿಗಮ-ಮಂಡಳಿಗಳಿಗೆ ದಾವಣಗೆರೆ ಭಾಗದವರನ್ನು ಅಧ್ಯಕ್ಷರನ್ನಾಗಿ ಹಾಗೂ ನಿರ್ದೇಶಕರನ್ನಾಗಿ ನೇಮಕ ಮಾಡಬೇಕು.
ವಿಶ್ವಕರ್ಮ ಸಮಾಜದ ಮಠಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಹಿಂದುಳಿದ ವರ್ಗ 2ಎದಲ್ಲಿ ವಿಶ್ವಕರ್ಮ ಸಮಾಜಕ್ಕೆ ಶೇ.2ರ ಒಳಮೀಸಲಾತಿ ನೀಡಬೇಕು. ಹಟ್ಟಿ ಚಿನ್ನದ ಗಣಿಗಾರಿಕೆ ಕಂಪನಿಗೆ ನಾಮನಿರ್ದೇಶನ ಮಾಡುವಾಗ ವಿಶ್ವಕರ್ಮ ಸಮಾಜದವರನ್ನು ಪರಿಗಣಿಸಬೇಕು. ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಜ್ಯುವೇಲರಿ ಪಾರ್ಕ್ ಜವಾಬ್ದಾರಿಯನ್ನು ವಿಶ್ವಕರ್ಮ ಅಭಿವೃದ್ಧಿ ಮಂಡಳಿಗೆ ವಹಿಸಿಕೊಡಬೇಕು. ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಮರಶಿಲ್ಪಿ ಜಕಣಾಚಾರ್ಯ ವೃತ್ತ, ಭಗವಾನ್ ವಿಶ್ವಕರ್ಮ ವೃತ್ತವೆಂದು ನಾಮಕರಣ ಮಾಡಬೇಕು.
ಜಕಣಾಚಾರ್ಯರ ಮೂಲ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಸರ್ಕಾರವನ್ನು ಒಕ್ಕೋರಲಿನಿಂದ ಆಗ್ರಹಿಸಬೇಕು ಎಂದು ಸಮಾವೇಶದಲ್ಲಿ ತೀರ್ಮಾನಿಸಲಾಯಿತು.
ವಿಶ್ವಕರ್ಮ ಮಠಕ್ಕೇಕಿಲ್ಲ ಅನುದಾನ?: ಚನ್ನಗಿರಿ ತಾಲೂಕು ವಡ್ನಾಳ್ ಮಠದ ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಕೊರೊನಾ ಕಾಲದಲ್ಲಿ ಇತರೆ ಮಠಗಳಿಗೆ ಸಿಕ್ಕ ಪ್ರಾಧಾನ್ಯತೆ ನಮಗೆ ಸಿಕ್ಕಿಲ್ಲ. ಅನ್ಯ ಸಮಾಜದವರಿಗೆ 100 ಕೋಟಿಯಿಂದ 500 ಕೋಟಿಯವರೆಗೂ ಸರ್ಕಾರದಿಂದ ಅನುದಾನ ನೀಡಲಾಗಿದೆ. ಆದರೆ ವಿಶ್ವಕರ್ಮ ಸಮುದಾಯದ ಮಠಗಳಿಗೆ ನೆರವು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮಾಜ ಇಲ್ಲಿಯವರೆಗೂ ತುಳಿತಕ್ಕೆ ಒಳಗಾಗಿತ್ತು. ಆದರೀಗ ಸಮಾಜ ಬೆಳೆಸುವವರಿಗೆ ನಾಯಕತ್ವ ನೀಡಲಾಗಿದೆ. ಸಮಾಜಕ್ಕೆ ಏನೇ ಸರ್ಕಾರಿ ಸೌಲಭ್ಯ ಪಡೆಯುವುದಿದ್ದರೂ ಅದು ಮಠಾಧೀಶರ ಒಕ್ಕೂಟದ ಒಪ್ಪಿಗೆ ಪಡೆದು ಮಾಡಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿ ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಠಾಧಿಪತಿಗಳ ಒಕ್ಕೂಟದ ಧ್ಯೇಯವಾಗಿದೆ. ಇನ್ನುಮುಂದೆ ಒಕ್ಕೂಟದ ನೇತೃತ್ವದಲ್ಲೇ ಸಮಾಜ ಸಾಗಲಿದೆ.
ಡಿಸೆಂಬರ್-ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ವಿಶ್ವಕರ್ಮ ಸಮಾಜದ ಬೃಹತ್ ಸಮಾವೇಶ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪುನೀತ ರತ್ನ ಪ್ರಶಸ್ತಿ ಪ್ರದಾನ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರನಟ ವಿಜಯರಾಘವೇಂದ್ರ, ವಿಶ್ವಕರ್ಮ ಸಮಾಜದವರು ಒಂದೇ ಕುಟುಂಬದವರೆಂಬ ಭಾವನೆ ಹೊಂದಬೇಕು. ಪರಸ್ಪರ ಆತ್ಮವಿಶ್ವಾಸ ಹಾಗೂ ನಂಬಿಕೆಯನ್ನು ಸದಾ ಉಳಿಸಿಕೊಳ್ಳಬೇಕು ಎಂದರು. ಇದೇ ವೇಳೆ ನಟ ದಿ. ಪುನೀತ್ ರಾಜಕುಮಾರ್ ನೆನಪಿನಲ್ಲಿ ವಿಜಯ ರಾಘವೇಂದ್ರ ಅವರಿಗೆ “ವಿಶ್ವ ಪುನೀತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಹೋರಾಟ ಹಾಗೂ ಸಂಘಟನೆಯಿಂದ ಮಾತ್ರ ರಾಜಕೀಯ ಹಾಗೂ ಆರ್ಥಿಕ ಸ್ಥಾನಮಾನ ಪಡೆಯಲು ಸಾಧ್ಯ ಎಂದರು ಹಾಗೂ ಹರಿಹರದ ರಸ್ತೆಯೊಂದಕ್ಕೆ ವಿಶ್ವಕರ್ಮರ ಹೆಸರಿಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ. ಸತೀಶ್‌ಕುಮಾರ್, ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯ ಸುಮಾರು 45ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಸಂಘಟನೆ ಇಲ್ಲದೇ ಸಮಾಜದವರು ಹಿಂದುಳಿದಿದ್ದಾರೆ ಎಂದರು.
ಹಾಸನದ ಅರೆಮಾದನಹಳ್ಳಿಯ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಸಿಂಧಗಿಯ ಮೂರುಝಾವರ ಮಠದ ರಾಮಚಂದ್ರ ಸ್ವಾಮೀಜಿ, ಮರವಾಳಮಠದ ಜಗನ್ನಾಥ ಸ್ವಾಮೀಜಿ, ವಿಜಯಪುರದ ಮುರುಝಾವರಮಠದ ಮಹೇಂದ್ರ ಸ್ವಾಮೀಜಿ, ಕಾಡಲಗೇರಿಯ ನಾಗಲಿಂಗ ಸ್ವಾಮೀಜಿ,ಸವದತ್ತಿಯ ಸೋಮಲಿಂಗಯ್ಯ ಸ್ವಾಮೀಜಿ, ಶಹಪೂರದ ಕಾಳಹಸ್ತೇಂದ್ರ ಸ್ವಾಮೀಜಿ, ಬೆಂಗಳೂರಿನ ಆದಿಲಕ್ಷ್ಮಿ ಸಂಸ್ಥಾನಮಠದ ನೀಲಕಂಠಾಚಾರ್ಯ ಸ್ವಾಮೀಜಿ, ನಾಲತವಾಡದ ಪಂಪಾತಿ ಸ್ವಾಮೀಜಿ, ಹೊಳೆಆಲೂರಿನ ಯಚ್ಚರ ಸ್ವಾಮೀಜಿ, ಕಲಬುರ್ಗಿಯ ಸುರೇಂದ್ರ ಸ್ವಾಮೀಜಿ, ಗದ್ದಗಿನಮಠದ ಮಳಿಯಪ್ಪಯ್ಯ ಸ್ವಾಮೀಜಿ, ಅಫಜಲಪುರದ ಶ್ರೀ ಕುಮಾರ ಸ್ವಾಮೀಜಿ ಕಾರ್ಯಕ್ರಮದಲ್ಲಿದ್ದರು.
ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್. ಪ್ರನ್ನಕುಮಾರ್, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, ಮಾಜಿ ಸಚಿವ ಎಚ್. ಎಂ. ರೇವಣ್ಣ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಎಂ.ಡಿ. ಲಕ್ಷ್ಮಿನಾರಾಯಣ, ಚಿತ್ರನಟರಾದ ವೀಣಾ, ಸುಂದರ್, ಗಣೇಶ್ರಾವ್ ಕೇಸರ್ಕರ್ ಮತ್ತಿತರರು ವೇದಿಕೆಯಲ್ಲಿದ್ದರು ವಿಶ್ವಕರ್ಮ ಪರಿಷತ್ ಜಿಲ್ಲಾಧ್ಯಕ್ಷ ಎಂ.ಇ. ಮೌನೇಶ್ವರಾಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿಕೃತಿ ಖಂಡಿಸಿ ಪ್ರತಿಭಟನೆ
ಸಾಕ್ಷ್ಯಚಿತ್ರದಲ್ಲಿ ಕಾಳಿಕಾ ದೇವಿಯನ್ನು ವಿಕೃತವಾಗಿ ಚಿತ್ರಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಪೀಠಾಧಿಪತಿಗಳು ಮತ್ತು ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಾಸನ ಜಿಲ್ಲೆ ಅರೆಮಾದನಹಳ್ಳಿ ವಿಶ್ವಕರ್ಮ ಮಹಾಸಂಸ್ಥಾನದ ಅನಂತ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಆದಿಶಕ್ತಿ ಕಾಳಿಕಾ ದೇವಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದು ಖಂಡನೀಯ. ಇದರಿಂದ ದೇವಿಯ ಆರಾಧಕರಿಗೆ ನೋವಾಗಿದ್ದು ತಪ್ಪು ಮಾಡಿದವರು ಕ್ಷಮೆ ಕೋರಬೇಕು ಎಂದರು. ಮೆರವಣಿಗೆಯಲ್ಲಿ ಸಮಾಜದ 20ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.