ಹೋರಾಟಗಾರ ತೇರದಾಳಗೆ ವಿಧಾನ ಪರಿಷತ್ ಪ್ರವೇಶಿಸುವ ಕನಸು
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗುವ ಬಯಕೆ
Team Udayavani, Oct 23, 2020, 1:51 AM IST
ಹುಬ್ಬಳ್ಳಿ: ಜನಪರ ಹಾಗೂ ಸಾರ್ವಜನಿಕರಿಗೆ ನೋವು ತರುವಂತಹ ಯಾವುದೇ ವಿಷಯವಾಗಿ ಮೊಳಗುವ ಧ್ವನಿ, ನಡೆಯುವ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತ ಬಂದವರು, ವಿವಿಧ ಸಾಮಾಜಿಕ ಸೇವೆಗಳ ಮೂಲಕ ಜನದೊಂದಿಗೆ ಗುರುತಿಸಿಕೊಂಡವರು
ಬಸವರಾಜ ತೇರದಾಳ.
ಹೋರಾಟ, ಸಾಮಾಜಿಕ ಸೇವಾ ಕಾರ್ಯಗಳ ಹಿನ್ನೆಲೆಯೊಂದಿಗೆ, ಇದೀಗ ವಿಧಾನ ಪರಿಷತ್ತು ಪ್ರವೇಶಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಇವರು ಪದವೀಧರರು ಹಾಗೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಧ್ವನಿಯಾಗುವ ಮತ್ತೂಂದು ರೂಪದ ಹೋರಾಟಕ್ಕಿಳಿದ್ದಿದಾರೆ.
ಶೋಷಿತರು, ನೋವುಂಡವರು, ಅನ್ಯಾಯಕ್ಕೊಳಗಾದವರ ಕಂಡರೆ ತಮಗಾದ ಅನ್ಯಾಯ, ನೋವು ಎಂದೇ ಭಾವಿಸಿ ನ್ಯಾಯಕ್ಕಾಗಿ ಧ್ವನಿ ಎತ್ತುವ, ಹೋರಾಟಕ್ಕಿಳಿಯುವ ಛಾತಿ ಇವರದ್ದು. ಯಾವುದೇ ಸಮಸ್ಯೆ, ವಿಷಯವೇ ಇರಲಿ ಅರೆ-ಬರೆ ಮಾಹಿತಿಯೊಂದಿಗೆ ವ್ಯಾಖ್ಯಾನಿಸುವ, ಪ್ರತಿಕ್ರಿಯಿಸುವ ಬದಲು, ಸ್ಪಷ್ಟ ಮಾಹಿತಿಯೊಂದಿಗೆ ಧ್ವನಿ ಎತ್ತುವ ವ್ಯಕ್ತಿತ್ವ ಇವರದ್ದು. ಬಸವರಾಜ ತೇರಳದಾಳ ಅವರು, ಜನಪರವಾದ ವಿವಿಧ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಅನೇಕ ಸಾರ್ಥಕ ಸೇವೆಗಳಲ್ಲಿ ತಮ್ಮ ಹೆಸರು ಮೂಡಿಸಿದ್ದಾರೆ.
ಹೋರಾಟ ವ್ಯಕ್ತಿತ್ವ: ವಿವಿಧ ಕ್ಷೇತ್ರಗಳ ಸಮಸ್ಯೆ-ಅನ್ಯಾಯಗಳ ವಿರುದ್ಧ ಹೋರಾಟ ಮಾಡುತ್ತ ಬಂದಿರುವ ಬಸವರಾಜ ತೇರದಾಳ ಅವರು, ಹುಬ್ಬಳ್ಳಿ-ಧಾರವಾಡ, ಉತ್ತರ ಕರ್ನಾಟಕ, ರಾಜ್ಯ, ದೇಶದ ವಿವಿಧ ಸಮಸ್ಯೆ, ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ರಾಜಕೀಯ ನಂಟು ಹೊಂದಿದ್ದರೂ, ಸಂಘಟನೆಗಳ ನಂಟಿನೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜನರಿಗೆ ಪರಿಚಿತರಾಗಿದ್ದಾರೆ. ದಲಿತರಿಗೆ ಆದ ಅನ್ಯಾಯ, ದೊರೆಯಬೇಕಾದ ಸೌಲಭ್ಯ, ಹುಬ್ಬಳ್ಳಿ-ಧಾರವಾಡಕ್ಕೆ ಹೈಕೋರ್ಟ್ ಪೀಠ, ಪಾಲಿಕೆ ಕರ್ತವ್ಯ ನಿರ್ವಹಣೆಯಲ್ಲಿ ತೋರುವ ನಿರ್ಲಕ್ಷ್ಯ, ಪೊಲೀಸರಿಗೆ ದೊರೆಯಬೇಕಾದ ಸವಲತ್ತು, ಸಾರ್ವಜನಿಕ ಆಸ್ತಿ ರಕ್ಷಣೆ, ಕನ್ನಡಪರ ನಿಲುವು, ನಾಗರಿಕ ಸೌಲಭ್ಯ ಹೀಗೆ ವಿವಿಧ ವಿಷಯ-ವಿಚಾರಗಳ ಬಗ್ಗೆ ಸದಾ ಧ್ವನಿ ಮೊಳಗಿಸುತ್ತ ಬಂದಿದ್ದಾರೆ.
ಗುಟ್ಕಾ-ಪಾನ್ ಮಸಾಲಾ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತಿದ್ದು, ಯುವಕರು, ವೃದ್ಧರು, ಮಹಿಳೆಯರೆನ್ನದೇ ಎಲ್ಲರೂ ಇದರ ಮಾಯೆಗೆ ಒಳಗಾಗುತ್ತಿದ್ದು, ಇದನ್ನು ನಿಷೇಧಿಸುವ ನಿಟ್ಟಿನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಬೇಕು, ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಬಸವರಾಜ ತೇರದಾಳ ಅವರು, 2012ರಲ್ಲಿಯೇ ಒತ್ತಾಯಿಸಿದ್ದರು. ವಿವಿಧ ಗ್ರಾಮಗಳಲ್ಲಿ ನಡೆದ ಸಾರಾಯಿ ನಿಷೇಧ ಕುರಿತು ಹೋರಾಟಗಳಲ್ಲೂ ಅವರು ಭಾಗಿಯಾಗಿದ್ದರು.
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಬರ
ಪೀಡಿತವಾಗಿದ್ದು, ನೀರಾವರಿ ಸೌಲಭ್ಯ ಇಲ್ಲವಾಗಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರ ಸಮಸ್ಯೆ ಬಿಗಡಾಯಿಸುತ್ತಿದ್ದು, ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಮಳೆ ಬಾರದಿದ್ದರೆ ಮೋಡ ಬಿತ್ತನೆಯಂತಹ ವೈಜ್ಞಾನಿಕ ಸೌಲಭ್ಯ ಬಳಕೆಗೆ ಮುಂದಾಗಬೇಕೆಂದು ಒತ್ತಾಯಿಸುವ ಮೂಲಕ, ರೈತಪರ ಕಾಳಜಿ ತೋರಿದ್ದಾರೆ. ಇವರ ಆಶಯಕ್ಕೆ ಸ್ಪಂದನೆ ಎನ್ನುವಂತೆ ಸರಕಾರಗಳು ರಾಜ್ಯದಲ್ಲಿ ಗುಟ್ಕಾ ನಿಷೇಧ ಹಾಗೂ ಮೋಡ ಬಿತ್ತನೆ ಕಾರ್ಯ ಕೈಗೊಂಡಿದ್ದವು.
ಪೊಲೀಸರಿಗೆ ಎ.ಬಿ.ಸಿ. ಶಿಫ್ಟ್ ಮಾದರಿಯಂತೆ ಕರ್ತವ್ಯ ನಿಯೋಜನೆ ಮಾಡಬೇಕು, ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಅನೇಕ ಬಾರಿ ಒತ್ತಾಯಿಸಿದ್ದಾರೆ. ದಲಿತರಿಗೆ ಮೀಸಲಿಟ್ಟ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ವಿವಿಧ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬ ಒತ್ತಾಯದೊಂದಿಗೆ ಕನ್ನಡಪರ ಕಾಳಜಿ ತೋರಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬುದು ಈ ಭಾಗದ ಅನೇಕ ಜನರ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಮನ್ನಣೆ ಸಿಗದಿದ್ದಾಗ ಹೊಟ್ಟೆಯೊಳಗಿನ ಸಿಟ್ಟು ಹೋರಾಟ ರೂಪ ತಾಳಿತ್ತು. ಇಡೀ ಧರಣಿ, ರಸ್ತೆ ತಡೆ, ಘೇರಾವ್, ಬಂದ್ ಹೀಗೆ ಹೋರಾಟ ವಿವಿಧ ರೂಪಗಳನ್ನು ತಾಳಿತ್ತು. ಅದೆಷ್ಟೋ ದಿನಗಳವರೆಗೆ ಅವಳಿನಗರ ಸ್ತಬ್ಧ ಸ್ಥಿತಿಗೆ ತಲುಪಿದ ಶ್ರೇಷ್ಠ ಹೋರಾಟ ಅದಾಗಿತ್ತು. ಆ ಹೋರಾಟದಲ್ಲಿ ತೇರದಾಳ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಹು-ಧಾ ನಾಗರಿಕರ ಸಮಸ್ಯೆ, ಅಹವಾಲು, ನೋವು ಅರಿಯಲು, ಚರ್ಚಿಸಲು ಅನುಕೂಲವಾಗುವಂತೆ ಪಾಲಿಕೆ ಸಾರ್ವಜನಿಕ ಸಲಹಾ ಸಮಿತಿ, ಕುಂದು-ಕೊರತೆಗಳ ವಿಚಾರಣಾ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿದ್ದರು. ಈ ಹಿಂದೆ ಪಾಲಿಕೆ ಸಿಟಿಜನ್ ಫೋರಂ ಆರಂಭಿಸಿತ್ತು. ವಾರ್ಡ್ ಕಮಿಟಿಗಳ ರಚನೆಗೆ ಮುಂದಾಗಿತ್ತು. ಆದರೆ, ಇದೀಗ ಇವೆಲ್ಲವೂ ನಿಸ್ತೇಜಗೊಂಡಿವೆ. ಕಿಮ್ಸ್ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ, ಬಡ-ಮಧ್ಯಮ ವರ್ಗದವರ ಪ್ರಮುಖ ಆರೋಗ್ಯಧಾಮವಾದ ಕಿಮ್ಸ್‌ನಿಂದ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಹೋರಾಟಕ್ಕೂ ಧುಮುಕಿದ್ದಾರೆ.
ಉತ್ತರ ಕರ್ನಾಟಕವೆಂದರೆ ಬಸವಣ್ಣನ ನಾಡು. ಬಸವಣ್ಣನವರ ಅನುಯಾಯಿಗಳು ಇಲ್ಲಿ ಅಸಂಖ್ಯ. ಬಸವ ಅನುಯಾಯಿಗಳಿಗೆ ಕೂಡಲಸಂಗಮ ಶ್ರದ್ಧಾ ಕೇಂದ್ರ. ಬಸವ ಜಯಂತಿ ಹಾಗೂ ಮಕರ ಸಂಕ್ರಾಂತಿಗೆ ಕೂಡಲ ಸಂಗಮಕ್ಕೆ ಹೋಗುವರಿಗೆ ಶೇ.50 ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕೆಂಬ ಒತ್ತಾಯ ಇವರದ್ದಾಗಿದೆ. ಇದಲ್ಲದೆ ಅಂಗವಿಕಲರು, ವೃದ್ಧರು, ವಿಧವೆಯರಿಗೆ ಮಾಸಾಶನ ಬಾರದಿರುವುದರ ಬಗ್ಗೆ ಕಾಲ, ಕಾಲಕ್ಕೆ ಧ್ವನಿ ಎತ್ತಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಡಾ| ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ ಅವರ ಭಾವಚಿತ್ರಗಳನ್ನು ಕಡ್ಡಾಯಗೊಳಿಸಬೇಕು, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ವಾಯು ವಿಹಾರಿಗಳ ವಾಹನ ನಿಲುಗಡೆಗೆ ಅವಕಾಶ ಸೇರಿದಂತೆ ವಿವಿಧ ವಿಷಯಗಳ ಮೇಲೆ ಒತ್ತಾಯ, ಹೋರಾಟ ಮಾಡಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳಿಗೆ ಬ್ಲಾಂಕೆಟ್ ನೀಡಿಕೆ, ಸಾಮೂಹಿಕ ವಿವಾಹ ಆಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಹೋರಾಟದ ಹೆಸರಲ್ಲಿ ಭ್ರಮೆಗಳನ್ನು ತುಂಬದ, ಜನರಪರ ಕಾಳಜಿಯೊಂದಿಗೆ ಹೋರಾಟಕ್ಕೆ ಮುಂದಾಗುವ ಹೋರಾಟಗಾರರೊಬ್ಬರು ವಿಧಾನ ಪರಿಷತ್ತು ಪ್ರವೇಶಿಸಿದರೆ ಪದವೀಧರರ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ, ಈ ಭಾಗಕ್ಕೆ ಆಗುತ್ತಿರುವ ಅನ್ಯಾಯ-ಉದಾಸೀನ, ನಿರ್ಲಕ್ಷ್ಯದ ಬಗ್ಗೆ ಸದನದೊಳಗೆ ಗಟ್ಟಿಧ್ವನಿಯೊಂದು ಮಾರ್ದನಿದಂತಾಗಲಿದೆ ಎಂಬುದು ಬಸವರಾಜ ತೇರಳದಾಳ ಅವರ ಅಭಿಮಾನಿಗಳು, ಬೆಂಬಲಿಗರ ಅನಿಸಿಕೆ.
ಪದವೀಧರರ ನಿಗಮ-ಮಂಡಳಿ ಸ್ಥಾಪನೆಗೆ ಯತ್ನಿಸುವೆ..
ರಾಜ್ಯದ ಪದವೀಧರರ ಸಮಸ್ಯೆಗಳ ನಿವಾರಣೆ ಹಾಗೂ ಪರಿಹಾರಕ್ಕೆ ಕೇವಲ ಬಾಯಿ ಮಾತಿನ ಸಾಂತ್ವನ, ಭರವಸೆ ಪ್ರಯೋಜನವಿಲ್ಲ. ಬದಲಾಗಿ ಪದವೀಧರರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಿಗಮ-ಮಂಡಳಿ ಸ್ಥಾಪನೆ ಅವಶ್ಯವಾಗಿದೆ. ಪಶ್ಚಿಮ ಪದವೀಧರರ ಮತದಾರರು ಆಶೀರ್ವದಿಸಿ ವಿಧಾನಪರಿಷತ್ತು ಪ್ರವೇಶಕ್ಕೆ ಅವಕಾಶ ನೀಡಿದರೆ ನಿಗಮ- ಮಂಡಳಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪಟ್ಟು ಹಿಡಿಯುತ್ತೇನೆ. ನಿಗಮ ಅಥವಾ ಮಂಡಳಿ ರಚನೆಯಾದರೆ ನಿಗದಿತ ಅನುದಾನ ಬರುತ್ತದೆ. ಇದರಿಂದ ಪದವೀಧರರಿಗೆ ವಿವಿಧ ತರಬೇತಿ, ಸೌಲಭ್ಯಗಳ ನೀಡಿಕಲಿಕೆಗೆ ಸಹಕಾರಿ ಆಗಬಲ್ಲದು ಎಂಬುದು ನನ್ನ ಚಿಂತನೆ. ಬ್ಯಾಕ್‌ಲಾಗ್ ಹಾಗೂ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶ್ರಮಿಸುವೆ. ಪದವೀಧರರಿಗೆ ಸ್ಟೈಫಂಡ್ ದೊರಕಿಸುವ ನಿಟ್ಟಿನಲ್ಲಿ ಯತ್ನಿಸುವೆ. ಎನ್‌ಪಿಎಸ್ ರದ್ಧತಿ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದೆ. ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗ ಇನ್ನಿತರೆ ವಿಚಾರದಲ್ಲಿ ಅವರೊಂದಿಗೆ ನಾನಿರುವೆ. ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಯುವ ಸಮೂಹ ಹೆಚ್ಚಿನ ರೀತಿಯಲ್ಲಿ ನನ್ನ ಬೆಂಬಲಿಸುವ ವಿಶ್ವಾಸವಿದೆ ಎಂಬುದು ಬಸವರಾಜ ತೇರದಾಳ ಅವರ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.