ಗುಂಡಿ ಮುಚ್ಚಲು ಜಿಯೋ ಟ್ಯಾಗ್‌ಗೆ ಮೊರೆ
ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಿಯೋ ಟ್ಯಾಗಿಂಗ್ ಮಾಡಲಾಗುತ್ತಿದೆ.
Team Udayavani, Nov 16, 2022, 5:10 PM IST
ಹುಬ್ಬಳ್ಳಿ: ರಸ್ತೆ ಗುಂಡಿ ಮುಚ್ಚಲು ಪಾಲಿಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ವರ್ಷ ಕಳೆಯುವುದರೊಳಗೆ ಪುನಃ ಗುಂಡಿಗಳ ಸಾಮ್ರಾಜ್ಯ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆ ಜಿಯೋ ಟ್ಯಾಗಿಂಗ್ ಮೊರೆ ಹೋಗಿದೆ.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಪ್ರವಾಸ ಸಂದರ್ಭದಲ್ಲಿ ನಿರ್ಮಿಸಿದ ರಸ್ತೆಯ ಗಂಡಾಗುಂಡಿ ದೊಡ್ಡ ಸದ್ದು ಮಾಡಿತು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಿದರೂ ಮಳೆಯಿಂದ ಗುಂಡಿ ಬಿದ್ದಿರುವುದು ಕಳಪೆ ಕಾಮಗಾರಿ, ಸಾರ್ವಜನಿಕ ಹಣ ಪೋಲು ಎನ್ನುವ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಕೂಡ ರಸ್ತೆ ತಗ್ಗು-ಗುಂಡಿಗಳಿಗೆ ಪ್ರತಿ ವರ್ಷವೂ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತಿದೆ. ಆದರೆ ವರ್ಷ ಕಳೆಯುವುದರೊಳಗೆ ಸಣ್ಣ ಮಳೆಗೆ ಅದೇ ಸ್ಥಳದಲ್ಲಿ ಗುಂಡಿ ನಿರ್ಮಾಣವಾಗುತ್ತಿದೆ. ಮಳೆಗಾಲ ನಂತರದಲ್ಲಿ ಪಾಲಿಕೆ ಕೆಲ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಉಪ ಜೀವನ ಎನ್ನುವ ಆರೋಪಗಳಿವೆ. ಪಾಲಿಕೆ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ತಡೆಯಲು ಹು-ಧಾ ಮಹಾನಗರ ಜಿಯೋ ಟ್ಯಾಗಿಂಗ್ ಮೂಲಕವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ಹಿಂದೆ ಮಳೆ ನಿಂತ ಮೇಲೆ ರಸ್ತೆ ತಗ್ಗು- ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆದು ಗುತ್ತಿಗೆ ನೀಡಲಾಗುತ್ತಿತ್ತು. ವಿಪರ್ಯಾಸವೆಂದರೆ ಗುಂಡಿ ಮುಚ್ಚಿ ಆರೇಳು ತಿಂಗಳು ಕಳೆಯುವುದರೊಳಗೆ ಪುನಃ ಅದೇ ಸ್ಥಳದಲ್ಲಿ ಗುಂಡಿ ಬೀಳುತ್ತಿದ್ದವು. ಒಂದೇ ಗುಂಡಿಗೆ ಎರಡು ಮೂರು ಬಾರಿ ಹಣ ಸುರಿಯಲಾಗುತ್ತಿತ್ತು. ಹೀಗಾಗಿ ಕೆಲವರಿಗೆ ಕಾಮಗಾರಿ ನೀಡುವುದಕ್ಕಾಗಿ ಇಂತಹ ಯೋಜನೆಗಳು ಎನ್ನುವಷ್ಟರ ಮಟ್ಟಿಗೆ ನಡೆದುಕೊಂಡು ಬಂದಿತ್ತು. ಇದೆಲ್ಲವಕ್ಕೂ ಕಡಿವಾಣ ಹಾಕುವ ಉದ್ದೇಶದ ಜಿಯೋ ಟ್ಯಾಗಿಂಗ್ ಮೂಲಕವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ದುರಸ್ತಿಗೂ ಮುಂಚೆ ಹಾಗೂ ದುರಸ್ತಿ ಮಾಡುವ ಸಂದಭದಲ್ಲಿ ಜಿಯೋ ಟ್ಯಾಗಿಂಗ್
ಮಾಡಲಾಗುತ್ತಿದೆ. ಇದರಿಂದ ಒಮ್ಮೆ ಮುಚ್ಚಿದ ಗುಂಡಿಗೆ ಇನ್ನೊಮ್ಮೆ ಹಣ ಖರ್ಚು ಮಾಡಿ ಮುಚ್ಚಲು ಸಾಧ್ಯವಿಲ್ಲ.
ಜಿಯೋ ಟ್ಯಾಗಿಂಗ್‌ನಲ್ಲಿ ಜಿಪಿಎಸ್ ವ್ಯವಸ್ಥೆ ಹೊಂದಿರುವ ನೋಟ್ ಕ್ಯಾಮ್ ಆ್ಯಪ್‌ನಲ್ಲಿ ರಸ್ತೆಯಲ್ಲಿರುವ ತಗ್ಗು ಗುಂಡಿಗಳನ್ನು ಫೂಟೋ ತೆಗೆಯಲಾಗುತ್ತಿದೆ. ಇದರಲ್ಲಿ ಸ್ಥಳ, ಸಮಯ, ದಿನಾಂಕ ಅಲ್ಲದೆ ರೇಖಾಂಶ-ಅಕ್ಷಾಂಶದ ಸೇರಿದಂತೆ ನಿಖರ ಮಾಹಿತಿ ದಾಖಲಾಗುತ್ತದೆ. ಇದರಿಂದ ಯಾವ ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ ಎನ್ನುವ ಮಾಹಿತಿಯೂ ಗೊತ್ತಾಗುತ್ತದೆ.
ಎರಡು ಬಾರಿ ಸಮೀಕ್ಷೆ ಹಾಗೂ ಜಿಯೋ ಟ್ಯಾಗಿಂಗ್ ಮಾಡುವುದರಿಂದ ಕಾಮಗಾರಿ ಮಾಡದೆ ಬಿಲ್ ಎತ್ತುವ, ಕಳಪೆ ಕಾಮಗಾರಿ ಮಾಡಿ ಮರು ವರ್ಷಕ್ಕೆ ಪುನಃ ಗುಂಡಿ ಮುಚ್ಚುವ ಕಂತ್ರಾಟಕ್ಕೆ ಇಲ್ಲಿ ಅವಕಾಶ ಇರಲ್ಲ. ಹಾಗೇನಾದರೂ ಜಿಯೋ ಟ್ಯಾಗಿಂಗ್ ಸಮೀಕ್ಷೆಯಡಿ ಗುಂಡಿ ಮುಚ್ಚಿ ಮತ್ತೂಮ್ಮೆ ಗುಂಡಿ ಮುಚ್ಚಲು ಜಿಯೋ ಟ್ಯಾಗಿಂಗ್ ಸಮೀಕ್ಷೆ ನಡೆಸಿದಾಗ ಹಿಂದಿನ ಕಾಮಗಾರಿ ಕೈಗೊಂಡಿರುವುದು ಸ್ಪಷ್ಟವಾಗಿ ಗೊತ್ತಾಗಲಿದೆ ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.
ಮಹಾನಗರ ವ್ಯಾಪ್ತಿಯಲ್ಲಿ ಜಿಯೋ ಟ್ಯಾಗಿಂಗ್ ಮೂಲಕ ಈಗಾಗಲೇ 35,291 ಚದರ ಮೀಟರ್ ರಸ್ತೆ ತಗ್ಗು-ಗುಂಡಿಗಳನ್ನು ಗುರುತಿಸಲಾಗಿದ್ದು, 3.25 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾದು, ಕೆಲವೆಡೆ ಕಾರ್ಯಾದೇಶ ನೀಡಲಾಗಿದೆ. ಕೆಲವೆಡೆ ಹೊಸ ರಸ್ತೆ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಅಂತಹ ರಸ್ತೆಗಳನ್ನು ಗುರುತಿಸಿ ಅಂತಹ ಕಡೆ ಗುಂಡಿ ಮುಚ್ಚುವ ಕೆಲಸ ಕೈಗೆತ್ತಿಕೊಳ್ಳುತ್ತಿಲ್ಲ. ಬದಲಾಗಿ ಅಂತಹ ರಸ್ತೆಗಳಲ್ಲಿ ಗುಂಡಿಗಳನ್ನು ತಾತ್ಕಾಲಿಕವಾಗಿ ಕಡಿ, ಮಣ್ಣು ಹಾಕಿ ದುರಸ್ತಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸಮೀಕ್ಷೆ ನಡೆಸಿರುವ ಪ್ರಕಾರ ಇಷ್ಟೊಂದು ಚದರ ಮೀಟರ್ ಗುಂಡಿ ಮುಚ್ಚಬೇಕಿದ್ದು, ಇನ್ನೊಂದಿಷ್ಟು ಜಿಯೋ ಟ್ಯಾಗಿಂಗ್ ಸಮೀಕ್ಷೆ ಆಗಬೇಕಿದೆ.
ಧಾರವಾಡ ವಿಭಾಗದ ನಾಲ್ಕು ವಲಯಗಳಲ್ಲಿ 14,187 ಚದರ ಮೀಟರ್ ಗುಂಡಿ ಮುಚ್ಚಬೇಕಾಗಿದೆ. ಸುಮಾರು 376 ದೊಡ್ಡ ಗುಂಡಿಗಳನ್ನು ಗುರುತಿಸಲಾಗಿದೆ. 1.62 ಕೋಟಿ ರೂ.ಅಂದಾಜಿಸಲಾಗಿದೆ. ಇನ್ನು ಹುಬ್ಬಳ್ಳಿ ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ 5499 ಚದರ ಮೀಟರ್ ರಸ್ತೆ ತಗ್ಗು-ಗುಂಡಿಗಳು ಬಿದ್ದಿದ್ದು, ಇವುಗಳನ್ನು ಮುಚ್ಚಲು 57 ಲಕ್ಷ ರೂ. ಅಗತ್ಯವಿದೆ. ಹುಬ್ಬಳ್ಳಿ ಉತ್ತರ ವಿಭಾಗ ವ್ಯಾಪ್ತಿಯಲ್ಲಿ 15,605 ಚದರ ಮೀಟರ್ ಗುಂಡಿಗಳು ಆಗಿರುವ ಬಗ್ಗೆ ಜಿಯೋ ಟ್ಯಾಗಿಂಗ್ ಮೂಲಕ ಸಮೀಕ್ಷೆ ಮಾಡಲಾಗಿದೆ. ದುರಸ್ತಿಗೆ 1.31 ಕೋಟಿ ರೂ. ಅಂದಾಜಿಸಲಾಗಿದೆ.
ರಸ್ತೆ ತಗ್ಗು-ಗುಂಡಿ ಮುಚ್ಚುವ ವಿಚಾರದಲ್ಲಿ ಹಲವು ಆರೋಪಗಳು ಬರುತ್ತಿವೆ. ಇದಕ್ಕೆ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜಿಯೋ ಟ್ಯಾಗಿಂಗ್ ಮಾಡಲಾಗುತ್ತಿದೆ. ಕಾಮಗಾರಿ ಮುಂಚೆ ನಂತರದ ಫೋಟೋಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಯೋ ಟ್ಯಾಗಿಂಗ್ ಇಲ್ಲದ ಒಂದೇ ಒಂದೇ ಗುಂಡಿ ಮುಚ್ಚುವಂತಿಲ್ಲ. ಹಾಗೇನಾದರೂ ನಡೆದರೆ ಅದಕ್ಕೆ ಸಂಬಂಧಿಸಿದ ಅಭಿಯಂತರರನ್ನು ಹೊಣೆ ಮಾಡಲಾಗುವುದು. ತಗ್ಗು-ಗುಂಡಿ ಮುಚ್ಚುವ ಕಾರ್ಯದ ಈ ಕುರಿತು ಪ್ರತಿ ವಾರವೂ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ.
ಡಾ| ಬಿ.ಗೋಪಾಲಕೃಷ್ಣ,
ಆಯುಕ್ತ, ಹು-ಧಾ ಮಹಾನಗರ ಪಾಲಿಕ
ಮಹಾನಗರ ವ್ಯಾಪ್ತಿ ರಸ್ತೆ ತಗ್ಗು-ಗುಂಡಿ ಮುಚ್ಚಲು 3.25 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿತ್ತು. ಇವೆಲ್ಲವನ್ನೂ ಜಿಯೋ ಟ್ಯಾಗಿಂಗ್ ಮೂಲಕವೇ ಸಮೀಕ್ಷೆ ಮಾಡಲಾಗದು, ಇದರ ಹೊರತಾಗಿ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ. ಈ ವ್ಯವಸ್ಥೆಯಿಂದ ಮುಚ್ಚಿದ ಗುಂಡಿಗೆ ಪುನಃ ವೆಚ್ಚ ಮಾಡಲು ಸಾಧ್ಯವಿಲ್ಲ. ನಿರ್ವಹಿಸಿದ ಗುತ್ತಿಗೆದಾರ ಅವಧಿ ಪೂರ್ಣಗೊಳ್ಳುವವರೆಗೂ ಜವಾಬ್ದಾರ.
ಇ.ತಿಮ್ಮಪ್ಪ,
ಅಧೀಕ್ಷಕ ಅಭಿಯಂತ, ಮಹಾನಗರ ಪಾಲಿಕೆ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.