ದಶಕಗಳ ಬಳಿಕ ಠಾಣೆಗಳಿಗೆ ಸ್ವಂತ ಕಟ್ಟಡ
ವಿದ್ಯಾನಗರ ಠಾಣೆಯು 33 ವರ್ಷಗಳ ನಂತರ ಸ್ವಂತ ಕಟ್ಟಡದ ಭಾಗ್ಯ ಪಡೆಯಲಿದೆ.
Team Udayavani, May 31, 2022, 5:49 PM IST
ಹುಬ್ಬಳ್ಳಿ: ನಗರದಲ್ಲಿ ಕಳೆದ ಮೂರ್‍ನಾಲ್ಕು ದಶಕಗಳಿಂದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಕುಲ ರಸ್ತೆ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳು ಇನ್ಮುಂದೆ ಸ್ವಂತ ಕಟ್ಟಡ ಭಾಗ್ಯ ಹೊಂದಲಿವೆ.
ಗೋಕುಲ ರಸ್ತೆಯ ಸಣ್ಣ ಕೈಗಾರಿಕಾ ವಸಾಹತು ಕಟ್ಟಡದಲ್ಲಿ ಗೋಕುಲ ರಸ್ತೆ ಪೊಲೀಸ್ ಠಾಣೆ ಹಾಗೂ ವಿದ್ಯಾನಗರದ ಭಾರತಿ ಕಲ್ಯಾಣ ಮಂಟಪ ಬಳಿಯ ಉದ್ಯಾನವನ ಪಕ್ಕದ ಪಾಲಿಕೆ ಒಡೆತನದ ಕಟ್ಟಡದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿವೆ. ಗೋಕುಲ ರಸ್ತೆ ಠಾಣೆ ತಾನಿರುವ ಕಟ್ಟಡಕ್ಕೆ ಬಾಡಿಗೆ ಕಟ್ಟುತ್ತಿದ್ದರೆ, ವಿದ್ಯಾನಗರ ಠಾಣೆಯು ಪಾಲಿಕೆ ಕಟ್ಟಡದಲ್ಲಿ ತಾತ್ಕಾಲಿಕ ಆಧಾರದ ಮೇಲಿದೆ. ಈಗ ಇವೆರಡು ಠಾಣೆಗಳಿಗೆ ಹೊಸ ಕಟ್ಟಡ ನಿರ್ಮಾಣ
ಸಲುವಾಗಿ ಪೊಲೀಸ್ ಆಯುಕ್ತರ ಕಾರ್ಯಾಲಯದಿಂದ ಗೋಕುಲ ರಸ್ತೆ ಹೊಸ ಬಸ್‌ನಿಲ್ದಾಣ ಬಳಿ ಹಾಗೂ ವಿದ್ಯಾನಗರದ ಕೃಷಿ ಇಲಾಖೆ ಕಚೇರಿ ಬಳಿ ಜಾಗ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.
ಸರಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವೆರಡು ಠಾಣೆಗಳನ್ನು ನಿರ್ಮಿಸಲು ಅಲ್ಪಾವಧಿ ಟೆಂಡರ್ ಸಹ ಆಹ್ವಾನಿಸಿದೆ.
ಹು-ಧಾ ಪೊಲೀಸ್ ಆಯುಕ್ತಾಲಯ ಪ್ರಸ್ತಾವನೆ ಕಳುಹಿಸಿದ ಜಾಗಗಳು ಹಂಚಿಕೆಯಾಗಿ ಮಂಜೂರಾದರೆ ಹಾಗೂ ಸರಕಾರ ಮಟ್ಟದಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಅಂತಿಮಗೊಂಡರೆ ಗೋಕುಲ ರಸ್ತೆ ಪೊಲೀಸ್ ಠಾಣೆಯು ಅಂದಾಜು 23 ಗುಂಟೆ ಜಾಗದಲ್ಲಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ಸುಮಾರು 13.6 ಗುಂಟೆ ಜಾಗದಲ್ಲಿ ನಿರ್ಮಾಣವಾಗಲಿವೆ.
ಜಾಗ ಮಂಜೂರಿಗೆ ಸಿಎಂ ತಾಕೀತು: ಗೋಕುಲ ರಸ್ತೆಯಲ್ಲಿ ಆರಂಭಿಸಲಾದ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯ (ಆರ್‌ಎಫ್‌ಎಸ್ ಎಲ್) ಉದ್ಘಾಟಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ. 6ರಂದು ಆಗಮಿಸಿದ್ದಾಗ ಗೋಕುಲ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾಕಷ್ಟು ಜಾಗ ಹೊಂದಿದ್ದು, ಗೋಕುಲ ರಸ್ತೆ ಠಾಣೆಗೆ ಅವಶ್ಯವಾದ ಜಾಗವನ್ನು ವಿಳಂಬ ಮಾಡದೆ ಕೂಡಲೇ ಮಂಜೂರು ಮಾಡಬೇಕೆಂದು ಸಾರಿಗೆ
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದ್ದರು.
ಅಲ್ಲದೆ ಪೊಲೀಸ್ ಆಯುಕ್ತರಿಗೆ ಜಾಗ ಗುರುತಿಸಿ, ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದ್ದರು. ಅದರ ಫಲವಾಗಿ ಈಗ ಗೋಕುಲ ರಸ್ತೆ ಠಾಣೆಗೆ ಹೊಸ ಬಸ್‌ನಿಲ್ದಾಣ ಬಳಿ ಜಾಗ ಗುರುತಿಸಲಾಗಿದ್ದು, ಸರಕಾರದಿಂದಲೂ ತಾತ್ವಿಕ ಒಪ್ಪಿಗೆ ದೊರೆತಿದೆ.
ವಿದ್ಯಾನಗರ ಪೊಲೀಸ್ ಠಾಣೆ
1989ರಲ್ಲಿ ವಿದ್ಯಾನಗರ ಮುಖ್ಯರಸ್ತೆಯ ಕಾಡಸಿದ್ದೇಶ್ವರ ಕಾಲೇಜು ಬಳಿಯ ಅಥಣಿ ಎಂಬುವರ ಕಟ್ಟಡದಲ್ಲಿ ಪ್ರಾರಂಭಗೊಂಡಿತ್ತು. ಈ ಬಾಡಿಗೆ ಕಟ್ಟಡ ಶಿಥಿಲಾವಸ್ಥೆಗೊಂಡಿದ್ದರಿಂದ 2009ರಲ್ಲಿ ಅಲ್ಲಿಯೇ ಸಮೀಪದಲ್ಲಿರುವ ಭಾರತಿ ಕಲ್ಯಾಣ ಮಂಟಪ ಎದುರಿನ ಎ.ಡಿ. ದೊಡ್ಡಮನಿ ಎಂಬುವರ ಆರ್ ಸಿಸಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಈ ಕಟ್ಟಡ ಸುಮಾರು ಐದು ದಶಕಗಳಷ್ಟು ಹಳೆಯದಾಗಿದ್ದರಿಂದ ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿದ್ದವು.
ಮಳೆಗಾಲದಲ್ಲಿ ಸೋರಿಕೆ ಆಗುತ್ತಿತ್ತು. 2019ರಲ್ಲಿ ಭಾರತಿ ಕಲ್ಯಾಣ ಮಂಟಪ ಬಳಿಯ ಉದ್ಯಾನವನ ಪಕ್ಕದ ಪಾಲಿಕೆ ಒಡೆತನದ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಅಂದಿನಿಂದ ಇಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ ಇದು ಸ್ವಂತ ಕಟ್ಟಡ ಹೊಂದುವ ಸಲುವಾಗಿ ಹು-ಧಾ ಪೊಲೀಸ್ ಆಯುಕ್ತಾಲಯವು ವಿದ್ಯಾನಗರ ಪಿ.ಸಿ. ಜಾಬಿನ ಕಾಲೇಜ್ ಎದುರು, ಕನಕದಾಸ ಶಿಕ್ಷಣ ಸಂಸ್ಥೆ ಹತ್ತಿರದ ಕೃಷಿ ಇಲಾಖೆ ಪಕ್ಕದ ಸುಮಾರು 13.6 ಗುಂಟೆ ಖುಲ್ಲಾ ಜಾಗ
ಮಂಜೂರು ಮಾಡಿಕೊಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಂಬಂಧಿಸಿದ ಇಲಾಖೆಯೂ ತಾತ್ವಿಕ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಅಂದುಕೊಂಡತೆ ಎಲ್ಲವೂ ಆದರೆ ವಿದ್ಯಾನಗರ ಠಾಣೆಯು 33 ವರ್ಷಗಳ ನಂತರ ಸ್ವಂತ ಕಟ್ಟಡದ ಭಾಗ್ಯ ಪಡೆಯಲಿದೆ.
ಗೋಕುಲ ರಸ್ತೆ ಪೊಲೀಸ್ ಠಾಣೆ
1981ರ ಜೂ. 16ರಂದು ಆರಂಭವಾಗಿದ್ದು, ಅಂದಿನಿಂದ ಕೈಗಾರಿಕಾ ವಸಾಹತು 1ನೇ ಗೇಟ್ ಬಳಿಯ ಎಂಎಸ್‌ಎಂಇಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಠಾಣೆ ವ್ಯಾಪಿ ಪ್ರದೇಶಗಳು ವಿಸ್ತೀರ್ಣಗೊಂಡಂತೆ ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿದಂತೆ ಕಟ್ಟಡದ ವಿಸ್ತೀರ್ಣ ಮಾತ್ರ ಹೆಚ್ಚಲಿಲ್ಲ. ಠಾಣೆಯಲ್ಲಿ ಸಿಬ್ಬಂದಿ ಕುಳಿತುಕೊಳ್ಳುವುದು ಹೋಗಲಿ ನಿಂತುಕೊಳ್ಳಲೂ ಜಾಗವಿಲ್ಲ. ಇಕ್ಕಟ್ಟಾದ ಜಾಗದಲ್ಲೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಠಾಣೆ
ಆವರಣ ಚಿಕ್ಕದಾಗಿದ್ದರಿಂದ ಹಾಗೂ ಸ್ಥಳದ ಕೊರತೆಯಿಂದಾಗಿ ಇನ್ಸ್‌ಪೆಕ್ಟರ್ ವಾಹನ ಸೇರಿದಂತೆ ಜಫ್ತು ಮಾಡಿದ ಹಾಗೂ ಪೊಲೀಸರ ದ್ವಿಚಕ್ರ ವಾಹನಗಳನ್ನು ಗೋಕುಲ ರಸ್ತೆ ಮುಖ್ಯ ರಸ್ತೆಯಲ್ಲಿಯೇ ನಿಲ್ಲಿಸಬೇಕಾಗಿದೆ.
ಈಗ ಹು-ಧಾ ಪೊಲೀಸ್ ಕಮಿಷನರೇಟ್ ಘಟಕವು ಠಾಣೆಗೆ ಸ್ವಂತ ಕಟ್ಟಡಕ್ಕಾಗಿ ಗೋಕುಲ ರಸ್ತೆ ಹೊಸ ಬಸ್‌ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್ ಗೆ ಹೊಂದಿಕೊಂಡಿರುವ ಸುಮಾರು 23 ಗುಂಟೆ ಖುಲ್ಲಾ ಜಾಗ ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಾರಿಗೆ ಸಂಸ್ಥೆ ಸಹ ತನ್ನ 23 ಗುಂಟೆ ವಾಣಿಜ್ಯ ಜಾಗ ಕೊಡಲು ಒಪ್ಪಿಕೊಂಡಿದೆ. ಆದರೆ ಅದಕ್ಕೆ ಬದಲಾಗಿ ಸರಕಾರಿ ಮೌಲ್ಯದ ಅನುಸಾರ ಸಂಸ್ಥೆಯ ಸಿಬ್ಬಂದಿ ವಸತಿ ಗೃಹಕ್ಕಾಗಿ ಪೊಲೀಸ್ ಇಲಾಖೆ ಸಹ ಧಾರವಾಡದ ದೊಡ್ಡನಾಯಕನಕೊಪ್ಪದಲ್ಲಿರುವ ತನ್ನ 67 ಗುಂಟೆ ಜಾಗ ಮಂಜೂರು ಮಾಡಿಕೊಡಬೇಕೆಂದು ಕೋರಿತ್ತು. ಇದಕ್ಕೆ ಪೊಲೀಸ್ ಇಲಾಖೆ ಸಹ ತಾತ್ವಿಕವಾಗಿ ಒಪ್ಪಿಕೊಂಡಿದೆ. ಈ ವಿಷಯವಾಗಿ ಸಂಬಂಧಪಟ್ಟ ಎರಡು ಇಲಾಖೆಗಳು ಹಾಗೂ ಸರಕಾರ ಸಮ್ಮತಿ ಸೂಚಿಸಿವೆ ಎಂದು ತಿಳಿದುಬಂದಿದೆ. ಇದು ಕಾರ್ಯಗತವಾದರೆ ಗೋಕುಲ ರಸ್ತೆ ಪೊಲೀಸ್ ಠಾಣೆ 41 ವರ್ಷಗಳ ನಂತರ ಬಾಡಿಗೆ ಕಟ್ಟಡದಿಂದ ಮುಕ್ತಿಗೊಂಡಂತಾಗುತ್ತದೆ.
ಗೋಕುಲ ರಸ್ತೆ ಠಾಣೆ ಹಾಗೂ ವಿದ್ಯಾನಗರ ಠಾಣೆಗಳು ಕೆಲ ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಗೋಕುಲ ರಸ್ತೆ ಠಾಣೆಗಾಗಿ 23 ಗುಂಟೆ ಹಾಗೂ ವಿದ್ಯಾನಗರ ಠಾಣೆಗಾಗಿ ಅಂದಾಜು 13 ಗುಂಟೆ ಜಾಗ ಗುರುತಿಸಿ, ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದ್ದು, ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕೂಡ ಆಹ್ವಾನಿಸಿದೆ.
ಲಾಭೂ ರಾಮ,
ಆಯುಕ್ತ, ಹು-ಧಾ ಪೊಲೀಸ್
*ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.