ಧಾರವಾಡ: ಸೋರುತ್ತಿವೆ ಜ್ಞಾನ ದೇಗುಲಗಳು
Team Udayavani, Jul 20, 2023, 5:37 PM IST
ಧಾರವಾಡ: ಬೇಸಿಗೆ ರಜೆ ಮುಗಿಸಿ ಶಾಲೆಗಳತ್ತ ಮುಖ ಮಾಡಿರುವ ಮಕ್ಕಳ ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೂವರೆ ತಿಂಗಳೇ ಗತಿಸಿದ್ದು, ಇದೀಗ ಪ್ರತಿ ವರ್ಷದಂತೆ ಈ ಸಲವೂ ಮಳೆಯಿಂದ ಶಾಲಾ ಕೊಠಡಿಗಳು ಸೋರುತ್ತಿವೆ. ಅಷ್ಟೇಯಲ್ಲ ಕೆಲ ಕಡೆಗಳಲ್ಲಿ ಕೊಠಡಿಗಳ ಮೇಲ್ಛಾವಣಿ ಕುಸಿಯುತ್ತಿದ್ದು, ಇದು ಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ.
ಹೌದು. ಜಿಲ್ಲೆಯಲ್ಲಿ ಸರಕಾರಿ ಶಾಲೆಗಳ 346 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದರೆ 257 ಕೊಠಡಿಗಳ ದುರಸ್ತಿ ಕಾರ್ಯ ಆಗಬೇಕಿದೆ. ಅದರಲ್ಲೂ ಈಗ ಸತತ ಮಳೆ ಅಬ್ಬರದಿಂದ ಈ ಜ್ಞಾನ ದೇಗುಲಗಳು ಸೋರುತ್ತಿದ್ದು, ಮಕ್ಕಳ ಕಲಿಕೆಗೆ ಅಡಚಣೆ ಉಂಟಾಗಿದೆ.
ಇದಲ್ಲದೇ ಕೆಲವೆಡೆ ಹಂಚುಗಳು ಬಿದ್ದಿದ್ದು, ಇನ್ನು ಕೆಲವೆಡೆ ಶಿಥಿಲಾವಸ್ಥೆಯ ಕೊಠಡಿಗಳು ತಾವೇ ಕುಸಿದು ಬೀಳುವ ದುಸ್ಥಿತಿಯಲ್ಲಿವೆ. ಹೀಗಾಗಿ ಮಕ್ಕಳು, ಪೋಷಕರಲ್ಲಿ ಆತಂಕವೂ ಮನೆ ಮಾಡಿದೆ. ಮಕ್ಕಳ ಪಾಠ-ಪ್ರವಚನಗಳಿಗೂ ಸಂಕಷ್ಟ ಎದುರಾಗಿದೆ. 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 18 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, 127 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 10 ಸರಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 135 ಶಾಲೆಗಳ 1118 ಕೊಠಡಿಗಳ ಪೈಕಿ ಪ್ರಾಥಮಿಕ ಶಾಲೆಗಳ 333 ಹಾಗೂ ಪ್ರೌಢಶಾಲೆಗಳ 13 ಕೊಠಡಿಗಳು ಸೇರಿದಂತೆ ಒಟ್ಟು 346 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಈ ಕೊಠಡಿಗಳ ನೆಲಸಮಗೊಳಿಸಲು ಸೂಚಿಸಲಾಗಿದ್ದು, ಆದರೆ ಈವರೆಗೂ ನೆಲಸಮಗೊಂಡಿಲ್ಲ. ಈ ಪೈಕಿ ಅಳ್ನಾವರದಲ್ಲಿ 42, ಧಾರವಾಡ ಶಹರದಲ್ಲಿ 28, ಧಾರವಾಡ ಗ್ರಾಮೀಣದಲ್ಲಿ 61, ಹುಬ್ಬಳ್ಳಿ ಶಹರದಲ್ಲಿ 7, ಹುಬ್ಬಳ್ಳಿ ಗ್ರಾಮೀಣದಲ್ಲಿ 37, ಕಲಘಟಗಿಯಲ್ಲಿ 68, ಕುಂದಗೋಳದಲ್ಲಿ 43, ನವಲಗುಂದದಲ್ಲಿ 27,ಅಣ್ಣಿಗೇರಿ ವ್ಯಾಪ್ತಿಯಲ್ಲಿ 33 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.
ತುರ್ತು ದುರಸ್ತಿ ಕೊಠಡಿಗಳು: ಜಿಲ್ಲೆಯಲ್ಲಿ 79 ಶಾಲೆಗಳ 662 ಕೊಠಡಿಗಳ ಪೈಕಿ 257 ಕೊಠಡಿಗಳ ದುರಸ್ತಿ ಕಾರ್ಯ ತುರ್ತುಗಿ ಆಗಬೇಕಿದ್ದು, ಅದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಪೈಕಿ ಹುಬ್ಬಳ್ಳಿ ಗ್ರಾಮೀಣದಲ್ಲಿ ಇಂಗಳಹಳ್ಳಿ, ಹೆಬಸೂರ, ಮಲ್ಲಿಗವಾಡ, ಧಾರವಾಡ ಗ್ರಾಮೀಣದಲ್ಲಿ ಯಾದವಾಡ, ಕುರುಬಗಟ್ಟಿ, ಉಪ್ಪಿನಬೆಟಗೇರಿಯ ಶತಮಾನ ಕಂಡ ಶಾಲೆ, ತಡಕೋಡ, ಅಮ್ಮಿನಬಾವಿ, ಕಲಘಟಗಿಯ ಡೋರಿ, ಕಂಬಾರಗಣವಿ, ಮುಗದ, ಬಾಡ, ಗಂಭ್ಯಾಪೂರ, ಬೇಗೂರ, ಲಿಂಗನಕೊಪ್ಪ, ಮಿಶ್ರಿಕೋಟಿ, ಹುಲಗಿನಕಟ್ಟಿ, ಕುಂದಗೋಳದ ಯಲಿವಾಳ ಸೇರಿದಂತೆ ಜಿಲ್ಲೆಯ ಗ್ರಾಮೀಣ ಹಾಗೂ ಹು-ಧಾ ಅವಳಿನಗರದಲ್ಲಿರುವ ವಿವಿಧ ಶಾಲೆಗಳ ಕೊಠಡಿಗಳ ದುರಸ್ತಿ ಆಗಬೇಕಿದೆ.
ಶಾಲಾ ಕಟ್ಟಡಗಳ ಸ್ಥಿತಿಗತಿ ಪರಿಶೀಲಿಸಲು ಡಿಸಿ ಆದೇಶ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಕಟ್ಟಡಗಳ ಸ್ಥಿತಿಗತಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಹಾಗೂ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನಾಪತ್ರ ನೀಡಿ ಆದೇಶಿಸಿರುವ ಅವರು, ಮಳೆಗಾಲ ಪ್ರಾರಂಭವಾಗಿರುವುದರಿಂದ ತಮ್ಮ ತಾಲೂಕುಗಳಲ್ಲಿರುವ ಪ್ರಾಥಮಿಕ ಮತ್ತು
ಪ್ರೌಢಶಾಲೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಿಂದ, ಬ್ಲಾಕ್ ಮಟ್ಟದ ಸಂಪನ್ಮೂಲ ಅಧಿಕಾರಿಗಳಾದ (ಸಿಆರ್‌ಪಿ, ಬಿಆರ್‌ಪಿ) ನೋಡಲ್ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಇನ್ನು ಶಿಥಿಲಗೊಂಡಿರುವ ಹಾಗೂ ಹಾನಿಗೊಳಗಾದ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳಲ್ಲಿ ಯಾವುದೇ ವರ್ಗಗಳನ್ನು ನಡೆಸದಂತೆ ಸಂಬಂಧಿಸಿದ ಮುಖ್ಯ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯರಿಗೆ ಸೂಚಿಸಿ ಅದು ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಶಿಥಿಲವಾದ ಹಾಗೂ ಹಾನಿಗೊಳಗಾದ ಕಟ್ಟಡಗಳು ಮರುನಿರ್ಮಾಣ ಮತ್ತು ರಿಪೇರಿ ಆಗುವವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠ-ಪ್ರವಚನಕ್ಕೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಧಾರವಾಡ ಗ್ರಾಮೀಣ ವಲಯದ ಬೋಗೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಳಿಗ್ಗೆ 8ನೇ ತರಗತಿ ಮಕ್ಕಳಿಗೆ ಇ-ವಿದ್ಯಾಲೋಕ ಆನ್‌ಲೈನ್ ತರಗತಿ ನಡೆಯುವ ವೇಳೆಗೆ ಸತತ ಮಳೆಯಿಂದಾಗಿ ಒಂದು ಕೊಠಡಿಯ ಸ್ವಲ್ಪ ಮೇಲಿನ ಪದರು ಕಳಚಿ ಬಿದ್ದಿದೆ. ಇದರಿಂದ ಶಾಲೆಯ 8ನೇ ತರಗತಿಯ ಮಡಿವಾಳಪ್ಪ ತಿರುಕಪ್ಪ ನಿಟಗಲ ಎರಂಬ ವಿದ್ಯಾರ್ಥಿಯ ಹಣೆ, ಮೂಗಿನ ಮೇಲೆ ಸಣ್ಣ ಗಾಯಗಳಾಗಿದ್ದು, ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯುವುದರ ಜತೆಗೆ ಶಿಥಿಲಗೊಂಡ ಹಾಗೂ ಹಾನಿಗೊಳಗಾದಾಗ ಕಟ್ಟಡಗಳಿದ್ದಲ್ಲಿ ಅಂತಹ ಕಟ್ಟಡಗಳಲ್ಲಿ ಯಾವುದೇ ವರ್ಗಗಳನ್ನು ನಡೆಸದಂತೆ ನೋಡಿಕೊಳ್ಳಬೇಕು. ಈ ಕಟ್ಟಡಗಳು ಮರು ನಿರ್ಮಾಣ, ರಿಪೇರಿ ಆಗುವವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠ-ಪ್ರವಚನಕ್ಕೆ ಯಾವುದೇ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಗುರುದತ್ತೆ ಹೆಗಡೆ ಆದೇಶದ ಮೂಲಕ ಸೂಚಿಸಿದ್ದಾರೆ.
ಬೋಗೂರು ಶಾಲೆಯ ಘಟನೆ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿರುವ ಡಿಡಿಪಿಐ ಎಸ್.ಎಸ್. ಕೆಳದಿಮಠ, ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಒಟ್ಟು 208 ಮಕ್ಕಳಿದ್ದು, 7 ಬೋಧನಾ ಕೊಠಡಿಗಳು, 1 ಮುಖ್ಯೋಪಾಧ್ಯಾಯರ ಕೊಠಡಿ ಇದೆ. 7 ಕೊಠಡಿಗಳಲ್ಲಿ 4 ಕೊಠಡಿಗಳು ದುರಸ್ತಿ ಕಾಣಬೇಕಿದ್ದು, ಹೀಗಾಗಿ ತರಗತಿ ಹೊಂದಾಣಿಕೆ
ಮಾಡಿಕೊಂಡು ಬಹುವರ್ಗ ಬೋಧನಾ ವಿಧಾನ ಮೂಲಕ ತಾತ್ಕಾಲಿಕವಾಗಿ ತರಗತಿ ನಿರ್ವಹಣೆ ಮಾಡಲು ಸೂಚಿಸಲಾಗಿದೆ. ಇದಲ್ಲದೇ ಯಾವುದೇ ಕಾರಣಕ್ಕೂ ಬೀಳುವ ಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸದಂತೆ ಮುಖ್ಯೋಪಾಧ್ಯಾಯರಿಗೆ ಹಾಗೂ ಸಹ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನ ಕಂಡಿದ್ದು, ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶಾಲೆಯ ಒಟ್ಟು 20 ಕೊಠಡಿಗಳ ಪೈಕಿ 10 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಉಳಿದ ಕೊಠಡಿಗಳೂ ದುರಸ್ತಿ ಕಾಣಬೇಕಿದೆ. ಈಗ ಅಪಾಯ ಸ್ಥಿತಿಯಲ್ಲಿರುವ ಕೊಠಡಿಗಳ ದುರಸ್ತಿ ಆದಷ್ಟು ಬೇಗ ಮಾಡಬೇಕು.
ನಿಂಗಪ್ಪ ಹಡಪದ, ಎಸ್‌ಡಿಎಂಸಿ ಅಧ್ಯಕ್ಷರು, ಮನಗುಂಡಿ
*ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.