ಪೊರಕೆ ಹಿಡಿಯುವ ಕೈಯಲ್ಲಿನ್ನು ಸ್ಟೇರಿಂಗ್!
ಸ್ವಚ್ಛತೆ ನಿರ್ವಹಿಸುತ್ತಿದ್ದ ಮಹಿಳೆಯರಿಗೆ ತ್ಯಾಜ್ಯ ವಿಲೇ ಹೊಣೆ ; ಆಸಕ್ತ ಮಹಿಳೆಯರ ಗುರುತಿಸಿ ಚಾಲನಾ ತರಬೇತಿ
Team Udayavani, Jun 13, 2022, 9:42 AM IST
ಹುಬ್ಬಳ್ಳಿ: ಪೊರಕೆ ಹಿಡಿದು ಗ್ರಾಮಗಳಲ್ಲಿ ಕಸ ಗುಡಿಸುವ ಮಹಿಳೆಯರು ಇನ್ನು ಮುಂದೆ ಸ್ಟೇರಿಂಗ್ ಹಿಡಿಯಲಿದ್ದಾರೆ. ಗ್ರಾಮಗಳಲ್ಲಿ ಸ್ವತ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯರು ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಹೊರಲಿದ್ದಾರೆ. ಘನ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳ (ಆಟೋ ಟಿಪ್ಪರ್) ಚಾಲನಾ ಹೊಣೆಯನ್ನು ಮಹಿಳೆಯರಿಗೆ ನೀಡಲಾಗುತ್ತಿದೆ.
ನಗರ, ಗ್ರಾಮಗಳ ಸ್ವಚ್ಛತಾ ಕಾರ್ಯದಲ್ಲಿ ಮಹಿಳಾ ಕಾರ್ಮಿಕರ ಪಾತ್ರ ದೊಡ್ಡದು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಕೂಡ ನೀಡಲಾಗುತ್ತಿದೆ. ಆಸಕ್ತ ಮಹಿಳೆಯರನ್ನು ಗುರುತಿಸಿ ಅವರಿಗೆ ಚಾಲನಾ ತರಬೇತಿ ನೀಡಲು ಸಿದ್ಧತೆಗಳು ನಡೆದಿವೆ.
ಆಯಾ ಜಿಲ್ಲಾ ಪಂಚಾಯಿತಿ ಮೂಲಕ ಮಹಿಳೆಯರನ್ನು ಗುರುತಿಸಿ 30 ದಿನಗಳ ಚಾಲನಾ ತರಬೇತಿ ನೀಡಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಕೂಡ ಸ್ವಾವಲಂಬಿ ಜೀವನ ನಡೆಸಲು ಇದೊಂದು ಒಳ್ಳೆಯ ಯೋಜನೆಯಾಗಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಯಶಸ್ವಿಯಾಗಿದ್ದರಿಂದ ಅಲ್ಲಿನ ಮಾದರಿಯಲ್ಲೇ ಮಹಿಳೆಯರಿಗೆ ಚಾಲನಾ ತರಬೇತಿ ನೀಡಲು ಸರಕಾರ ಜಿಪಂ ಮೂಲಕ ಈ ಕಾರ್ಯ ಅನುಷ್ಠಾನಗೊಳಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಅಡಿಯಲ್ಲಿ ಬರುವ ಸ್ವ ಸಹಾಯ ಗುಂಪಿನ ಸದಸ್ಯರು ಈಗಾಗಲೇ ಗ್ರಾಮಗಳಲ್ಲಿ ಮನೆ ಮನೆಯಿಂದ ಘನತ್ಯಾಜ್ಯ ಸಂಗ್ರಹ, ಸಾಗಣೆ, ವಿಂಗಡಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಮೌಲ್ಯಯುತ ವಸ್ತುಗಳನ್ನು ಮಾರಾಟ ಮಾಡಿ ನಿರ್ವಹಣೆ ವೆಚ್ಚ ಸರಿದೂಗಿಸುವ ಕೆಲಸ ಆಗುತ್ತಿದೆ. ಪ್ರಮುಖವಾಗಿ ಮನೆಯ ಹಂತದಲ್ಲೇ ಒಣ-ಹಸಿ ಕಸ ವಿಂಗಡಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ತ್ಯಾಜ್ಯ ಸಂಗ್ರಹಣಾ ಸುಂಕದ ವಸೂಲಾತಿಯನ್ನೂ ಕೂಡ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಸಂಜೀವಿನಿ ಒಕ್ಕೂಟದ ಸದಸ್ಯರು ನಿರ್ವಹಿಸುವ ಮಟ್ಟಕ್ಕೆ ತಮ್ಮ ಕಾರ್ಯಸಾಧನೆ ತೋರಿದ್ದಾರೆ. ಹೀಗಾಗಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸ್ವತ್ಛ ಭಾರತ ಮಿಷನ್ ಮೂಲಕ ಆಸಕ್ತ ಮಹಿಳೆಯರಿಗೆ ಈ ಅವಕಾಶ ಕಲ್ಪಿಸಲಾಗಿದ್ದು, ರಾಜ್ಯಾದ್ಯಂತ 1220 ಮಹಿಳೆಯರಿಗೆ ಚಾಲನಾ ತರಬೇತಿ ದೊರೆಯಲಿದೆ.
ವಾಕರಸಾ ಸಂಸ್ಥೆಯಲ್ಲಿ ತರಬೇತಿ: ಇದೀಗ ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಮಹಿಳೆಯರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಮೂಲಕ ತರಬೇತಿ ದೊರೆಯಲಿದೆ. ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಧಾರವಾಡ ಜಿಪಂ-59, ಗದಗ-05, ಬಾಗಲಕೋಟೆ-12, ಬೆಳಗಾವಿ-37, ಹಾವೇರಿ-46, ಉತ್ತರ ಕನ್ನಡ-15 ಸೇರಿದಂತೆ ಒಟ್ಟು 174 ಮಹಿಳೆಯರು ಮೊದಲ ಹಂತದಲ್ಲಿ ತರಬೇತಿ ಪಡೆಯಲಿದ್ದಾರೆ.
ನಿತ್ಯ 30 ಜನರಿಗೆ ತರಬೇತಿ ದೊರೆಯಲಿದ್ದು, 30 ದಿನಗಳ ಅವಧಿಯ ತರಬೇತಿಯಾಗಿದೆ. ಆರಂಭದಲ್ಲಿ ಧಾರವಾಡ ಜಿಪಂ ನಂತರ ಇತರೆ ಜಿಪಂ ವ್ಯಾಪ್ತಿಯ ಮಹಿಳೆಯರಿಗೆ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ. ತರಬೇತಿಗೆ ಬರುವವರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಕೂಡ ಕೊಡಲಿದ್ದಾರೆ. ತರಬೇತಿ ಪೂರ್ಣಗೊಳಿಸಿದ ನಂತರ ಸಾರಿಗೆ ಸಂಸ್ಥೆ ವತಿಯಿಂದಲೇ ಚಾಲನಾ ತರಬೇತಿ ಪರವಾನಗಿ ಕೊಡಿಸುವ ಕೆಲಸ ಆಗುತ್ತದೆ. ಆಯ್ಕೆಯಾದ ಮಹಿಳೆಯರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಚಾರ್ಯ ನಾರಾಯಣಪ್ಪ ಕುರುಬರ.
ವಯಸ್ಸಿನ ಗೊಂದಲ: ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ, ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ ಅಡಿಯಲ್ಲಿ 18-40 ವರ್ಷ ವಯೋಮಿತಿ ಹೊಂದಿರುವ ಗ್ರಾಪಂ ವ್ಯಾಪ್ತಿಯಲ್ಲಿ ಆಸಕ್ತ ಮಹಿಳೆಯರನ್ನು ಗುರುತಿಸಿ ಹಂತ ಹಂತವಾಗಿ ಚಾಲನಾ ತರಬೇತಿ ನೀಡಲು ಯೋಜಿಸಲಾಗಿದೆ. ಆದರೆ ಮುಖ್ಯಮಂತ್ರಿಗಳ ಕೌಶಲ ಯೋಜನೆಯಡಿ 35 ವರ್ಷದಗೊಳಗಿನ ಅಭ್ಯರ್ಥಿಗಳಿಗೆ ಮಾತ್ರ ಚಾಲನಾ ತರಬೇತಿ ನೀಡಲು ಅವಕಾಶವಿದೆ. ಆದರೆ ಜಿಪಂ ವತಿಯಿಂದ 18-40 ವರ್ಷದವರೆಗಿನ ಮಹಿಳೆಯರನ್ನು ಆಯ್ಕೆ ಮಾಡಿರುವುದು ವಯಸ್ಸಿನ ಗೊಂದಲ ನಿರ್ಮಾಣವಾಗಿದೆ. ಈ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ 35 ವಯಸ್ಸು ದಾಟಿದವರಿಗೆ ತರಬೇತಿ ಕೊಡಬೇಕೋ ಬೇಡವೋ ಎನ್ನುವ ಗೊಂದಲವಿದೆ.
ಈ ತರಬೇತಿ ವಸತಿ ರಹಿತವಾಗಿರುವುದರಿಂದ ದೂರದ ಜಿಲ್ಲೆಗಳ ಗ್ರಾಮಗಳಿಂದ ಮಹಿಳೆಯರು ಬಂದು ಹೋಗುವುದು ಸುಲಭದ ಮಾತಲ್ಲ ಎನ್ನುವುದು ಫಲಾನುಭವಿಗಳ ಅಳಲಾಗಿದೆ. ಹೀಗಾಗಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ತರಬೇತಿ ನೀಡುವುದು, ಅಲ್ಲಿಯ ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ಕೊಡಿಸುವುದು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದು, ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯಲ್ಲಿ ಒಂದೇ ತರಬೇತಿ ಕೇಂದ್ರ ಇರುವ ಕಾರಣಕ್ಕೆ ಈ ಗೊಂದಲ ಸೃಷ್ಟಿಯಾಗಿದೆ. ವಸತಿ ಸಹಿತ ತರಬೇತಿ ನೀಡಿದರೆ ಈ ಗೊಂದಲ ಇರುವುದಿಲ್ಲ ಎನ್ನುವ ಮಾತುಗಳಿವೆ.
ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ 6 ಜಿಲ್ಲಾ ಪಂಚಾಯ್ತಿಗಳಿಂದ ಚಾಲನಾ ತರಬೇತಿಗಾಗಿ ಕೋರಿದ್ದಾರೆ. ಮೊದಲ ಹಂತದಲ್ಲಿ 174 ಮಹಿಳೆಯರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಮೂಲಕ ಚಾಲನಾ ತರಬೇತಿ ನೀಡಲಾಗುವುದು. ಗ್ರಾಮೀಣ ಭಾಗದ ಮಹಿಳೆಯರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದೆ. ಮಹಿಳೆಯರನ್ನು ಸಬಲೆಯರನ್ನಾಗಿ ಮಾಡುವ ಕಾರ್ಯವನ್ನು ನಮ್ಮ ಸಂಸ್ಥೆ ಮೂಲಕ ಅನುಷ್ಠಾನಗೊಳಿಸಲು ಸರಕಾರ ಮುಂದಾಗಿದೆ. ಫಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗುವುದು. –ಎಸ್.ಭರತ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.