ಚುನಾವಣೆ ನೆಪ: ನೀರಾವರಿ ಯೋಜನೆಗಳ ಜಪ!
ಹೆಚ್ಚುತ್ತಿದೆ ರಾಜಕೀಯ ಪಕ್ಷಗಳ ಉತ್ತರದ ಮಮಕಾರ
Team Udayavani, Apr 21, 2022, 2:09 PM IST
ಹುಬ್ಬಳ್ಳಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ನೀರಾವರಿ ಯೋಜನೆಗಳಿಗೆ ಎಲ್ಲಿಲ್ಲದ ಮಹತ್ವ ಬಂದಿದ್ದು, ಉತ್ತರ ಕರ್ನಾಟಕದ ಮೇಲಿನ ಮಮಕಾರ ಉಕ್ಕಿ ಹರಿಯುತ್ತದೆ.
ಇದು ಹಲವು ವರ್ಷಗಳ ಕಥೆ-ವ್ಯಥೆ. ಇದೀಗ ಮತ್ತದೇ ಮಹತ್ವ ಮರುಕಳಿಸಿದೆ. ನೀರಾವರಿಗಾಗಿ ರ್ಯಾಲಿ, ಜಾಥಾಗಳು ಜೋರಾಗುತ್ತಿದೆ. ಮತ್ತೂಮ್ಮೆ ನಮ್ಮನ್ನು ಭ್ರಮನಿರಸಗೊಳಿಸಬೇಡಿ ಎಂಬುದು ಈ ಭಾಗದ ಜನರ ಅನಿಸಿಕೆ. ಪಕ್ಷ-ಪಕ್ಷಾತೀತ ಹೆಸರಲ್ಲಿ ನೀರಾವರಿ ಯೋಜನೆಗೆ ಅನುಷ್ಠಾನಕ್ಕೆ ರ್ಯಾಲಿ, ಜಾಥಾಗಳು ವಿಜೃಂಭಿಸುತ್ತಿವೆ, ರೈತರಿಗೆ ನೀರು ತಂದು ಕೊಡುವುದೇ ನಮ್ಮ ಧ್ಯೇಯ ಎಂಬ ಹೇಳಿಕೆ, ಭಾಷಣಗಳು ಮಾರ್ದನಿಸುತ್ತಿವೆ. ಕಳೆದ ಮೂರ್‍ನಾಲ್ಕು ದಶಕಗಳಿಂದ ಉತ್ತರದ ಜನತೆಗೆ ಮಾಯದ ಜಿಂಕೆಯಾಗಿದೆಯೇ ವಿನಃ ಅನುಷ್ಠಾನದ ಕೆಲಸವಾಗಿಲ್ಲ ಎಂಬುದು ವಾಸ್ತವ. ನೀರಾವರಿ ಯೋಜನೆಗಳ ಜತೆಗೆ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಅನ್ಯಾಯ, ಪ್ರಾದೇಶಿಕ ಅಸಮತೋಲನ ವಿಚಾರಗಳು ಗರಿಗೆದರತೊಡಗಿವೆ.
ಹೋರಾಟದಲ್ಲಿ ಪೈಪೋಟಿ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ನೀರಾವರಿ ಯೋಜನೆಗಳು, ಉತ್ತರ ಕರ್ನಾಟಕದ ಅಭಿವೃದ್ಧಿ ಪೈಪೋಟಿ ರೂಪದಲ್ಲಿ ಹೋರಾಟಕ್ಕಿಳಿಯಲು, ರ್ಯಾಲಿ-ಜಾಥಾ ಕೈಗೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ. ಮಹದಾಯಿ, ಕಳಸಾ-ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ತುಂಗಭದ್ರ ಸಮಾನಾಂತರ ಜಲಾಶಯ, ಬೆಣ್ಣೆಹಳ್ಳ-ಡೋಣಿ ನದಿ, ತುಪ್ಪರಿಹಳ್ಳ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ವಿಚಾರ ಸದ್ದು ಮಾಡತೊಡಗಿದೆ. ಅಧಿಕಾರ ಅನುಭವಿಸಿ ಕೆಳಗಿಳಿದವರು, ಅಧಿಕಾರದಲ್ಲಿದ್ದವರು ಯೋಜನೆಗಳ ಬಗ್ಗೆ ಎಲ್ಲಿಲ್ಲದ ಮೋಹ ತೋರತೊಡಗಿದ್ದಾರೆ. ರಾಜ್ಯದ ಪಾಲಿನ ನೀರಿಗಾಗಿ ನಾವು ಎಂದು ಬಿಂಬಿಸತೊಡಗಿದ್ದಾರೆ. ಯೋಜನೆಗಳ ವಿಳಂಬ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಬಿರುಸು ಪಡೆಯುತ್ತಿದ್ದು, ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಮಹದಾಯಿ, ಕಳಸಾ-ಬಂಡೂರಿ, ಯುಕೆಪಿ-3ನೇ ಹಂತ ಹಾಗೂ ತಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ವಿಷಯವಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯಡಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗಿದೆ. ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಯಾಗಿದೆ. ನಮ್ಮ ಪಾಲಿನ 13.5 ಟಿಎಂಸಿ ಅಡಿ ನೀರಿನಲ್ಲಿ ಸುಮಾರು 8 ಟಿಎಂಸಿ ಅಡಿ ವಿದ್ಯುತ್ ಉತ್ಪಾದನೆಗೆ ಹೋದರೆ ಉಳಿದ ನೀರನ್ನಾದರೂ ನಮ್ಮ ಬಳಕೆಗೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಕಾಮಗಾರಿ ಆರಂಭಗೊಂಡಿಲ್ಲ.
ಯುಕೆಪಿ-3ನೇ ಹಂತದಡಿ ಕಾಮಗಾರಿ ಕೈಗೊಂಡರೆ ನ್ಯಾ| ಬ್ರಿಜೇಶಕುಮಾರ ನೇತೃತ್ವದ ನ್ಯಾಯಾಧಿಕರಣ ತೀರ್ಪಿನಂತೆ ಸುಮಾರು 130 ಟಿಎಂಸಿ ಅಡಿ ನೀರು ದೊರೆಯಲಿದ್ದು, ಸುಮಾರು 15 ಲಕ್ಷ ಎಕರೆಗೆ ನೀರಾವರಿ ಭಾಗ್ಯ ದೊರೆಯಲಿದೆ. ಆಲಮಟ್ಟಿ ಜಲಾಶಯ ಎತ್ತರ 524.256 ಮೀಟರ್‌ಗೆ ಹೆಚ್ಚಿಸಲು ಕೇಂದ್ರದಿಂದ ಅಧಿಸೂಚನೆ ಹೊರಬಿದ್ದಿಲ್ಲವಾಗಿದ್ದು, ಯೋಜನೆಯಿಂದ ಮುಳುಗಡೆಯಾಗುವ ಸಂತ್ರಸ್ತರಿಗೆ ಯಾವುದೇ ಪರಿಹಾರದ ಸ್ಪಷ್ಟ ಕ್ರಮ ಆಗುತ್ತಿಲ್ಲ. ಯೋಜನಾ ವೆಚ್ಚ ಲಕ್ಷ ಕೋಟಿ ರೂ.ಗೆ ತಲುಪುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ಸುಮಾರು 32 ಟಿಎಂಸಿ ಅಡಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸ್ಪಷ್ಟ ಕ್ರಮ ಇಲ್ಲವಾಗುತ್ತಿದೆ. ಹೀಗೆ ನೀರಾವರಿ ಯೋಜನೆಗಳ ಬಗ್ಗೆ ಕಾಳಜಿಯ ಮಹಾಪೂರವೇ ಹರಿದು ಬರತೊಡಗಿದೆ. ಮತ್ತೂಂದೆಡೆ ಉತ್ತರದ ಮಟ್ಟಿಗೆ ಖಾಲಿ ಮನೆಯಂತಾಗಿರುವ ಜೆಡಿಎಸ್ ರಾಜ್ಯದ ಒಟ್ಟಾರೆ ನೀರಾವರಿ ಯೋಜನೆಗಳ ವಿಚಾರದಲ್ಲಿ ಜನತಾ ಜಲಧಾರೆ ಅಭಿಯಾನದಡಿ ತನ್ನ ಅಸ್ತಿತ್ವ ಸಾಬೀತಿಗೆ ಮುಂದಾಗಿದೆ ಎಂದೆನಿಸುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಜನತಾ ಜಲಧಾರೆ ಯಾತ್ರೆ ಕೈಗೊಂಡ ಜೆಡಿಎಸ್ ಉತ್ತರ ಕರ್ನಾಟಕದ ತುಂಗಭದ್ರ, ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವರದಾ, ಮಹದಾಯಿ ಹೀಗೆ ವಿವಿಧ ನದಿ, ಜಲಾಶಯಗಳ ನೀರು ತೆಗೆದುಕೊಂಡು ಒಂದೆಡೆ ಸಮಾವೇಶ ಆಗುವ ಮೂಲಕ ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ತಾನು ಬದ್ಧ ಎಂಬ ಸಂದೇಶ ನೀಡಲು ಮುಂದಾಗಿದೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಪಾದಯಾತ್ರೆ ಮುಗಿಸಿರುವ ಕಾಂಗ್ರೆಸ್, ಮಹದಾಯಿ, ಯುಕೆಪಿ-3ನೇ ಹಂತದ ವಿಷಯವಾಗಿ ಹೋರಾಟಕ್ಕೆ ಮುಂದಾಗಿದೆ. ವಿಪಕ್ಷಗಳ ಹೋರಾಟಗಳಿಗೆ ಎದುರೇಟು ನೀಡಲು ಬಿಜೆಪಿ ತನ್ನ ಸಾಧನೆ, ನೀರಾವರಿ ಯೋಜನೆಗಳಿಗೆ ಪ್ರಯತ್ನ, ಕಾನೂನು ಅಡ್ಡಿಯನ್ನು ಜನರ ಮುಂದಿಡುವ ಯಾತ್ರೆ ಕೈಗೊಳ್ಳಲು ತಯಾರಿ ನಡೆಸುತ್ತಿದೆ.
ಯೋಜನೆಗಳ ವಿಳಂಬಕ್ಕೆ ಕಾರಣರಾರು? ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ವಿಳಂಬಕ್ಕೆ ಕಾರಣ ಯಾರು? ರಾಜ್ಯದಲ್ಲಿ ಅಧಿಕಾರ ನಡೆಸಿರುವ, ನಡೆಸುತ್ತಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳು ಉತ್ತರಿಸಬೇಕಿದೆ. ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿನ ನೀರಾವರಿ ಯೋಜನೆಗಳಿಗೆ ಅಲ್ಲಿನ ಸರಕಾರಗಳ ಇಚ್ಛಾಶಕ್ತಿ ನೋಡಿದರೆ ನಾವು ಅದೆಷ್ಟೋ ಮೈಲು ದೂರದಲ್ಲಿದ್ದೇವೆಂಬ ಅನುಭವವಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರ್ಕಾರದ ಬಿಡಿಕಾಸು ನೆರವಿಲ್ಲದೆಯೇ ಕಾಲೇಶ್ವರಂ ಯೋಜನೆಯನ್ನು ವಿಶ್ವಕ್ಕೆ ಮಾದರಿ ರೂಪದಲ್ಲಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗಿದೆ. ನೀರಾವರಿ-ಕುಡಿಯುವ ನೀರು ಪೂರೈಕೆಗೆ ವಿಶ್ವದ ಅತಿ ದೊಡ್ಡ ಕಾಲೇಶ್ವರಂ ಏತನೀರಾವರಿ ಯೋಜನೆ ಮಾದರಿಯಾಗಿದೆ. ಇನ್ನು ಅವಿಭಜಿತ ಆಂಧ್ರಪ್ರದೇಶದಲ್ಲಿ ವಿವಿಧ ನೀರಾವರಿ ಯೋಜನೆಗಳಿಗಾಗಿ ಕೈಗೊಂಡ ಜಲಯಜ್ಞಂ, ಮಹಾರಾಷ್ಟ್ರದಲ್ಲಿ ಭೀಮಾ ನದಿಯನ್ನೇ ಕಾಲುವೆ ಮೂಲಕ ತಿರುಗಿಸಿದ್ದು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು ಮೊಳಗುತ್ತಿವೆ. ನಮ್ಮಲ್ಲಿ ದಶಕ-ದಶಕಗಳಿಂದ ಯೋಜನೆಗಳ ಕಣ್ಣೀರ ಕಥೆಗೆ ಕೊನೆ ಇಲ್ಲವಾಗಿದೆ. ಯುಕೆಪಿಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡಲು ಬದ್ಧ ಎಂಬ ಪಾದಯಾತ್ರೆ, ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ನೀರು ನೀಡಲು ಬದ್ಧ ಎಂಬ ವಾಗ್ಧಾನ, ಇಡೀ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆಂಬ ಹೇಳಿಕೆಗಳನ್ನು ಕೇಳಿ ಕೇಳಿ ಜನರು ಸುಸ್ತಾಗಿದ್ದಾರೆ. ಚುನಾವಣೆ ಮುಗಿದು ಅಧಿಕಾರ ಹಿಡಿದ ನಂತರ ಮರೆಯಾಗುತ್ತದೆ. ಇದು ರಾಜಕೀಯ ಪಕ್ಷಗಳಿಗೆ, ಉತ್ತರ ಕರ್ನಾಟಕದ ಜನತೆ ಹೊಸದೇನೂ ಅಲ್ಲವೇ ಅಲ್ಲ. ನೀರಾವರಿ ಯೋಜನೆಗಳ ಪೂರ್ಣಕ್ಕೆ ನಾವು ಬದ್ಧ ಎಂಬ ಪ್ರತಿಜ್ಞೆ ರಾಜಕೀಯ ಪಕ್ಷಗಳು ಮಾಡಬೇಕಿದೆ. ಯೋಜನೆ ಮುಗಿಯುವವರೆಗೆ ಹೋರಾಟ ನಿಲ್ಲದು ಎಂದು ಪಕ್ಷಾತೀತರು ವಿಶ್ವಾಸ ಮೂಡಿಸಬೇಕಿದೆ.
ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ನಂತರ 3-4 ವರ್ಷ ಹನಿಮೂನ್ ಮೂಡ್‌ನಲ್ಲಿರುವ ರಾಜ್ಯದ ಮೂರು ಪಕ್ಷಗಳು ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ ಎನ್ನುವಾಗ ಎಚ್ಚೆತ್ತಂತೆ ನೀರಾವರಿ ಯೋಜನೆಗಳು, ಅಭಿವೃದ್ಧಿಯ ಕಾಳಜಿ ಎಂಬ ನಾಟಕ ಶುರುವಿಟ್ಟುಕೊಳ್ಳುತ್ತವೆ. ನೀರಾವರಿ ಯೋಜನೆಗಾಗಿ ನಾವು ಎಂದು ಜನರಿಗೆ ನೀರು ಕುಡಿಸುವ ಕೆಲಸ ಮಾಡುತ್ತಾರೆ. ನೀರಾವರಿ ಯೋಜನೆಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟತೆ ಇಲ್ಲವಾಗಿದೆ. ಕಳಸಾ-ಬಂಡೂರಿ ವಿಚಾರದಲ್ಲಿ ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಜನರಿಗೆ ಸುಳ್ಳು ಹೇಳುತ್ತಿದೆ. ಫಿಸಿಬಿಲಿಟಿ ವರದಿಯನ್ನೇ ಡಿಪಿಆರ್ ಎಂಬಂತೆ ಬಿಂಬಿಸುತ್ತಿದೆ. ಕೇಂದ್ರದ ಸುಮಾರು 18-22 ಇಲಾಖೆಗಳ ಒಪ್ಪಿಗೆ ಪಡೆಯದೆ ಕಾಮಗಾರಿ ಆರಂಭ ಸಾಧ್ಯವೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ. –ವಿಕಾಶ ಸೊಪ್ಪಿನ, ಆಪ್, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.