ಬರಲಿದೆ ಚುನಾವಣೆ-ಕುಂಟುತ್ತಿದೆ ಯೋಜನೆ!
ಮತ್ತೆ ವಾಗ್ಧಾನ-ಪ್ರತಿಜ್ಞೆ-ಭರವಸೆ ಸ್ವೀಕಾರಕ್ಕೆ ಸಜ್ಜಾದ ಕೃಷ್ಣಾ ಮೇಲ್ದಂಡೆ ಕಾಮಗಾರಿ
Team Udayavani, Oct 10, 2022, 2:51 PM IST
ಹುಬ್ಬಳ್ಳಿ: ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿ, ವಾಗ್ಧಾನ-ಪ್ರತಿಜ್ಞೆ ಮಾಡಿ ಎರಡು ಚುನಾವಣೆಗಳು ಕಳೆದಿವೆ. ಮೂರು ಸರಕಾರಗಳು ಉರುಳಿವೆ. ಇಷ್ಟಾದರೂ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಕಿಂಚಿತ್ತೂ ಅಲುಗಾಡಿಲ್ಲ.. ಮತ್ತೂಂದು ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ಈಗಲಾದರೂ ಯೋಜನೆಗೆ ಸ್ಪಷ್ಟರೂಪದ ಚಾಲನೆ ದೊರೆಯುತ್ತದೆಯೋ, ಇಲ್ಲವೆ ಮತ್ತದೇ ಭರವಸೆಯ ಮಹಾಪೂರ ಹರಿದು ಬರಲಿದೆಯೋ ಎಂಬ ಶಂಕೆ ಜನರನ್ನು ಕಾಡತೊಡಗಿದೆ.
ರಾಜ್ಯದ ಪಾಲಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರು ಬಳಕೆ ಕಥೆ-ವ್ಯಥೆ ಇಂದು ನಿನ್ನೆಯದಲ್ಲ. ಸರಿಸುಮಾರು ನಾಲ್ಕುವರೆ ದಶಕಗಳದ್ದಾಗಿದೆ. ಪ್ರತಿ ಚುನಾವಣೆ ಬಂದಾಗಲೊಮ್ಮೆ ಇನ್ನೇನು ಯೋಜನೆ ಪೂರ್ಣಗೊಂಡೇ ಬಿಟ್ತು ಎನ್ನುವಂತೆ ಬಿಂಬಿಸಲಾಗುತ್ತದೆ. ಚುನಾವಣೆ ಪ್ರಚಾರದಲ್ಲಿ ಆಡಳಿತ-ವಿಪಕ್ಷಗಳಿಗೆ ಚುನಾವಣಾ ಸರಕಾಗುವ ಯುಕೆಪಿ-3 ಸರಕಾರ ರಚನೆಯಾದ ಕೂಡಲೇ ಮರೆಯಾಗುವುದು ಈ ಭಾಗಕ್ಕೆ ವಾಡಿಕೆಯಂತಾಗಿದೆ.
ಕೃಷ್ಣಾ ನದಿ ನೀರು ಹಂಚಿಕೆಯ ಎರಡನೇ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿ ಎಂಟು ವರ್ಷಗಳು ಕಳೆದರೂ ರಾಜ್ಯದ ಪಾಲಿಕೆಗೆ ಇದುವರೆಗೂ ಯಾವುದೇ ಫಲಪ್ರದ ಕಾರ್ಯ ಆಗಿಲ್ಲ ಎಂಬ ನೋವು ರೈತರದ್ದಾಗಿದೆ. ನ್ಯಾ|ಬ್ರಿಜೇಶ ಕುಮಾರ ನೇತೃತ್ವದ ಕೃಷ್ಣಾ ನದಿ ನೀರು ಹಂಚಿಕೆ ಎರಡನೇ ನ್ಯಾಯಾಧಿಕರಣ 2013ರ ನವೆಂಬರ್ 29ರಂದು ಅಂತಿಮ ತೀರ್ಪು ನೀಡಿದ್ದು, ರಾಜ್ಯಕ್ಕೆ ಸುಮಾರು 125 ಟಿಎಂಸಿ ಅಡಿ ನೀರು ಬಳಕೆ, ಆಲಮಟ್ಟಿ ಜಲಾಶಯ ಮಟ್ಟವನ್ನು 519ರಿಂದ 524.256 ಮೀಟರ್‌ಗೆ ಹೆಚ್ಚಳಕ್ಕೂ ಒಪ್ಪಿಗೆ ನೀಡಿತ್ತು. ಇಂದಿಗೂ ಆ ನಿಟ್ಟಿನಲ್ಲಿ ಒಂದೂ ಕೆಲಸವಾಗಿಲ್ಲ. ಹನಿ ನೀರಿನ ಬಳಕೆಗೂ ಕ್ರಮ ಜರುಗಿಲ್ಲ.
ಮತ್ತೆ ಮುನ್ನೆಲೆಗೆ: 90ರ ದಶಕದಿಂದಲೂ ಯುಕೆಪಿ ತನ್ನದೇ ರೀತಿಯಲ್ಲಿ ಸದ್ದು ಮಾಡುತ್ತಲೇ ಬರುತ್ತಿದೆ. ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಒಂದು ರೀತಿಯ ಹೋರಾಟವಾದರೆ, ಸಂಗ್ರಹಿಸಿರುವ ನೀರಿನಲ್ಲಿ ರಾಜ್ಯದ ಪಾಲಿನ ನೀರು ಬಳಕೆಗೆ, ರೈತರ ಹೊಲಗಳಿಗೆ ತಲುಪಿಸುವಂತಾಗಲು ಮತ್ತೂಂದು ಹಂತದ ಹೋರಾಟ ನಡಸಬೇಕಾಯಿತು. ಇದೀಗ ಯುಕೆಪಿ-3ನೇ ಹಂತದ ಯೋಜನೆಗೂ ಹೋರಾಟ ತಪ್ಪದಾಗಿದೆ.
ಆಲಮಟ್ಟಿ ಜಲಾಶಯ ನಿರ್ಮಾಣ ಮಾಡುತ್ತೇವೆ, ಜಲಾಶಯ ಪೂರ್ಣಗೊಳಿಸುತ್ತೇವೆ ಎಂದೇ ಹಲವು ಚುನಾವಣೆಗಳು ನಡೆದು ಹೋಗಿವೆ. 2013ರ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್ ವಿಜಯನಗರದಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಕೈಗೊಂಡು ಯುಕೆಪಿ ಯೋಜನೆ ಪೂರ್ಣಗೊಳಿಸುವ ಪ್ರತಿಜ್ಞೆ ಮಾಡಿತ್ತು. ಐದು ವರ್ಷಗಳ ಅಧಿಕಾರ ನಡೆಸಿದ ನಂತರವೂ ಆ ನಿಟ್ಟಿನಲ್ಲಿ ಮಹತ್ವದ ಕಾರ್ಯ ಆಗಲೇ ಇಲ್ಲ.
ನಂತರದಲ್ಲಿ ಬಂದ ಸಮ್ಮಿಶ್ರ ಸರಕಾರವೂ ಯೋಜನೆ ವಿಚಾರದಲ್ಲಿ ಭರವಸೆ ನೀಡಿತಾದರೂ ಏನನ್ನೂ ಸಾಧಿಸಲಾಗಲಿಲ್ಲ. ಸಮ್ಮಿಶ್ರ ಸರಕಾರ ಪತನ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸಹ ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದು ಹೇಳಿತ್ತಾದರೂ ಇದುವರೆಗೂ ವಿಶ್ವಾಸ ಮೂಡಿಸುವ ಯಾವ ಕೆಲಸವೂ ಆಗಿಲ್ಲ. ಸರಕಾರ ಅಸ್ತಿತ್ವಕ್ಕೆ ಬಂದ ಹೊಸದರಲ್ಲಿ ಯುಕೆಪಿ-3 ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಲಾಶಯ ಹೆಚ್ಚಳದಿಂದ ಮುಳುಗಡೆಯಾಗುವ ಸುಮಾರು 22 ಗ್ರಾಮಗಳಿಗೆ ಪುನರ್ವಸತಿ, ಪುನರ್‌ನಿರ್ಮಾಣ(ಆರ್ ಆ್ಯಂಡ್ ಆರ್) ಕಲ್ಪಿಸಲಾಗುವುದು. ಯುಕೆಪಿ-3ನೇ ಹಂತದ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಿಸಲು ಕೇಂದ್ರದ ಮನವೊಲಿಸಲಾಗುವುದು ಎಂಬ ಭರವಸೆಯೂ ಇಂದಿಗೂ ಈಡೇರಿಲ್ಲ. ಮತ್ತೂಂದು ವಿಧಾನಸಭೆ ಚುನಾವಣೆ ಎದುರಾಗುತ್ತಿದೆ.
ಇಚ್ಛಾಶಕ್ತಿ ಕೊರತೆ: ಇಲ್ಲಿವರೆಗೆ ಆಡಳಿತ ನಡೆಸಿದವರು, ಆಡಳಿತದಲ್ಲಿದ್ದವರಿಗೆ ಯೋಜನೆ ಪೂರ್ಣದ ಇಚ್ಛಾಶಕ್ತಿ ಇದ್ದಿದ್ದರೆ ಈ ವೇಳೆಗಾಗಲೇ ಯುಕೆಪಿ-3ನೇ ಹಂತದ ಯೋಜನೆ ಅನುಷ್ಠಾನದಲ್ಲಿ ಮುಳುಗಡೆಯಾಗುವ 22 ಗ್ರಾಮ, ಒಂದು ಲಕ್ಷ ಎಕರೆ ಭೂಮಿ ಹಾಗೂ ಜಲಾಶಯಕ್ಕೆ ಗೇಟ್‌ಗಳನ್ನು ಅಳವಡಿಸುವ ಮೂರು ಪ್ರಮುಖ ಕಾರ್ಯದಲ್ಲಿ ಯಾವುದಾದರೂ ಒಂದಾದರೂ ಕನಿಷ್ಠ ಮಟ್ಟದ ಚಾಲನೆ ಪಡೆದುಕೊಳ್ಳಬೇಕಾಗಿತ್ತು.
22 ಮುಳುಗಡೆ ಗ್ರಾಮಗಳ ಸ್ಥಳಾಂತರಕ್ಕೆ ಪೂರಕವಾಗಿ ಆರ್ ಆ್ಯಂಡ್ ಆರ್‌ಗೆ ಪೂರಕ ಸಿದ್ಧತೆ, ಸಂತ್ರಸ್ತರಾಗುವ ಜನರಿಗೆ ವಿಶ್ವಾಸ ಮೂಡಿಸುವ ಕಾಮಗಾರಿ ಆರಂಭಗೊಳ್ಳಬೇಕಿತ್ತು. ಅದು ಆಗಿಲ್ಲ. ಆಲಮಟ್ಟಿ ಜಲಾಶಯ ಎತ್ತರ 524 ಮೀಟರ್ ಹೆಚ್ಚಳದ ಹಿನ್ನೀರಿನಿಂದ ಮುಳುಗಡೆಯಾಗುವ ಸುಮಾರು ಒಂದು ಲಕ್ಷ ಎಕರೆ ಜಮೀನು ಸ್ವಾಧೀನಕ್ಕೆ ಪರಿಹಾರ ನೀಡಿಕೆಗೆ ಚಾಲನೆ ನೀಡುವ ಕೆಲಸವಾಗಲಿ ಯಾವುದೂ ಆರಂಭವಾಗಿಲ್ಲ. ಆದರೆ ಯೋಜನಾ ವೆಚ್ಚ ಮಾತ್ರ ಗಗನಮುಖಿಯಾಗುತ್ತಲೇ ಸಾಗುತ್ತಿದೆ.
ಸರಕಾರಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಇದಕ್ಕೆಲ್ಲ ಕಾರಣವಾಗುತ್ತಿದೆ. ಏನೇ ಬರಲಿ ಯೋಜನೆ ಪೂರ್ಣಗೊಳಿಸಿಯೇ ಸಿದ್ಧ ಎಂಬ ಬದ್ಧತೆ ಯಾವ ರಾಜಕೀಯ ಪಕ್ಷದಲ್ಲಿಯೂ ಕಾಣುತ್ತಿಲ್ಲ. ರಾಜ್ಯ ಮತ್ತೂಂದು ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದು, ಯುಕೆಪಿ-3ನೇ ಹಂತದ ಯೋಜನೆ ಮತ್ತೆ ಮುನ್ನೆಲೆಗೆ ಬರಲಿದೆ. ಪುಂಖಾನುಪುಂಕವಾಗಿ ಭರವಸೆಗಳು, ವಾಗ್ಧಾನಗಳು ಹರಿದು ಬರುವುದು ಖಚಿತ. ಅವರೇನೂ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಯೋಜನೆ ಅನುಷ್ಠಾನಗೊಳಿಸಿಯೇ ಸಿದ್ಧ ಎಂದು ಸಾರಲು ರಾಜಕೀಯ ಪಕ್ಷಗಳು ಸಜ್ಜಾಗಿವೆ. ಅಂತಹ ಇಂಪಾದ ವಾಗ್ಧಾನ ಕೇಳಿ ಯೋಜನೆ ಮುಗಿಯಿತು, ನೀರು ಬಂತೆಂಬ ಹಗಲುಗನಸು ಕಾಣಲು ಜನರೂ ಸಿದ್ಧರಾದಂತೆ ಭಾಸವಾಗುತ್ತಿದೆ.
ಮೊನಚು ಕಳೆದುಕೊಳ್ತಾ ಹೋರಾಟ?
ಆಲಮಟ್ಟಿ ಜಲಾಶಯ ನಿರ್ಮಾಣ, ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣ ತೀರ್ಪಿನನ್ವಯ ರಾಜ್ಯದ ಪಾಲಿನ ನೀರು ಬಳಕೆ ಕ್ರಮಕ್ಕೆ ಒತ್ತಾಯಿಸಿ ಕೈಗೊಂಡ ಹೋರಾಟ ಅಷ್ಟಿಷ್ಟಲ್ಲ. ರಾಜ್ಯದ ಇತರೆ ನೀರಾವರಿ ಹೋರಾಟಗಳಿಗೂ ಆ ಹೋರಾಟ ಮಾದರಿ ಎನ್ನುವಷ್ಟರ ಮಟ್ಟಿಗೆ ಗಟ್ಟಿತನ ಪಡೆದುಕೊಂಡಿತ್ತು, ರಾಜ್ಯದ ಗಮನ ಸೆಳೆಯುವಂತಾಗಿತ್ತು. ಆದರೆ ಕೆಲ ವರ್ಷಗಳಿಂದ ಯುಕೆಪಿ ಕುರಿತ ಹೋರಾಟ ಮೊನಚು ಕಳೆದುಕೊಂಡಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೋರಾಟಗಳ ಶಕ್ತಿ ಕುಂದಿತೋ, ಸರಕಾರಗಳ ಮೊಂಡುತನ, ನಿರ್ಲಕ್ಷé ಹೆಚ್ಚಿತೋ, ಹೋರಾಟಗಾರರ ಕಳಕಳಿಗೆ ರೈತರ ಸಾಥ್ ತಪ್ಪಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಮೊದಲಿದ್ದ ಹೋರಾಟ ಧ್ವನಿ ಮೊಳಗುತ್ತಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಹಲವು ವರ್ಷಗಳಿಂದ ಯುಕೆಪಿ-3 ಯೋಜನೆ ನಿಂತಲ್ಲೇ ನಿಲ್ಲುವಂತಾಗಿದೆ.
ಸರಕಾರ ಯಾವುದೇ ಪಕ್ಷದ್ದಾಗಿರಲಿ ಯುಕೆಪಿ-3 ಹಂತದ ಯೋಜನೆ ಅನುಷ್ಠಾನಕ್ಕೆ ಕಾಲಮಿತಿ ಬದ್ಧತೆ ತೋರಬೇಕಾಗಿದೆ. ಆಲಮಟ್ಟಿ ಜಲಾಶಯ ಹೆಚ್ಚಿನ ಭಾಗ ಬಯಲು ಪ್ರದೇಶದಲ್ಲಿ ವ್ಯಾಪಿಸಿದೆ. ಹೀಗಾಗಿ 100 ಲೀಟರ್ ನೀರಿನ ಜತೆ ಸುಮಾರು ಎರಡು ಲೀಟರ್‌ನಷ್ಟು ಮಣ್ಣು ಹರಿದು ಬರುತ್ತದೆ. ಇದೇ ಸ್ಥಿತಿ ಮುಂದುವರಿದರೆ ಆಲಮಟ್ಟಿ ಜಲಾಶಯಕ್ಕೆ ತುಂಗಭದ್ರಾ ಜಲಾಶಯದ ಸ್ಥಿತಿ ಬರಲಿದೆ. ಕಾಲಮಿತಿಯಲ್ಲಿ ಯುಕೆಪಿ-3 ನೇ ಹಂತದ ಯೋಜನೆ ಪೂರ್ಣಗೊಳ್ಳಬೇಕಾಗಿದೆ. –ಬಸವರಾಜ ಕುಂಬಾರ, ನೀರಾವರಿ ಹೋರಾಟಗಾರ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.