ಹಾನಗಲ್ಲ ಫಲಿತಾಂಶ ಬಿಜೆಪಿಗೆ ನಿರೀಕ್ಷಿತ…ಬಿಜೆಪಿಗೆ ಮುಳುವಾಗಿದ್ದೆಲ್ಲಿ?
ಉದಾಸಿ ಕುಟುಂಬದವರು ಜನರ ನೋವಿಗೆ ಸ್ಪಂದಿಸಲು ನಿರೀಕ್ಷಿತ ರೀತಿಯಲ್ಲಿ ಯತ್ನಿಸಲಿಲ್ಲ.
Team Udayavani, Nov 5, 2021, 3:25 PM IST
ಹುಬ್ಬಳ್ಳಿ: ಹಾನಗಲ್ಲ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಏನಾದೀತು ಎಂಬುದು ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರಿಗೆ ಮೊದಲೇ ತಿಳಿದಿತ್ತೇ? ಕೆಲ ಮೂಲಗಳು ಹೌದು ಎನ್ನುತ್ತಿವೆ. ಪರಿಸ್ಥಿತಿ ಸುಧಾರಿಸಲು, ಅದೃಷ್ಟ ಕೂಡಿ ಬಂದರೆ ಗೆಲುವಾಗಿಸಿಕೊಳ್ಳಲು ತೀವ್ರ ಯತ್ನ ನಡೆಸಿದರಾದರೂ, ಗೆಲುವಿನ ಮತಗಳ ಅಂತರ ತಗ್ಗಿಸಲು ಸಾಧ್ಯವಾಯಿತಾದರೂ ಕಾಂಗ್ರೆಸ್ ಜಯ ತಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಹತ್ತು ಹಲವು.
ಸಿಎಂ ರಾಜಕೀಯ ತವರು ನೆಲ ಹಾವೇರಿ ಜಿಲ್ಲೆಯ ಹಾನಗಲ್ಲ ಕ್ಷೇತ್ರ ಉಪ ಚುನಾವಣೆ ಸಹಜವಾಗಿಯೇ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿತ್ತು. ಬಿಜೆಪಿಗೆ ತನ್ನದೇ ಕ್ಷೇತ್ರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿತ್ತಾದರೂ ಕ್ಷೇತ್ರದ ಮತದಾರರ ಮನೋಭಾವ, ಅಲ್ಲಿನ ಪರಿಸ್ಥಿತಿ ಮಾತ್ರ ಇವರಿಗೆ ಪೂರಕವಾಗಿರಲಿಲ್ಲ ಎಂಬ ಸತ್ಯ ಪಕ್ಷದ ಎಲ್ಲ ನಾಯಕರಿಗೂ ಗೊತ್ತಿತ್ತು. ಇದನ್ನು ಸರಿಪಡಿಸುವುದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ಏಳೆಂಟು ದಿನಗಳ ಕಾಲ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು. ಎಷ್ಟು ಸಾಧ್ಯವೋ ಅಷ್ಟೆಲ್ಲ ಶ್ರಮ ಹಾಕಿ ಫಲಿತಾಂಶ ತಮ್ಮ ಕಡೆ ವಾಲುವಂತೆ ಮಾಡುವ ತೀವ್ರ ಯತ್ನದ ನಡೆಸಿದರಾದರೂ ಕ್ಷೇತ್ರದಲ್ಲಿನ ವಾತಾವರಣ, ಮತದಾರರ ಅನಿಸಿಕೆ, ಕಾಂಗ್ರೆಸ್ ಅಭ್ಯರ್ಥಿ ಬಗೆಗಿನ ಭಾವನೆ ಹಾಗೂ ಕಾಂಗ್ರೆಸ್ ತೋರಿದ ತಂತ್ರಗಾರಿಕೆ ಬಿಜೆಪಿ ಯತ್ನಗಳಿಗೆ ಅವಕಾಶ ನೀಡಲಿಲ್ಲ.
ಸಿ.ಎಂ.ಉದಾಸಿ ಮೂಲತಃ ಬಿಜೆಪಿಯವರಲ್ಲವಾಗಿದ್ದರೂ, ಬಿಜೆಪಿಗೆ ಸೇರ್ಪಡೆಗೊಂಡ ನಂತರದಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಒದಗಿಸಿಕೊಡುವ ಕಾರ್ಯ ಮಾಡಿದ್ದರು. ಉದಾಸಿ ನಿಧನ ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಗೆಲುವು ಮುಂದುವರಿಸಲಿದೆ ಎಂಬ ಭಾವನೆ ಪಕ್ಷದ ನಾಯಕರಲ್ಲಿ ಇತ್ತು. ಆದರೆ, ಮತದಾರರ ಚಿಂತನೆಯೇ ಬೇರೆಯದಾಗಿತ್ತು. ಬಿಜೆಪಿ ಮಾಡಿದ ಪ್ರಯೋಗ, ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ತೋರಿದ ಸ್ಪಂದನೆ, ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಯೋಗಿಸಿದ ಕೆಲವೊಂದು ಅಸ್ತ್ರಗಳು ಬಿಜೆಪಿಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಆದರೆ, ಆಗಿದ್ದೇನು, ತಪ್ಪಿದ್ದೆಲ್ಲಿ ಎಂದು ತಿಳಿದುಕೊಳ್ಳುವುದರೊಳಗೆ ಕಾಲ ಮಿಂಚಿ ಹೋಗಿತ್ತು. ಹಿಂದಕ್ಕೆ ಪಡೆಯಲಾಗದ ಒಂದೆರಡು ನಿರ್ಧಾರಗಳು ಸೋಲು ತಂದಿಟ್ಟಿದ್ದವು.
ಬಿಜೆಪಿಗೆ ಮುಳುವಾಗಿದ್ದೆಲ್ಲಿ?: ಹಾನಗಲ್ಲ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಪ್ರಭಾವ ತನ್ನದೇ ಹಿಡಿತ ಹೊಂದಿದೆ. ಉದಾಸಿ ನಿಧನ ನಂತರದ ಉಪ ಚುನಾವಣೆಯಲ್ಲಿ ಅವರ ಕುಟುಂಬಕ್ಕೆ ಟಿಕೆಟ್ ದೊರೆಯಲಿದೆ ಎಂಬ ಲೆಕ್ಕಾಚಾರ ಅನೇಕ ಜನರಲ್ಲಿ ಇತ್ತು. ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೇಕಾಗಿದೆ ಎಂಬ ಚಿಂತನೆಯಡಿ ಬಿಜೆಪಿ ಹೈಕಮಾಂಡ್ ಶಿವರಾಜ ಸಜ್ಜನರಗೆ ಟಿಕೆಟ್ ನೀಡಿತ್ತು. ಇದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ಬೆಳಗಾವಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಹಾನಗಲ್ಲನಲ್ಲಿ ಯಾಕಿಲ್ಲ ಎಂಬ ಪ್ರಶ್ನೆ ಮೂಡಿತ್ತು. ಟಿಕೆಟ್ ಘೋಷಣೆ ನಂತರದಲ್ಲಿ ದೊಡ್ಡ ಅಸಮಾಧಾನ ಸ್ಫೋಟಗೊಂಡಿತ್ತಾದರೂ ಬಿಜೆಪಿ ನಾಯಕರು ಅದನ್ನು ಶಮನ ಮಾಡುವಲ್ಲಿ ತಕ್ಕಮಟ್ಟಿಗೆ
ಯಶಸ್ವಿಯಾದರೂ ಮತದಾರರ ಮನದಲ್ಲಿ ತಮ್ಮ ಒಲವಿನ ಅಚ್ಚೊತ್ತಲು ಸಾಧ್ಯವಾಗಲಿಲ್ಲ.
ಕೋವಿಡ್ ಸಂದರ್ಭದಲ್ಲಿ ಉದಾಸಿ ಕುಟುಂಬದವರು ಜನರ ನೋವಿಗೆ ಸ್ಪಂದಿಸಲು ನಿರೀಕ್ಷಿತ ರೀತಿಯಲ್ಲಿ ಯತ್ನಿಸಲಿಲ್ಲ. ಆದರೆ, ಕ್ಷೇತ್ರದಲ್ಲಿ ಸೋತಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಆಹಾರ ಪದಾರ್ಥಗಳ ಕಿಟ್ ಹಂಚಿಕೆ, ಜನರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿದ್ದರು, ಅಧಿಕಾರದಲ್ಲಿ ಇದ್ದವರು ನಮ್ಮ ನೋವಿಗೆ ಬರಲಿಲ್ಲ. ಚುನಾವಣೆಯಲ್ಲಿ ಸೋತಿದ್ದರೂ ಮಾನೆ ನಮ್ಮ ನೋವಿಗೆ ಸ್ಪಂದಿಸುವ ಕಾರ್ಯ ಮಾಡಿದರು ಎಂಬ ಅನಿಸಿಕೆ ಕ್ಷೇತ್ರದಾದ್ಯಂತ ಗುಪ್ತಗಾಮಿನಿ ಅನ್ನುವುದಕ್ಕಿಂತ ಬಹಿರಂಗವಾಗಿಯೇ ಮತದಾರರ ಮನದಾಳದಲ್ಲಿ ಸುಳಿದಾಡುತ್ತಿತ್ತು. ಅದನ್ನು ಅರಿಯುವ, ಅರಿತರೂ ಅದನ್ನು ಸುಧಾರಿಸುವ ಕಾರ್ಯ ಬಿಜೆಪಿಯಿಂದ ಸಾಧ್ಯವಾಗಲಿಲ್ಲ.
ಶ್ರೀನಿವಾಸ ಮಾನೆ ಹೊರಗಿನವರು ಎಂಬ ಭಾವನೆ ಹಾನಗಲ್ಲ ಕ್ಷೇತ್ರದ ಮತದಾರರ ಮನದಿಂದ ಮರೆಯಾಗುವ ರೀತಿಯಲ್ಲಿ ಸಂಬಂಧ ಗಾಢವಾಗಿಸಿ, “ಇವರು ನಮ್ಮವರು’ ಎಂಬ ಮಟ್ಟಿಗೆ ಜನರ ಮನದೊಳಗೆ ಸ್ಥಾನ ಪಡೆಯುವಲ್ಲಿ ಮಾನೆ ಯಶಸ್ವಿಯಾಗಿದ್ದರು. ಅಧಿಕಾರದಲ್ಲಿದ್ದವರು ಇದನ್ನು ನಿರ್ಲಕ್ಷಿಸಿದರೋ, ಇದರಿಂದೇನಾದೀತು ಎಂಬ ಉದಾಸೀನ ತೋರಿದರೋ ತಿಳಿಯದು. ಆದರೆ, ಇದೀಗ ಬಿಜೆಪಿ ಪಾಲಿಕೆ ಪಶ್ಚಾತಾಪ ಪಡುವಂತಾಗಿದೆ.
ಕಾಂಗ್ರೆಸ್ ಪ್ರಯೋಗಿಸಿದ ಅಸ್ತ್ರ ಏನು?:
ಮತ್ತೊಂದು ಕಡೆ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರ ವೇಳೆ ಪ್ರಯೋಗಿಸಿದ ಸಂಗೂರು ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರದ ಅಸ್ತ್ರವೂ ತನ್ನದೇಯಾದ ಪರಿಣಾಮ ಬೀರಿದೆ. ಸಂಗೂರು ಸಕ್ಕರೆ ಕಾರ್ಖಾನೆ ಮುಚ್ಚಿದ ನೋವು ರೈತರನ್ನು ಕಾಡುತ್ತಿತ್ತಾದರೂ ಕಾರ್ಖಾನೆ ಬಂದ್ ಆಗಲು ಕಾರಣ ನಾವಲ್ಲ, ಕಾಂಗ್ರೆಸ್ಸಿಗರೇ ಎಂದು ಮುಖ್ಯಮಂತ್ರಿಯಾದಿಯಾಗಿ ಬಿಜೆಪಿ ನಾಯಕರು ಸಮಜಾಯಿಷಿಗೆ ಮುಂದಾಗಿದ್ದರು. ಸಕ್ಕರೆ ಕಾರ್ಖಾನೆ ಮುಚ್ಚಲು ಯಾರು ಪ್ರಮುಖ ಎಂದು ಆರೋಪಿಸಲಾಗಿತ್ತೋ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದು ಜನರಲ್ಲಿ ಇದು ನಕಾರಾತ್ಮಕ ಭಾವನೆ ಬಿತ್ತುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಯಿತು.
ಮತ್ತೊಂದು ಕಡೆ ಕಾಂಗ್ರೆಸ್‌ನಲ್ಲಿ ಮನೋಹರ ತಹಶೀಲ್ದಾರ್ ಅವರನ್ನು ಹಿಂದಕ್ಕೆ ಸರಿಸಿ ಮಾನೆಗೆ ಟಿಕೆಟ್ ನೀಡಿದ್ದರಿಂದ ತಹಶೀಲ್ದಾರ್ ಬೆಂಬಲಿಗರು ಕೈ ಕೊಡುತ್ತಾರೆ, ಅದು ತಮಗೆ ಲಾಭವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಆದರೆ, ಫಲಿತಾಂಶ ಗಮನಿಸಿದಾಗ ಬಿಜೆಪಿ ಲೆಕ್ಕಾಚಾರ ನಿರೀಕ್ಷಿತ ಯಶಸ್ಸು ನೀಡಿಲ್ಲ ಎಂಬುದನ್ನು ತೋರುತ್ತಿದೆ. ಸರ್ಕಾರ ನಮ್ಮದಿದೆ, ಮುಖ್ಯಮಂತ್ರಿ ನಮ್ಮದೇ ಜಿಲ್ಲೆಯವರು, ಹಾನಗಲ್ಲ ಕ್ಷೇತ್ರವನ್ನು ನಮ್ಮದೇ ಪಕ್ಷದ ನಾಯಕರು ಪ್ರತಿನಿಧಿಸಿದ್ದರು. ಅವರ ಆಪ್ತ ಬೆಂಬಲಿಗರಿಗೆ ಟಿಕೆಟ್ ನೀಡಿದ್ದು, ಅಸಮಾಧಾನ ಸ್ಫೋಟವಾಗಲಿದೆ ಎಂದು ನಿರೀಕ್ಷಿಸಿದ್ದ ಉದಾಸಿ ಕುಟುಂಬದವರು ಯಾವುದೇ ಅಸಮಾಧಾನ ತೋರದೆ, ಉದಾಸಿ ಅವರ ಪುತ್ರ, ಸಂಸದ ಶಿವಕುಮಾರ ಉದಾಸಿ ಪ್ರಚಾರದಲ್ಲಿ ಸಕ್ರಿಯರಾಗಿರುವುದು, ಲಿಂಗಾಯತ ಮತಗಳು ನಮ್ಮನ್ನು ಬಿಟ್ಟು ಹೋಗಲ್ಲ ಎಂಬ ಲೆಕ್ಕಾಚಾರದಲ್ಲಿ ಗೆಲುವು ನಮ್ಮದೇ ಎಂಬ ಬಿಜೆಪಿ ನಾಯಕರ ಆತ್ಮವಿಶ್ವಾಸ ಸೋಲಿಗೆ ತನ್ನದೇ ಕೊಡುಗೆ ನೀಡಿತು.
ಗೆಲುವಿನ ಅಂತರ ಕುಗ್ಗಿಸಿದ ಸಿಎಂ ಠಿಕಾಣಿ?:
ಹಾನಗಲ್ಲ ಕ್ಷೇತ್ರದ ಉಪ ಚುನಾವಣೆ ಆರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮೂರು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಯೋಜನೆ ಹೊಂದಿದ್ದರು. ಅವರು ಪ್ರಚಾರಕ್ಕೆ ಆಗಮಿಸಿ ಕ್ಷೇತ್ರದಲ್ಲಿನ ವಾಸ್ತವ ಸ್ಥಿತಿ ತಿಳಿಯುತ್ತಿದ್ದಂತೆ ತಮ್ಮ ಕಾರ್ಯತಂತ್ರ ಬದಲಿಸಿದರು. ಏಳೆಂಟು ದಿನಗಳು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದರು.
ತಾವೇ ಸ್ಪರ್ಧೆಗಿಳಿದವರಂತೆ ಕ್ಷೇತ್ರದ ಹಳ್ಳಿ, ಹಳ್ಳಿ ಸುತ್ತಿದರು, ವಿವಿಧ ಸಮಾಜಗಳ ಪ್ರಮುಖರ ಸಭೆ ನಡೆಸಿ ಬೆಂಬಲ ಪಡೆಯುವ ಯತ್ನ ಮಾಡಿದರು, ಇರುವ ಸ್ಥಿತಿ ಸುಧಾರಣೆ, ಡ್ಯಾಮೇಜ್ ಕಂಟ್ರೋಲ್, ಮತದಾರರ ಮನವೊಲಿಸುವ, ಗೆಲುವು ತಮ್ಮ ಕಡೆ ತಿರುಗಿಸಿಕೊಳ್ಳುವ ಎಲ್ಲ ಮಗ್ಗುಲಿನ ಯತ್ನಗಳನ್ನು ಕೈಗೊಂಡರಾದರೂ ಗೆಲುವು ಪಡೆಯಲು ಮಾತ್ರ ಸಾಧ್ಯವಾಗಲೇ ಇಲ್ಲ.
ಬಿಜೆಪಿ ಯಾವಾಗ ಉದಾಸಿ ಕುಟುಂಬ ಬದಲು ಶಿವರಾಜ ಸಜ್ಜನರಗೆ ಟಿಕೆಟ್ ಘೋಷಣೆ ಮಾಡಿತೋ ಆಗಲೇ ಕಾಂಗ್ರೆಸ್‌ನವರು ತಮ್ಮ ಗೆಲುವು ಖಚಿತ ಎಂದು ಭಾವಿಸಿದ್ದರು. ತಮ್ಮ ಅಭ್ಯರ್ಥಿ ಸುಮಾರು 15-20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ಅನಿಸಿಕೆ ಕಾಂಗ್ರೆಸ್ಸಿಗರದಾಗಿತ್ತು. ಆದರೆ, ಸಿಎಂ ಠಿಕಾಣಿ, ತೀವ್ರತರ ಯತ್ನದಿಂದಾಗಿ ಕಾಂಗ್ರೆಸ್ ಗೆಲುವಿನ ಅಂತರ 7 ಸಾವಿರಕ್ಕೆ ತಗ್ಗಿತು ಎಂಬುದು ಹಲವರ ಅನಿಸಿಕೆ.
ಹಾನಗಲ್ಲ ಕ್ಷೇತ್ರದಲ್ಲಿ ಫಲಿತಾಂಶ ಏನಾದೀತು ಎಂಬ ಸ್ಪಷ್ಟ ಸುಳಿವು ಪಕ್ಷದ ಎಲ್ಲ ನಾಯಕರಿಗೂ ಮನದಟ್ಟಾಗಿತ್ತು. ಕೆಲವೊಂದು ಎಡವಟ್ಟುಗಳು ಮನವರಿಕೆ ಆಗಿದ್ದವು. ಅವುಗಳನ್ನು ಸರಿಪಡಿಸುವ, ಗೆಲುವು ನಮ್ಮದಾಗಿಸುವ ನಿಟ್ಟಿನಲ್ಲಿ ಸಿಎಂ ಸಾಕಷ್ಟು ಪ್ರಯತ್ನಿಸಿದರು. ಕಾಂಗ್ರೆಸ್ ಗೆಲುವಿನ ಅಂತರ ತಗ್ಗಿಸಲು ಸಾಧ್ಯವಾದಿತಾದರೂ ಗೆಲುವು ನಮ್ಮದಾಗಿಸಿಕೊಳ್ಳಲು ಆಗಲಿಲ್ಲ. ಸಣ್ಣ ಸಣ್ಣ ಸಮಾಜಗಳೂ ಆಡಳಿತರೂಢ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸದೆ ಕಾಂಗ್ರೆಸ್ ಪರ ವಾಲಿದ್ದು ನೋಡಿದರೆ ಗೆಲುವು ನಮ್ಮದಾಗದು ಎಂಬುದು ಮನವರಿಕೆ ಆಗಿತ್ತು.
∙ಹೆಸರೇಳಲು ಇಚ್ಛಿಸದ ಬಿಜೆಪಿ ಮುಖಂಡ
*ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.