ಹಿಜಾಬ್ ತೀರ್ಪು; ಕಾಲೇಜುಗಳಲ್ಲಿ ಬಿಗಿ ಪಹರೆ
ಪೊಲೀಸರ ಬಿಗಿ ಬಂದೋಬಸ್ತ್
Team Udayavani, Mar 16, 2022, 11:55 AM IST
ಹುಬ್ಬಳ್ಳಿ: ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ಅಂತಿಮ ತೀರ್ಪು ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳು ಹಾಗೂ ಕಾಲೇಜು ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಮಂಗಳವಾರ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ನಗರದ ವಿವಿಧೆಡೆ ಹಾಗೂ ಕಾಲೇಜುಗಳ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಇತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಬಹುತೇಕ ಪಿಯುಸಿ, ಪದವಿ ಕಾಲೇಜುಗಳ ಮುಂದೆ ಪೊಲೀಸರು ಇರುವುದು ಕಂಡುಬಂದಿತು. ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಾಗಿ ಘೋಷಿಸಿದ್ದ ಇಲ್ಲಿನ ಜೆಸಿ ನಗರದ ಮಹಿಳಾ ಕಾಲೇಜು ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಲೇಜು ಸುತ್ತಲೂ ಗುಂಪು ಸೇರದಂತೆ ಪೊಲೀಸರು ಸೂಚನೆ ನೀಡುತ್ತಿದ್ದರು. ಎಂದಿನಿಂತೆ ಕಾಲೇಜುಗಳ ತರಗತಿಗಳು ನಡೆದವು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.
ತರಗತಿಯಿಂದ ದೂರ: ಹಿಜಾಬ್ ಪ್ರಕರಣದ ಸದ್ದು ಕಡಿಮೆಯಾಗುತ್ತಿದ್ದಂತೆ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುತ್ತಿದ್ದರು. ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗುತ್ತಿದ್ದರು. ಆದರೆ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿನಿಯರ ಸಂಖ್ಯೆ ತೀರ ವಿರಳವಾಗಿತ್ತು.
ಪರ-ವಿರೋಧ: ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಪರ-ವಿರೋಧಗಳು ಕೇಳಿ ಬಂದವು. ಶಿಕ್ಷಣದಲ್ಲಿ ಧರ್ಮ ಬೆರೆಸದಿರಲು ಹೈಕೋರ್ಟ್ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಪರವಾದ ಅಭಿಪ್ರಾಯಗಳು ಕೇಳಿಬಂದವು. ಇನ್ನೂ ಹಿಜಾಬ್ ಇಸ್ಲಾಂ ಧರ್ಮದ ಪ್ರಮಖ ಆಚರಣೆಯಾಗಿದ್ದು, ಇದಕ್ಕೆ ಕಡಿವಾಣ ಹೇರುವುದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು.
ಆರ್‌ಎಎಫ್ ಕಮಾಂಡೆಂಟ್ ಎರಿಕ್ ಗಿಲ್ಬರ್ಟ್ ಜೋಸ್, ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಡಿಸಿಪಿಗಳಾದ ಸಾಹಿಲ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೇದಾರ, ಆರ್.ಕೆ. ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದರು.
ಆರ್‌ಎಎಫ್ ಕಂಪನಿ ಆಗಮನ
ಮುನ್ನೆಚ್ಚರಿಕಾ ಕ್ರಮವಾಗಿ ನಗರಕ್ಕೆ ಒಂದು ಕಂಪನಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊಂದಿರುವ ಆರ್‌ಎಎಫ್ ಕಂಪನಿ ಕರೆಸಲಾಗಿತ್ತು. ಇದರೊಂದಿಗೆ ಮಹಿಳಾ ಕೆಎಸ್‌ಆರ್‌ಪಿ ಸಿಬ್ಬಂದಿ ಕೂಡ ಕೆಲ ಪ್ರದೇಶಗಳಲ್ಲಿ ಬಂದೋಬಸ್ತಿನಲ್ಲಿದ್ದರು. ಇದರೊಂದಿಗೆ ನಗರ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿತ್ತು. ಶಸ್ತ್ರಸಜ್ಜಿತ ಆರ್‌ಎಎಫ್, ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಪೊಲೀಸರು ನಗರದಲ್ಲಿ ಪಥ ಸಂಚಲನ ನಡೆಸಿದರು. ಕಿತ್ತೂರು ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತ, ಸಂಗೊಳ್ಳಿ ರಾಯಣ್ಣ ರಸ್ತೆ, ಕೊಪ್ಪಿಕರ್ ರಸ್ತೆ, ಕೋಯಿನ್ ರಸ್ತೆ, ಸ್ಟೇಷನ್ ರಸ್ತೆ, ಗಣೇಶ ಪೇಟೆ, ಸಿಬಿಟಿ, ಶಾಹ ಬಜಾರ್, ರಾಧಾಕೃಷ್ಣ ಗಲ್ಲಿ, ದುರ್ಗದ ಬಯಲು, ಬಾಬಸಾನ ಗಲ್ಲಿ, ಮೈಸೂರು ಸ್ಟೋರ್, ಪೆಂಡಾರ ಗಲ್ಲಿ, ತುಳಜಾ ಭವಾನಿ ಮಂದಿರ, ಕಮರಿಪೇಟೆ, ಮುಲ್ಲಾ ಓಣಿ ಮಾರ್ಗವಾಗಿ ಡಾಕಪ್ಪ ವೃತ್ತದವರೆಗೆ ಪಥ ಸಂಚಲನ ನಡೆಯಿತು.
ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಮಹಾನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಿವಮೊಗ್ಗದ ಭದ್ರಾವತಿಯಿಂದ ಆರ್‌ಎಎಫ್ ಒಂದು ಕಂಪನಿ ಹೆಚ್ಚುವರಿಯಾಗಿ ಕರೆಯಿಸಿಕೊಳ್ಳಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಕೋರ್ಟ್ ತೀರ್ಪಿಗೆ ಗೌರವ ಕೊಡಬೇಕು. ಯಾವುದೇ ವಿಜಯೋತ್ಸವ, ಪ್ರತಿಭಟನೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
–ಲಾಭೂರಾಮ, ಮಹಾನಗರ ಪೊಲೀಸ್ ಆಯುಕ್ತ
ಹೈಕೋರ್ಟ್ ತೀರ್ಪು ಎಲ್ಲರೂ ಪಾಲಿಸಬೇಕು: ಸಚಿವ ಜೋಶಿ
ಹುಬ್ಬಳ್ಳಿ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತ್ರಿಸದಸ್ಯ ಪೀಠ ಅಂತಿಮ ತೀರ್ಪು ಪ್ರಕಟಿಸಿದ್ದು, ಶಾಲೆಗಳಲ್ಲಿ ಸಮವಸ್ತ್ರ ವಿಚಾರದಲ್ಲಿ ರಾಜ್ಯ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಹೈಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತಿದ್ದು, ಎಲ್ಲರೂ ಇದನ್ನು ಪಾಲಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯ ಯಾವುದೂ ಅಲ್ಲ. ಹೈಕೋರ್ಟ್ ಆದೇಶ ಅನುಷ್ಠಾನಕ್ಕೆ ಎಲ್ಲರೂ ಸಹಕಾರ ನೀಡಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಎಲ್ಲರೂ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಾಗಿದೆ. ಪರೀಕ್ಷೆ, ತರಗತಿಗಳಿಂದ ಹೊರಗೆ ಉಳಿಯುವ ನಿರ್ಧಾರ ಕೈಬಿಟ್ಟು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.