Hubli: ಪಿಎಚ್‌ಸಿಗಳಲ್ಲೇ “ತಾಯ್ತನ ಭಾಗ್ಯ’ ತರಬೇತಿ-ಐವಿಎಫ್ ಕೇಂದ್ರದ ಮಹತ್ವದ ಹೆಜ್ಜೆ
Team Udayavani, May 22, 2023, 3:29 PM IST
ಹುಬ್ಬಳ್ಳಿ: ತಾಯ್ತನದ ಭಾಗ್ಯ ದೊರೆಯದೆ ಪರಿತಪಿಸುತ್ತಿರುವ ದಂಪತಿಗಳನೇಕರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲೇ ಐಯುಐ ಚಿಕಿತ್ಸೆ ಮೂಲಕ ಮಕ್ಕಳ ಭಾಗ್ಯ ನೀಡಲಾಗುತ್ತಿದೆ. ಕರ್ನಾಟಕ-ಮಹಾರಾಷ್ಟ್ರದ ಪಿಎಚ್‌ಸಿ ಸಿಬ್ಬಂದಿಗೆ ತರಬೇತಿ ನೀಡಲು ಕನೇರಿಯ ಸಿದ್ಧಗಿರಿ ಐವಿಎಫ್ ಕೇಂದ್ರ “ಜನನಿ’ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ರಾಜ್ಯ ಸರಕಾರಗಳು ಇದಕ್ಕೆ ಸಾಥ್ ನೀಡಿದಲ್ಲಿ ಅನೇಕ ದಂಪತಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿಯೇ ಪಿಎಚ್‌ಸಿ ಹಂತದಲ್ಲಿಯೇ
ಮಗುವಿನ ಭಾಗ್ಯ ಪಡೆಯಬಹುದಾಗಿದೆ. ಆಯುರ್ವೇದ-ಅಲೋಪಥಿ ವಿಜ್ಞಾನದ ಸಹಯೋಗ ದೊಂದಿಗೆ ವಿಶ್ವದ ಅತಿ ದೊಡ್ಡ
ಧರ್ಮಾರ್ಥ ಸೇವೆಯ ಸಿದ್ಧಗಿರಿ ಐವಿಎಫ್ ಕೇಂದ್ರ ಜನನಿ ಗ್ರಾಮೀಣ ಹಾಗೂ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಇದೀಗ ವಿಶ್ವದ ಗಮನ ಸೆಳೆದಿದೆ.
ಪಿಎಚ್‌ಸಿ ಹಂತದಲ್ಲಿ ತರಬೇತಿ ಯೋಜನೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್ )ಚಿಕಿತ್ಸೆ ಇನ್ನಿತರೆ ಯೋಜನೆಗಳ ಕುರಿತಾಗಿ ಸಿದ್ಧಗಿರಿ ಐವಿಎಫ್ ಕೇಂದ್ರದ ತಜ್ಞವೈದ್ಯೆ ಡಾ| ವರ್ಷಾ ಪಾಟೀಲ ಅವರು “ಉದಯವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು. ರಾಷ್ಟ್ರ-ವಿಶ್ವವನ್ನು ಪರಿಗಣಿಸಿದರೆ ಬಹುತೇಕ ಐವಿಎಫ್ ಕೇಂದ್ರಗಳು ಮಹಾನಗರಗಳಲ್ಲಿ ನೆಲೆ ಕಂಡಿವೆ. ಜನರ ಭಾವನೆಯಲ್ಲಿ ಐವಿಎಫ್ ಎಂದರೆ ದುಬಾರಿಯದ್ದು ಎಂಬುವಂತಾಗಿದೆ.
ಭಾರತದಲ್ಲಿ ವಾರ್ಷಿಕವಾಗಿ ಅಂದಾಜು 14 ಕೋಟಿ ಜನರು ಐವಿಎಫ್‌ಗೆ ಒಳಗಾಗುತ್ತಿದ್ದು, ಇದರಲ್ಲಿ ಸುಮಾರು 9.6 ಕೋಟಿ ಜನರು ಗ್ರಾಮೀಣದವರು. ಐವಿಎಫ್ ಸೇವೆ ಪಡೆಯಲು ಗ್ರಾಮೀಣ ಜನರು ನಗರಗಳಿಗೆ ಬರಬೇಕಾಗುತ್ತದೆ. ಒಂದು, ಎರಡು ಬಾರಿ ಅಲ್ಲ
ಹಲವು ಬಾರಿ ಬರಬೇಕಾಗುತ್ತದೆ. ಗ್ರಾಮೀಣದಲ್ಲಿ ಐಯುಐ, ಐವಿಎಫ್ ಸೇವೆ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ದೊರೆಯುವಂತಾಗಬೇಕು ಇದು ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಆಶಯವಾಗಿದೆ.
ಸಮೀಕ್ಷೆ ಪ್ರಕಾರ ನೈಸರ್ಗಿಕ ವಿಧಾನದಿಂದ ಗರ್ಭ ಧರಿಸಲು ಸಾಧ್ಯವಾಗದ ದಂಪತಿಗಳ ಪ್ರಮಾಣ ವಿಶ್ವಮಟ್ಟದಲ್ಲಿ ಶೇ.30-40ರಷ್ಟಿದ್ದರೆ, ಭಾರತದಲ್ಲಿ ಶೇ. 20-25ರಷ್ಟಿದೆ. ಮುಂದಿನ ದಿನಗಳಲ್ಲಿ ತಾಯ್ತನದ ಸಮಸ್ಯೆ ಇನ್ನಷ್ಟು ಹೆಚ್ಚಲಿದ್ದು, ಪುರುಷತ್ವ ಕುಸಿತವಾಗಲಿದೆ ಎನ್ನಲಾಗುತ್ತಿದೆ.
2026ರ ವೇಳೆಗೆ ಕೇಂದ್ರ ಬಜೆಟ್‌ನ ಶೇ.12.5 ವೆಚ್ಚ ತಾಯ್ತನದ ಕಾರಣಕ್ಕಾಗಿ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಸೌಲಭ್ಯಗಳ ಕೊರತೆ, ದುಬಾರಿ ವೆಚ್ಚವೆಂಬ ಭಾವನೆಯಿಂದ ಬಂಜೆತನ ಅನುಭವಿಸುವ ದಂಪತಿಗಳಲ್ಲಿ ಶೇ.1 ದಂಪತಿಗಳು ಮಾತ್ರ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಐವಿಎಫ್ ಚಿಕಿತ್ಸೆಗೆ ಪ್ರಸ್ತುತ ಅಂದಾಜು 2,00,000-2,50,000 ರೂ.ವರೆಗೆ ಇನ್ನು ಕೆಲವು ಕಡೆ 3ರಿಂದ 3.5ಲಕ್ಷ ರೂ.ವರೆಗೂ ವೆಚ್ಚವಾಗುತ್ತಿದೆ.
ಬಡವರಿಗೆ ಇದು ಅಸಾಧ್ಯ ಎಂದು ಜನನಿಯಲ್ಲಿ ಕೇವಲ 50-60 ಸಾವಿರ ರೂ.ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿಯವರು ಇದನ್ನು 35 ಸಾವಿರ ರೂ.ಗಳಲ್ಲಿ ನೀಡಲು ಸೂಚಿಸಿದ್ದರಾದರೂ, ಐವಿಎಫ್ ಚಿಕಿತ್ಸೆ ಪೂರಕ ಒಂದು ಇಂಜೆಕ್ಷನ್ 80 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಇದ್ದು, ಅದನ್ನು ಸಹ ನೀಡುತ್ತಿರುವುದರಿಂದ ಅದು ಸೇರಿ 50-60 ಸಾವಿರ ರೂ.ಗಳಿಗೆ ನೀಡಲು ನಿರ್ಧರಿಸಲಾಗಿದೆ.
ಪಿಎಚ್‌ಸಿನಲ್ಲೇ ತಾಯ್ತನ ಭಾಗ್ಯ: ಸ್ವಾಮೀಜಿಯವರ ಆಶಯದಂತೆ ಗ್ರಾಮೀಣ ದಂಪತಿಗಳಿಗೆ ಇನ್ನಷ್ಟು ಹತ್ತಿರ ಹಾಗೂ ಸುಲಭ ರೀತಿಯಲ್ಲಿ ತಾಯ್ತನದ ಚಿಕಿತ್ಸೆ ದೊರೆಯಲು ಯೋಜಿಸಲಾಗಿದೆ. ತಾಯ್ತನ ಪಡೆಯುವಿಕೆ ಐವಿಎಫ್ ಅಂತಿಮ ಹಂತದ್ದಾಗಿದ್ದು, ಅದಕ್ಕಿಂತ ಮೊದಲು ತಿಳಿವಳಿಕೆ, ಐಯುಐ ಚಿಕಿತ್ಸೆಯಿಂದಲೂ ಪ್ರಯೋಜನ ಪಡೆಯಬಹುದಾಗಿದೆ.
ಮುಖ್ಯವಾಗಿ ಮದುವೆಯಾದ ಮೂರು ವರ್ಷದೊಳಗೆ ಮಗು ಆಗದಿದ್ದರೆ ದಂಪತಿಗಳು ತಕ್ಷಣಕ್ಕೆ ಚಿಕಿತ್ಸೆ ಮುಂದಾಗಬೇಕು. ಆದರೆ ಭಾರತೀಯರಲ್ಲಿ ಮಕ್ಕಳಾಗಲಿಲ್ಲವೆಂದರೆ ಧಾರ್ಮಿಕ ಕೇಂದ್ರಗಳು, ಜ್ಯೋತಿಷಿ, ಇನ್ನಿತರೆ ಕ್ರಮಗಳ ನಂತರ ಐದಾರು, ಏಳೆಂಟು ವರ್ಷಗಳ ನಂತರದಲ್ಲಿ ಚಿಕಿತ್ಸೆಗೆ ಮುಂದಾದರೆ ಇನ್ನೂ ಕೆಲವರು ಅಲ್ಲಲ್ಲಿ ಸುತ್ತಾಡಿ 10-15 ವರ್ಷದ ನಂತರ ಐವಿಎಫ್‌ಗೆ ಬರುತ್ತಾರೆ.
ಮಹಿಳೆಯರಲ್ಲಿನ ಅಂಡಾಣು ಮತ್ತು ಪುರುಷರ ವೀರ್ಯಾಣು ಫಲವತ್ತತೆ ಕುಗ್ಗಿರುತ್ತಿದ್ದು, ಇದರಿಂದ ಭ್ರೂಣ ಬೆಳೆಯದ ಸಮಸ್ಯೆ ಎದುರಾಗಲಿದೆ. ದಂಪತಿಗಳಲ್ಲಿನ ಅಂಡಾಣು ಮತ್ತು ವೀರ್ಯಾಣುವನ್ನು ಪಡೆದು ಪ್ರಯೋಗಾಲಯದಲ್ಲಿ ಭ್ರೂಣ ಬೆಳೆಸಿ ಅದನ್ನು ಗರ್ಭಕೋಶಕ್ಕೆ ಸೇರಿಸುವುದೇ ಐವಿಎಫ್ ಚಿಕಿತ್ಸೆಯಾಗಿದೆ.
ಮದುವೆಯಾದ ಮೂರು ವರ್ಷದೊಳಗೆ ಮಕ್ಕಳಾಗದಿದ್ದರೆ ಅಂತಹ ದಂಪತಿಗಳು ವೈದ್ಯರ ಭೇಟಿ ಹಾಗೂ ಐಯುಐ ಚಿಕಿತ್ಸೆ ಪಡೆಯಬಹುದಾಗಿದೆ. ಇದು ಗರ್ಭಾಶಯದ ಒಳಹರಿವು ಸ್ವಚ್ಛಗೊಳಿಸುವ ಮೂಲಕ ನೈಸರ್ಗಿಕ ರೀತಿಯಲ್ಲಿಯೇ ತಾಯ್ತನ
ಪಡೆಯುವುದಾಗಿದೆ. ಇದು ಅತ್ಯಂತ ಕಡಿಮೆ ವೆಚ್ಚದ ಚಿಕಿತ್ಸೆಯೂ ಆಗಿದೆ. ಇಂತಹ ಚಿಕಿತ್ಸೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯುವಂತಾಗಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರೆ ಕಡೆಗಳಲ್ಲಿ ಕರ್ನಾಟಕ ಸರಕಾರ ತಾಯಿ-ಮಗು ಆಸ್ಪತ್ರೆ ಮಾಡಿದೆ. ಐಯುಐ ಕೇಂದ್ರ ಸ್ಥಾಪನೆಗೆ ಹೆಚ್ಚಿನ ವೆಚ್ಚವೇನು ಅಗತ್ಯವಿಲ್ಲ. ಐಯುಐ ಚಿಕಿತ್ಸೆಗೆ ಉತ್ತಮ ಗುಣಮಟ್ಟದ ಮೈಕ್ರೋಸ್ಕೋಪ್, ಸೋನಾಗ್ರಾಫ್ ಯುನಿಟ್ ಅಗತ್ಯವಾಗಿದೆ. ಸುಮಾರು 2.5ರಿಂದ 5 ಲಕ್ಷ ರೂ.ವರೆಗೆ ಕೆಲ ಯಂತ್ರೋಪಕರಣಗಳಿಗೆ ನೆರವು ನೀಡಿದರೆ ಸಾಕು. ಜನನಿ ಐವಿಎಫ್ ಕೇಂದ್ರದಿಂದ ಅಲ್ಲಿನ ಸಿಬ್ಬಂದಿಗೆ ತರಬೇತಿ ಹಾಗೂ ಮೇಲ್ವಿಚಾರಣೆ ಕೈಗೊಳ್ಳುತ್ತೇವೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಇಂತಹ ಪ್ರಯೋಗಕ್ಕೆ ಮುಂದಾಗಿದ್ದೇವೆ. ಸರಕಾರ ಕನಿಷ್ಟ 25 ಪಿಎಚ್ ಸಿಗಳ ವ್ಯಾಪ್ತಿಯಲ್ಲಿ ಒಂದು ಹಾಗೂ ಸಿವಿಲ್ ಆಸ್ಪತ್ರೆಯಲ್ಲಿ ಒಂದು ಕೇಂದ್ರ ಜತೆಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಒಂದು ಐವಿಎಫ್ ಕೇಂದ್ರ ಆರಂಭಕ್ಕೆ ಮುಂದಾಗಬೇಕು.
ಮಾಜಿ ಸಚಿವೆ ಜೊಲ್ಲೆ ಕುಟುಂಬದ ನೆರವು
ಕನೇರಿಯಲ್ಲಿ ಸಿದ್ಧಗಿರಿ ಐವಿಎಫ್ ಕೇಂದ್ರ “ಜನನಿ’ಗೆ ಮಾಜಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಅವರು ಮಹತ್ವದ ನೆರವು ನೀಡಿದ್ದಾರೆ. ಈ ನೆರವಿನಿಂದಾಗಿ ಜನನಿ ಸುಮಾರು 9,000 ಚದರಡಿಯ ಆಸ್ಪತ್ರೆ ಹೊಂದಿದ್ದು, ಐವಿಎಫ್‌ಗೆ ಬೇಕಾಗುವ
ವಿಶ್ವದರ್ಜೆಯ ಯಂತ್ರೋಪಕರಣಗಳನ್ನು ಹೊಂದಿದೆ.
ಮಾಡ್ಯುಲರ್ ಶಸ್ತ್ರಚಿಕಿತ್ಸಾ ಥಿಯೇಟರ್, ಭ್ರೂಣಶಾಸ್ತ್ರ ಸಂಕೀರ್ಣ, ಅಂಡ್ರಾಲಾಜಿ ವಿಭಾಗ, ಪ್ರಯೋಗಾಲಯ, ಆಯುರ್ವೇದ ವಿಭಾಗ, ಸಮಾಲೋಚನಾ ಕೊಠಡಿ ಇನ್ನಿತರೆ ಸೌಲಭ್ಯ ಹೊಂದಿದ್ದು, ಆಯುರ್ವೇದ ತಜ್ಞ ಡಾ| ಚಂದ್ರಶೇಖರ ನೇತೃತ್ವದಲ್ಲಿ ಆಯುರ್ವೇದ ಚಿಕಿತ್ಸೆ ಜನತೆಗೆ ಗರ್ಭಸಂಸ್ಕಾರ ಕೈಗೊಳ್ಳಲಾಗುತ್ತದೆ. ಜನನಿ ಐವರು ವೈದ್ಯರು, 20 ಜನ ಸಿಬ್ಬಂದಿ ಹೊಂದಿದೆ. ದಂಪತಿಗಳಿಂದ ಪಡೆದ ಅಂಡಾಣು-ವೀರ್ಯಾಣುಗಳನ್ನು ಸುಮಾರು 10 ವರ್ಷಗಳವರೆಗೆ ಕಾಯ್ದಿಡುವ ವ್ಯವಸ್ಥೆಯೂ ಇದೆ. ಅವರ ಪರವಾನಗಿ ಇಲ್ಲದೆ ಅದನ್ನು ಯಾವುದೇ ಕಾರಣಕ್ಕೂ ಇತರರಿಗೆ ಬಳಕೆ ಮಾಡಿಕೊಳ್ಳುವುದಿಲ್ಲ. ಐವಿಎಫ್ ಚಿಕಿತ್ಸೆ
ಸಂದರ್ಭದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದೆ.
ಕೇವಲ ಹಣದಿಂದಲೇ ಮಗುವಿನ ಸೃಷ್ಟಿ ಅಸಾಧ್ಯ. ಸಕಾಲಕ್ಕೆ ಸೂಕ್ತ ಚಿಕಿತ್ಸೆಯಿಂದ ತಾಯ್ತನ ಪಡೆಯಬಹುದಾಗಿದೆ. ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಚಿಂತನೆ ಹಾಗೂ ಗ್ರಾಮೀಣ ಕುರಿತ ಅವರ ಕಾಳಜಿಯಿಂದಾಗಿ ನಾನು ನನ್ನ ಆಸ್ಪತ್ರೆಯನ್ನು ತೆಗೆದು ಪೂರ್ಣ ಪ್ರಮಾಣದಲ್ಲಿ ಜನನಿಯಲ್ಲಿಯೇ ಸೇವೆ ಸಲ್ಲಿಸಲು ಮುಂದಾಗಿದ್ದೇನೆ.
ಡಾ|ವರ್ಷಾ ಪಾಟೀಲ, ಜನನಿ ಐವಿಎಫ್ ಕೇಂದ್ರ
*ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.