ವಿದೇಶದಲ್ಲೂ ಕಾನೂನು ವಿವಿ ಕಂಪು
ವಿವಿಗಳಲ್ಲಿ ಇರುವಂತೆ ಹಲವು ಸಮಸ್ಯೆ, ಸವಾಲುಗಳಿವೆ ನಿಜ.
Team Udayavani, Sep 14, 2022, 6:07 PM IST
ಹುಬ್ಬಳ್ಳಿ: “ಮೌಲ್ಯಗಳ ಮನನ, ಪ್ರಾಮಾಣಿಕತೆ, ನಿಷ್ಠೆ, ಸಂಸ್ಕಾರ, ಅಧ್ಯಾಪಕರಿಗೆ ಗೌರವ, ಶಿಸ್ತುಯುತ ವಿದ್ಯಾರ್ಥಿಗಳ ತಯಾರಿ ಜತೆಗೆ ಕಾನೂನು ವಿವಿ ವರ್ಚಸ್ಸು ವಿಶ್ವದೆಲ್ಲೆಡೆ ಪರಿಚಯಿಸುವ, ವಿದೇಶಗಳ ಕಾನೂನು ವಿವಿ-ಸಂಸ್ಥೆಗಳ ಜತೆ ಒಡಂಬಡಿಕೆಯೊಂದಿಗೆ ಜ್ಞಾನದ ವಿನಿಮಯ, ಇಂದಿನ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಕೋರ್ಸ್‌ಗಳ ಆರಂಭ, ಗುಣಮಟ್ಟದ ಶಿಕ್ಷಣ, ಸಂಶೋಧನೆಗೆ ಹೆಚ್ಚಿನ ಆದ್ಯತೆಯೇ ನನ್ನ ಆಶಯ’ -ಇದು, ಕಾನೂನು ವಿವಿ ನೂತನ ಕುಲಪತಿ ಪ್ರೊ|ಸಿ.ಬಸವರಾಜು ಅನಿಸಿಕೆ.
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ, ಕಾನೂನು ನಿಖಾಯದ ಡೀನ್ ಆಗಿ 12 ವರ್ಷ, ಶೈಕ್ಷಣಿಕ ಮಂಡಳಿ ಸದಸ್ಯರಾಗಿ 10 ವರ್ಷ, ಸಿಂಡಿಕೇಟ್ ಸದಸ್ಯರಾಗಿ 4 ವರ್ಷ, ಕುಲಸಚಿವರಾಗಿ 3 ವರ್ಷ, ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ, ಪ್ರಭಾರ ಕುಲಪತಿಯಾಗಿ ಕಳೆದ ಮೂರು ದಶಗಳಿಂದ ತಮ್ಮದೇ ಅನುಭವ ಹೊಂದಿರುವ ಪ್ರೊ|ಸಿ.ಬಸವರಾಜ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿ ಐದಾರು ದಿನಗಳ ಹಿಂದೆಯಷ್ಟೇ ಅಧಿಕಾರ ಸ್ವೀರಿಸಿದ್ದು, ವಿವಿ ಸಾಗಬೇಕಾದ ಮಾರ್ಗ, ಅಭಿವೃದ್ಧಿಗೆ ತಮ್ಮದೇಯಾದ ನೀಲನಕ್ಷೆ, ಗುಣಮಟ್ಟದ ಶಿಕ್ಷಣ ಕುರಿತಾಗಿ ತಮ್ಮ ಮನದಾಳದ ಅನಿಸಿಕೆಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಕಾನೂನು ವಿಶ್ವವಿದ್ಯಾಲಯದಲ್ಲಿ ಇತರೆ ವಿವಿಗಳಲ್ಲಿ ಇರುವಂತೆ ಹಲವು ಸಮಸ್ಯೆ, ಸವಾಲುಗಳಿವೆ ನಿಜ. ನನ್ನ ಮುಂದಿರುವ ಸವಾಲು-ಆಶಯವೆಂದರೆ ಇವೆಲ್ಲವುಗಳನ್ನು ಮಟ್ಟಿ ನಿಂತು, ಕಾನೂನು ವಿವಿ ತನ್ನದೇ ಖ್ಯಾತಿ ಪಡೆಯಬೇಕು, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ
ಮಾನವೀಯ ಮೌಲ್ಯಗಳ ಮಾನವ ಸಂಪನ್ಮೂಲವಾಗಿ ವಿದ್ಯಾರ್ಥಿಗಳು ಹೊರಹೋಗಬೇಕು. ಮೂಲಭೂತ ಸೌಲಭ್ಯಗಳು ಮೈದಳೆಯಬೇಕು, ಗುಣಮಟ್ಟ ಹಾಗೂ ಬದ್ಧತೆಯ ಅಧ್ಯಾಪಕರು, ಕರ್ತವ್ಯನಿಷ್ಠೆ ಸಿಬ್ಬಂದಿ ನೇಮಕಗೊಳ್ಳಬೇಕು. ಇರುವ ಸವಾಲು-ಸಮಸ್ಯೆಗಳು ಸುಲಭವೆಂದು ನಾನೇನು ಭಾವಿಸಿಲ್ಲ. ಆದರೆ, ವಿವಿಯಲ್ಲಿನ ಅಧಿಕಾರಿಗಳು, ಸಿಬ್ಬಂದಿ ಸಹಕಾರದೊಂದಿಗೆ ನಾವಂದುಕೊಂಡ, ನಾಡು ಬಯಸುವ ಯಶಸ್ಸಿನ ಹೆಜ್ಜೆ ಇರಿಸುತ್ತೇವೆ ಎಂಬ ಆತ್ಮವಿಶ್ವಾಸ ನನ್ನದು.
ಮೌಲ್ಯಗಳ ಅಳವಡಿಕೆ: ವಿನಯವಿಲ್ಲದ ಶಿಕ್ಷಣ ಅತ್ಯಂತ ಅಪಾಯಕಾರಿ ಹಾಗೂ ನಿಷ್ಪ್ರಯೋಜಕ. ವಿವಿಯ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ವಿನಯ, ಮಾನವೀಯ ಮೌಲ್ಯಗಳನ್ನು ಮನನ ಮಾಡಿಕೊಂಡು ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಕಾನೂನು ವಿವಿ ಕೇವಲ ಸಂಪ್ರದಾಯಿಕ ಶಿಕ್ಷಣ ನೀಡಿಕೆಯಲ್ಲದೆ, ವಿದ್ಯಾರ್ಥಿಗಳ ಮನದಲ್ಲಿ ಮೌಲ್ಯಗಳನ್ನು ಬಿತ್ತುವ, ಪಸರಿಸುವ, ಸಾಮಾಜಿಕ ಜವಾಬ್ದಾರಿ ಪರಿಚಯಿಸುವ ಕಾರ್ಯ ಮಾಡಲಿದೆ.
ವಿದ್ಯಾರ್ಥಿಗಳಿಗೆ ಪಠ್ಯದ ಬೋಧನೆ ಜತೆಗೆ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿ ಮನವರಿಕೆ ಮಾಡಲಾಗುವುದು. ಗುಣಮಟ್ಟದ ಶಿಕ್ಷಣಕ್ಕೆ ಕೇವಲ ಪದವಿ ನೋಡಿದರೆ ಸಾಲದು, ಗುಣಮಟ್ಟ, ಬದ್ಧತೆ, ಕೆಲಸದ ಮೇಲಿನ ಪ್ರೀತಿ, ಹೊಸತನದ ತುಡಿತ, ಸಂಶೋಧನೆಯ ಹುಚ್ಚು ಇರುವವರು ಅಗತ್ಯವಿದ್ದು, ಅಧ್ಯಾಪಕರ ನೇಮಕದಲ್ಲಿ ಇದಕ್ಕೆ ಆದ್ಯತೆ ನೀಡಲು ಬಯಸಿದ್ದೇನೆ. ಬಹುತೇಕವಾಗಿ ವಿವಿಗಳಲ್ಲಿ ಶೇ.40ರಷ್ಟು ಮಾತ್ರ ಇಂತಹ ಮಾನದಂಡ ಹೊಂದಿದವರು
ನೇಮಕಗೊಂಡರೆ, ಶೇ.60ರಷ್ಟು ಕ್ವಾಲಿಫಿಕೇಶನ್‌ಗೆ ಒತ್ತು ನೀಡಿ ನೇಮಕ ಕೈಗೊಳ್ಳಲಾಗಿದೆ. ನಮ್ಮಲ್ಲಿ ಕ್ವಾಲಿಫಿಕೇಶನ್ ಜತೆಗೆ ಕ್ವಾಲಿಟಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಪ್ರತಿಯೊಬ್ಬರ ಬದುಕಿನಲ್ಲಿ ಪ್ರತಿ ಕ್ಷಣವೂ ಕಾನೂನು ಇದ್ದೇ ಇರುತ್ತದೆ. ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿಯೂ ವಿದ್ಯಾರ್ಥಿಗಳನ್ನು ವಿವಿ ತಯಾರು ಮಾಡಲಿದೆ. ಕಾನೂನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ ಅಭಿಯಾನ, ಗ್ರಾಮೀಣ ಜನರಿಗೆ ಉಚಿತ ಕಾನೂನು ನೆರವು ಅಭಿಯಾನ, ಹಳ್ಳಿಗಳನ್ನು ಗುರುತಿಸಿ ಒಂದು ವಾರದವರೆಗೆ ವಿದ್ಯಾರ್ಥಿಗಳನ್ನು ಅಲ್ಲಿಯೇ ಇರಿಸಿ ಸ್ಥಳೀಯರ ಸಮಸ್ಯೆ, ಸೌಲಭ್ಯಗಳ ಕುರಿತು ಶಿಬಿರ, ಜಿಲ್ಲಾ ಮತ್ತು ತಾಲೂಕು ಮಟ್ಟದ ನ್ಯಾಯಾಧೀಶರನ್ನು ಕರೆದುಕೊಂಡು ಹೋಗಿ ಜನರಿಗೆ ಕಾನೂನು, ಸೌಲಭ್ಯಗಳ ಕುರಿತು ಮನವರಿಕೆ ಕಾರ್ಯಮಾಡಲಾಗುತ್ತದೆ.
ಸೌಲಭ್ಯಗಳ ಕೊರತೆ ನೀಗಿಸಲು ಕ್ರಮ: ಕಾನೂನು ವಿವಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸಾಕಷ್ಟು ಇದೆ ಎಂಬುದು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಕಂಡು ಬಂದಿದೆ. ಮುಖ್ಯವಾಗಿ ಸಿಬ್ಬಂದಿ ಕೊರತೆ, ವಿವಿಗೆ ಪ್ರತ್ಯೇಕ ಗ್ರಂಥಾಲಯ ಕಟ್ಟಡ, ಆಡಳಿತ ಕಟ್ಟಡ, ಸಭಾಭವನ, ಸಿಬ್ಬಂದಿಗೆ ವಸತಿ ಗೃಹ ಸೌಲಭ್ಯ, ಅತಿಥಿಗಳು ಬಂದರೆ ತಂಗಲು ಅತಿಥಿ ಗೃಹ ಸೇರಿದಂತೆ ಸಾಕಷ್ಟು ಸೌಲಭ್ಯಗಳ ಅವಶ್ಯಕತೆ ಇದೆ. ಮುಖ್ಯಮಂತ್ರಿ, ಕಾನೂನು ಮತ್ತು ಸಂಸದೀಯ ಸಚಿವರು, ಸ್ಥಳೀಯ ಸಚಿವರು, ಜನಪ್ರತಿನಿಧಿಗಳ ಸಹಕಾರ, ಬೆಂಬಲದೊಂದಿಗೆ ಇವುಗಳ ಅನುಷ್ಠಾನಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವೆ. ಅಗತ್ಯ ಅನುದಾನದ ನೆರವಿನ ವಿಶ್ವಾಸವಿದೆ.
ಸಂಶೋಧನೆಗೆ ಒತ್ತು
ಸಂಶೋಧನೆ ಎಂಬುದು ವಿಶ್ವವಿದ್ಯಾಲಯದಕ್ಕೆ ಭೂಷಣ ಹಾಗೂ ಅತ್ಯವಶ್ಯವೂ ಆಗಿದೆ. ಕಾನೂನು ವಿವಿಯಲ್ಲಿ ಸಂಶೋಧನೆ ಹೆಚ್ಚಳ ನಿಟ್ಟಿನಲ್ಲಿ ಈಗಾಗಲೇ ಅಧ್ಯಾಪಕರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದು, ವಿವಿಯ ಸಾಮರ್ಥ್ಯ ಎಂದರೇನೆ ಸಂಶೋಧನೆ ಎಂಬುದನ್ನು ಮನವರಿಕೆ ಯತ್ನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಸಂಶೋಧನೆಗೆ ಮುಂದಾಗುವ ಅಧ್ಯಾಪಕರಿಗೆ ಎಲ್ಲ ರೀತಿಯ ಸಹಕಾರ ನೀಡುವೆ, ಪ್ರೋತ್ಸಾಹಿಸುವೆ. ಸಂಶೋಧನೆ ಜತೆಗೆ ಹೆಚ್ಚು ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳಬೇಕಾಗಿದೆ. ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲೂ ಚರ್ಚಿಸುವೆ. ಕಾನೂನು ವಿವಿಯ ಗುಣಮಟ್ಟ ಹೆಚ್ಚಿಸಲು, ಜ್ಞಾನದ ವಿನಿಮಯ ನಿಟ್ಟಿನಲ್ಲಿ ಅಮೆರಿಕ, ಕೆನಾಡಾ , ಬ್ರಿಟನ್ ಇನ್ನಿತರ ಕಡೆಯ ಕಾನೂನು ವಿವಿ, ಸಂಶೋಧನಾ ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಕ್ರಮ ಕೈಗೊಳ್ಳುವೆ. ನಮ್ಮ ವಿವಿ ಅಧ್ಯಾಪಕರನ್ನು ವಿದೇಶಗಳಿಗೆ ಕಳುಹಿಸಿ ಅಲ್ಲಿನ ಕಲಿಕಾ ವಿಧಾನ, ಹೊಸತನಗಳನ್ನು ಅಧ್ಯಯನ ಮಾಡಿ ಇಲ್ಲಿನ ನಮ್ಮ ವಿದ್ಯಾರ್ಥಿಗಳಿಗೆ ಹೇಳುವಂತಾಗಬೇಕು. ಸಾಧ್ಯವಾದರೆ ನಮ್ಮ ಹಾಗೂ ವಿದೇಶಿ ವಿದ್ಯಾರ್ಥಿಗಳ ವ್ಯಾಸಂಗ ವಿನಿಯಮದ ಒಡಂಬಡಿಕೆಗೂ ಯತ್ನಿಸುವೆ.
ಮೂರು ದಶಕಗಳ ಶೈಕ್ಷಣಿಕ ಕ್ಷೇತ್ರದ ಅನುಭವವನ್ನು ಕಾನೂನು ವಿವಿ ಅಭಿವೃದ್ಧಿ-ಹೊಸತನಕ್ಕೆ ಬಳಕೆ ಮಾಡುವೆ. ವಿವಿ ಪ್ರಗತಿ ಹೊಂದಬೇಕಾದರೆ ಅಧ್ಯಾಪಕರು-ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಆಡಳಿತ ಮೂರು ಸಂಘಟಿತವಾಗಿ ಸಾಗಬೇಕಾಗಿದೆ. ವಿವಿ ಆಡಳಿತ ವ್ಯವಸ್ಥೆ ಚುರುಕುಗೊಳಿಸುವೆ. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತೇನೆ. ವಿವಿ ಅಧಿಕಾರಿಗಳು-ಸಿಬ್ಬಂದಿಯಲ್ಲಿ ತಾರತಮ್ಯ ತೋರದೆ, ವಿದ್ಯಾರ್ಥಿಗಳೆಲ್ಲರನ್ನು ಸಮಾನ ರೀತಿಯಲ್ಲಿ ನೋಡುವ ಮೂಲಕ ಒಟ್ಟಾರೆ ವಿವಿಯ ಅಭಿವೃದ್ಧಿ ವೇಗೆ ಹೆಚ್ಚಳ, ವರ್ಚಸ್ಸು ಇಮ್ಮಡಿಗೊಳಿಸಲು ನನ್ನ ಅಧಿಕಾರವಾಧಿಯಲ್ಲಿ ಪ್ರಾಮಾಣಿಕ ಯತ್ನ ಮಾಡುತ್ತೇನೆ.
ಪ್ರೊ|ಸಿ.ಬಸವರಾಜು,
ಕುಲಪತಿ ಕಾನೂನು ವಿವಿ
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.