ಆತ್ಮನಿರ್ಭರ್ ಕರುನಾಡ ಆಶಯ: ಸಚಿವ ಮುರುಗೇಶ ನಿರಾಣಿ
"ಉದಯವಾಣಿ' ಜತೆ ಸಚಿವ ಮುರುಗೇಶ ನಿರಾಣಿ ಮನದಾಳದ ಮಾತು
Team Udayavani, Aug 21, 2022, 11:16 AM IST
ಹುಬ್ಬಳ್ಳಿ: “ಕೇವಲ ಉದ್ಯಮ ಕುಟುಂಬ ಹಿನ್ನೆಲೆ ಉಳ್ಳವರು, ಸ್ಥಿತಿವಂತರಷ್ಟೇ ಉದ್ಯಮ ರಂಗದಲ್ಲಿರಬಾರದು. ಸಾಮಾನ್ಯರು ಉದ್ಯಮರಂಗಕ್ಕೆ ಆಗಮಿಸಿ ಸಾಧನೆ ಮಾಡುವಂತಾಗಬೇಕು. ಉದ್ಯಮ-ವ್ಯಾಪಾರ ವಹಿವಾಟಿಗೆ ಕರ್ನಾಟಕ ತನ್ನದೇ ಇತಿಹಾಸ ಹೊಂದಿದೆ. ಉದ್ಯಮದ ಬೆಳವಣಿಗೆಯೊಂದಿಗೆ ಆತ್ಮನಿರ್ಭರ ಭಾರತ ಪರಿಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ನೆಲೆಗೊಳ್ಳುವಂತಾಗಬೇಕು, ದೇಶ-ವಿಶ್ವಕ್ಕೆ ಮಾದರಿಯಾಗಬೇಕು ಎಂಬುದೇ ನನ್ನ ಆಶಯ’
– ಇದು ಶೂನ್ಯದಿಂದ ಉದ್ಯಮ ಆರಂಭಿಸಿ ಇಂದು ರಾಷ್ಟ್ರ-ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ಯಶಸ್ವಿ ಉದ್ಯಮಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ| ಮುರುಗೇಶ ನಿರಾಣಿ ಅನಿಸಿಕೆ. ರಾಜ್ಯದಲ್ಲಿ ಉದ್ಯಮ ಬೆಳವಣಿಗೆಗೆ ಇರುವ ಅವಕಾಶ, ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ಕುರಿತು “ಉದಯವಾಣಿ’ಯೊಂದಿಗೆ ಮನದಾಳದ ಅನಿಸಿಕೆ ಹಂಚಿಕೊಂಡಿದ್ದಾರೆ.
ಉದ್ಯಮ ಕೆಲವರಿಗೆ ಸೀಮಿತವಾಗುವ ಬದಲು ಸಾಮಾನ್ಯರು ಉದ್ಯಮ ಸಾಧನೆಗೆ ಮುಂದಾಗಬೇಕು. ಕೃಷಿ ಕಾಯಕ ದೇಶಕ್ಕೆ ಅನಿವಾರ್ಯ ಹಾಗೂ ಮಹತ್ವದ ಕ್ಷೇತ್ರ. ಆದರೆ, ಕೃಷಿಯಲ್ಲಿ ಬೆಳವಣಿಗೆ ಸೀಮಿತವಾಗಿದೆ. ಆದರೆ, ಉದ್ಯಮ ವಲಯದಲ್ಲಿ ಸಾಧನೆ, ಬೆಳವಣಿಗೆ ಸೀಮಿತವಾಗಿಲ್ಲ. ದುಡಿಯುವ ಕೈಗೆ, ತಿನ್ನುವ ಬಾಯಿಗೆ ಕೊರತೆ ಸೃಷ್ಟಿಯಾಗದಂತೆ, ಉತ್ಪನ್ನಗಳಿಗೆ ವಿದೇಶಗಳ ಮೇಲಿನ ಅವಲಂಬನೆ ನಿಲ್ಲುವಂತೆ ಆತ್ಮನಿರ್ಭರ್ ಭಾರತ ಕಂಗೊಳಿಸಬೇಕಾಗಿದೆ. ಇದನ್ನು ಸಾರ್ಥಕತೆಗೊಳಿಸುವ ಸಾಮರ್ಥ್ಯ ಕರ್ನಾಟಕಕ್ಕೆ ಇದೆ ಎಂಬ ಅಚಲ ವಿಶ್ವಾಸ, ಹೆಮ್ಮೆ ನನ್ನದು.
ಕರ್ನಾಟಕದ ಶ್ರೀಮಂತಿಕೆ, ಉದ್ಯಮ-ವಹಿವಾಟಿಗೆ ಮಹತ್ವದ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯ ಮುತ್ತು-ರತ್ನಗಳನ್ನು ಬೀದಿಯಲ್ಲಿ ಮಾರಾಟ ಮಾಡುವ ಮೂಲಕ ವಿದೇಶಿಗರ ಮನಗೆದ್ದಿತ್ತು. ಅದೇ ರೀತಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ರಾಜ್ಯ ಜಗತ್ತಿನ 7ನೇ ಶ್ರೀಮಂತ ಸ್ಥಾನ ಪಡೆದಿತ್ತು. ಇಲ್ಲಿನ ಉದ್ಯಮ-ವ್ಯಾಪಾರ ಪರಂಪರೆ ನಮ್ಮ ಬೆಳವಣಿಗೆಗೆ ತಮ್ಮದೇ ಕೊಡುಗೆ, ನೈತಿಕ ಬಲ ತುಂಬುತ್ತಿವೆ.
ನಾವೇ ಮೊದಲು: ಭವಿಷ್ಯದಲ್ಲಿ ಸುಸ್ಥಿರ ಉದ್ಯಮ ಬೆಳವಣಿಗೆ, ಉದ್ಯಮ ಪರಂಪರೆ ಮುಂದುವರಿಕೆಗೆ ನವೋದ್ಯಮ ಮಹತ್ವದ ಪಾತ್ರ ವಹಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ನವೋದ್ಯಮ ತನ್ನದೇ ಪ್ರಭಾವ ಬೀರುತ್ತಿದೆ, ಉದ್ಯಮದಲ್ಲಿ ಹೊಸ ಆಶಾಭಾವನೆ ಮೂಡಿಸುತ್ತಿದೆ. ನಮ್ಮ ಯುವಶಕ್ತಿಯಲ್ಲಿನ ಉದ್ಯಮಶೀಲತೆ ಚಿಂತನೆಗಳು ಉದ್ಯಮ ರೂಪ ಪಡೆಯುತ್ತಿರುವುದು ಸಂತಸ ವಿಚಾರವಾಗಿದೆ.
ರಾಜ್ಯದಲ್ಲಿ ಸುಮಾರು 5,000ಕ್ಕೂ ಅಧಿಕ ನವೋದ್ಯಮಗಳು ಇದ್ದು, ಬೇರೆ ರಾಜ್ಯಗಳಲ್ಲಿ ನಮ್ಮ 1/10ರಷ್ಟು ನವೋದ್ಯಮಗಳು ಇಲ್ಲವಾಗಿದೆ. ನವೋದ್ಯಮ ದೃಷ್ಟಿಯಿಂದ ಉತ್ತರ ಕರ್ನಾಟಕ ಮಹತ್ವದ ಪ್ರಭಾವ ಬೀರುತ್ತಿದೆ. ನವೋದ್ಯಮಕ್ಕೆ ಪೂರಕವಾಗಿ ಇನ್‌ಕ್ಯುಬೇಷನ್ ಕೇಂದ್ರಗಳು, ಉದ್ಯಮ ಪ್ರಯೋಗಕ್ಕೆ ವೇದಿಕೆ, ವಿವಿಧ ಪದವಿ ಪಡೆದ ಯುವಜನತೆ ನವೋದ್ಯಮಕ್ಕೆ ಆಸಕ್ತಿ ತೋರುತ್ತಿರುವುದು ವಿಶ್ವದ ಗಮನ ಸೆಳೆದಿದ್ದು, ರಾಜ್ಯದ ಹೆಮ್ಮೆ ಹೆಚ್ಚಿಸುವಂತೆ ಮಾಡಿದೆ.
ರಾಜ್ಯದಲ್ಲಿ ಸುಮಾರು 380 ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಆ್ಯಂಡ್ ಡಿ)ಕೇಂದ್ರಗಳು ಇದ್ದು, ದೇಶದಲ್ಲಿಯೇ ಅತಿ ಹೆಚ್ಚು ಆರ್ ಆ್ಯಂಡ್ ಡಿ ಕೇಂದ್ರ ಹೊಂದಿದ ಕೀರ್ತಿ ನಮ್ಮದಾಗಿದೆ. ನೇರ ವಿದೇಶ ಬಂಡವಾಳ ಹೂಡಿಕೆ(ಎಫ್‌ಡಿಐ)ಯಲ್ಲಿ ನಾಲ್ಕನೇ ತ್ತೈಮಾಸಿಕದಲ್ಲೂ ಕರ್ನಾಟಕವೇ ದೇಶಕ್ಕೆ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಒಟ್ಟು ಎಫ್‌ಡಿಐ ಹೂಡಿಕೆಯಲ್ಲಿ ನಮ್ಮ ಪಾಲು ಶೇ.38ರಷ್ಟು ಆಗಿದ್ದು, ಉಳಿದ ಶೇ.62ರಷ್ಟು ಹೂಡಿಕೆಯಲ್ಲಿ ದೇಶದ ಇತರೆ ಎಲ್ಲ ರಾಜ್ಯಗಳಿಗೆ ಹಂಚಿಕೆಯಾಗಿದೆ.
ಭೂ ಬ್ಯಾಂಕ್‌ಗೆ ಒತ್ತು: ರಾಜ್ಯದಲ್ಲಿ ಉದ್ಯಮ ಹೂಡಿಕೆಗೆ ಸಾಕಷ್ಟು ಅವಕಾಶಗಳಿದ್ದು, ಉದ್ಯಮಿಗಳು ಸಹ ಆಸಕ್ತಿ ತೋರುತ್ತಿದ್ದಾರೆ. ಆದರೆ, ಇರುವ ಕೊರತೆ ಎಂದರೆ ಭೂಮಿಯ ಲಭ್ಯತೆಯದ್ದಾಗಿದೆ. ಈ ಹಿಂದೆ ನ್ಯಾನೋ ಕಾರು ತಯಾರಿಕಾ ಕಂಪನಿಯವರು ಧಾರವಾಡದಲ್ಲಿ ಹೂಡಿಕೆಗೆ ಮುಂದಾಗಿದ್ದರು, ಎಲ್ಲ ಸೌಲಭ್ಯಗಳು, ಉತ್ತೇಜನಕ್ಕೆ ಒಪ್ಪಿಗೆ ದೊರೆತಿದ್ದರೂ, ತಕ್ಷಣಕ್ಕೆ 1 ಸಾವಿರ ಎಕರೆಯಷ್ಟು ಭೂಮಿ ಲಭ್ಯತೆ ಇಲ್ಲವಾದ್ದರಿಂದ ಕಂಪನಿ ಗುಜರಾತ್‌ಗೆ ಹೋಗುವಂತಾಗಿತ್ತು. ಅಂತಹ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಭೂ ಬ್ಯಾಂಕ್‌ಗೆ ಒತ್ತು ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 5 ಸಾವಿರ ಎಕರೆ, ಕಲಬುರಗಿ, ವಿಜಯಪುರ, ಬೆಳಗಾವಿಯಲ್ಲಿ ತಲಾ 3 ಸಾವಿರ ಎಕರೆ, ಬಾಗಲಕೋಟೆ, ದಾವಣಗೆರೆ, ರಾಯಚೂರಿನಲ್ಲಿ 2 ಸಾವಿರ ಎಕರೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 50 ಸಾವಿರ ಎಕರೆಯಷ್ಟು ಭೂಮಿಯನ್ನು ಉದ್ಯಮಕ್ಕಾಗಿ ಪಡೆದುಕೊಳ್ಳುವ ಪ್ರಕ್ರಿಯೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ, ರಾಯಚೂರು, ದಾವಣಗೆರೆ, ಚಿಕ್ಕಮಗಳೂರುಗಳಲ್ಲಿ ವಿಮಾನಯಾನ ಸೌಲಭ್ಯದ ಏರ್ ಸ್ಟ್ರಿಪ್ ಬರಲಿದ್ದು, ಕೊಪ್ಪಳದಲ್ಲಿಯೂ ಇಂತಹ ಯತ್ನ ನಡೆಯುತ್ತಿದೆ. ಬಾದಾಮಿಯಲ್ಲಿ ಮೊದಲ ಹಂತದಲ್ಲಿಯೇ 360 ಕೋಟಿ ರೂ. ಹೂಡಿಕೆ ಜವಳಿ ಪಾರ್ಕ್ ಬರಲಿದೆ. ಸ್ಟಾರ್ ಸಮೂಹದ ಸಂಜಯ ಘೋಡಾವತ್ ಅಂದಾಜು 100 ಕೋಟಿ ರೂ. ಹೂಡಿಕೆಯ ಆಹಾರ ಸಂಸ್ಕರಣೆ ಘಟಕ ಸ್ಥಾಪನೆಗೆ ಮುಂದಾಗಿದ್ದು, ಒಟ್ಟಾರೆಯಾಗಿ 10 ಸಾವಿರ ಜನರಿಗೆ ಉದ್ಯೋಗ ನೀಡುವ ಯೋಜನೆ ಇದಾಗಿದೆ.
ಯಾದಗಿರಿಯಲ್ಲಿ ಸುಮಾರು 3 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ಫಾರ್ಮಾ ಪಾರ್ಕ್ ಇದ್ದು, ಈಗಾಗಲೇ 85ಕ್ಕೂ ಹೆಚ್ಚು ಔಷಧ ಕಂಪೆನಿಗಳಿಗೆ ಅನುಮೋದನೆ ನೀಡಲಾಗಿದೆ. ಕಲಬುರಗಿಯಲ್ಲಿಯೂ ಮೆಗಾ ಜವಳಿ ಪಾರ್ಕ್ ಆರಂಭಗೊಳ್ಳುತ್ತಿದೆ. ಧಾರವಾಡದಲ್ಲಿ ಎಫ್ ಎಂಸಿಜಿ ಕ್ಲಸ್ಟರ್‌ಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಉದ್ಯಮ ಬೆಳವಣಿಗೆ, ನೆಗೆತ, ಸಾಧನೆ ದೃಷ್ಟಿಯಿಂದ ಕರ್ನಾಟಕ ಮಹತ್ವದ ಮೈಲುಗಲ್ಲು ಆಗುವ ಎಲ್ಲ ಲಕ್ಷಣಗಳು ಇವೆ. ಆ ನಿಟ್ಟಿನಲ್ಲಿ ಹೆಚ್ಚಿನ ಆಶಾಭಾವನೆ ನನ್ನದಾಗಿದೆ.
ಜಿಮ್‌ನಿಂದ 5 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ
ಜಾಗತಿಕ ಹೂಡಿಕೆದಾರರ ಸಮಾವೇಶ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಮೂರು ದಿನ ನಡೆಯುವ ಸಮಾವೇಶಕ್ಕೆ ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರದ ಎಂಎಸ್ ಎಂಇ ಸಚಿವರು ಸೇರಿದಂತೆ 4-5 ಸಚಿವರು ಭಾಗಿಯಾಗಲಿದ್ದಾರೆ. ಅದೇ ರೀತಿ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಇರಲಿದ್ದಾರೆ. ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದ ವಿಶೇಷವೆಂದರೆ ಫಾರ್ಚೂನ್ ಪಟ್ಟಿಯಲ್ಲಿನ ವಿಶ್ವಮಟ್ಟದ ಖ್ಯಾತನಾಮ 500ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಳ್ಳುತ್ತಿದ್ದಾರೆ. ಹಲವು ಖ್ಯಾತ ಉದ್ಯಮಿಗಳು ಹೂಡಿಕೆಗೆ ಆಸಕ್ತಿ ತೋರಿದ್ದಾರೆ. ಇನ್ನು ಕೆಲವರು ಇರುವ ಉದ್ಯಮ ವಿಸ್ತರಣೆಗೆ ಮುಂದಾಗಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅಂದಾಜು 5 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ನಿರೀಕ್ಷೆ ಇದ್ದು, ಇದರಿಂದ ಸುಮಾರು 5 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಕೈಗಾರಿಕಾ ನೀತಿ 2020-25ರಲ್ಲಿ ಉದ್ಯಮ ಬೆಳವಣಿಗೆ ದೃಷ್ಟಿಯಿಂದ ಸಾಕಷ್ಟು ಉತ್ತೇಜನ, ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಷ್ಟೇ ಅಲ್ಲದೆ ರಾಜ್ಯದಲ್ಲಿ 500 ಕೋಟಿ ರೂ. ಗಳಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವ ಉದ್ಯಮದಾರರಿಗೆ ವಿಶೇಷ ಉತ್ತೇಜನ, ವಿಶೇಷ ಸಬ್ಸಿಡಿ-ರಿಯಾಯಿತಿಗಳನ್ನು ನೀಡಲಾಗುವುದು.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.