ಹೊರಟ್ಟಿ ಮಾಸ್ತರ್ ಹೊಸ ರಾಜಕೀಯ ಇನ್ನಿಂಗ್ಸ್
ನಾಲ್ಕು ದಶಕಗಳ ಜೆಡಿಎಸ್ ಗೆಳೆತನಕ್ಕೆ ಶೀಘ್ರ ಗುಡ್‌ಬೈ
Team Udayavani, Apr 4, 2022, 11:25 AM IST
ಹುಬ್ಬಳ್ಳಿ: ರಾಜಕೀಯ ಜೀವನದ ಸುಮಾರು 42 ವರ್ಷಗಳವರೆಗೆ ಬಹುತೇಕ ಅವಧಿಗೆ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡು ಬಂದಿದ್ದ ಉತ್ತರ ಕರ್ನಾಟಕ ಪ್ರಮುಖ ನಾಯಕರಲ್ಲೊಬ್ಬರಾದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಕಮಲ ತೆಕ್ಕೆಗೆ ಜಾರಲು ಮುಂದಾಗಿದ್ದು ಹಲವರಿಗೆ ನಿರೀಕ್ಷಿತ ಎನ್ನಿಸಿದರೆ, ಕೆಲವರಿಗೆ ಅಚ್ಚರಿ ಮೂಡಿಸಿದೆ.
ರಾಜಕೀಯ ಮನೆತನದ ಹಿನ್ನೆಲೆ ಇಲ್ಲವಾದರೂ ಹೋರಾಟ, ಆಕಸ್ಮಿಕ ರಾಜಕೀಯ ಪ್ರವೇಶ, ಅಚ್ಚರಿಯ ಗೆಲುವು, ನಂತರದಲ್ಲಿ ನಿರಂತರ ಗೆಲುವಿನ ದಾಖಲೆ, ನೇರ ನುಡಿ, ಪಕ್ಷ ನಿಷ್ಠೆ, ಶಿಕ್ಷಕರ ಹಿತವೆಂದು ಬಂದಾಗ ಪಕ್ಷವನ್ನು ಲೆಕ್ಕಿಸದೆ ಬೆಂಬಲಿಸುವ ಛಾತಿ. ಇವು ಬಸವರಾಜ ಹೊರಟ್ಟಿ ಅವರು ಬೆಳೆದು ಬಂದ ದಾರಿ ಹಾಗೂ ಅವರ ಮನೋಭಾವ. ದೈಹಿಕ ಶಿಕ್ಷಕರಾಗಿದ್ದ ಹೊರಟ್ಟಿ ಪರಿಷತ್ ಸಭಾಪತಿ ಪೀಠದವರೆಗೆ ಸಾಗುವಂತೆ ಮಾಡಿದ್ದು ಅವರ ಹೋರಾಟದ ಛಲ, ಶಿಕ್ಷಕರ ಬಲ ಎಂದರೆ ತಪ್ಪಾಗಲಾರದು.
ಜನತಾ ಪರಿವಾರದಲ್ಲೇ ರಾಜಕೀಯದ ಬಹುಪಾಲು ಆಯುಷ್ಯ ಸವೆದಿದ್ದು, ರಾಜಕೀಯ ಅನಿವಾರ್ಯ ಸ್ಥಿತಿಯಲ್ಲಿ ಬಿಜೆಪಿ ಕಡೆ ಹೆಜ್ಜೆ ಹಾಕಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಹೊರಟ್ಟಿ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎಂಬುದಕ್ಕೆ ಹಲವು ಸನ್ನಿವೇಶಗಳು ಶಂಕೆ ವ್ಯಕ್ತಪಡಿಸುವಂತೆ ಮಾಡಿದ್ದವು. ಇದೀಗ ಅದು ನಿಜ ಎನ್ನುವಂತಾಗುತ್ತಿದೆ.
ಸೋಲಿಲ್ಲದ ಸರದಾರ: ಬಸವರಾಜ ಹೊರಟ್ಟಿ ರಾಜಕೀಯ ಪ್ರವೇಶಿಸಬೇಕು, ಚುನಾವಣೆಗೆ ಸ್ಪರ್ಧಿಸಬೇಕು ಎಂದು ಯೋಚಿಸಿದವರಲ್ಲ. ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿದ್ದರು. ಶಿಕ್ಷಕರಾಗಿಯೇ ಮುಂದುವರೆಯಬೇಕು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಬಯಸಿದವರು. ಆದರೆ, ಶಿಕ್ಷಕರ ಸಮಸ್ಯೆ, ಅನಿವಾರ್ಯ ಸ್ಥಿತಿಯಿಂದಾಗಿ ರಾಜಕೀಯಕ್ಕೆ ಧುಮುಕುವಂತಾಗಿತ್ತು. 1980ರಲ್ಲಿ ಚುನಾವಣೆ ಕಣಕ್ಕಿಳಿದವರು ಹಿಂದೆ ತಿರುಗಿ ನೋಡಲೇ ಇಲ್ಲ.
ಶಿಕ್ಷಕರಿಗೆ ಆಗುತ್ತಿರುವ ಅವಮಾನ, ನೋವು, ಶಿಕ್ಷಕ ಪ್ರತಿನಿಧಿ ಎನ್ನಿಸಿಕೊಂಡವರು ಶಿಕ್ಷಕರನ್ನು ಕಡೆಗಣಿಸುತ್ತಿರುವುದನ್ನು ಕಂಡು ನಮ್ಮ ಮತಗಳಿಂದ ಗೆಲ್ಲುವವರು ನಮ್ಮನ್ನೇ ಕಡೆಗಣಿಸುತ್ತಾರೆಂದರೆ ನಾವೇಕೆ ಅವರಿಗೆ ಮತ ಹಾಕಬೇಕು, ನಮ್ಮ ಮತಗಳಿಗೆ ನಾವೇ ಪ್ರತಿನಿಧಿಯಾದರೆ ಹೇಗೆ ಎಂಬ ಚಿಂತನೆ ದೊಡ್ಡದೊಂದು ಬದಲಾವಣೆಗೆ ಕಾರಣವಾಯಿತು.1976ರಲ್ಲಿ ಆರಂಭಗೊಂಡ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಕೃಪಾದಾನಂ ಪ್ರೌಢಶಾಲೆಯ ಬಾಲಿರೆಡ್ಡಿಯವರ ಹೋರಾಟದಿಂದ ಆರಂಭವಾದ ಸಂಘದ ಹೋರಾಟದ ಕಾವು ಹೆಚ್ಚುತ್ತಲೇ ಸಾಗಿತ್ತು. ಸಂಘಟನೆಯಲ್ಲಿ ಪ್ರಮುಖರಾಗಿ ಗುರುತಿಸಿಕೊಂಡ ಹೊರಟ್ಟಿ ಸಂಘಟನಾ ಶಕ್ತಿ, ನಾಯಕತ್ವ ಗುಣದೊಂದಿಗೆ ಬೆಳೆಯುತ್ತಲೇ ಬಂದರು.
1980ರಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್ ಪ್ರವೇಶಿಸಿದ ಅವರು, ಇಲ್ಲಿವರೆಗೆ ಕ್ಷೇತ್ರದ ಪ್ರತಿನಿಧಿಯಾಗಿಯೇ ಮುಂದುವರಿದಿದ್ದಾರೆ. ವಿಧಾನ ಪರಿಷತ್‌ಗೆ ದೇಶದಲ್ಲಿಯೇ ಸುದೀರ್ಘ ಅವಧಿಗೆ ಸದಸ್ಯರಾದ ದಾಖಲೆ ಅವರದ್ದಾಗಿದೆ. ವಿಜ್ಞಾನ-ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದು, ಇದೀಗ ಎರಡನೇ ಬಾರಿಗೆ ಸಭಾಪತಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಕ್ಷಕರ ಒಲವು ಗಳಿಸಿರುವ ಹೊರಟ್ಟಿ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸಿದ್ದು ಅತ್ಯಂತ ಕಡಿಮೆ. ಆದರೆ, ಎರಡ್ಮೂರು ಬಾರಿ ತೀವ್ರ ಪೈಪೋಟಿ ಎದುರಾಗಿತ್ತು. ಇವರನ್ನು ಸೋಲಿಸಲೇಬೇಕೆಂದು ಸರ್ಕಾರವೇ ತೊಡೆತಟ್ಟಿ ನಿಂತಿತ್ತು. ಇನ್ನೇನು ಹೊರಟ್ಟಿ ರಾಜಕೀಯ ಭವಿಷ್ಯಕ್ಕೆ ಮಂಕು ಕವಿಯುತ್ತಿರುವ ಸನ್ನಿವೇಶ ಹತ್ತಿರ ಆಗುತ್ತಿದೆ ಎಂಬ ಅನಿಸಿಕೆ, ವ್ಯಾಖ್ಯಾನಗಳ ನಡುವೆಯೂ ಹೊರಟ್ಟಿ ಅವರನ್ನು ಕೈ ಬಿಡದೆ ಶಿಕ್ಷಕರು ಬಲ ತುಂಬುವ ಕೆಲಸ ಮಾಡಿದ್ದರು. ಇದರಿಂದಾಗಿ ಸತತ 7 ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.
ಮಗನ ಭವಿಷ್ಯಕ್ಕೆ ಬಿಜೆಪಿ ಸೇರ್ಪಡೆ?: ಹೊರಟ್ಟಿ ಅಧಿಕಾರದ ಆಸೆಗೆ ಬೆನ್ನು ಬೀಳುವ ಜಾಯ ಮಾನದವರಲ್ಲ. 1980ರಲ್ಲಿ ಪಕ್ಷೇತರರಾಗಿ ವಿಧಾನಸಭೆ ಪ್ರವೇಶಿಸಿದಾಗ ರಾಮಕೃಷ್ಣ ಹೆಗಡೆ ಹೊರಟ್ಟಿ ಅವರನ್ನು ಗುರುತಿಸಿ 1986ರಲ್ಲಿ ಜನತಾ ಪಕ್ಷದಿಂದ ಸ್ಪರ್ಧೆಗಿಳಿಯುವಂತೆ ಮಾಡಿದ್ದರು. ಅಲ್ಲಿಂದ ರಾಮಕೃಷ್ಣ ಹೆಗಡೆ ಬೆಂಬಲಿಗರಾಗಿಯೇ ಮುಂದುವರಿದರು. ಜನತಾದಳ ಇಬ್ಭಾಗವಾಗಿ ಸಂಯುಕ್ತ ಜನತಾದಳ ಸ್ಥಾಪನೆಯಾದಾಗ ರಾಮಕೃಷ್ಣ ಹೆಗಡೆ ಇದ್ದ ಜೆಡಿಯುಗೆ ಸೇರಿದರು. ಮುಂದೆ ರಾಮಕೃಷ್ಣ ಹೆಗಡೆ ಲೋಕಜನಶಕ್ತಿ ಸ್ಥಾಪಿಸಿದಾಗ ಅವರೊಂದಿಗೆ ಸಾಗಿದರು. ಅವರ ನಿಧನ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್‌ಗೆ ಸೇರ್ಪಡೆಗೊಂಡು ಇಂದಿಗೂ ಅದೇ ಪಕ್ಷದಲ್ಲಿ ಮುಂದುವರಿದಿದ್ದಾರೆ.
ಸರ್ಕಾರದಲ್ಲಿ ಸಚಿವ ಸ್ಥಾನ ನೀಡದೆ ಹಿರಿತನ ಕಡೆಗಣಿಸಿದ ಸನ್ನಿವೇಶಗಳು ಎದುರಾದಾಗಲೂ, ಸಭಾಪತಿ ಸ್ಥಾನದಲ್ಲಿ ಮುಂದುವರಿಯುವ ಅವಕಾಶ ಇದ್ದಾಗಲೂ ಪಕ್ಷದ ನಾಯಕರು ಗಟ್ಟಿ ನಿಲುವು ತಾಳದೆ ಸಭಾಪತಿ ಸ್ಥಾನದಿಂದ ಕೆಳಗಿಳಿಸಲಾಯಿತು ಎನ್ನುವಾಗಲು ಬೇರೆ ಪಕ್ಷಗಳ ಕಡೆ ನೋಡಲಿಲ್ಲ. ಪಕ್ಷ ನಾಯಕರ ವರ್ತನೆ ಬಗ್ಗೆ ಅಸಮಾಧಾನ ಇದ್ದಾಗಲೂ ಭಿನ್ನಮತಕ್ಕೆ ಅವಕಾಶ ನೀಡದೆ ಪಕ್ಷದಲ್ಲಿಯೇ ಮುಂದುವರಿದರು. ಕೆಲವೊಮ್ಮೆ ಮೌನಿಯಾಗಿದ್ದರು. 2010ರಲ್ಲಿ ಬಿಜೆಪಿ ಸೇರುವಂತೆ ತೀವ್ರ ಒತ್ತಡ ಬಂದಿತ್ತು. ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯ ಭರವಸೆಯೂ ನೀಡಲಾಗಿತ್ತು. ಅಂದು ಸ್ವತಃ ಮುಖ್ಯಮಂತ್ರಿಯವರೇ ಮನೆಗೆ ಬಂದು ಪಕ್ಷ ಸೇರ್ಪಡೆ ಆಹ್ವಾನ ನೀಡಿದಾಗಲೂ ನಯವಾಗಿ ನಿರಾಕರಿಸಿದ್ದರು.
ಇದೀಗ ಬದಲಾದ ಸನ್ನಿವೇಶದಲ್ಲಿ ಹೊಸ ರಾಜಕೀಯ ನಡೆಗೆ ಮುಂದಾಗಿದ್ದಾರೆ. ಕೆಲ ತಿಂಗಳುಗಳ ಹಿಂದಿನಿಂದ ಬಿಜೆಪಿ ಸೇರ್ಪಡೆ ವಿದ್ಯಮಾನ ತನ್ನದೇ ರೂಪ ಪಡೆದುಕೊಂಡಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ವಿಧಾನ ಪರಿಷತ್‌ನಲ್ಲಿ ಸಭಾಪತಿ ಸ್ಥಾನವನ್ನು ಹೊರಟ್ಟಿ ಅವರು ಅಲಂಕರಿಸುವ ವೇಳೆ ಮೊಳಕೆಯೊಡೆದ ಈ ಚಿಂತನೆ ಇದೀಗ ಪಕ್ಷ ಸೇರ್ಪಡೆ ಹಂತಕ್ಕೆ ತಂದು ನಿಲ್ಲಿಸಿದೆ. ಹುಬ್ಬಳ್ಳಿಯ ಆರ್‌ಎಸ್‌ಎಸ್ ಕಚೇರಿಗೆ ಮೊದಲ ಬಾರಿಗೆ ಭೇಟಿ, ಬಿಜೆಪಿ ನಾಯಕರ ಸಭೆ ವೇಳೆ ಆಗಮನ, ಬಿಜೆಪಿ ನಾಯಕರೊಂದಿಗೆ ಹೆಚ್ಚೆಚ್ಚು ಗುರುತಿಸಿಕೊಳ್ಳುವುದು ಕಂಡು ಬಂದಿತ್ತು. ಕೆಲ ಬಿಜೆಪಿ ನಾಯಕರು ಹೊರಟ್ಟಿ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗಿ ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದರು. ಈ ಎಲ್ಲ ವಿದ್ಯಮಾನಗಳ ನಡುವೆಯೂ ಹೊರಟ್ಟಿ ತಮ್ಮ ನಿಲುವೇನು ಎಂಬ ಗುಟ್ಟು ಬಿಟ್ಟು ಕೊಡದೆ, ಚುನಾವಣೆ ಬರಲಿ ಹೇಳುತ್ತೇನೆ ಎಂದು ತೇಲಿಸಿದ್ದರು. ಇದೀಗ ಬಿಜೆಪಿ ಸೇರ್ಪಡೆಯನ್ನು ಖಚಿತ ಪಡಿಸಿದ್ದಾರೆ.
ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಮುಂದಾಗಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ, ಭವಿಷ್ಯದ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವರ್ಷದ ಜೂನ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿ ಅನಂತರದಲ್ಲಿ ಮುಂದಿನ ಚುನಾವಣೆಯಿಂದ ಹಿಂದೆ ಸರಿಯುವ ಚಿಂತನೆ ನಡೆಸಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತಿರುವ ಹೊರಟ್ಟಿ, ಮುಂದೆ ಪುತ್ರನನ್ನು ಚುನಾವಣೆಗೆ ನಿಲ್ಲಿಸಿದರೆ ಉತ್ತರದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವ ಬಲವಿಲ್ಲ, ಪುತ್ರನಿಗೆ ಬಲ ತುಂಬಲು ಪಕ್ಷವೊಂದರ ಅಗತ್ಯವಿದ್ದು, ತಾವು ಬಿಜೆಪಿಯಲ್ಲಿದ್ದರೆ ಮುಂದೆ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ತಮ್ಮ ಪುತ್ರನನ್ನು ಕಣಕ್ಕಿಳಿಸಬಹುದು ಎಂಬ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ
ಜೆಡಿಎಸ್‌ನಲ್ಲಿ ಸುದೀರ್ಘ ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ಬದಲಾದ ರಾಜಕೀಯ ಸ್ಥಿತಿ, ಅನಿವಾರ್ಯತೆ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಬೇಕಾಗಿದೆ. ಜೆಡಿಎಸ್ ಬಿಡುವ ಕುರಿತಾಗಿ ಈ ಹಿಂದೆ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೆ. ದುಡುಕಬೇಡಿ ಇರಿ ಎಂದಿದ್ದರು. ಇದೀಗ ಎದುರಾದ ಸನ್ನಿವೇಶ ವಿವರಿಸಿದಾಗ ಬಿಜೆಪಿ ಸೇರ್ಪಡೆ ಚಿಂತನೆಗೆ ಸಮ್ಮತಿಸಿದ್ದಾರೆ. ಒಳ್ಳೆಯದಾಗುತ್ತದೆ ಎನ್ನುವುದಾದರೆ ಹೋಗಿ, ನಿಮ್ಮಂತಹ ಹಿರಿಯರು ಸದನದಲ್ಲಿ ಇರುವುದುಅತ್ಯವಶ್ಯಕ ಎಂದಿದ್ದಾರೆ. ಬಿಜೆಪಿ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಯಾಗಿದ್ದು, ಎಲ್ಲರಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಸಭಾಪತಿ ಸ್ಥಾನದಲ್ಲಿದ್ದರಿಂದ ಪಕ್ಷ ರಾಜಕಾರಣ ಹೆಚ್ಚು ಮಾತು ಸರಿಯಲ್ಲ. ಚುನಾವಣೆ ಘೋಷಣೆ ನಂತರ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ. —ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ
1980ರಲ್ಲಿ ʼಅನಾಮಧೇಯʼ ಶಿಕ್ಷಕರ ಕಣ್ಮಣಿಯಾಗಿದ್ದರು!
1980ರಲ್ಲಿ ಪಕ್ಷೇತರಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿದ ಹೊರಟ್ಟಿ ಎಂಬ ರಾಜಕೀಯ ಅನಾಮಧೇಯ. ಅಂದು ಪಶ್ಚಿಮ ಶಿಕ್ಷಕರ ಕ್ಷೇತ್ರ ಅವಿಭಜಿತ ಧಾರವಾಡ ಜಿಲ್ಲೆ ಅಲ್ಲದೆ ಶಿವಮೊಗ್ಗ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿತ್ತು. 80ರ ದಶಕದ ಚುನಾವಣೆಯಲ್ಲಿ ರಾಜಕೀಯವಾಗಿ ಬಲಾಡ್ಯರೆನಿಸಿದ ಕೆ.ಮಲ್ಲಪ್ಪ, ಕೋಣಂದೂರು ಲಿಂಗಪ್ಪ ಅವರಂತಹ ಘಟಾನುಘಟಿಗಳಿಗೆ ಸೋಲುಣಿಸಿ ಶಿಕ್ಷಕರ ಪ್ರತಿನಿಧಿಯಾಗಿದ್ದರು. ಮೊದಲ ಚುನಾವಣೆಯಲ್ಲಿ ಶಿಕ್ಷಕರ ಹೋರಾಟದಿಂದ ಕೆಲವರಿಗೆ ಗೊತ್ತಿದ್ದರೂ, ನಾನೇ ಅಭ್ಯರ್ಥಿ ಎಂದು ಹೇಳಿದರೂ ನಂಬದಂತಹ ಅನಾಮಧೇಯರಾಗಿದ್ದರು. ಅಲ್ಲಿಂದ ಆರಂಭವಾದ ಅವರ ವಿಜಯಯಾತ್ರೆ 2016ರ ಚುನಾವಣೆವರೆಗೂ ಸತತ 7 ಬಾರಿ ವಿಜಯಮಾಲೆ ತಂದು ಕೊಟ್ಟಿದೆ.
ಉತ್ತರದಲ್ಲಿ ಜೆಡಿಎಸ್‌ನ ಮಹತ್ವದ ವಿಕೆಟ್ ಪತನ:
ಜೆಡಿಎಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಕಳೆದ ಹಲವು ವರ್ಷಗಳಿಂದ ಜೆಡಿಎಸ್ ನಾಯಕರಾಗಿ ಗುರುತಿಸಿಕೊಂಡವರು ಬಸವರಾಜ ಹೊರಟ್ಟಿ. ಉತ್ತರ ಕರ್ನಾಟಕದಲ್ಲಿ ಪ್ರಮುಖ ನಾಯಕರೆಲ್ಲರೂ ಕಾಂಗ್ರೆಸ್, ಬಿಜೆಪಿ ಸೇರಿದಾಗಲೂ ಪಕ್ಷ ಬಿಡದೆ ಮುಂದುವರಿದರು. ಸಚಿವ ಸ್ಥಾನ ತಪ್ಪಿದಾಗ, ಸಭಾಪತಿ ಸ್ಥಾನದಿಂದ ಕೆಳಗಿಳಿಸಿದಾಗಲೂ ಪಕ್ಷದಿಂದ ದೂರ ಉಳಿಯದೆ ಮುಂದುವರಿದಿದ್ದರು. ಇದೀಗ ಅವರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದು, ಆ ಮೂಲಕ ಉತ್ತರದ ಪ್ರಮುಖ ನಾಯಕರೊಬ್ಬರನ್ನು ಜೆಡಿಎಸ್ ಕಳೆದುಕೊಂಡಂತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.