ಜೆಡಿಎಸ್ ಬಲವರ್ಧನೆಗೆ ವರಿಷ್ಠರಿಂದ ಹೊಸ ಕಾರ್ಯಪಡೆ: ಹುಣಸಿಮರದ
Team Udayavani, Jan 22, 2021, 2:27 PM IST
ಹುಬ್ಬಳ್ಳಿ: ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ 2024ರಲ್ಲಿ ಅಧಿಕಾರಕ್ಕೆ ತರಲು ಈಗಿನಿಂದಲೇ ತಳಮಟ್ಟದಿಂದ ಪಕ್ಷ ಸಂಘಟನೆಗೆ ಪಕ್ಷದ ವರಿಷ್ಠರು ಮುಂದಾಗಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಇದಕ್ಕಾಗಿಯೇ ಹೊಸ ಕಾರ್ಯಪಡೆ ರಚನೆಗೊಳ್ಳಲಿದೆ ಎಂದು ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ತಾಪಂ, ಜಿಪಂ, ನಗರಸಭೆ, ಪಾಲಿಕೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಬಲವರ್ಧನೆಗೊಳಿಸಿ ಮತ್ತಷ್ಟು ಬಲಿಷ್ಠಗೊಳಿಸಲಾಗುವುದು. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆದಿದೆ. ಆ ನಿಟ್ಟಿನಲ್ಲಿ ದೇವೇಗೌಡರು ರಾಜ್ಯದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖೀಲಕುಮಾರಸ್ವಾಮಿ ಹೊರತುಪಡಿಸಿ ಎಲ್ಲ ಘಟಕ, ವಿಭಾಗಗಳನ್ನು ವಿಸರ್ಜನೆ ಮಾಡಿದ್ದಾರೆ. ಶೀಘ್ರವೇ ಹೊಸ ಘಟಕಗಳಿಗೆ ಅರ್ಹ ಪದಾ ಧಿಕಾರಿಗಳನ್ನು ನೇಮಕ ಮಾಡಲಿದ್ದಾರೆ ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ ಹಾಗೂ ಬಾಹ್ಯ ಬೆಂಬಲ ನೀಡಬೇಡಿ. ಆ ಮೂಲಕ ಪಕ್ಷ ಬಲಿ ಕೊಡಬೇಡಿ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇವೆ. ಇವೆರಡು ಪಕ್ಷಗಳು ಜೆಡಿಎಸ್ ಮುಗಿಸಲು ಹುನ್ನಾರ ನಡೆಸಿವೆ. ಹೀಗಾಗಿ ಅವೆರಡು ಪಕ್ಷಗಳ ವಿರುದ್ಧ ಜೆಡಿಎಸ್‌ನಿಂದ ಹೋರಾಟ ಮಾಡಲಾಗುವುದು. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬುದರಲ್ಲಿ ಹುರುಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸಿದ್ಧಗಂಗೆಯಲ್ಲಿ ದೇವರ ಸ್ಮರಣೆ
ಅವಳಿನಗರದಲ್ಲಿ ಪಕ್ಷದ ಕೆಲ ಮುಖಂಡರು ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಹೋಗಿರಬಹುದು. ಅದರಿಂದ ಪಕ್ಷಕ್ಕೇನು ನಷ್ಟವಾಗಲ್ಲ. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಕೆಲವರು ಮುಂಬರುವ ದಿನಗಳಲ್ಲಿ ಜೆಡಿಎಸ್‌ಗೆ ಬರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಜಾನನ ಅಣವೇಕರ, ಶಂಕರ ಪವಾರ, ಬಾಳು ದಾನಿ, ಗುರಯ್ಯ ವಿರಕ್ತಮಠ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.