ನರಗುಂದದಲ್ಲಿ ವಿಷಮುಕ್ತ ಕೃಷಿ ಪ್ರಯೋಗ
ಪಂಚಗ್ರಹ ಗುಡ್ಡದ ಹಿರೇಮಠದ ಹೊಲದಲ್ಲಿ 33-33-33 ಪ್ಲಸ್ 1 ಮಾದರಿ ಕೃಷಿ ಕಾರ್ಯ
Team Udayavani, Apr 5, 2022, 10:01 AM IST
ಹುಬ್ಬಳ್ಳಿ: 33-33-33 ಪ್ಲಸ್ 1 ಇದು ಯಾವುದೋ ಲೆಕ್ಕದ ಸೂತ್ರವಲ್ಲ. ರೈತರಿಗೆ ಪ್ರಯೋಜನಕಾರಿ ಆಗಬಲ್ಲ ಕೃಷಿ ಕಾಯಕದ ಸೂತ್ರವಿದು. ರೈತ ಬಂಡಾಯದ ನೆಲವೆಂದೇ ನಾಡಿಗೆ ಪರಿಚಿತವಾದ, ಕೆಚ್ಚೆದೆಯ ಮಣ್ಣಿನ ಗುಣ ಹೊಂದಿದ ನರಗುಂದದ ಗುಡ್ಡಕ್ಕೆ ಹೊಂದಿಕೊಂಡಿರುವ ಪಂಚಗ್ರಹ ಗುಡ್ಡದ ಹಿರೇಮಠದ ಹೊಲದಲ್ಲಿ ಇಂತಹ ಪ್ರಯೋಗವೊಂದು ಸದ್ದಿಲ್ಲದೇ ನಡೆದಿದೆ.
ಇಲ್ಲಿ ಕೃಷಿ ಕಾಯಕಕ್ಕೆ ಇಂಬು ಕೊಡುವ, ದೇಸಿ ಗೋ ಸಾಕಣೆಗೆ ಪ್ರೇರಣೆ ನೀಡುವ ಕಾರ್ಯ ನಡೆಯುತ್ತಿದೆ. ಗೋ ಆಧಾರಿತ-ಸಾವಯವ ಕೃಷಿ, ದೇಸಿ ಗೋ ಸಾಕಣೆ, ಗೋ ಉತ್ಪನ್ನಗಳ ತಯಾರಿ ಹೀಗೆ ವಿವಿಧ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವತಃ ಶ್ರೀಮಠದ ಸ್ವಾಮೀಜಿಯೇ ಕೃಷಿ ಕಾಯಕ, ಗೋ ಸಾಕಣೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಗೌರಿ, ತುಂಗಾ, ಗಂಗಾ, ರಾಧಾ, ಪರಮೇಶ್ವರಿ ಹೀಗೆ ಹೆಸರು ಕೂಗಿದರೆ ಸಾಕು ಬಂದು ಮುಂದೆ ನಿಲ್ಲುವ ಪುಣ್ಯಕೋಟಿಯ ಸೊಬಗು ಎಂಥಹವರನ್ನು ಪುಳಕಿತಗೊಳಿಸುತ್ತದೆ.
ಕೆಲವೇ ವರ್ಷಗಳ ಹಿಂದೆ ಅಕ್ಷರಶಃ ಮುಳ್ಳು-ಕಂಟಿ ಬೆಳೆದು ನಿಂತು ಪಾಳು ಬಿದ್ದ ಜಾಗದಂತಿದ್ದ ಹೊಲದಲ್ಲೀಗ ವಿವಿಧ ಹಣ್ಣುಗಳ ಗಿಡಗಳು ಸೇರಿದಂತೆ ವಿವಿಧ ಮರಗಳು ನಳನಳಿಸುತ್ತಿವೆ, ಜೇನಿನ ಸವಿ ತನ್ನದೇ ಕಂಪು ಬೀರುತ್ತಿದೆ. ಕೆಲ ವರ್ಷಗಳ ಹಿಂದೆ ನೋಡಿದ ಜಾಗ ಇದೆಯೇ ಎಂದು ಅನುಮಾನ ಮೂಡುವ ರೀತಿಯಲ್ಲಿ ಕೃಷಿ ಕಾಯಕ-ಪರಿಶ್ರಮ ಫಲ ಎದ್ದು ಕಾಣತೊಡಗಿದೆ. ಭವಿಷ್ಯದ ಕೃಷಿ ಪ್ರೇರಣೆ-ಸಾಧನೆ ಚಿಗುರೊಡೆದಿದೆ.
ಏನಿದು 99 ಪ್ಲಸ್ 1: ನರಗುಂದದ ಪಂಚಗ್ರಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆ ಹಾಗೂ ಪ್ರಭಾವದಿಂದ ವಿಷಮುಕ್ತ ಕೃಷಿ, ದೇಸಿ ಗೋ ಸಾಕಣೆ ಕಾಯಕಕ್ಕೆ ಮುಂದಡಿ ಇರಿಸಿದ್ದರು. ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾಗ ಸವಾಲು-ಸಮಸ್ಯೆಗಳೇನು ಕಡಿಮೆ ಇರಲಿಲ್ಲ. ಇವೆಲ್ಲವನ್ನು ಮೆಟ್ಟಿ ನಿಂತು ಸಾಧನೆಗೆ ಕಲ್ಲು-ಮುಳ್ಳಿನ ಹಾದಿ ಆರಂಭಿಸಿದ್ದು, ಒಂದಿಷ್ಟು ಯಶಸ್ಸು ದೊರೆಯತೊಡಗಿದೆ.
ಕೃಷಿ ಕಾಯಕದಿಂದ ಶ್ರೀಮಠಕ್ಕೆ ಆದಾಯವೂ ಬರಬೇಕು, ರೈತರಿಗೆ ಇದೊಂದು ಪ್ರಯೋಗ ಶಾಲೆಯೂ ಆಗಬೇಕೆಂಬ ಆಶಯದೊಂದಿಗೆ ಸ್ವಾಮೀಜಿ ಮುಂದಾಗಿದ್ದು, ತೋಟಗಾರಿಕೆ ಹಾಗೂ ಅರಣ್ಯ ಕೃಷಿಗೆ ಒತ್ತು ನೀಡಿದ್ದಾರೆ. ರೈತರಿಗೆ ಪ್ರೇರಣೆ ನೀಡಲು ಪ್ರಯೋಗಾತ್ಮಕವಾಗಿ ಕೈಗೊಂಡ ಯತ್ನವೇ 33, 33, 33 ಪ್ಲಸ್ 1 ಪ್ರಯೋಗ. ಒಂದು ಎಕರೆ ಹೊಲದಲ್ಲಿ ಈ ಪ್ರಯೋಗ ಕೈಗೊಳ್ಳಲಾಗಿದೆ. ಶೇ.33ಆಹಾರ ಬೆಳೆ, ಶೇ.33ತೋಟಗಾರಿಕೆ ಬೆಳೆ, ಶೇ.33ಅರಣ್ಯ ಕೃಷಿ ಹಾಗೂ ಶೇ.1ಮೇವು ಬಿತ್ತನೆ ಕಾರ್ಯ ಮಾಡಲಾಗಿದೆ.
ಒಂದು ಎಕರೆಯಲ್ಲಿ ಸುಮಾರು 1,000 ಪೇರು ಹಣ್ಣಿನ ಗಿಡ, 250 ಮಹಾಗನಿ ಗಿಡಗಳು, 15 ತೆಂಗು ಗಿಡಗಳಿವೆ. ಇದರ ನಡುವೆ ಶೇಂಗಾ, ಕಡಲೆ ಬಿತ್ತಲಾಗಿತ್ತು. ಶೇ.33 ಮೂರು ಹಂತದಲ್ಲಿ ಆಹಾರ, ತೋಟಗಾರಿಕೆ ಹಾಗೂ ಅರಣ್ಯ ಕೃಷಿ ಇದ್ದರೆ ಉಳಿದ ಶೇ.1 ಅಂದರೆ ಹೊದಲ ಬದುವಿನಲ್ಲಿ ದೇಸಿ ಗೋವುಗಳ ಸಾಕಣೆಗೆ ಬೇಕಾಗುವ ಮೇವು ಬೆಳೆಯಲಾಗುತ್ತಿದೆ.
ಒಂದು ಎಕರೆಯಲ್ಲಿ ಸುಮಾರು 1,000 ಪೇರು ಗಿಡಗಳಿಂದ ಸುಮಾರು 60 ಸಾವಿರ ರೂ.ಮೌಲ್ಯದ ಹಣ್ಣುಗಳು ಬಂದಿವೆ. ನಂತರದ ವರ್ಷದಲ್ಲಿ ಹಣ್ಣುಗಳು ಉತ್ತಮ ಫಲ ನೀಡಿದವಾದರೂ, ಕೋವಿಡ್ ಕಾರಣದಿಂದ ಉತ್ತಮ ಮಾರುಕಟ್ಟೆ ದೊರೆಯಲಿಲ್ಲ. ಇದೀಗ ಮಹಾಗನಿ ಗಿಡಗಳು ಬೆಳೆದು ನಿಂತಿವೆ. ಶೇಂಗಾ, ಕಡಲೆ ಫಸಲು ತೆಗೆಯಲಾಗಿದೆ. ಇದರಿಂದ ಗೋವುಗಳಿಗೆ ಮೇವು ದೊರೆತಿದೆ. ಹೊಲದ ಬದುಗಳಲ್ಲಿ ಮೇವು ಬೆಳೆದು ನಿಂತಿದೆ.
ಪ್ರಯೋಗಾತ್ಮಕ ಒಂದು ಎಕರೆಗೆ ಜಮೀನಿಗೆ ಹೊಂದಿಕೊಂಡೇ ಸುಮಾರು ಒಂದು ಎಕರೆ ಜಮೀನಿನಲ್ಲಿ ಸುಮಾರು 25 ಅಡಿ ಆಳದ ಕೃಷಿ ಹೊಂಡ ಮಾಡಲಾಗಿದೆ. ಶ್ರೀಮಠದ ಜಮೀನಿನಲ್ಲಿ ಹಾಕಲಾದ ಕೊಳವೆ ಬಾವಿಗಳಲ್ಲಿ ಸಿಹಿಯಾದ ನೀರು ಕೆರೆ ತುಂಬಿಸುವ ಕೆಲಸ ಮಾಡುತ್ತಿವೆ. ಮಲಪ್ರಭಾ ಕಾಲುವೆ ನೀರು ಸಹ ಹೊಲಕ್ಕೆ ದೊರೆಯುತ್ತಿದೆ.
ಒಂದು ಎಕರೆ ಪ್ರಯೋಗಾತ್ಮಕ ಹೊಲಕ್ಕೆ ಹೊಂದಿಕೊಂಡಂತೆ ಮತ್ತೂಂದು ಭಾಗದಲ್ಲಿ ಸುಮಾರು 7 ಎಕರೆ ಹೊಲದಲ್ಲಿ ತೋಟಗಾರಿಕೆ, ಅರಣ್ಯ ಕೃಷಿ, ಜೇನು ಸಾಕಣೆ ಮಾಡಲಾಗಿದೆ. ಪೇರು, ಶ್ರೀಗಂಧ, ರಕ್ತಚಂದನ, ಮಹಾಗನಿ, ಸಾಗವಾನಿ, ಬಾಳೆ, ಬೇವು, ಕರಿಬೇವು, ನುಗ್ಗೆ, ತೆಂಗು, ಮಾವು ಇನ್ನಿತರೆ ಗಿಡಗಳನ್ನು ಹಚ್ಚಲಾಗಿದೆ. ಹೆಜ್ಜೇನು ಸೇರಿದಂತೆ ವಿವಿಧ ರೀತಿ ಜೇನು ಸಾಕಣೆ ಮಾಡಲಾಗಿದೆ.
ಶ್ರೀಮಠದಿಂದ ವಿಷಮುಕ್ತ ಕೃಷಿಗೆ ಆದ್ಯತೆ ನೀಡಲಾಗಿದೆ. ಗೋಕೃಪಾಮೃತ, ದಶಪರ್ಣಿ, ಅಗ್ನಿಅಸ್ತ್ರ, ಬ್ರಹಾಸ್ತ್ರ, ಸಹಜವಾಗಿ ಮೃತಪಟ್ಟ ಗೋವು ಬಳಸಿ ತಯಾರಿಸಿದ ಪೋಷಕಾಂಶಗಳೊಂದಿಗೆ ಯಾವುದೇ ರಸಗೊಬ್ಬರ, ಕ್ರಿಮಿನಾಶಕ ಬಳಕೆ ಇಲ್ಲದೆಯೇ ಕೃಷಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಮೀನಿನಲ್ಲಿ ತೋಟಗಾರಿಕೆ, ಅರಣ್ಯ ಕೃಷಿ ಕೈಗೊಳ್ಳಲು ಶ್ರೀಗಳು ಯೋಜಿಸಿದ್ದು, ಮುಂದಿನ ದಿನಗಳಲ್ಲಿ ರೈತರು ಆಗಮಿಸಿ ಇಲ್ಲಿನ ಕೃಷಿ ಪ್ರಯೋಗ ನೋಡುವಂತಾಗಬೇಕು. ಇದು ರೈತರಿಗೆ ಪ್ರೇರಣೆ ನೀಡುವ ಮೂಲಕ ಅವರನ್ನೂ ವಿಷಮುಕ್ತ ಕೃಷಿಗಿಳಿಸುವಂತೆ ಮಾಡುವುದಾಗಬೇಕು ಎಂಬುದಾಗಿದೆ.
ಗೌರಿ, ತುಂಗಾ, ಗಂಗಾ ಎಂಬ ಪುಣ್ಯಕೋಟಿ: ನರಗುಂದದ ಪಂಚಗ್ರಹ ಗುಡ್ಡದ ಹಿರೇಮಠದ ಜಮೀನಿನಲ್ಲಿ ಗೋ ಶಾಲೆ ಆರಂಭಿಸಲಾಗಿದ್ದು, ಸುಮಾರು 65ಕ್ಕೂ ಹೆಚ್ಚು ದೇಸಿ ಗೋವುಗಳ ಸೊಬಗು ಅಲ್ಲಿ ನಿತ್ಯ ನಿರಂತರ. ಗಿರ್, ಹಳ್ಳಿಕಾರ ವಿವಿಧ ದೇಸಿ ತಳಿ ಹಸುಗಳು, ಹೋರಿಗಳು, ಸಣ್ಣ ಕರುಗಳು ಬೆಳಿಗ್ಗೆ ಹಿಂಡು ಹಿಂಡಾಗಿ ಹತ್ತಿರದ ಗುಡ್ಡಕ್ಕೆ ಹೋಗಿ ಮೇಯ್ದು, ಸಂಜೆ ವೇಳೆಗೆ ಹಿಂಡಾಗಿ ಗೋಶಾಲೆಗೆ ಹಿಂದಿರುಗುವ ದೃಶ್ಯ ಮನಮೋಹಕ. ಪ್ರತಿಯೊಂದು ಹಸು, ಕರು, ಹೋರಿಗೂ ಒಂದೊಂದು ಹೆಸರು ನೀಡಲಾಗಿದೆ. ಗೌರಿ, ತುಂಗಾ, ಗಂಗಾ, ಪರಮೇಶ್ವರಿ, ವಿಶಾಲಾ, ರಾಧಾ ಹೀಗೆ ವಿವಿಧ ಹೆಸರು ಇರಿಸಲಾಗಿದೆ. ನವೆಂಬರ್ 1ರಂದು ಜನಿಸಿದ ಕರುವಿಗೆ ಭುವನೇಶ್ವರಿ ಎಂದು ಹೆಸರಿಸಲಾಗಿದೆ. ಅದೇ ರೀತಿ ಹೋರಿಗಳಿಗೆ ಮಹಾರಾಜ, ಕೃಷ್ಣ, ಬಸವರಾಜು ಎಂದು ಹೆಸರಿಸಲಾಗಿದೆ. ಇಲ್ಲಿನ ಹಸುವಿನ ಹಾಲಿನ ಮೇಲೆ ಮೊದಲ ಹಕ್ಕು ಕರುಗಳದ್ದಾಗಿದೆ. ನಂತರ ಹಾಲು ಕರೆಯಲಾಗುತ್ತದೆ. ಬಂದ ಹಾಲಿನಿಂದ ತುಪ್ಪ ತಯಾರಿಸಲಾಗುತ್ತದೆ. ಗೋ ಮೂತ್ರದಿಂದ ಗೋ ಅರ್ಕ, ಸಗಣಿಯಿಂದ ಭಸ್ಮ, ಸಗಣಿ ಬಳಸಿ ಗಣೇಶಮೂರ್ತಿ ಇನ್ನಿತರೆ ಮೂರ್ತಿಗಳ ತಯಾರಿಸುವ ಯೋಜನೆ ಹೊಂದಲಾಗಿದೆ. ಶಾಲೆಯ ನಿರ್ವಹಣೆ, ಕೃಷಿ ಕಾಯದಲ್ಲಿ ನಿವೃತ್ತ ಸೈನಿಕ ಜಗದೀಶಯ್ಯ ಹಿರೇಮಠ ಹಾಗೂ ದೇವೇಂದ್ರಯ್ಯ ಹಿರೇಮಠ, ಮುತ್ತು ಗಾಣಿಗೇರ ಸೇವೆ ಅನನ್ಯ.
“ಹೊಲದ ತುಂಬಾ ವಡ್ಡು-ಕೈ ತುಂಬಾ ದುಡ್ಡು ‘ ಎಂಬುದು ಘನಮಠದ ನಾಗಭೂಷಣ ಶಿವಯೋಗಿಗಳ ನುಡಿ. ಅವರ ಕೃಷಿ ಜ್ಞಾನ ಪ್ರದೀಪಿಕೆ ಅಧ್ಯಯನ ಮಾಡಿ ಅದರಂತೆ ಹೊಲದಲ್ಲಿ ವಡ್ಡು ಹಾಕಿಸಿದ್ದೇನೆ. ವಿಷಮುಕ್ತ ಕೃಷಿ, ದೇಸಿ ಗೋ ಸಾಕಣೆಯಲ್ಲಿ ಮಹತ್ವದ ಕ್ರಾಂತಿ ಮಾಡಿರುವ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆ-ಮಾರ್ಗದರ್ಶನದಂತೆ ವಿಷಮುಕ್ತ ಕೃಷಿ, ದೇಸಿ ಗೋ ಸಾಕಣೆ ಕಾಯಕದಲ್ಲಿ ತೊಡಗಿದ್ದೇನೆ. ಇನ್ನಷ್ಟು ಕೃಷಿ ಪ್ರಯೋಗ, ದೇಸಿ ಗೋವುಗಳ ಸಂಖ್ಯೆ ಹೆಚ್ಚಳ ಹಾಗೂ ಗೋ ಆಧಾರಿತ ಉತ್ಪನ್ನಗಳ ತಯಾರಿಗೆ ಯೋಜಿಸಲಾಗಿದೆ. ಭಕ್ತರು ಬಂದು ನಮ್ಮ ಪ್ರಯೋಗ ನೋಡಬೇಕು. ನೋಡಿ ಅದನ್ನು ಅನುಸರಿಸಿದರೆ ಅದಕ್ಕಿಂತ ಮಿಗಿಲಾದ ಖುಷಿ ಮತ್ತೇನಿದೆ ಹೇಳಿ. –ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಪಂಚಗ್ರಹ ಗುಡ್ಡದ ಹಿರೇಮಠ
–ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.