ಆಟೋ ಟಿಪ್ಪರ್‌ಗಳ ದುರಸ್ತಿ ಒಪ್ಪಂದಕ್ಕೆ ಮುಂದಾದ ಪಾಲಿಕೆ
ಒಂದೇ ದಿನಕ್ಕೆ ರಿಪೇರಿ ಹಾಗೂ ಸಾಮಾನ್ಯ ನಿರ್ವಹಣೆ ಕಾರ್ಯ ಪೂರ್ಣಗೊಳ್ಳಬೇಕು.
Team Udayavani, Nov 11, 2021, 5:22 PM IST
ಹುಬ್ಬಳ್ಳಿ: ಆಟೋ ಟಿಪ್ಪರ್‌ಗಳ ರಿಪೇರಿ, ಸಾಮಾನ್ಯ ನಿರ್ವಹಣೆ ಕಾರ್ಯದಿಂದ ಸಮರ್ಪಕ ಕಸ ವಿಲೇವಾರಿ ಪಾಲಿಕೆಗೆ ಸವಾಲಾಗಿದೆ. ಟಿಪ್ಪರ್‌ಗಳ ರಿಪೇರಿಗಾಗಿ ಕೆಲವೊಮ್ಮೆ ಮೂರ್‍ನಾಲ್ಕು ದಿನಗಳು ಕಾಯುವ ಪರಿಸ್ಥಿತಿ ಎದುರಾಗುತ್ತಿದೆ. ವಾಯವ್ಯ ಸಾರಿಗೆ ಸಂಸ್ಥೆ ವರ್ಕ್‌ಶಾಪ್‌ಗ್ಳಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಮುಂದಾಗಿದೆ.
ನಾಲ್ಕು ವರ್ಷಗಳ ಹಿಂದೆ 67 ವಾರ್ಡ್‌ಗಳ ಕಸ ವಿಲೇವಾರಿಗಾಗಿ ಆಟೋ ಟಿಪ್ಪರ್‌ಗಳನ್ನು ಪಾಲಿಕೆ ಖರೀದಿಸಿತ್ತು. ಆದರೆ ಇದೀಗ ವಾರ್ಡುಗಳ ಸಂಖ್ಯೆ 82ಕ್ಕೆ ಹೆಚ್ಚಾಗಿದ್ದು, ಪ್ರತಿ ವಾರ್ಡ್‌ಗೂ ಇಂತಿಷ್ಟು ಆಟೋ ಟಿಪ್ಪರ್‌ಗಳನ್ನು ಮೀಸಲಿಡುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಆಟೋ ಟಿಪ್ಪರ್‌ಗಳ ದುರಸ್ತಿ ನಿರ್ವಹಣೆಗೆ ಒಂದೆರಡು ದಿನ ಗ್ಯಾರೇಜ್‌ಗಳಲ್ಲಿ ಬಿಟ್ಟರೆ ಕಸ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ.
ಒಂದೇ ದಿನಕ್ಕೆ ರಿಪೇರಿ ಹಾಗೂ ಸಾಮಾನ್ಯ ನಿರ್ವಹಣೆ ಕಾರ್ಯ ಪೂರ್ಣಗೊಳ್ಳಬೇಕು. ಹೀಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂಲಕ ಇದು ಸಾಧ್ಯ ಎನ್ನುವ ಕಾರಣಕ್ಕೆ ಸಾರಿಗೆ ಸಂಸ್ಥೆಗೆ ಪಾಲಿಕೆ ಪ್ರಸ್ತಾವನೆ ಕಳುಹಿಸಿದೆ. ಈಗಾಗಲೇ ಮಹಾನಗರದ ಕಸ ವಿಲೇವಾರಿಗಾಗಿ ಪಾಲಿಕೆ 191 ಆಟೋ ರಿಪ್ಪರ್, 7 ಲಾರಿ, 5 ಕಂಟೇನರ್ ಗಳನ್ನು ಬಳಸುತ್ತಿದೆ. ಆಟೋ ಟಿಪ್ಪರ್‌ಗಳು ಕಳೆದ ನಾಲ್ಕು ವರ್ಷಗಳ ಹಿಂದೆ ಖರೀದಿಸಿರುವ ಕಾರಣಕ್ಕೆ ನಿತ್ಯ 4-5 ವಾಹನಗಳು ದುರಸ್ತಿಗೆ ಬರುತ್ತಿವೆ. ಅಲ್ಲದೆ ಸಾಮಾನ್ಯ ನಿರ್ವಹಣೆಗೆ ಒಂದೆರಡು ವಾಹನಗಳನ್ನು ಗ್ಯಾರೇಜ್‌ಗಳಿಗೆ ಬಿಡಬೇಕಾಗುತ್ತಿದೆ. ಅಲ್ಲದೆ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ದಿನಗಟ್ಟಲೇ ಕಾಯಬೇಕಾಗುತ್ತದೆ.
ಇನ್ನು ಬಿಡಿ ಭಾಗಗಳು ಸಕಾಲಕ್ಕೆ ದೊರೆಯದಿದ್ದರೆ ನಾಲ್ಕೈದು ದಿನಗಳು ವಾಹನ ಗ್ಯಾರೇಜ್‌ನಲ್ಲಿ ಬಿಡಬೇಕಾದ ಪ್ರಸಂಗವಿದೆ. ಈ ಟಿಪ್ಪರ್‌ಗಳ ಜತೆಗೆ ಇತರೆ ವಾಹನಗಳು ಬರುವುದರಿಂದ ಸಕಾಲದಲ್ಲಿ ಸಾಧ್ಯವಾಗುವುದಿಲ್ಲ. ರಿಪೇರಿ ಅವಧಿಯನ್ನು ಕಡಿಮೆ ಹಾಗೂ ಪರಿಣಾಮಕಾರಿ ನಿರ್ವಹಣೆಗಾಗಿ ಪಾಲಿಕೆ ಪ್ರತ್ಯೇಕವಾಗಿ ತಾಂತ್ರಿಕ ವಿಭಾಗ ಆರಂಭಿಸುವ ಚಿಂತನೆ ನಡೆಸಿತ್ತು. ಆದರೆ ಇದು ಸುಲಭದ ಕೆಲಸವಲ್ಲ ಎನ್ನುವ ಕಾರಣಕ್ಕೆ ವಾಯವ್ಯ ಸಾರಿಗೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
ಈಗಾಗಲೇ ಸಾರಿಗೆ ಸಂಸ್ಥೆಯಲ್ಲಿ ಸುಸಜ್ಜಿತ ವರ್ಕ್ ಶಾಪ್ ಗಳು, ತಾಂತ್ರಿಕ ಸಿಬ್ಬಂದಿ, ಅಧಿಕಾರಿಗಳ ತಂಡವಿದೆ. ಅಲ್ಲದೇ ಸರಕಾರಿ ಸಂಸ್ಥೆಯಾಗಿರುವುದರಿಂದ ವಿಶ್ವಾಸಾರ್ಹ ಹಾಗೂ ಸರಕಾರಿ ಸಂಸ್ಥೆಗೆ ಒಂದಿಷ್ಟು ಆದಾಯ ಕಲ್ಪಿಸಿದಂತಾಗುತ್ತದೆ ಎನ್ನುವ ಚಿಂತನೆ ಪಾಲಿಕೆ ಅಧಿಕಾರಿಗಳದ್ದಾಗಿದೆ.
ಅಧಿಕಾರಿಗಳಿಂದ ಪರಿಶೀಲನೆ: ಪಾಲಿಕೆಯಿಂದ ಪ್ರಸ್ತಾವನೆಗೆ ಪೂರಕವಾಗಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಆಟೋ ಟಿಪ್ಪರ್, ಲಾರಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವಾಹನಗಳನ್ನು ತಮ್ಮ ವರ್ಕ್‌ಶಾಪ್ ನಲ್ಲಿ ದುರಸ್ತಿ ಮಾಡಬಹುದಾ? ವಾಹನಗಳ ಸ್ಥಿತಿಗತಿ, ಬಿಡಿ ಭಾಗಗಳು, ಇರುವ ಸಿಬ್ಬಂದಿಯಿಂದ ಈ ಕಾರ್ಯ ಮಾಡಬಹುದಾ ಹೀಗಾಗಿ ಪ್ರತಿಯೊಂದು ಆಯಾಮದಲ್ಲೂ ಪರಿಶೀಲನೆ ಮಾಡಿದ್ದಾರೆ.
ಹೈಡ್ರಾಲಿಕ್ ವ್ಯವಸ್ಥೆಯೊಂದನ್ನು ಹೊರತುಪಡಿಸಿದರೆ ಉಳಿದಂತೆ ಹೊಸ ಅಥವಾ ಹೆಚ್ಚುವರಿ ಉಪಕರಣ ಅಗತ್ಯವಿಲ್ಲ. ಇರುವ ವ್ಯವಸ್ಥೆಯನ್ನು ಒಂದಿಷ್ಟು ಮಾರ್ಪಾಡು ಮಾಡಿಕೊಂಡು ನಿರ್ವಹಿಸಬಹುದಾಗಿದೆ ಎನ್ನುವ ಅಭಿಪ್ರಾಯ ಸಂಸ್ಥೆಯ ಅಧಿಕಾರಿಗಳಲ್ಲಿದೆ. ಸಾರಿಗೆ ಸಂಸ್ಥೆಗೆ ಆದಾಯ: ಈಗಾಗಲೇ ಸಾರಿಗೆ ಸಂಸ್ಥೆ ಪ್ರಯಾಣಿಕ ಸೇವೆಯೊಂದಿಗೆ ಇತರೆ ಆದಾಯದ ಮೂಲಗಳತ್ತ ಹೆಚ್ಚು ಗಮನ ಹರಿಸಿರುವಾಗ ಪಾಲಿಕೆ ವಾಹನಗಳ ನಿರ್ವಹಣೆ ಮತ್ತೂಂದು
ಆದಾಯದ ಮೂಲವಾಗಲಿದೆ. ತಮ್ಮ ಬಸ್‌ಗಳ ದುರಸ್ತಿ ಜತೆಗೆ ಈಗಾಗಲೇ ಇರುವ ವರ್ಕ್‌ಶಾಪ್ ಗಳು, ತಾಂತ್ರಿಕ ಸಿಬ್ಬಂದಿ ಬಳಸಿಕೊಂಡು ಈ ಕಾರ್ಯ ನಿರ್ವಹಿಸಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಅಗತ್ಯವಿಲ್ಲ. ಈ ವಾಹನಗಳ ನಿರ್ವಹಣೆ, ರಿಪೇರಿಗಾಗಿ ಪಾಲಿಕೆ ಪ್ರತಿ ವರ್ಷ ಕನಿಷ್ಠ 45-50 ಲಕ್ಷ ರೂ. ಖರ್ಚು ಮಾಡುತ್ತಿದೆ. ಇರುವ ವ್ಯವಸ್ಥೆಯಲ್ಲಿ ಈ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿದರೆ ಪರ್ಯಾಯ ಆದಾಯ ಮೂಲವಾಗಲಿದೆ. ಒಂದು ವೇಳೆ ಪ್ರಸ್ತಾವನೆಯಂತೆ
ಒಪ್ಪಂದವಾದರೆ ಸಕಾಲದಲ್ಲಿ ಟಿಪ್ಪರ್ ರಿಪೇರಿ ಹಾಗೂ ನಿರ್ವಹಣೆ ಕಾರ್ಯ ಆಗಲಿದೆ.
ಸವಾಲಿನ ಕಾರ್ಯ
ಲಾರಿಗಳ ದುರಸ್ತಿಗೆ ಅಷ್ಟೊಂದು ಸಮಸ್ಯೆಯಾಗಲ್ಲ. ಆದರೆ ಬಹು ಸಂಖ್ಯೆಯ ಆಟೋ ಟಿಪ್ಪರ್‌ಗಳ ನಿರ್ವಹಣೆಗೆ ಕನಿಷ್ಠ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಿಂತ ಮೇಲಾಗಿ ಬಿಡಿ ಭಾಗಗಳ ಖರೀದಿ, ಸಂಗ್ರಹ ವ್ಯವಸ್ಥೆ ಹೊಂದಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಕೇಂದ್ರೀಕೃತ ಖರೀದಿ ವ್ಯವಸ್ಥೆ ಇರುವುದರಿಂದ ಪ್ರತ್ಯೇಕ ಬಿಡಿ ಭಾಗ ಖರೀದಿ ಹೇಗೆ ಎನ್ನುವ ಅಭಿಪ್ರಾಯ ಅಧಿಕಾರಿಗಳಲ್ಲಿದೆ. ಆಟೋ ಟಿಪ್ಪರ್‌ಗಳ ಸ್ವತ್ಛತೆ ಕೊರತೆ ಕಾರಣದಿಂದ ರಿಪೇರಿಗೆ ಕಾರ್ಮಿಕರು ಒಪ್ಪುತ್ತಾರೆಯೇ ಎನ್ನುವ ಆತಂಕವಿದೆ. ಗಂಟೆಗಟ್ಟಲೇ ಗಬ್ಬು ವಾಸನೆಯಲ್ಲಿ ದುರಸ್ತಿ ಸಾಧ್ಯವೇ ಎನ್ನುವ ಭಾವನೆಯೂ ಇದೆ. ಅಲ್ಲದೆ ಸಂಸ್ಥೆಯಲ್ಲಿ ಶೇ.25-30 ತಾಂತ್ರಿಕ ಸಿಬ್ಬಂದಿ ಕೊರತೆಯಿದೆ. ನಿತ್ಯ ಬಸ್‌ಗಳ ನಿರ್ವಹಣೆ ಜತೆಗೆ ಈ ಕಾರ್ಯಕ್ಕೆ ಒಂದಿಷ್ಟು ಸಿಬ್ಬಂದಿ ಬೇಕಾಗುತ್ತದೆ. ಇನ್ನು ಬಿಡಿ ಭಾಗ ಖರೀದಿಗೆ ಪ್ರತ್ಯೇಕ ಟೆಂಡರ್, ದಾಸ್ತಾನು ಸೇರಿದಂತೆ ಪ್ರತ್ಯೇಕ ವಿಭಾಗವನ್ನೇ ನಿರ್ವಹಣೆ ಮಾಡಬೇಕಾಗುತ್ತದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವ ಪ್ರಶ್ನೆಯಿದೆ.
ಮಹಾನಗರ ಪಾಲಿಕೆಯಿಂದ ಪ್ರಸ್ತಾವನೆ ಬಂದಿತ್ತು. ಅವರ ವಾಹನಗಳ ಪರಿಶೀಲನೆ ಮಾಡುವಂತೆ ತಾಂತ್ರಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಮೂಲವಾಗಲಿದೆ. ಪಾಲಿಕೆಗೂ ಅನುಕೂಲವಾಗಲಿದೆ. ವಾರದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಗುರುದತ್ತ ಹೆಗಡೆ,
ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ
ಕೆಲವೊಮ್ಮೆ ರಿಪೇರಿಗಾಗಿ ಎರಡ್ಮೂರು ದಿನ ಬೇಕಾಗುತ್ತಿದೆ. ಇದರಿಂದ ಆಯಾ ವಾರ್ಡುಗಳಲ್ಲಿ ಕಸ ವಿಲೇವಾರಿಗೆ ಸಮಸ್ಯೆಯಾಗುತ್ತಿದೆ. ಸಕಾಲದಲ್ಲಿ ರಿಪೇರಿ, ನಿರ್ವಹಣೆ ದೃಷ್ಟಿಯಿಂದ ವಾಯವ್ಯ ಸಾರಿಗೆ ಸಂಸ್ಥೆ ವರ್ಕಶಾಪ್‌ಗ್ಳ ಮೂಲಕ ಸಾಧ್ಯ ಎನ್ನುವ ಕಾರಣಕ್ಕೆ ಪ್ರಸ್ತಾವನೆ ನೀಡಿದ್ದೆವು. ಸಂಸ್ಥೆ
ಅಧಿಕಾರಿಗಳು ಬಂದು ಒಮ್ಮೆ ಪರಿಶೀಲಿಸಿ ಹೋಗಿದ್ದಾರೆ.
∙ಡಾ| ಸುರೇಶ ಇಟ್ನಾಳ,
ಆಯುಕ್ತ, ಮಹಾನಗರ ಪಾಲಿಕ
*ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.