ಬಾಲಕಿಯರ ಸಬಲೀಕರಣಕ್ಕೆ ಸದ್ದಿಲ್ಲದೇ ಸೇವೆ
ಮುಕೇಶ ಹಿಂಗಳ ಫೌಂಡೇಶನ್‌ನಿಂದ ಶೈಕ್ಷಣಿಕ ನೆರವು
Team Udayavani, Apr 19, 2022, 10:34 AM IST
ಹುಬ್ಬಳ್ಳಿ: “ಅವರು ಓದಿದ್ದು ಕೇವಲ ಎಂಟನೇ ತರಗತಿ, ಅನಿವಾರ್ಯ ಕಾರಣದಿಂದ ಓದು ಮುಂದುವರಿಸಲಾಗಿರಲಿಲ್ಲ. ತಮ್ಮ ಓದು ಅರ್ಧಕ್ಕೆ ನಿಂತರೂ ಇತರರಿಗೆ ಶೈಕ್ಷಣಿಕ ನೆರವು ನೀಡಬೇಕೆಂಬ ಮನದಾಳದ ಸೆಲೆ ಬತ್ತಲಿಲ್ಲ. ವಿದ್ಯಾರ್ಥಿಗಳಿಗೆ ನೆರವು, ಪ್ರೇರಣೆ ನೀಡುವ ಉದ್ದೇಶದಿಂದಲೇ ಫೌಂಡಶನ್ ಆರಂಭಿಸಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಭಯ-ಒತ್ತಡ ಮುಕ್ತ ಪರೀಕ್ಷೆ ಎದುರಿಸುವ ಬಗ್ಗೆ ಮನನ ಶಿಬಿರ ನಡೆಸಿದ್ದು, ಬಾಲಕಿಯರಿಗೆ ಸ್ವಯಂ ರಕ್ಷಣೆ ಹಾಗೂ ಸಬಲೀಕರಣ ತರಬೇತಿಗೆ ಮುಂದಡಿ ಇರಿಸಿದ್ದಾರೆ.’
ಉದ್ಯಮಿ, ಶಿಕ್ಷಣ ಪ್ರೇಮಿ ಮುಕೇಶ ಹಿಂಗಳ ಅವರು ಹುಬ್ಬಳ್ಳಿಯಲ್ಲಿ ಜವಳಿ ಉದ್ಯಮಿಯಾಗಿದ್ದು, ಕರ್ನಾಟಕ ಕ್ಲಾಥ್ ಸೆಂಟರ್ ಮಾಲೀಕರಾಗಿದ್ದಾರೆ. ಅನೇಕ ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಪೂರೈಸುತ್ತಿದ್ದು, ಶೈಕ್ಷಣಿಕವಾಗಿ ನೆರವು ನೀಡಬೇಕು ಎಂಬ ಉದ್ದೇಶದಿಂದಲೇ ಮುಕೇಶ ಹಿಂಗಳ ಫೌಂಡೇಶನ್ ಆರಂಭಿಸಿದ್ದಾರೆ. 2013ರಿಂದಲೇ ಫೌಂಡೇಶನ್ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ನೆರವು ಹಾಗೂ ಪ್ರೇರಣಾದಾಯಕ ಕಾರ್ಯದಲ್ಲಿ ತೊಡಗಿಕೊಂಡಿದೆ.
ಪ್ರತಿಭಾ ಪ್ರೋತ್ಸಾಹ: ವಿದ್ಯಾರ್ಥಿಗಳ ಪ್ರತಿಭೆ ಪ್ರೋತ್ಸಾಹಿಸಲು, ಪರೀಕ್ಷೆಯಲ್ಲಿ ಉತ್ತಮ ಸಾಧನೆ ಪೈಪೋಟಿ ಹೆಚ್ಚುವಂತೆ ಮಾಡುವ, ಪ್ರೇರಣೆ ನೀಡುವ ಕಾರ್ಯಕ್ಕೆ ಫೌಂಡೇಶನ್ ಮುಂದಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಹೆಚ್ಚಿನ ಅಂಕ ಪಡೆಯುವ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್, ಪ್ರಮಾಣ ಪತ್ರ ನೀಡುವ ಕಾರ್ಯ ಮಾಡುತ್ತಿದೆ. 2013ರಿಂದ ನೆರವು ನೀಡುವ ಕಾರ್ಯ ಮುಂದುವರಿಸಿಕೊಂಡು ಬಂದಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗೆ 1,000 ರೂ., ಎರಡನೇ ಸ್ಥಾನ ಪಡೆದವರಿಗೆ 750 ರೂ., ಮೂರನೇ ಸ್ಥಾನ ಪಡೆದವರಿಗೆ 500 ರೂ.ಗಳನ್ನು ಚೆಕ್ ಮೂಲಕ ನೀಡಲಾಗುತ್ತದೆ. ಅದೇ ರೀತಿ ಸಿಬಿಎಸ್‌ಇಯಲ್ಲಿ ಎಸ್ಸೆಸ್ಸೆಲ್ಸಿನಲ್ಲಿ 10ಕ್ಕೆ 10 ಅಂಕಗಳನ್ನು ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸಮಾನವಾಗಿ 500 ರೂ. ಸ್ಕಾಲರ್‌ಶಿಪ್ ನೀಡಲಾಗುತ್ತದೆ.
ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರೋತ್ಸಾಹ ಧನದ ಚೆಕ್, ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆಯ ಪ್ರೇರಣೆ ನೀಡಿದರೆ, 10ನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ಇಂತಹ ಗೌರವವನ್ನು ತಾನು ಪಡೆಯಬೇಕು ಎಂಬ ಛಲ ಮೂಡಿಸುವಂತೆ ಮಾಡುವುದು ಇದರ ಉದ್ದೇಶ ಎಂಬುದು ಫೌಂಡೇಶನ್ ಆಶಯ.
ಭಯ-ಒತ್ತಡಮುಕ್ತ ಪರೀಕ್ಷೆ ಪ್ರೇರಣೆ: ಪರೀಕ್ಷೆ ಎಂದರೇನೆ ವಿದ್ಯಾರ್ಥಿಗಳ ಮನದಲ್ಲಿ ಒಂದು ರೀತಿ ಭಯ-ಆತಂಕದ ಕಾರ್ಮೋಡ ಕವಿಯುತ್ತದೆ. ಅದರಲ್ಲೂ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಎಂದರೆ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳ ಮನದಲ್ಲಿ ಭಯ-ಒತ್ತಡ ನಿವಾರಣೆ ನಿಟ್ಟಿನಲ್ಲಿ ಮುಕೇಶ ಹಿಂಗಳ ಫೌಂಡೇಶನ್ ವಿಶೇಷವಾಗಿ 9-10ನೇ ತರಗತಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಪ್ರೇರಣಾದಾಯಕ ಕಾರ್ಯ ಕೈಗೊಳ್ಳುತ್ತಿದೆ.
ಮಾನಸಿಕ ತಜ್ಞರು, ಪ್ರೇರಣಾದಾಯಕ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ತಜ್ಞರು ಸೇರಿದಂತೆ 10-15 ಜನರ ತಂಡವನ್ನು ರೂಪಿಸಿರುವ ಫೌಂಡೇಶನ್ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 9-10ನೇ ತರಗತಿ ವಿದ್ಯಾರ್ಥಿಗಳಿಗೆ ಭಯ-ಒತ್ತಡ ಮುಕ್ತ ಪರೀಕ್ಷೆ ಎದುರಿಸುವುದು ಹೇಗೆ ಎಂಬುದರ ತರಬೇತಿ ನೀಡುತ್ತಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುಮಾರು 15 ಸಾವಿರದಷ್ಟು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಅವರಲ್ಲಿನ ಪರೀಕ್ಷೆಯ ಭಯ-ಒತ್ತಡ ನಿವಾರಣೆ ಕಾರ್ಯ ಕೈಗೊಳ್ಳಲಾಗಿದೆ. ಮುಖ್ಯವಾಗಿ ಟೈಂ ಟೇಬಲ್ ಗೆ ಅನುಗುಣವಾಗಿ ಹೇಗೆ ದಿನಚರಿ ಹೊಂದಿಕೊಳ್ಳುವುದು ಎಂಬುದನ್ನು ಮನನ ಮಾಡಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು 6 ಸಾವಿರ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿ ನೀಡಲು ಯೋಜಿಸಲಾಗಿದೆ.
ಶಿಕ್ಷಕರಿಗೂ ಕಾರ್ಯಾಗಾರ:
ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಶಿಕ್ಷಕರು ಉತ್ತಮ ತರಬೇತಿ ಹೊಂದಬೇಕಾಗುತ್ತದೆ. ಸಾಮಾನ್ಯ ಜ್ಞಾನ, ಜಗತ್ತಿನ ಆಗು-ಹೋಗುಗಳು, ಹೊಸ ವಿಚಾರಗಳು, ಪ್ರೇರಣಾದಾಯಕ ಚಿಂತನೆ, ಸಕಾರಾತ್ಮಕ ಭಾವನೆ, ಜೀವನುತ್ಸಾಹವನ್ನು ಮಕ್ಕಳ ಮನದಲ್ಲಿ ಬಿತ್ತನೆ ಮಾಡಲು ಶಿಕ್ಷಕರು ಅಗತ್ಯ ತರಬೇತಿ ಹೊಂದಬೇಕು ಎಂಬ ಚಿಂತನೆಯೊಂದಿಗೆ ಫೌಂಡೇಶನ್ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರಿಗೆ ಪ್ರೇರಣಾದಾಯಕ ಕಾರ್ಯಾಗಾರ, ಉಪನ್ಯಾಸ, ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದೆ.
ಆದಾಯದ ಪಾಲು ಫೌಂಡೇಷನ್‌ಗೆ:
ಮುಕೇಶ ಹಿಂಗಳ ಫೌಂಡೇಶನ್‌ನಿಂದ ಬಾಲಕಿಯರ ಸಬಲೀಕರಣ ಯೋಜನೆ ಕೈಗೊಳ್ಳಲಾಗುತ್ತಿದೆ. ಬಾಲಕಿಯರಿಗೆ ಸ್ವಯಂ ರಕ್ಷಣೆ, ಸುರಕ್ಷತೆ, ಶಿಕ್ಷಣ, ವರ್ತನೆ, ಪಾಲಕರಿಗೆ ಗೌರವ, ಸಂಸ್ಕಾರ, ಸಂಸ್ಕೃತಿ-ಪರಂಪರೆಗಳ ಮನನ ನಿಟ್ಟಿನಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸಲು ಫೌಂಡೇಶನ್ ತೀರ್ಮಾನಿಸಿದೆ. ಮೊದಲ ಹಂತದಲ್ಲಿ 60-70 ಬಾಲಕಿಯರಿಗೆ ಇಂತಹ ತರಬೇತಿ ನೀಡಲು ನಿರ್ಧರಿಸಲಾಗಿದೆ. ಉದ್ಯಮಿ ಮುಕೇಶ ಹಿಂಗಳ ಅವರು ತಮ್ಮ ಉದ್ಯಮದಿಂದ ಬರುವ ಆದಾಯದಲ್ಲಿ ಒಂದಿಷ್ಟು ಪಾಲು ಫೌಂಡೇಶನ್‌ಗೆ ನೀಡುವ ಮೂಲಕ ಸಾರ್ಥಕ ಕಾರ್ಯದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಮಾಜದ ಋಣ ತೀರಿಸುವ ಅಳಿಲು ಸೇವೆ: ರಾಜಸ್ಥಾನದಲ್ಲಿ ಹಿಂದಿ ಮಾಧ್ಯಮದಲ್ಲಿ 7ನೇ ತರಗತಿವರೆಗೆ ಓದಿ 1983ರಲ್ಲಿ ಹುಬ್ಬಳ್ಳಿಗೆ ಬಂದೆ. ಇಲ್ಲಿನ ಶಾಂತಿನಾಥ ಹಿಂದಿ ಹೈಸ್ಕೂಲ್‌ನಲ್ಲಿ 8ನೇ ತರಗತಿಗೆ ಸೇರಿದೆನಾದರೂ, ಅಂದಿನ ಸ್ಥಿತಿ-ಅನಿವಾರ್ಯತೆಯಿಂದ ಓದು ಮುಂದುವರಿಸಲು ಸಾಧ್ಯವಾಗದೆ 12-13ನೇ ವಯಸ್ಸಿನಲ್ಲಿಯೇ ದುಡಿಮೆಗಿಳಿದೆ. ಕರ್ನಾಟಕ ಕ್ಲಾಥ್ ಸೆಂಟರ್ ಆರಂಭಿಸಿದೆ. ಸಮಾಜ ನನಗೆ ಎಲ್ಲವನ್ನು ನೀಡಿದೆ, ಪ್ರತಿಯಾಗಿ ಸಮಾಜ-ನಾಡಿಗೆ ಏನಾದರೂ ನೀಡಬೇಕೆಂದು ಫೌಂಡೇಶನ್ ಆರಂಭಿಸಿದೆ. ಶಿಕ್ಷಣದಿಂದ ವಂಚಿತನಾದ ನಾನು, ಶೈಕ್ಷಣಿಕ ಸೇವೆ ಉದ್ದೇಶದಿಂದಲೇ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ. ರಾಯಚೂರು ಜಿಲ್ಲೆ ಮಸ್ಕಿ ವರೆಗೂ ಹೋಗಿ ಮಕ್ಕಳಿಗೆ ಭಯ-ಒತ್ತಡ ಮುಕ್ತ ಪರೀಕ್ಷೆ ಕುರಿತು ಪ್ರೇರಣೆ ನೀಡಿದ್ದೇವೆ. ಶೈಕ್ಷಣಿಕ ಪ್ರೋತ್ಸಾಹ ಜತೆಗೆ ಜೀವನದಲ್ಲಿ ದೊಡ್ಡ ಪರಿಣಾಮ ಬೀರಬಹುದಾದ ಸಣ್ಣ ವಿಷಯ, ಶಿಸ್ತು, ಪರಂಪರೆಯನ್ನು ಮಕ್ಕಳಿಗೆ ಮನನ ಮಾಡುವ ಕಾರ್ಯವನ್ನು ಫೌಂಡೇಶನ್ ಮಾಡುತ್ತಿರುವ ಆತ್ಮತೃಪ್ತಿ ಇದೆ ಎನ್ನುತ್ತಾರೆ ಫೌಂಡೇಶನ್ ಸಂಸ್ಥಾಪಕ ಮುಕೇಶ ಹಿಂಗಳ.
ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.