ಹೂಬಳ್ಳಿ ದಾರಿಗಳಲ್ಲಿ ಸ್ಮಾರ್ಟ್ ಸವಾರಿ!
ಏನಾದರೂ ಹಾನಿ ಅಥವಾ ಕಳ್ಳತನವಾದರೆ ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ.
Team Udayavani, Nov 4, 2021, 5:17 PM IST
ಹುಬ್ಬಳ್ಳಿ: ಪರಿಸರ ಸಂರಕ್ಷಣೆ, ಜನರ ಆರೋಗ್ಯ ವೃದ್ಧಿ ಹಾಗೂ ಸೈಕ್ಲಿಸ್ಟ್‌ಗಳನ್ನು ಪ್ರೋತ್ಸಾಹಿಸಲು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಸುಮಾರು 34 ಸ್ಥಳಗಳಲ್ಲಿ 8.50 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಬೈಸಿಕಲ್ ನಿಲ್ದಾಣ(ಪಬ್ಲಿಕ್ ಬೈಸಿಕಲ್ ಶೇರಿಂಗ್ -ಪಿಬಿಎಸ್)ಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಎಂಟು ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ತೋಳನಕೆರೆಯ ನಾಲಾ ಯೋಜನೆ ಬಳಿ ಮೊಬೈಲಿಟಿ ಕಾರಿಡಾರ್ ಸ್ಥಾಪಿಸಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಅವಳಿನಗರದಲ್ಲಿ 34 ಬೈಸಿಕಲ್ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ಈಗಾಗಲೇ 340 ವಿಶಿಷ್ಟವಾದ ಅತ್ಯಾಧುನಿಕ ಬೈಸಿಕಲ್ ಗಳನ್ನು ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಪ್ರತಿ ನಿಲ್ದಾಣದಲ್ಲಿ ಕನಿಷ್ಟ 7-8 ಸೈಕಲ್ ಗಳು ಇರಲಿವೆ. ಜತೆಗೆ ಆಯಾ ಭಾಗದಲ್ಲಿನ ಸ್ಥಳಾವಕಾಶ ಮೇಲೆ ಹೆಚ್ಚಿನ ಸೈಕಲ್ ಇಡಲಾಗುತ್ತದೆ. ಈಗಾಗಲೇ ಎಂಟು ನಿಲ್ದಾಣಗಳನ್ನು ಪ್ರಾಯೋಗಿಕವಾಗಿ
ನಿರ್ಮಿಸಲಾಗುತ್ತಿದ್ದು, ಇವು ಸಮರ್ಪಕವಾಗಿ ಕಾರ್ಯಗತವಾದರೆ ಇನ್ನುಳಿದ ನಿಲ್ದಾಣಗಳನ್ನು ಹಂತ ಹಂತವಾಗಿ 2-3 ವರ್ಷಗಳಲ್ಲಿ ನಿರ್ಮಿಸಲಾಗುತ್ತದೆ.
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತರೆ ಮುಂದಿನ ದಿನಗಳಲ್ಲಿ ಧಾರವಾಡಕ್ಕೂ ಇದನ್ನು ವಿಸ್ತರಿಸಲು ಯೋಜಿಸಲಾಗಿದೆ. ಹುಬ್ಬಳ್ಳಿಯ ಟ್ರಿನಿಟಿ ಟೆಕ್ನಾಲಜಿಯವರು ಬೈಸಿಕಲ್ ನಿಲ್ದಾಣಗಳ ನಿರ್ಮಾಣ ಮತ್ತು ಐದು ವರ್ಷಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದಾರೆ.
ಹಾನಿಯಾದರೆ ಬಳಕೆ ಮಾಡುವವರೇ ಹೊಣೆ
340 ಬೈಸಿಕಲ್‌ಗಳನ್ನು ನಿಯಂತ್ರಣ ಕೊಠಡಿ ಕೇಂದ್ರದವರು ಟ್ರ್ಯಾಕ್ ಮಾಡುತ್ತಿರುತ್ತಾರೆ. ಸೈಕಲ್ ನಿಗದಿತ ಟ್ರ್ಯಾಕ್ ಬಿಟ್ಟು ಬೇರೆಡೆಗೆ ಹೋದರೆ ಕಂಟ್ರೋಲ್ ರೂಂನಲ್ಲಿ ಎಚ್ಚರಿಕೆ ಗಂಟೆ ಮೊಳಗುತ್ತದೆ. ಚಂದಾದಾರರಿಗೆ ಕರೆ ಮಾಡಿದಾಗ ಸಿಗದಿದ್ದರೆ ಅವರನ್ನು ಪತ್ತೆ ಹಚ್ಚುವ ಕೆಲಸ ಆಗುತ್ತದೆ. ಏನಾದರೂ ಹಾನಿ ಅಥವಾ ಕಳ್ಳತನವಾದರೆ ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ. ಸೈಕಲ್ ಬೆಲೆ ಕನಿಷ್ಟ 40 ಸಾವಿರ ರೂ. ಆಗಿದೆ.
15-20 ದಿನಗಳ ಹಿಂದೆಯೇ ನಗರಕ್ಕೆ ಆಗಮಿಸಿದ್ದು, ಫಿಟ್ಟಿಂಗ್ ಮಾಡಿ ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.
ಹೆಸರಿಗಷ್ಟೇ ಮೇಕ್ ಇನ್‌ಇಂಡಿಯಾ; ದೇಶಿ ಸೈಕಲ್‌ತಯಾರಿಕೆಗೂ ತತ್ವಾರ!
ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ. ದೇಶವ್ಯಾಪಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕೆಲವು ಉಪಕರಣ, ವಸ್ತುಗಳನ್ನು ಪರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು “ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಅಪಹಾಸ್ಯ ಮಾಡುತ್ತಿದೆ. ಉಪಗ್ರಹ ಉಡಾವಣೆ, ಯುದ್ಧ ವಿಮಾನಗಳ ತಯಾರಿಕೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಕೈಗೊಳ್ಳುವಾಗ ಸ್ವದೇಶಿಯಾಗಿ ನಿರ್ಮಿಸುವ ಉತ್ಪನ್ನಗಳಿಗೆ ಒತ್ತು ನೀಡಲಾಗುತ್ತಿದೆ.
ಆದರೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಬೈಸಿಕಲ್‌ಗಳನ್ನು ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಅದೂ ಪ್ರತಿ ಸೈಕಲ್‌ಗೆ ಕನಿಷ್ಟ 40 ಸಾವಿರ ರೂ. ಬೆಲೆ ತೆರಲಾಗಿದೆ. ಕೋಟ್ಯಂತರ ರೂ. ವ್ಯಯಿಸಲಾಗಿದೆ. ದೇಶೀಯವಾಗಿ ಗುಣಮಟ್ಟದ ಬೈಸಿಕಲ್ ಉತ್ಪಾದಕರಿಲ್ಲವೇ? ಸ್ಟಾಟ್ ìಅಪ್‌ಗ್ಳನ್ನು, ನವೋದ್ಯಮಿಗಳನ್ನು ಪ್ರೋತ್ಸಾಹಿಸಿದ್ದರೆ ಸ್ಥಳೀಯವಾಗಿಯೇ ಉತ್ಪಾದನೆ ಸಾಧ್ಯವಿರಲಿಲ್ಲವೇ? ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತಿವೆ. ಬ್ರೇಕ್ ಪ್ಯಾಡ್, ಬ್ಯಾಟರಿ, ಅಸೆಂಬ್ಲಿ ಕಿಟ್ ಭಾರತದಲ್ಲಿ ಉತ್ಪಾದಿಸುವ ಕಂಪನಿಗಳಲ್ಲಿ ಗುಣಮಟ್ಟದ್ದಿಲ್ಲ. ಅವರು ಸಹಿತ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂಬುದು ಕೇಳಿಬರುತ್ತಿರುವ ಸಬೂಬು. ಇದೇ ಉತ್ತರವಾಗಿದ್ದರೆ “ಮೇಕ್ ಇನ್ ಇಂಡಿಯಾ’ಕ್ಕೆ ಅರ್ಥವೆಲ್ಲಿಂದ ಬಂತು. ಜನಪ್ರತಿನಿಧಿಗಳ “ಉದ್ಯಮಸ್ನೇಹಿ’ ಭಾಷಣಕ್ಕೆ ತೂಕವೆಲ್ಲಿಂದ ಬಂತು.
ನಿಲ್ದಾಣಗಳು ಎಲ್ಲೆಲ್ಲಿ?
ವಿದ್ಯಾನಗರ ಶಿರೂರ ಪಾರ್ಕ್‌ನ ಚೇತನ ಸ್ಕೂಲ್ ಎದುರು, ಶ್ರೇಯಾ ಪಾರ್ಕ್ ತೋಳನಕೆರೆ ಬಳಿ, ಗೋಕುಲ ರಸ್ತೆ ಕೆಇಸಿ ಬಳಿ, ರಾಮಲಿಂಗೇಶ್ವರ ನಗರ ವೃತ್ತ, ಕೈಗಾರಿಕಾ ವಸಾಹತು ಪ್ರದೇಶ ಗೇಟ್ ನಂ.1, ತತ್ವದರ್ಶ ಆಸ್ಪತ್ರೆ ಎದುರು, ಉಣಕಲ್ ಕೆರೆ ಕ್ಯಾಂಟೀನ್ ಬಳಿ ಸೇರಿ ಎಂಟು ಸ್ಥಳಗಳಲ್ಲಿ ಬೈಸಿಕಲ್ ನಿಲ್ದಾಣಗಳ ಸ್ಥಾಪನೆ ಪ್ರಗತಿಯಲ್ಲಿವೆ. ಇವು ಡಿಸೆಂಬರ್‌ನಲ್ಲಿ ಕಾರ್ಯಗತವಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ನಗರದ ಗೋಕುಲ ರಸ್ತೆಯ ರೇಣುಕಾ ನಗರ ಕ್ರಾಸ್, ಬಸವೇಶ್ವರ ನಗರ ಕ್ರಾಸ್, ಅಕ್ಷಯ ಪಾರ್ಕ್, ಹೊಸ ಕೋರ್ಟ್ ಸಂಕೀರ್ಣ, ಕಿಮ್ಸ್ ಮುಖ್ಯದ್ವಾರ, ಕಾಡಸಿದ್ದೇಶ್ವರ ಕಾಲೇಜು, ಖೋಡೆ ಹಾಸ್ಟೇಲ್, ಬಿವಿಬಿ ಕಾಲೇಜು ನಿಲ್ದಾಣ, ಬಿವಿಬಿ ಲೇಡೀಸ್ ಹಾಸ್ಟೇಲ್, ಹೊಸೂರ ವೃತ್ತ, ಐಟಿ ಪಾರ್ಕ್, ಗ್ಲಾಸ್ ಹೌಸ್, ಹಳೆಯ ಕೋರ್ಟ್ ವೃತ್ತ, ಹಳೆಯ ಬಸ್ ನಿಲ್ದಾಣ, ಮೂರುಸಾವಿರ ಮಠ, ದುರ್ಗದ ಬಯಲು, ಸಿಬಿಟಿ, ಚಿಟಗುಪ್ಪಿ ವೃತ್ತ, ರೈಲ್ವೆ ನಿಲ್ದಾಣ, ಕೇಶ್ವಾಪುರ ವೃತ್ತ, ರಮೇಶ ಭವನ, ಸಿದ್ಧಾರೂಢಮಠ, ಇಂಡಿ ಪಂಪ್, ಅಂಹಿಸಾ ವೃತ್ತ, ನ್ಯೂ ಇಂಗ್ಲಿಷ್ ಸ್ಕೂಲ್ ಸೇರಿ ಒಟ್ಟು 26 ಕಡೆಗಳಲ್ಲಿ ಹಂತ ಹಂತವಾಗಿ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ. ಇದರಲ್ಲಿ ಎರಡು ಬಫರ್ ಇವೆ.
*ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.