BJP MLA M. Chandrappa: ಅಭಿವೃದ್ಧಿ ಹರಿಕಾರಗೆ ಗೌರವ ಡಾಕ್ಟರೇಟ್ ಗರಿ…
ಗ್ರಾಮೀಣಾಭಿವೃದ್ಧಿ , ಶೈಕ್ಷಣಿಕ ಕ್ಷೇತ್ರ ಪ್ರಗತಿಗೆ ಅವಿರತ ಶ್ರಮ
Team Udayavani, Aug 15, 2023, 10:38 AM IST
ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆ ಮೆಚ್ಚಿ ಹಾಲಿ ಶಾಸಕರೊಬ್ಬರಿಗೆ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದು ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲಿ ದಾಖಲಾರ್ಹ ಸಂಗತಿ.
ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಈ ಗೌರವಕ್ಕೆ ಭಾಜನರಾದ ಅಪರೂಪದ ರಾಜಕಾರಣಿ.
ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶಿವಮೊಗ್ಗದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾನಿಲಯ ತನ್ನ 33 ನೇ ಘಟಿಕೋತ್ಸವದಲ್ಲಿ ಶಾಸಕ ಎಂ.ಚಂದ್ರಪ್ಪ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಮಾಡಿದ ಸಾಧನೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿದೆ. ಮೂಲತಃ ಚಳ್ಳಕೆರೆ ತಾಲೂಕು ದೊಡ್ಡ ಉಳ್ಳಾರ್ತಿ ಗ್ರಾಮದ ಎಂ.ಚಂದ್ರಪ್ಪ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಚಿತ್ರದುರ್ಗದ ಪ್ರತಿಷ್ಠಿತ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಎಂ.ಚಂದ್ರಪ್ಪ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕಾಂಗ ಸಮಿತಿ ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿಯೂ ಈ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ ವಿಶ್ವವಿದ್ಯಾನಿಲಯ ನೀಡಿದ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ತನ್ನ ಕ್ಷೇತ್ರದ ಜನರಿಗೆ ಅರ್ಪಣೆ ಮಾಡುತ್ತೇನೆ ಎಂದು ಪುರಸ್ಕಾರ ಪಡೆದ ವೇಳೆ ಶಾಸಕ ಎಂ.ಚಂದ್ರಪ್ಪ ಕ್ಷೇತ್ರದ ಜನರನ್ನು ಸ್ಮರಿಸಿಕೊಂಡಿದ್ದಾರೆ.
ಘಟಿಕೋತ್ಸವದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ಗೌರವ ಡಾಕ್ಟರೇಟ್ ಲಭಿಸಿರುವುದು ನನ್ನ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ. 1994 ರಿಂದ ಶಾಸಕನಾಗಿ ರೈತರು, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಕ್ಷೇತ್ರದ 386 ಹಳ್ಳಿಗಳಿಗೆ 5 ವರ್ಷದ ಅವಧಿಯಲ್ಲಿ ಅತ್ಯುತ್ತಮ ರಸ್ತೆಗಳನ್ನು ಮಾಡಿಸಿದ್ದೇನೆ. ಈ ಕಾರಣಕ್ಕೆ ಜನ ನನ್ನನ್ನು “ರಸ್ತೆ ರಾಜ’ ಎಂದು ಗುರುತಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಪದೇ ಪದೇ ಚುನಾವಣೆಯಲ್ಲಿ ಆಯ್ಕೆಯಾಗಿ ಸಾರ್ವಜನಿಕರಿಗೆ ಬೇಕಾದ ಎಲ್ಲ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದೇನೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆಸ್ಪತ್ರೆ ಸೇರಿದಂತೆ ಎಲ್ಲಾ ಆಯಮಗಳಲ್ಲೂ ಕೆಲಸ ಮಾಡಿದ್ದೇನೆ. ಇದನ್ನು ಮನಗಂಡ ವಿಶ್ವವಿದ್ಯಾನಿಲಯ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಗಮನಿಸಿ ಗೌರವ ಡಾಕ್ಟರೇಟ್ ನೀಡಿದೆ. ಇದು ಜನರ ಸೇವೆಯನ್ನು ಮತ್ತಷ್ಟು ಮಾಡಲು ಪ್ರೇರಣೆ ನೀಡಿದೆ ಎಂದಿದ್ದರು.
ಶಾಸಕ ಎಂ.ಚಂದ್ರಪ್ಪ ಅವರ ರಾಜಕೀಯ ಗುರುಗಳು, ಪರಮಾಪ್ತರು ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಗೌರವ ಡಾಕ್ಟರೇಟ್ ಪುರಸ್ಕಾರ ಲಭಿಸಿರುವುದು ಮತ್ತಷ್ಟು ಅಭಿಮಾನ ಹೆಚ್ಚಿಸುವ ಸಂಗತಿಯಾಗಿದೆ. ಕುವೆಂಪು ವಿಶ್ವವಿದ್ಯಾನಿಲಯದ 33ನೇ ಘಟಿಕೋತ್ಸವದ ಒಂದೇ ದಿನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಎಂ.ಚಂದ್ರಪ್ಪ ಗೌರವ ಡಾಕ್ಟರೇಟ್ ಪಡೆದಿದ್ದು, ಈ ದಿನ ಅವಿಸ್ಮರಣೀಯ ಎಂದು ಇಬ್ಬರೂ ನಾಯಕರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ನದಿಯೊಂದು ಎಲ್ಲೋ ಹುಟ್ಟಿ, ಎಲ್ಲೋ ಹರಿದು ಕಡೆಗೆ ಸಾಗರ ಸೇರುವಂತೆ, ಎಂ.ಚಂದ್ರಪ್ಪ ಅವರ ರಾಜಕೀಯ ಜೀವನ ಕೂಡಾ ಸಾಗಿದೆ. ಜನತಾ ದಳದಿಂದ ಆರಂಭವಾದ ಚಂದ್ರಪ್ಪ ಅವರ ರಾಜಕೀಯ ಬಳಿಕ ಕಾಂಗ್ರೆಸ್ ಸೇರಿ, ಅಲ್ಲಿಂದ ಬಿಜೆಪಿ, ಆನಂತರ ಕೆಜೆಪಿ ಸೇರ್ಪಡೆ ಅಂತಿಮವಾಗಿ ಬಿಜೆಪಿಯಲ್ಲೇ ವಿಲೀನವಾಗುವ ಮೂಲಕ ತಮ್ಮ ರಾಜಕೀಯ ಗುರುಗಳು, ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ ಎಂಬ ರಾಜಕೀಯ ಸಾಗರದಲ್ಲಿ ಎಂ.ಚಂದ್ರಪ್ಪ ಅವರ ಸಂಗಮವಾಗಿದೆ. ಭರಮಸಾಗರ ಕ್ಷೇತ್ರದಿಂದ ಎಂ.ಚಂದ್ರಪ್ಪ ಅವರ ರಾಜಕೀಯ ಯಾನ ಆರಂಭವಾಗಿದೆ. ಈ ವರೆಗೆ ಅವರು ಎದುರಿಸಿದ 7 ವಿಧಾನಸಭಾ ಚುನಾವಣೆಗಳಲ್ಲಿ 5 ಬಾರಿ ಗೆದ್ದಿದ್ದಾರೆ. 2018 ಮತ್ತು 2023 ನೇ ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಆಯ್ಕೆಯಾಗಿ ಹೊಳಲ್ಕೆರೆ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ ಕೀರ್ತಿ ಕೂಡಾ ಎಂ.ಚಂದ್ರಪ್ಪ ಅವರಿಗೆ ಸಲ್ಲುತ್ತದೆ.
ಯಡಿಯೂರಪ್ಪ ಹಾದಿಯಲ್ಲಿ ಚಂದ್ರಪ್ಪ ಹೆಜ್ಜೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ, ಪರಮಾಪ್ತ ವಲಯದಲ್ಲಿ ಎಂ.ಚಂದ್ರಪ್ಪ ಗುರುತಿಸಿಕೊಂಡಿದ್ದಾರೆ. ಯಡಿಯೂರಪ್ಪ ಹೋದಲ್ಲೆಲ್ಲಾ ಚಂದ್ರಪ್ಪ ಹೋಗುತ್ತಾರೆ ಎನ್ನುವ ಮಾತು ಕ್ಷೇತ್ರದಲ್ಲಿ ರೂಢಿಯಲ್ಲಿದೆ.
2012ರಲ್ಲಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದಾಗ, ಇನ್ನೂ ಶಾಸಕರ ಅವಧಿ ಮುಗಿಯದಿದ್ದರೂ ಎಂ.ಚಂದ್ರಪ್ಪ ರಾಜೀನಾಮೆ ನೀಡಿ ಕೆಜೆಪಿ ಸೇರ್ಪಡೆಯಾದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ಅಲ್ಪ ಮತಗಳಿಂದ ಪರಾಭವ ಗೊಂಡಿದ್ದರು.
ಆನಂತರ ಬಿಎಸ್‌ವೈ ಬಿಜೆಪಿ ಸೇರ್ಪಡೆಯಾದಾಗ ಚಂದ್ರಪ್ಪ ಸೇರಿದಂತೆ ಅವರ ಸಾವಿರಾರು ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸಿದರು. ಹೊಳಲ್ಕೆರೆಯಲ್ಲಿ ಚಂದ್ರಪ್ಪ ಯಾವಾಗ ಚುನಾವಣೆಗೆ ಸ್ಪರ್ಧಿಸಿದರೂ ಅಲ್ಲಿಗೆ ಒಂದು ದಿನವಾದರೂ ಬಿ.ಎಸ್.ಯಡಿಯೂರಪ್ಪ ಬಂದು ಹೋಗದಿದ್ದರೆ ಆ ಚುನಾವಣೆ ಪರಿಪೂರ್ಣ ಆಗುವುದೇ ಇಲ್ಲ. ಯಡಿಯೂರಪ್ಪನವರ ಬರುವಿಕೆಯನ್ನು ಹೊಳಲ್ಕೆರೆ ಕ್ಷೇತ್ರದ ಜನ ಹಾಗೂ ಅಲ್ಲಿನ ಶಾಸಕರಾಗಿರುವ ಎಂ.ಚಂದ್ರಪ್ಪ ಸದಾ ಹಬ್ಬದಂತೆ ಸಂಭ್ರಮಿಸುವ ಪರಿಪಾಠ ಹಲವು ದಶಕಗಳಿಂದ ಬೆಳೆದು ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಅಸ್ತಿತ್ವ ಎಂ.ಚಂದ್ರಪ್ಪ:
ಹೊಳಲ್ಕೆರೆ ಬಿಜೆಪಿ ಭದ್ರಕೋಟೆ ಎನ್ನುವ ಮಾತಿದೆ. ಈ ಮಾತನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದ ಜನ ಅಕ್ಷರಶಃ ಸಾಬೀತು ಮಾಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೂ ಹೊಳಲ್ಕೆರೆಯಲ್ಲಿ ಕಮಲದ ಬಾವುಟ ಹಾರಾಡುತ್ತಿದೆ. ಇದರ ಹಿಂದೆ ಹಾಲಿ ಶಾಸಕ ಎಂ.ಚಂದ್ರಪ್ಪ ಅವರ ಪರಿಶ್ರಮವೂ ಅಡಗಿದೆ. 2008 ಹಾಗೂ 2018 ರ ಅವಧಿಯಲ್ಲಿ ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು, ಕ್ಷೇತ್ರದ ಮತದಾರರಿಗೆ ಅವರು ಸ್ಪಂದಿಸಿರುವ ರೀತಿಯೇ ಅವರ ಗೆಲುವಿಗೆ ಕಾರಣವಾಗಿದೆ.
ಚಂದ್ರಪ್ಪ ಅವರು ಹೊಳಲ್ಕೆರೆಯ ಚಿತ್ರಣವನ್ನೇ ಬದಲಿಸಿದ ನಾಯಕ ಎಂದರೆ ಅತಿಶಯೋಕ್ತಿಯಾಗಲಾರದು ಎನ್ನುವ ಮಾತಿದೆ. ಅಭಿವೃದ್ಧಿಯ ಮಹಾಪೂರ ಹರಿದಿದ್ದು ಹೊಳಲ್ಕೆರೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಅಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಲೇ ಇವೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಕ್ಷೇತ್ರ ಕಳೆದುಕೊಂಡು ಒಂದು ಕ್ಷೇತ್ರದಲ್ಲಿ ಮಾತ್ರ ಉಸಿರು ಹಿಡಿದುಕೊಂಡಿತ್ತು. ಅದೇ ರೀತಿಯಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಐದು ಕ್ಷೇತ್ರಗಳಲ್ಲಿ ಸೋತು ಒಂದು ಕ್ಷೇತ್ರದಲ್ಲಿ ಅಸ್ತಿತ್ವ ಕಾಪಾಡಿಕೊಂಡಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕರಾಗಿರುವ ಚಂದ್ರಪ್ಪ ಅವರು ಇಡೀ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ಆರಂಭಿಸುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಭಿವೃದ್ಧಿಯ ಗತಿ ಬದಲಿಸಿದ ಶಾಸಕ
ಬದುಕಿನ ಗತಿ ಬದಲಾಗಲು ಸಂಪರ್ಕಗಳು ಮುಖ್ಯ. ಅದೇ ರೀತಿ ಒಂದು ಊರು, ಪಟ್ಟಣದ ಅಭಿವೃದ್ಧಿಗೆ ಆ ಊರಿನ ಸಂಪರ್ಕ ಕೊಂಡಿಗಳು ಮುಖ್ಯವಾಗುತ್ತವೆ. ಸಂಪರ್ಕ ಕೊಂಡಿಗಳಲ್ಲಿ ರಸ್ತೆಗಳಿಗೆ ಮೊದಲ ಆದ್ಯತೆ. ಹಳ್ಳಿಯ ಜನ ನಗರಗಳಿಗೆ ಬರಲು, ಮಾರುಕಟ್ಟೆಗೆ ಹೋಗಲು ಸಂಪರ್ಕ ಕೊಂಡಿಯಾದ ರಸ್ತೆಗಳ ಅನಿವಾರ್ಯತೆ ಎಷ್ಟಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡವರಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮೊದಲಿಗರು. ಈ ಕಾರಣಕ್ಕೆ ಅವರು ಪ್ರತಿನಿಧಿಸಿದ ಭರಮಸಾಗರ ಹಾಗೂ ಹೊಳಲ್ಕೆರೆ ಕ್ಷೇತ್ರದ ಸಣ್ಣ ಸಣ್ಣ ಕುಗ್ರಾಮಗಳನ್ನು ಹುಡುಕಿ ರಸ್ತೆಗಳನ್ನು ಮಾಡಿಸಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಹೊಳಲ್ಕೆರೆ ಕ್ಷೇತ್ರ ಹಾಗೂ ಚಿತ್ರದುರ್ಗ ಜಿಲ್ಲೆ ಜನ ಪ್ರೀತಿಯಿಂದ “ರಸ್ತೆ ರಾಜ’ ಎಂಬ ಹೆಸರಿನಿಂದ ಕರೆಯುತ್ತಾರೆ. ಇತೀ¤ಚೆಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ನೀಡುವಲ್ಲಿ ಗ್ರಾಮೀಣಾಭಿವೃದ್ಧಿಗೆ ಚಂದ್ರಪ್ಪ ನೀಡಿರುವ ಕೊಡುಗೆಯೂ ಕಾರಣವಾಗಿದೆ. ಇನ್ನು ಅಭಿವೃದ್ಧಿ ವಿಚಾರದಲ್ಲಿ ಎಂ.ಚಂದ್ರಪ್ಪ ಎಲ್ಲರಿಗಿಂತ ಹತ್ತು ಹೆಜ್ಜೆ ಮುಂದಿರುತ್ತಾರೆ. ಕ್ಷೇತ್ರಕ್ಕೆ ಬೇಕಾದ ಯಾವುದೇ ಕೆಲಸ, ಯಾವುದೇ ಯೋಜನೆಗಳಿಗೆ ಕೈ ಹಾಕಿದರೂ ಅದು ಮುಗಿಯುವವರೆಗೆ ಯಾರನ್ನೂ ಸುಮ್ಮನಿರಲು ಬಿಡುವುದಿಲ್ಲ ಎನ್ನುವುದು ಅವರ ಬಳಿ ಕೆಲಸ ಮಾಡಿದ ಅಧಿಕಾರಿಗಳಿಂದ ಬರುವ ಸಾಮಾನ್ಯ ಅಭಿಪ್ರಾಯ. ಒಂದು ಸಾಮಾನ್ಯ ಪಟ್ಟಣವಾಗಿದ್ದ ಹೊಳಲ್ಕೆರೆಗೆ ಇಂದು ಅಭಿವೃದ್ಧಿಯ ಹೊಸ ಸ್ಪರ್ಶ ನೀಡುವಲ್ಲಿ ಚಂದ್ರಪ್ಪ ಅವರ ದೂರದೃಷ್ಟಿಯಿದೆ. ಇಡೀ ಹೊಳಲ್ಕೆರೆ ಪಟ್ಟಣ ಹೈಟೆಕ್ ಆಗಿ ಕಾಣುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಪಟ್ಟಣದಲ್ಲಿ ಆದ ಅಜಗಜಾಂತರ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಹೊಳಲ್ಕೆರೆ ಇತಿಹಾಸದಲ್ಲಿ ನಿರಂತರವಾಗಿ ಒಮ್ಮೆ ಶಾಸಕರಾದವರು ಎರಡನೇ ಬಾರಿಗೆ ಆಯ್ಕೆಯಾದ ಉದಾಹರಣೆಗಳಿಲ್ಲ. ಆದರೆ, ಸತತ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದು ಈ ದಾಖಲೆಗೆ ಅಭಿವೃದ್ಧಿ ಕಾರ್ಯಗಳೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅಪ್ಪನ ಗೆಲುವಿಗೆ ಮಗ ರಘುಚಂದನ್ ಶ್ರಮ
ಹೊಳಲ್ಕೆರೆ ಕ್ಷೇತ್ರದಲ್ಲಿ ಶಾಸಕ ಎಂ.ಚಂದ್ರಪ್ಪ ನಿರಂತರ ಪ್ರವಾಸ, ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನಹರಿಸುತ್ತಿದ್ದರೆ ಇತ್ತ ಅವರ ಪುತ್ರ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ. ರಘುಚಂದನ್ ಸದ್ದಿಲ್ಲದೇ ಪಕ್ಷ ಸಂಘಟನೆಗೆ ಕೈ ಹಾಕಿದ್ದರು.
2023 ರ ವಿಧಾನಸಭಾ ಚುನಾವಣೆಯಲ್ಲಿ ರಘುಚಂದನ್ ಮಾಡಿದ ಚುನಾವಣಾ ತಂತ್ರಗಾರಿಕೆಗಳು ಕಾಂಗ್ರೆಸ್‌ನ ಗ್ಯಾರೆಂಟಿಗಳ ನಡುವೆಯೂ ಬಿಜೆಪಿ ಗೆದ್ದು ಬೀಗುವಂತೆ ಮಾಡಿವೆ. ಶಿಕ್ಷಣ ಸಂಸ್ಥೆಯ ಜವಾಬ್ದಾರಿ ನಡುವೆಯೂ ಕ್ಷೇತ್ರದ ಪ್ರತಿ ಹಳ್ಳಿಯ ಕಾರ್ಯಕರ್ತರು, ನಾಯಕರ ಜೊತೆಗೆ ರಘುಚಂದನ್ ನಿರಂತರ ಸಂಪರ್ಕ ಹೊಂದಿದ್ದಾರೆ. ಅಲ್ಲಿ ಯಾವುದೇ ಕಾರ್ಯಕರ್ತನಿಗೆ ತೊಂದರೆಯಾದರೂ ಮೊದಲು ರಘುಚಂದನ್ ಅಲ್ಲಿರುತ್ತಾರೆ. ಹಬ್ಬ, ಜಾತ್ರೆ, ಮದುವೆ ಹೀಗೆ ಸುಖ, ದುಃಖ ಎಲ್ಲಾ ಸಂದರ್ಭಗಳಲ್ಲೂ ಕಾರ್ಯಕರ್ತರ ಜೊತೆ ಸದಾ ಬೆರೆಯುತ್ತಾ ಪಕ್ಷವನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸುವಲ್ಲಿ ರಘುಚಂದನ್ ಪಾತ್ರ ದೊಡ್ಡದಿದೆ ಎಂದು ಕ್ಷೇತ್ರದ ಕಾರ್ಯಕರ್ತರು ಅಭಿಮಾನ ವ್ಯಕ್ತಪಡಿಸುತ್ತಾರೆ.
ಅಂದಾಜು 3500 ಕೋಟಿ ರೂ. ವೆಚ್ಚದ ಕಾಮಗಾರಿಗಳು
ಅರೆ ಮಲೆನಾಡು ಎಂಬ ವಿಶೇಷಣದಿಂದ ಗುರುತಿಸಲ್ಪಡುವ ಹೊಳಲ್ಕೆರೆಗೆ ಎಂ.ಚಂದ್ರಪ್ಪ ಹೊಸ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ. ಇದರ ಭಾಗವಾಗಿಯೇ ಕಳೆದ ಐದು ವರ್ಷದಲ್ಲೇ ಸುಮಾರು 3500 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು, ನೀರಾವರಿ, ವಿದ್ಯುತ್, ರಸ್ತೆ, ಸರ್ಕಾರಿ ಶಾಲೆ, ಕೆರೆ ಕಟ್ಟೆ ನಿರ್ಮಾಣ, ಹೂಳೆತ್ತುವುದು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಯಾವುದೇ ಕೆಲಸವನ್ನು ಜನ ಕೇಳುವ ಮೊದಲೇ, ಅರ್ಜಿ ಹಾಕುವ ಮೊದಲೇ ಅವರ ಊರು, ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುವುದು ಚಂದ್ರಪ್ಪ ಅವರ ವಿಶೇಷತೆ. ಹೀಗಾಗಿಯೇ ಅವರು ಜನನಾಯಕ ಎನಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.