ದುಡಿಯುವ ಕೈಗಳಿಗೆ ಸೂರ್ಯ ಶಕ್ತಿ ಬಲ
ಸೆಲ್ಕೋ ಕಂಪನಿಯಿಂದ ಪ್ರೇರಣಾದಾಯಕ ಕಾರ್ಯ
Team Udayavani, May 5, 2022, 3:12 PM IST
ಹುಬ್ಬಳ್ಳಿ: ದುಡಿಯುವ ಕೈಗಳು, ಪ್ರಯೋಗ, ಸಾಹಸಕ್ಕಿಳಿಯುವ ಮನಸ್ಸುಗಳಿಗೆ ಪ್ರೇರಣೆ-ಉತ್ತೇಜನದ ಜತೆಗೆ ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕು ಕಟ್ಟಿಕೊಳ್ಳಲು ನೆರವು ನೀಡುವ ಮೂಲಕ “ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ’ ಅದೆಷ್ಟೋ ಮನ-ಮನೆಗಳಿಗೆ ಬೆಳಕಾಗಿದೆ.
ಸೌರಶಕ್ತಿ ಉತ್ಪನ್ನಗಳ ತಯಾರಿಕೆಯಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ, ಸಾಮಾಜಿಕ ಉದ್ಯಮ ಸಾಧಕ ಡಾ|ಹರೀಶ ಹಂದೆ ಅವರು, 1995ರಲ್ಲಿ ಆರಂಭಿಸಿದ ಈ ಸೆಲ್ಕೋ ಕಂಪನಿ ಸಾಮಾಜಿಕ ಉದ್ಯಮವಾಗಿ ಬೆಳೆದಿದೆ. ವಿಶೇಷವಾಗಿ ಮಹಿಳೆಯರ ಸ್ವಾವಲಂಬನೆ ಹಾಗೂ ಆರ್ಥಿಕ ಸದೃಢತೆಗೆ ಒತ್ತು ನೀಡುತ್ತಿದೆ. ತನ್ನದೇ ಫೌಂಡೇಶನ್ ಮೂಲಕ ಅವರಿಗೆ ವಿವಿಧ ರೀತಿಯ ಮಾರ್ಗದರ್ಶನ, ಪ್ರೇರಣೆ ಹಾಗೂ ನೆರವು ನೀಡುತ್ತಿದೆ.
ರೊಟ್ಟಿ ತಟ್ಟುವ ಯಂತ್ರ, ಎಣ್ಣೆ ತೆಗೆಯುವ ಗಾಣ, ಮಂಡಕ್ಕಿ ಉರಿಯಲು, ಖಾರ ಕುಟ್ಟುವ ಯಂತ್ರ, ಸಿರಿಧಾನ್ಯ ಸಂಸ್ಕರಣೆ ಯಂತ್ರ, ಹೊಲಿಗೆ ಯಂತ್ರ, ಹಿಟ್ಟಿನ ಗಿರಣಿ, ಕೃಷಿ ಪಂಪ್ ಸೆಟ್, ಝೆರಾಕ್ಸ್ ಯಂತ್ರಗಳು, μÅಡ್ಜ್ ಹೀಗೆ ವಿವಿಧ ಸಣ್ಣ ಉದ್ಯಮ-ವ್ಯಾಪಾರಕ್ಕೆ ಪೂರಕವಾಗುವಂತೆ ಯಂತ್ರಗಳ ನೆರವು ಜತೆಗೆ ಸೌರಶಕ್ತಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದೆ. ವಿಶೇಷವಾಗಿ ಸುಮಾರು ಎರಡು ಸಾವಿರ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಬೋಧನೆ ಸಲಕರಣೆ ನೀಡಿದ್ದರೆ, ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಪೂರ್ಣವಾಗಿ ಸೌರಶಕ್ತಿಯಿಂದ ಬೆಳಕು, ಬಳಕೆ ಅವಕಾಶ ಕಲ್ಪಿಸಿದೆ.
ಗಾಣದ ಎಣ್ಣೆ ಘಮ-ಬಿಸಿ ಮಂಡಕ್ಕಿ: ಹಾವೇರಿ ಜಿಲ್ಲೆಯಲ್ಲಿ ಸೆಲ್ಕೋ ಸಂಸ್ಥೆಯ ನೆರವು ಪಡೆದ ಅನೇಕರ ಬದುಕಿನಲ್ಲಿ ಬದಲಾವಣೆ ಕಂಡಿದೆ. ಹಲವರು ಹೊಸ ವ್ಯಾಪಾರ-ಉದ್ಯಮ ಆರಂಭಿಸಿದ್ದರೆ ಇನ್ನು ಕೆಲವರು ಉದ್ಯಮದಲ್ಲಿ ನೆಗೆತ ಕಂಡುಕೊಂಡಿದ್ದಾರೆ. ಈಗಾಗಲೇ ಇದ್ದ ಉದ್ಯಮದಲ್ಲಿ ವೆಚ್ಚ ತಗ್ಗಿಸಿಕೊಂಡಿದ್ದಾರೆ. ಟಾರ್ಚ್ ಬೆಳಕಲ್ಲಿ ಅನಿವಾರ್ಯವಾಗಿ ಹೆರಿಗೆ ಮಾಡಿಸಬೇಕಾಗಿದ್ದ ನರ್ಸ್‌ಗಳ ಮೊಗದಲ್ಲಿ ಸೌರಶಕ್ತಿ ದೀಪದ ಬೆಳಕು ಮಂದಹಾಸ ಬೀರುವಂತೆ ಮಾಡಿದೆ.
ಹಾವೇರಿ ನಗರದ ಹೊರವಲಯದಲ್ಲಿ ಪುಟ್ಟದಾದ ಶೆಡ್‌ನಲ್ಲಿ ಭಟ್ಟಿ ಹೊಂದಿರುವ ಜಾಕೀರ್ ಹುಸೇನ್ ನಿತ್ಯ ಸುಮಾರು ಮೂರು ಕ್ವಿಂಟಲ್‌ನಷ್ಟು ಮಂಡಕ್ಕಿ ತಯಾರಿಸುತ್ತಾರೆ. ಈ ಹಿಂದೆ ಮಂಡಕ್ಕಿ ತಯಾರಿಕೆಗೆ ಟೈರ್ ಸುಡುವುದು, ವಿದ್ಯುತ್ ಬಳಕೆ ಮಾಡುತ್ತಿದ್ದರು. ಈಗ ಸೆಲ್ಕೋ ಕಂಪೆನಿ ಸೌರಶಕ್ತಿ ಆಧಾರಿತ ಯಂತ್ರ ಅಳವಡಿಸಿಕೊಟ್ಟಿದೆ. ಸುಮಾರು 72 ಸಾವಿರ ರೂ. ವೆಚ್ಚದ ಸೌರಶಕ್ತಿ ಅಳವಡಿಕೆಗೆ ಸೆಲ್ಕೋ ಫೌಂಡೇಶನ್ ಸುಮಾರು 32 ಸಾವಿರ ರೂ. ನೀಡಿದೆ. ಇದರಿಂದ ವಿದ್ಯುತ್ ಕಣ್ಣಾಮುಚ್ಚಾಲೆ, ವಿದ್ಯುತ್ ಗುಣಮಟ್ಟದ ಪೂರೈಕೆಯಲ್ಲಿ ಏರಿಳಿತದ ಯಾವುದೇ ಸಮಸ್ಯೆ ಇಲ್ಲದೆ ಜಾಕೀರ್ ಹುಸೇನ್ ತನ್ನ ಇಬ್ಬರು ಮಕ್ಕಳ ಜತೆಗೂಡಿ ತೃಪ್ತಿಯಿಂದ ಮಂಡಕ್ಕಿ ತಯಾರಿಸುತ್ತಿದ್ದಾರೆ. ಜತೆಗೆ ತಿಂಗಳಿಗೆ 1000-1,200 ರೂ.ವರೆಗೆ ಬರುತ್ತಿದ್ದ ವಿದ್ಯುತ್ ಬಿಲ್ ವೆಚ್ಚವೂ ಇಲ್ಲವಾಗಿದೆ.
ಮೆಕ್ಯಾನಿಕಲ್ ಡಿಪ್ಲೊಮಾ ಮುಗಿಸಿ ಉದ್ಯೋಗದಲ್ಲಿದ್ದ ರಾಣಿಬೆನ್ನೂರಿನ ಕಿರಣ ಬನ್ನಿಮಟ್ಟಿ ಎಂಬುವರು ಉದ್ಯೋಗಕ್ಕೆ ಶರಣು ಹೇಳಿ ಗಾಣದಿಂದ ಎಣ್ಣೆ ತೆಗೆಯಬೇಕೆಂಬ ಸಾಹಸಕ್ಕಿಳಿದಿದ್ದಾರೆ. ಸೆಲ್ಕೋದಿಂದ ಸುಮಾರು 12 ಸೋಲಾರ್ ಪೆನಲ್‌ಗಳನ್ನು ಅಳವಡಿಸಿ ಎಂಟು ಬ್ಯಾಟರಿಯೊಂದಿಗೆ 250 ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಕಿರಣ ಬನ್ನಿಮಟ್ಟಿ “ನವ ಪುರಾತನ’ ಬ್ರಾಂಡ್‌ನಡಿ ಶೇಂಗಾ, ಕುಸುಬೆ, ಎಳ್ಳು ಇನ್ನಿತರೆ ಎಣ್ಣೆ ತಯಾರಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಗಾಣದಿಂದ ಎಣ್ಣೆ ಉತ್ಪಾದನೆಯಲ್ಲಿ ತೊಡಗಿದ್ದು, ಉತ್ತಮ ವಹಿವಾಟು ನಡೆಯುತ್ತಿದೆ.
ತಾಸಿಗೆ 500 ರೊಟ್ಟಿ: ರಾಣಿಬೆನ್ನೂರು ತಾಲೂಕಿನ ಕರೂರನಲ್ಲಿ ನಾಗಪ್ಪ-ವಿನೋದ ಕನ್ನಾಳ ದಂಪತಿ ರೊಟ್ಟಿ ತಟ್ಟುವ ಯಂತ್ರ ತಂದಿದ್ದು, ಇದಕ್ಕೆ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಇಲ್ಲಿಯೂ ಬಹುತೇಕ ನೆರವನ್ನು ಸೆಲ್ಕೋ ಕಂಪನಿ ನೀಡಿದೆ. ಒಂದು ತಾಸಿಗೆ ಸುಮಾರು 500 ರೊಟ್ಟಿಯನ್ನು ತಟ್ಟುವ ಯಂತ್ರ ಇದಾಗಿದೆ. ಇದರ ನಿರ್ವಹಣೆಗೆ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಐದು ರೂ. ಒಂದರಂತೆ ರೊಟ್ಟಿಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಮದ ಸುತ್ತಮುತ್ತಲಿನ ದಾಭಾಗಳು ಹಾಗೂ ಮನೆಯವರು ರೊಟ್ಟಿ ಖರೀದಿಸುತ್ತಿದ್ದಾರೆ. ಹದಿನೈದು ಎಕರೆ ಜಮೀನು ಹೊಂದಿರುವ ಈ ಕುಟುಂಬ ತಮ್ಮದೇ ಜಮೀನಿನಲ್ಲಿ ಬೆಳೆದ ಜೋಳವನ್ನು ಇದಕ್ಕೆ ಬಳಸುತ್ತಿದೆ. ಯಂತ್ರ ಅಳವಡಿಸಿ ಸುಮಾರು ಒಂದೂವರೆ ಎರಡು ತಿಂಗಳಾಗಿದೆ. ತಂದೆ-ತಾಯಿ ರೊಟ್ಟಿ ತಯಾರಿಕೆಯಲ್ಲಿ ತೊಡಗಿದ್ದು, ರಜೆಗೆಂದು ಬಂದಾಗ ಕೈಜೋಡಿಸುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಉದ್ಯಮ ಇನ್ನಷ್ಟು ಬೆಳವಣಿಗೆ ಕಾಣುವ ವಿಶ್ವಾಸವಿದೆ ಎನ್ನುತ್ತಾರೆ ಮಹಾರಾಷ್ಟ್ರದಲ್ಲಿ ಎಂಟೆಕ್ ಮಾಡುತ್ತಿರುವ ನಾಗಮ್ಮ-ವಿನೋದಾ ಕನ್ನಾಳ ಅವರ ಪುತ್ರಿ ಪ್ರಿಯಾಂಕಾ ಕನ್ನಾಳ.
ಸಿರಿಧಾನ್ಯಕ್ಕೆ ವಿಶೇಷ ಕೊಡುಗೆ: ಇಟಗಿಯಲ್ಲಿ ಭೂಮಿಕಾ ರೈತ ಉತ್ಪಾದಕ ಕಂಪನಿ ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದೆ. ಇಲ್ಲಿನ ಸಂಸ್ಕರಣೆ ಯಂತ್ರೋಪಕರಣಗಳಿಗೆ ಸೋಲಾರ್ ಅಳವಡಿಕೆ, ಕಂಪನಿ ಅಡಿಯಲ್ಲಿ ಸುಮಾರು 750ಕ್ಕೂ ಹೆಚ್ಚು ಷೇರುದಾರರಿಗೆ ಸಿರಿಧಾನ್ಯಗಳ ಬೀಜ, ಸಾವಯವ ಆಧಾರಿತ ಗೊಬ್ಬರ ಇನ್ನಿತರೆ ನೆರವು ಕಾರ್ಯವನ್ನು ಮಾಡಿದೆ. ಈ ಕಂಪನಿ ಭೂಮಿಕಾ ಬ್ರಾಂಡ್‌ಅಡಿಯಲ್ಲಿ ಸಿರಿಧಾನ್ಯಗಳು, ಜೋಳ, ರಾಗಿ ಹಿಟ್ಟು, ಸಿರಿಧಾನ್ಯಗಳ ಪೌಡರ್ ಇನ್ನಿತರೆ ಉತ್ಪನ್ನ ನೀಡುತ್ತಿದ್ದು, ವಾರ್ಷಿಕ 55 ಲಕ್ಷ ರೂ. ವಹಿವಾಟು ನಡೆಸುತ್ತಿದೆ.
ಕೊಂಡೋಜಿಯಲ್ಲಿ ಮಮತಾ ಪ್ರಕಾಶ ಎಂಬ ಮಹಿಳೆ ಕಾಲಿನಿಂದ ಪೆಡಲ್ ಮಾಡುವ ಮೂಲಕ ರೊಟ್ಟಿ ತಯಾರಿಸುವ ಯಂತ್ರವನ್ನು ಸೆಲ್ಕೋದಿಂದ ಪಡೆದಿದ್ದು, ನಿತ್ಯ 300 ರೊಟ್ಟಿ ತಟ್ಟುತ್ತಿದ್ದಾರೆ. ಖಡಕ್ ರೊಟ್ಟಿಗೆ ಉತ್ತಮ ಬೇಡಿಕೆ ಇದೆ. ಹಿಟ್ಟು ಕಲಿಸುವ ಯಂತ್ರ ತರಿಸಿದ್ದು, ಉತ್ತಮ ವಹಿವಾಟು, ಆದಾಯ ಕಾಣುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಹಾವೇರಿಯಲ್ಲಿ ವರ್ಷಾ ಎಂಬ ಯುವತಿ ಮನೆಯಲ್ಲಿಯೇ ಝೆರಾಕ್ಸ್ ಯಂತ್ರ ನಿರ್ವಹಿಸುತ್ತಿದ್ದು, ಇದಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ಇರಲಿ ಇಲ್ಲದಿರಲಿ ನಿತ್ಯ 100-150 ಪ್ರತಿಗಳ ಝೆರಾಕ್ಸ್ ತೆಗೆಯಲಾಗುತ್ತಿದೆ. ಕಲರ್ ಪ್ರಿಂಟ್, ಭಾವಚಿತ್ರ, ಮೊಬೈಲ್‌ನಿಂದ ಡೌನ್ ಲೋಡ್ ಮಾಡಿದ ಮಾಹಿತಿ ಎಲ್ಲವನ್ನು ಪ್ರಿಂಟ್ ತೆಗೆದುಕೊಡಲಾಗುತ್ತಿದೆ. ಹೀಗೆ ಹಾವೇರಿ ಜಿಲ್ಲೆಯಲ್ಲಿ ವಿವಿಧ ರೂಪದಲ್ಲಿ ತನ್ನ ಸೇವಾ ಕಾರ್ಯವನ್ನು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಮಾಡಿದ್ದು, ಇತರರಿಗೆ ಮಾದರಿಯಾಗಿದೆ.
ಆರೋಗ್ಯ ಕೇಂದ್ರಕ್ಕೆ ‘ಬೆಳಕು’ ಕಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿಯಾಗಿದ್ದು, ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇಡೀ ಆಸ್ಪತ್ರೆಯ ಸುತ್ತಲೂ ಸುಂದರ ತೋಟವಿದೆ. ಯಾವ ರೂಪದಿಂದ ನೋಡಿದರೂ ಖಾಸಗಿ ಆಸ್ಪತ್ರೆಯನ್ನು ಮೀರಿಸುವ, ಕಾರ್ಪೊರೇಟ್ ಆಸ್ಪತ್ರೆಯಂತೆ ಭಾಸವಾಗುತ್ತಿದೆ. ಈ ಆಸ್ಪತ್ರೆಗೆ ವಿದ್ಯುತ್ ಸಮಸ್ಯೆ ಎಷ್ಟು ಕಾಡುತ್ತಿತ್ತು ಎಂದರೆ ಟಾರ್ಚ್ ಬೆಳಕಲ್ಲಿ ಎಷ್ಟೋ ಹೆರಿಗೆಗಳನ್ನು ಮಾಡಿಸಿದ್ದು ಇದೆ ಎಂಬುದು ಅಲ್ಲಿ ಸುಮಾರು 24 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸಾವಿತ್ರಿ ಅವರ ಅನಿಸಿಕೆ. ಈ ಆಸ್ಪತ್ರೆಗೆ ಸೆಲ್ಕೋದವರು ವಿವಿಧ ಸಂಸ್ಥೆಗಳ ನೆರವಿನೊಂದಿಗೆ 9 ಲಕ್ಷ ರೂ.ವೆಚ್ಚದಲ್ಲಿ ಇಡೀ ಆಸ್ಪತ್ರೆ ಬಳಕೆಗೆ ಬರುವಂತೆ ಸೋಲಾರ್ ವ್ಯವಸ್ಥೆ, ಸೋಲಾರ್ ವಾಟರ್ ಹೀಟರ್, ಕೆಲ ವೈದ್ಯಕೀಯ ಸಲಕರಣೆ ನೀಡಿದ್ದಾರೆ. ತಿಂಗಳಿಗೆ 15-20 ಹೆರಿಗೆ ಇಲ್ಲಾಗುತ್ತಿದೆ. ಬಾಣಂತಿಯರಿಗೆ ಬಿಸಿ ನೀರು ಸಿಗುತ್ತದೆ ಎಂಬುದು ಸಾವಿತ್ರಿ ಅವರ ಹರ್ಷದ ಮಾತು.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.