ಸಾಂವಿಧಾನಿಕ ಮೌಲ್ಯ ಹೆಚ್ಚಳದ ಶಿಕ್ಷಣ ಅವಶ್ಯ: ನ್ಯಾಯಮೂರ್ತಿ ಬಿ.ವಿ. ನಾಗರತ್ನಾ
ಜ್ಞಾನ ಗಳಿಕೆ ವಿಚಾರದಲ್ಲಿ ಕೂಪ ಮಂಡೂಕರಾಗಬೇಡಿ
Team Udayavani, Jun 12, 2022, 11:49 AM IST
ಹುಬ್ಬಳ್ಳಿ: ಕಾನೂನು ಶಿಕ್ಷಣ ಕೇವಲ ಕಾನೂನಿನ ವ್ಯಾಪ್ತಿಯ ಒಳಗೊಂಡಿರುವ ವಿಷಯವಾಗಿರದೆ ಅದು ಸಾಮಾಜಿಕ, ರಾಜಕೀಯ, ಐತಿಹಾಸಿಕ ಮತ್ತು ಆರ್ಥಿಕ ಕ್ಷೇತ್ರಕ್ಕೆ ಪೂರಕವಾಗಿದೆ. ಕಾನೂನು ಶಾಲೆಗಳು ಸಾಮಾಜಿಕವಾಗಿ ಸಂಬಂಧಿತ ಶಿಕ್ಷಣದ ಕುರಿತು ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡುವುದು ಮುಖ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಹೇಳಿದರು.
ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ(ಕೆಎಸ್‌ಎಲ್‌ಯು)ದ ನಾಲ್ಕನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಭವಿಷ್ಯದ ಕಾನೂನು ಶಿಕ್ಷಣ ಮತ್ತು ಭಾರತದ ನ್ಯಾಯದಾನ ವ್ಯವಸ್ಥೆಯಲ್ಲಿ ಬೀರುವ ಪರಿಣಾಮ’ ಕುರಿತು ಅವರು ಉಪನ್ಯಾಸ ನೀಡಿದರು.
ಜ್ಞಾನ ಗಳಿಕೆ ವಿಚಾರದಲ್ಲಿ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ಕೂಪ ಮಂಡೂಕ ರೀತಿಯಾಗದೆ ನಿರಂತರವಾಗಿ ಅಧ್ಯಯನಶೀಲರಾಗಬೇಕು. ಕಾನೂನು ಅಧ್ಯಯನ ಸದಾ ಚಲನಶೀಲ ಆಗಿರುವಂಥದ್ದು. ಎಲ್‌ಎಲ್‌ಬಿ, ಎಲ್‌ಎಲ್‌ಎಂ ಓದಿದಾಕ್ಷಣ ಎಲ್ಲವೂ ತಿಳಿದುಕೊಂಡಿದ್ದೇವೆ ಎಂಬ ಭಾವನೆ ಬೇಡ. ನಾವು ದೊಡ್ಡ ಸ್ಥಾನಕ್ಕೇರಿದಂತೆ ಹೆಚ್ಚಿನ ಅಧ್ಯಯನ ಬೇಕಾಗುತ್ತಿದ್ದು, ಕಲಿಕೆ ನಿಲ್ಲಿಸಬಾರದು. ಕಾನೂನು ವಿದ್ಯಾರ್ಥಿಗಳು ಮತ್ತು ಯುವ ವಕೀಲರು ಕಲಿಕೆಯ ಉತ್ಸಾಹ ಎಂದೂ ಕಳೆದುಕೊಳ್ಳಬಾರದು ಎಂದರು.
ಶಿಕ್ಷಣ ಸಂಸ್ಥೆಗಳು ಸ್ಥಳೀಯ ಬಾರ್ ಅಸೋಸಿಯೇಶನ್ ಅನುಭವಿ ವಕೀಲರು, ತಜ್ಞರಿಂದ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಬಾರ್ ಹಾಗೂ ಪೀಠಗಳು ಕಾನೂನು ಶಿಕ್ಷಣ ಸಂಸ್ಥೆಗಳ ಮೇಲೆ ಗಮನಹರಿಸಬೇಕು. ಗುಣಮಟ್ಟದ ಶಿಕ್ಷಣ ನೀಡದ ಕಾಲೇಜ್‌ಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಪ್ರತಿ ವರ್ಷ ಸರಾಸರಿ 80 ಸಾವಿರ ವಿದ್ಯಾರ್ಥಿಗಳು ಕಾನೂನು ಅಧ್ಯಯನ ಪೂರ್ಣಗೊಳಿಸುತ್ತಾರೆ. ಆದರೆ ಶೇ.80 ದಾವೆ ಹೂಡುವವರು ಶೇ.20 ವಕೀಲರು ಮಾತ್ರ. ಹೀಗಾಗಿ ಕಾನೂನು ಬೋಧಿಸುವ ಶಾಲಾ-ಕಾಲೇಜುಗಳಲ್ಲಿನ ತರಬೇತಿಯ ಗುಣಮಟ್ಟ ಉತ್ಕೃಷ್ಟವಾಗಬೇಕು. ಕಾನೂನು ಶಿಕ್ಷಣ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಆಗಬೇಕು. 5 ವರ್ಷದ ಬದಲಾಗಿ 6 ವರ್ಷಕ್ಕೆ ಹೆಚ್ಚಿಸಿ ಕೊನೆ ವರ್ಷವನ್ನು ವಾದ ಮಂಡನೆ, ಪ್ರಾತ್ಯಕ್ಷಿಕಾ ಕಲಿಕೆಗೆ ಮೀಸಲಿಡಬೇಕು. ಪರೀಕ್ಷಾ ಪದ್ಧತಿ ಕೂಡ ಕೇವಲ ಪಠ್ಯ ಆಧರಿಸಿ ನಡೆಯಬಾರದು. ಪ್ರಾಯೋಗಿಕವಾಗಿ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯಬೇಕು. ಪ್ರಕರಣ ಅಧ್ಯಯನ, ವಿಷಯ ಮಂಡನೆ ಕುರಿತಾಗಿ ಮೌಲ್ಯಮಾಪನ ಆಗಬೇಕು. ಕಾನೂನು ಅಧ್ಯಯನ, ಸಂವಹನದ ವೇಳೆ ಇಂಗ್ಲಿಷ್ ಜೊತೆಗೆ ಕನ್ನಡ ಸೇರಿ ಪ್ರಾದೇಶಿಕ ಭಾಷೆಗೆ ಒತ್ತು ಸಿಗಬೇಕು. ನಮ್ಮ ಸಂವಿಧಾನ, ಕಾನೂನು ಪಠ್ಯ ಸೇರಿ ಹಲವೆಡೆ ಇಂಗ್ಲಿಷ್ ಭಾಷಾ ಮಾಧ್ಯಮ ಹೆಚ್ಚಾಗಿ ಬಳಕೆಯಲ್ಲಿದೆ. ಕನ್ನಡ ಸೇರಿ ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಕಾನೂನು ಪಠ್ಯ ಸಿದ್ಧವಾಗಬೇಕು ಎಂದರು.
ಕಾನೂನು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ನ್ಯಾಯಮೂರ್ತಿ ಇಂದ್ರೇಶ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಧೀಶರು, ವೆಂಕಟೇಶ ನಾಯ್ಕ, ಡಾ| ಸಿ.ಎಸ್. ಪಾಟೀಲ, ಮಹಮ್ಮದ ಜುಬೇರ, ಪ್ರಶಿಕ್ಷಣ ಮಂಡಳಿ ಸದಸ್ಯರು, ಕಾನೂನು ವಿವಿ ವಿದ್ಯಾರ್ಥಿಗಳು ಮೊದಲಾದವರಿದ್ದರು.
ವಿಶ್ರಾಂತ ಕುಲಪತಿ ಡಾ| ಈಶ್ವರ ಭಟ್ ಪ್ರಾಸ್ತಾವಿಕ ಮಾತನಾಡಿ ಕಾನೂನು ವಿವಿ ಕಾರ್ಯಕ್ರಮ, ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪ್ರಭಾರ ಕುಲಪತಿ ಡಾ| ರತ್ನಾ ಧರ್ಮಗೌಡರ ಸ್ವಾಗತಿಸಿದರು. ರಶ್ಮಿ ಪಿ. ಮಂಡಿ ನಿರೂಪಿಸಿದರು. ಜಿ.ಬಿ. ಪಾಟೀಲ ವಂದಿಸಿದರು.
ಕಾನೂನು ಶಿಕ್ಷಣ ನ್ಯಾಯ ಹಾಗೂ ಕಾನೂನಿನ ನಡುವಿನ ಸೇತುವೆಯಾಗಬೇಕು. ಭಾರತದ ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯುವ ಶಿಕ್ಷಣ ಒದಗಿಸಬೇಕು. ಕೇವಲ ಸಂಘರ್ಷ ಬಗೆಹರಿಸುವುದು ಹೇಗೆ ಎಂಬುದಕ್ಕೆ ಮಹತ್ವ ನೀಡದೆ, ನ್ಯಾಯ ದೊರಕಿಸುವ ಬಗ್ಗೆ ಒತ್ತು ಕೊಡಬೇಕು. -ಬಿ.ವಿ. ನಾಗರತ್ನಾ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಪ್ರಾತ್ಯಕ್ಷಿಕಾ ಕಲಿಕಾ ವಿಧಾನಕ್ಕೆ ಹೆಚ್ಚಿನ ಒತ್ತು: ಅಧ್ಯಕ್ಷತೆ ವಹಿಸಿದ್ದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ವೈದ್ಯಕೀಯಕ್ಕಿಂತ ಕಾನೂನು ಶಿಕ್ಷಣ ಪಡೆದವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಆದರೆ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣಕ್ಕೆ ಕೊಡುವಷ್ಟು ಒತ್ತು ಕಾನೂನು ಶಿಕ್ಷಣಕ್ಕೆ ಕೊಡುತ್ತಿಲ್ಲ. ಮನೆ ಬಾಗಿಲಿಗೆ ಕಾಲೇಜ್‌ಗಳನ್ನು ತಂದರೂ ಕೆಲ ವಿದ್ಯಾರ್ಥಿಗಳು ಹಾಜರಾತಿ ಬೇಡ. ಪರೀಕ್ಷೆ ಬೇಡವೆಂದರೆ ಹೇಗೆ? ಕಾನೂನು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಿದರೆ ಮುಂದೆ ನಿಮ್ಮನ್ನು ನಂಬಿ ಬಂದವರು ಸಮಸ್ಯೆ ಅನುಭವಿಸಬೇಕಾಗುತ್ತದೆ. ಸರಕಾರ ಪ್ರಾತ್ಯಕ್ಷಿಕಾ ಕಲಿಕಾ ವಿಧಾನಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಲಿದೆ ಎಂದರು.
ಎಸ್.ಆರ್.ಬೊಮ್ಮಾಯಿ ಸಂವಿಧಾನ ಅಧ್ಯಯನ ಪೀಠ ಸ್ಥಾಪನೆ: ಕಾನೂನು ಸಚಿವ ಮಾಧುಸ್ವಾಮಿ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಹೆಸರಲ್ಲಿ 1 ಕೋಟಿ ರೂ. ಮೊತ್ತದ ಸಂವಿಧಾನ ಅಧ್ಯಯನ ಪೀಠ ಆರಂಭಿಸಲು ಚಿಂತನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರು ಒಪ್ಪಿದ್ದಾರೆ. ಸರಕಾರದಿಂದ 50 ಲಕ್ಷ ರೂ. ಹಾಗೂ ಇನ್ನುಳಿದ 50 ಲಕ್ಷ ರೂ. ಕಾನೂನು ವಿವಿಯಿಂದ ಹೊಂದಿಸುವ ಬಗ್ಗೆ ಯೋಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ರಾಜ್ಯ ಕಾನೂನು ವಿವಿ ನಾಲ್ಕನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶದ ಕಾನೂನನ್ನು ರಾಜ್ಯದಲ್ಲೂ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕಾನೂನು ತಿಳಿವಳಿಕಾ ಕೇಂದ್ರ ಸ್ಥಾಪಿಸಲು ಹಾಗೂ ವಿದೇಶದಲ್ಲಿ ಭಾರತದ ಕಾನೂನು ಅಧ್ಯಯನ ಸಾಧ್ಯವಾಗುವಂತೆ ಕಾಲೇಜು ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. ಅದರಂತೆ ವಿದೇಶಕ್ಕೆ ತೆರಳುವವರಿಗೆ ಅಲ್ಲಿನ ಕಾನೂನು ಅರಿವು ಇರಬೇಕಾಗುತ್ತದೆ. ಹೀಗಾಗಿ ರಾಜ್ಯದ ಹಲವೆಡೆ ಇಂತಹ ಕಾನೂನು ತಿಳಿವಳಿಕೆ ಕೇಂದ್ರ ಸ್ಥಾಪಿಸಿ, ಕಾನೂನು ತಜ್ಞರನ್ನು ನಿಯೋಜಿಸಿ ಅರಿವು ಮೂಡಿಸಲಾಗುವುದು. ಇದರಿಂದ ವಿದೇಶಕ್ಕೆ ತೆರಳುವವರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜೂ. 18ರಂದು ಬೆಂಗಳೂರಿನಲ್ಲಿ ಮಧ್ಯಸ್ಥಿಕೆ ಕೇಂದ್ರ ಆರಂಭಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.