![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 19, 2021, 6:40 PM IST
ವಾಡಿ: ಪಟ್ಟಣದಲ್ಲಿ ಕಳೆದ 2007ನೇ ಸಾಲಿನಿಂದ ಎಚ್‌ಐವಿ ಸೋಂಕಿತರ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವ ಎಆರ್‌ಟಿ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಲು ಎಸಿಸಿ ಸಿಮೆಂಟ್ ಕಂಪನಿ ಆಡಳಿತ ಮುಂದಾಗಿದೆ. ಸೆ.31ರಂದು ಈ ಆಸ್ಪತ್ರೆಯ ಆರೋಗ್ಯ ಸೇವೆಗೆ ಕೊನೆ ದಿನವಾಗಲಿದ್ದು, ಎಸಿಸಿ ಆಡಳಿತದ ಈ ತೀರ್ಮಾನದಿಂದ ಪ್ರತಿ ತಿಂಗಳು ಸೋಂಕಿನ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುತ್ತಿದ್ದ 900 ಎಚ್‌ಐವಿ ಸೋಂಕಿತರು ಕಂಗಾಲಾಗಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರು, ಲಾರಿ ಚಾಲಕರು ನೂರಾರು ಸಂಖ್ಯೆಯಲ್ಲಿರುವ ಚಿತ್ತಾಪುರ ತಾಲೂಕಿನ ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿ 70 ಜನ, ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ 200 ಜನ ಸೇರಿದಂತೆ ಯಾದಗಿರಿ, ಕಲಬುರಗಿ, ಜೇವರ್ಗಿ, ಬೀದರ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 900 ಮಂದಿ ಎಚ್‌ಐವಿ ಸೋಂಕಿತರು ಸ್ಥಳೀಯ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಪ್ರತಿ ತಿಂಗಳು ಗುಪ್ತವಾಗಿ ಆಸ್ಪತ್ರೆಗೆ ಬಂದು ಎಚ್‌ಐವಿ ವೈರಸ್ ಪ್ರಮಾಣ, ದೇಹದ ರೋಗನಿರೋಧಕತೆ, ತೂಕ, ಟಿಬಿ ಸೇರಿದಂತೆ ಇತರೆ ಪರೀಕ್ಷೆ ಮಾಡಿಸಿಕೊಂಡು ಮಾತ್ರೆಗಳನ್ನು ಸ್ವೀಕರಿಸುತ್ತಾರೆ.
ಇದು ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ನಡೆಯುವ ಸಾಮಾನ್ಯ ಪ್ರಕ್ರಿಯೆ. ಎಸಿಸಿ ಆಡಳಿತದಿಂದಲೇ ಆಗಾಗ ಎಚ್‌ಐವಿ ಜಾಗೃತಿ, ಆರೋಗ್ಯ ಶಿಬಿರ, ಸೋಂಕಿತರಿಗೆ ಸೌಲಭ್ಯ ಹೀಗೆ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೀಗ ಏಕಾಏಕಿ ಎಸಿಸಿ ಕಂಪನಿಯವರು ಈ ಸೌಲಭ್ಯ ಸ್ಥಗಿತಗೊಳಿಸಲು ತೀರ್ಮಾನಿಸಿದ್ದು, ಸೋಂಕಿತರಿಗೆ ದಿಕ್ಕು ತೋಚದಂತಾಗಿದೆ.
ಸಿಮೆಂಟ್ ಉತ್ಪಾದನೆ ಜತೆಗೆ ಸುತ್ತಲಿನ ಗ್ರಾಮಗಳ ಆರೋಗ್ಯ ಸೇವೆ, ಮೂಲಭೂತ ಸೌಕರ್ಯ, ರಸ್ತೆ ಮತ್ತು ಕುಡಿಯುವ ನೀರಿನ ಸೌಕರ್ಯಗಳು ಸೇರಿದಂತೆ ವಿವಿಧ ರೀತಿಯ ಸಾರ್ವಜನಿಕ ಸೇವೆಯಲ್ಲಿ ಕಂಪನಿ ಆಡಳಿತ ತೊಡಗಬೇಕು ಎನ್ನುವುದು ನಿಯಮವಾಗಿದೆ. ಒಬ್ಬ ವೈದ್ಯಾಧಿಕಾರಿ ಸೇರಿದಂತೆ ಏಳು ಸಿಬ್ಬಂದಿ ಮೂಲಕ ವಿವಿಧ ರೋಗ ಪರೀಕ್ಷೆಗಳ ಯಂತ್ರೋಪಕರಣ ಸೌಲಭ್ಯಗಳೊಂದಿಗೆ ಎಆರ್‌ಟಿ ಕೇಂದ್ರ ಜನಸೇವೆಯಲ್ಲಿ ತೊಡಗಿತ್ತು.
ಇದು ಈ ಭಾಗದ ನೂರಾರು ಜನ ಎಚ್‌ಐವಿ ಸೋಂಕಿತರಿಗೆ ಅನುಕೂಲಕರವೂ ಆಗಿತ್ತು. ಈ ಮೊದಲು ಇಲ್ಲಿ 1555 ಜನ ಸೋಂಕಿತರು ಚಿಕಿತ್ಸೆಗಾಗಿ ಹೆಸರು ನೋಂದಾಯಿಸಿರುವ ದಾಖಲೆಯಿದೆ. ಇದರಲ್ಲಿ ಕೆಲವರು ಮೃತಪಟ್ಟರೆ, ಇನ್ನೂ ಕೆಲವರು ಇತರೆ ಎಆರ್‌ಟಿ ಕೇಂದ್ರಗಳಲ್ಲಿ
ಮಾತ್ರೆಗಳನ್ನು ಪಡೆಯುತ್ತಿದ್ದಾರೆಂಬುದು ಆಸ್ಪತ್ರೆ ಸಿಬ್ಬಂದಿಯಿಂದ ತಿಳಿದು ಬಂದಿದೆ. ಸರ್ಕಾರದಿಂದ ಉಚಿತವಾಗಿ ಬರುವ ಮಾತ್ರೆಗಳನ್ನು ವಿತರಿಸುವ ಮೂಲಕ ಸೋಂಕಿತರ ಬದುಕಿನ ಜೀವಾಳವಾಗಿದ್ದ ಉತ್ತಮ ಸೇವೆಯೊಂದನ್ನು ಎಸಿಸಿ ಕಂಪನಿ ಸ್ಥಗಿತಗೊಳಿಸುತ್ತಿರುವುದು ರೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಎಸಿಸಿ ಕಂಪನಿ ಆಧೀನದಲ್ಲಿ ನಡೆಯುತ್ತಿರುವ ಎಆರ್‌ಟಿ ಸೆಂಟರ್‌ನ್ನು ಸೆ.31ರಂದು ಮುಚ್ಚುವುದಾಗಿ ಎಸಿಸಿ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಬೇರೊಂದು ಸ್ಥಳದಲ್ಲಿ ಕೆಲಸ ನೋಡಿಕೊಳ್ಳುವಂತೆ ನಮಗೆ ಮತ್ತು ಸಿಬ್ಬಂದಿಗೆ ಸೂಚಿಸಿದ್ದಾರೆ. ನಮ್ಮ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ನೂರಾರು ಜನ ಎಚ್‌ಐವಿ ಸೋಂಕಿತರನ್ನು ಜಿಲ್ಲೆಯ ವಿವಿಧೆಡೆ ಇರುವ ಎಆರ್‌ಟಿ ಕೇಂದ್ರಗಳಿಗೆ ವರ್ಗಾಯಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆದೇಶ ಬಂದಿದೆ. ಡಿ.1ರಿಂದ ಆಸ್ಪತ್ರೆ ಸೇವೆ ಸ್ಥಗಿತಗೊಳಿಸಲಿದ್ದು, ಸ್ಥಳೀಯವಾಗಿ ಚಿಕಿತ್ಸೆ ಲಭ್ಯ ಇರಲ್ಲ.
ಡಾ| ಸಂಜಯ ಅಳ್ಳೊಳ್ಳಿ,
ವೈದ್ಯಾಧಿಕಾರಿ, ಎಸಿಸಿ ಎಆರ್‌ಟಿ ಕೇಂದ್ರ
ಸೆ.31ರಿಂದ ಎಆರ್‌ಟಿ ಕೇಂದ್ರ ಮುಚ್ಚುತ್ತಿದ್ದೇವೆ. ರೋಗಿಗಳನ್ನು ವಿಂಗಡಿಸಿ ಜಿಲ್ಲಾ ಕೇಂದ್ರಕ್ಕೆ ಮತ್ತು ಶಹಾಬಾದ, ಚಿತ್ತಾಪುರ, ಜೇವರ್ಗಿ ಎಆರ್‌ಟಿ ಕೇಂದ್ರಗಳಿಗೆ ನಿಯೋಜಿಸುತ್ತಿದ್ದೇವೆ. 14 ವರ್ಷಗಳ ಕಾಲ ಎಆರ್‌ಟಿ ಕೇಂದ್ರದಿಂದ ಆರೋಗ್ಯ ಸೇವೆ ನೀಡಿದ್ದೇವೆ. ಇದಕ್ಕಾಗಿ ಪ್ರತಿ ವರ್ಷ 20ಲಕ್ಷ ರೂ. ಖರ್ಚು ಮಾಡಿದ್ದೇವೆ. ಸದ್ಯ ವಾಡಿ ವಲಯದಲ್ಲಿ ರೋಗಿಗಳ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ ಈ ಸೌಲಭ್ಯ ಹಿಂಪಡೆದು ಪರ್ಯಾಯವಾಗಿ ಸಾರ್ವಜನಿಕ ಆರೋಗ್ಯ ಕೇಂದ್ರ ಅಥವಾ ಈ ಭಾಗದ ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ತೆರೆಯಲು ಚಿಂತನೆ ನಡೆದಿದೆ.
ಪೆದ್ದಣ್ಣ ಬೀದಳ, ಮುಖ್ಯ ವ್ಯವಸ್ಥಾಪಕ,
ಎಸಿಸಿ ಸಿಎಸ್‌ಆರ್ ವಿಭಾಗ
ಸುಮಾರು 14 ವರ್ಷಗಳ ಕಾಲ ಎಚ್‌ಐವಿ ಸೋಂಕಿತರ ಆರೋಗ್ಯ ಸೇವೆ ಮಾಡಿರುವ ಎಸಿಸಿ ಕಂಪನಿ ಈಗ ಶಾಶ್ವತವಾಗಿ ಆಸ್ಪತ್ರೆ ಮುಚ್ಚಲು ಕೈಗೊಂಡಿರುವ ತೀರ್ಮಾನ ಸರಿಯಾದುದ್ದಲ್ಲ. ಸ್ಥಳೀಯವಾಗಿರುವ ಈ ಆಸ್ಪತ್ರೆಯನ್ನೇ ನೆಚ್ಚಿಕೊಂಡು ಉಸಿರಾಡುತ್ತಿರುವ ನೂರಾರು ಜನ ಎಚ್‌ಐವಿ ಸೋಂಕಿತರು ಇನ್ಮುಂದೆ ಮಾತ್ರೆ ಪಡೆಯಲು-ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗಬೇಕಾದ ದುಸ್ಥಿತಿ ಎದುರಾಗಲಿದೆ. ಲಕ್ಷಾಂತರ ರೂ. ಮೌಲ್ಯದ ಮಾತ್ರೆಗಳನ್ನು ಸರ್ಕಾರ ಉಚಿತವಾಗಿ ವಿತರಿಸುವಾಗ ಇದರ ವಿತರಿಸಲು ಕಂಪನಿ ಹಿಂದೇಟು ಹಾಕುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಎಆರ್‌ಟಿ ಕೇಂದ್ರ ಮುಚ್ಚಬಾರದು. ಚುನಾಯಿತ ಜನಪ್ರತಿನಿ ಧಿಗಳು ಮಧ್ಯ ಪ್ರವೇಶಿಸಿ ಆಸ್ಪತ್ರೆ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.
ಶ್ರವಣಕುಮಾರ ಮೊಸಲಗಿ, ಜಿಲ್ಲಾ
ಸಂಘಟನಾ ಸಂಚಾಲಕ, ಡಿಎಸ್‌ಎಸ್
ಮಡಿವಾಳಪ್ಪ ಹೇರೂರ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.