ಬಿಜೆಪಿ ನಾಯಕಿ ಮನೆ ಮೇಲೆ ಸಿಐಡಿ ದಾಳಿ
Team Udayavani, Apr 18, 2022, 12:26 PM IST
ಕಲಬುರಗಿ: ಕಳೆದ ಅಕ್ಟೋಬರ್‌ನಲ್ಲಿ ನಡೆದ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆ ತೀವ್ರಗೊಳಿಸಿರುವ ಸಿಐಡಿ ತಂಡ ಭಾನುವಾರ ನಗರದಲ್ಲಿ ಬಿಜೆಪಿ ನಾಯಕಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ.
ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ ಮನೆ ಮೇಲೆ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಹಾಗೂ ಡಿಎಸ್‌ಪಿಗಳಾದ ಪ್ರಕಾಶ, ಶಂಕರಗೌಡ ಪಾಟೀಲ್ ನೇತೃತ್ವದ ತಂಡ ದಾಳಿ ಮಾಡಿ, ಶೋಧ ಕಾರ್ಯ ನಡೆಸಿ ಮಹತ್ವದ ಮಾಹಿತಿ ಕಲೆಯತ್ತ ದೃಢ ಹೆಜ್ಜೆ ಇಟ್ಟಿದೆ.
ದಾಳಿ ನಡೆಸಿದಾಗ ಮನೆಗೆ ಬೀಗ ಹಾಕಲಾಗಿತ್ತು. ಆಗ ಅಧಿಕಾರಿಗಳು ದಿವ್ಯಾ ಹಾಗರಗಿ ಪತಿ ರಾಜೇಶ ಹಾಗರಗಿ ಅವರನ್ನು ವಿಚಾರಿಸಿದಾಗ ಮಾಹಿತಿ ಸಿಗಲಿಲ್ಲ. ನಾನು ಹೊಲದಲ್ಲಿರುತ್ತೇನೆ, ನನಗೆ ಇದ್ಯಾವುದೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ನಂತರ ಅಧಿಕಾರಿಗಳು ಬೀಗ ತೆರೆದು ಮನೆ ಶೋಧ ನಡೆಸಿದರು. ನಗರದ ಗೋಕುಲ ನಗರದಲ್ಲಿರುವ ಜ್ಞಾನಜ್ಯೋತಿ ಸ್ಕೂಲ್ ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದೆ. ಈ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವೀರೇಶ ಒಎಂಆರ್ ಸೀಟ್‌ನಲ್ಲಿ ಕೇವಲ 21 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ. ಆದರೆ ನಂತರ ನೋಡಿದಾಗ ನೂರಕ್ಕೆ ನೂರು ಉತ್ತರ ಬರೆದಿದ್ದ. ವಿಚಾರಣೆ ನಡೆಸಿ ಬಳಿಕ ಶಾಲೆಯ ಮೇಲ್ವಿಚಾರಕಿಯರನ್ನು ಬಂಧಿಸಿದ ನಂತರ ದಿವ್ಯಾ ಹಾಗರಗಿ ಹೇಳಿದಂತೆ ಕೆಲಸ ಮಾಡಲಾಗಿದೆ ಎಂದು ಹೇಳಿದ್ದರ ಹಿನ್ನೆಲೆಯಲ್ಲಿ ಸಿಐಡಿ ತಂಡ ದಾಳಿ ನಡೆಸಿದೆ.
ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ತಂಡ ಮುಂದಾಗಿತ್ತು. ಮನೆಯಲ್ಲಿರದ ಕಾರಣ ಅಧಿಕಾರಿಗಳು ಶೋಧ ನಡೆಸಿ ವಾಪಸ್ಸಾದರು. ಒಟ್ಟಾರೆ ಪಿಎಸ್‌ಐ ನೇಮಕಾತಿಯ ಪರೀಕ್ಷೆಯಲ್ಲಿನ ಅಕ್ರಮ ಕುರಿತಾಗಿ ಸಿಐಡಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖವಾಡ ಕಳಚಿ ಬೀಳುವ ಸಾಧ್ಯತೆಗಳಿವೆ.
ಆರ್‌ಟಿಐ ಕಾರ್ಯಕರ್ತನ ಹೆಸರು ಮುಂಚೂಣಿಗೆ: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಆರ್‌ಟಿಐ ಕಾರ್ಯಕರ್ತನೊಬ್ಬನ ಹೆಸರೂ ಸಹ ಮುಂಚೂಣಿಯಾಗಿ ಕೇಳಿ ಬರುತ್ತಿದೆ. ಆರ್‌ಟಿಐ ಕಾರ್ಯಕರ್ತ ಯಾವ ಪಾತ್ರ ನಿರ್ವಹಿಸಿದ್ದಾನೆ ಎಂಬುದರ ಕುರಿತಾಗಿ ಸಿಐಡಿ ತಂಡ ಮಾಹಿತಿ ಕಲೆ ಹಾಕುತ್ತಿದೆ. ಆರ್‌ಟಿಐ ಕಾರ್ಯಕರ್ತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಅಕ್ರಮ ಬಯಲಿಗೆ ಬರುವ ಸಾಧ್ಯತೆಗಳಿವೆ.
ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ: 545 ಪಿಎಸ್‌ಐ ನೇಮಕಾತಿ ಸಂಬಂಧ ನಡೆದ ಸಿಇಟಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರೀಕ್ಷೆ ಅಕ್ರಮದಲ್ಲಿ ಪ್ರಭಾವಿಗಳು, ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರೆನಿಸಿಕೊಂಡವರೆಲ್ಲರೂ ಭಾಗಿಯಾಗಿದ್ದರಿಂದ ಪ್ರಕರಣ ಸಿಒಡಿ ಬದಲು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲವೂ ಬಯಲಿಗೆ ಬರಲಿದೆ. ರಾಜ್ಯ ಸರ್ಕಾರ ಈ ಕೂಡಲೇ ಸಿಬಿಐ ತನಿಖೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ವರದಿ ಆಧರಿಸಿ ಕ್ರಮ: ಡಿಜಿಪಿ
ಬೆಂಗಳೂರು: ಪಿಎಸ್‌ಐ ಹುದ್ದೆಗಳ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಈಗಾಗಲೇ ತ್ವರಿತಗತಿಯಲ್ಲಿ ತನಿಖೆ ಪೂರ್ಣಗೊಳಿಸಲು ಗೃಹಸಚಿವರು ಸಿಐಡಿಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಯಾವುದೇ ಅಭ್ಯರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು ಹಾಗೂ ಸಹಾಯಕ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿದ್ದಲ್ಲಿ ಅವರ ವಿರುದ್ಧ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತೆಯೇ ಅರ್ಹ ಅಭ್ಯರ್ಥಿಗಳ ಹಿತಾಸಕ್ತಿ ರಕ್ಷಿಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.