ದೋಟಿಕೋಳ ಕೆರೆ ಒಡ್ಡು ಒಡೆದು ವರ್ಷವಾಯ್ತು
ಕೇಂದ್ರ ಸಚಿವ ಭಗವಂತ ಖೂಬಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
Team Udayavani, Sep 2, 2021, 3:37 PM IST
ಚಿಂಚೋಳಿ: ತಾಲೂಕಿನಲ್ಲಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಸತತ ಮಳೆಯಿಂದ ದೋಟಿಕೊಳ ಗ್ರಾಮದ ಸಣ್ಣ ನೀರಾವರಿ ಕೆರೆ ಭರ್ತಿಯಾಗಿ ಒಡ್ಡು ಒಡೆದು ಹೋಗಿ ಒಂದು ವರ್ಷವಾಗುತ್ತಿದ್ದರೂ, ಇನ್ನೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಮಳೆ ನೀರು ವ್ಯರ್ಥವಾಗಿ ಹರಿಯುತ್ತಿದೆ.
ತಾಲೂಕಿನ ದೋಟಿಕೊಳ ಗ್ರಾಮದ ಹತ್ತಿರದಲ್ಲಿ ಸಣ್ಣದಾದ ನಾಲಾ ಮಳೆಗಾಲದಲ್ಲಿ ಪಸ್ತಪುರ, ಮೋಘಾ, ಹೂವಿನಬಾವಿ, ರುಸ್ತಂಪುರ ಗ್ರಾಮಗಳ ಬೆಟ್ಟ-ಗುಡ್ಡಗಳಿಂದ ಹರಿದು ಬರುವ ನೀರಿನ ಪ್ರಯೋಜನವನ್ನು ಸುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಮೈಸೂರು ರಾಜ್ಯದ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಕೆರೆ ನಿರ್ಮಿಸಿಕೊಟ್ಟು ಒಂದು ಸಾವಿರ ಹೆಕ್ಟೇರ್ ಜಮೀನಿಗೆ ನೀರಿನ ಸೌಲಭ್ಯ ಒದಗಿಸಿದ್ದರು. ಕಳೆದ 2020 ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಸತತ ಮಳೆಯಿಂದ ಈ ಕೆರೆ ಸಂಪೂರ್ಣ ತುಂಬಿದ್ದರಿಂದ ಒಡ್ಡಿನಲ್ಲಿ ಬಿರುಕು ಉಂಟಾಗಿತ್ತು.
ಇದನ್ನು ಗಮನಿಸಿದ ರೈತರು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ಕೆರೆಯ ವೇಸ್ಟ್ ವೇರ್‌ದಿಂದ ನೀರು ಹರಿದು ಹೋಗುವಂತೆ ಕಾಲುವೆ ತೋಡಿಸಿದ್ದರು. ಇದಾದ ನಂತರ ಕೆರೆ ದುರಸ್ತಿಗೆ ಸರ್ಕಾರದಿಂದ ಯಾವುದೇ ಅನುದಾನ ಬರದೇ ಇದ್ದುದರಿಂದ ಕೆರೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಅಲ್ಲದೇ ಕಳೆದ ವರ್ಷ ದೋಟಿಕೋಳ ಕೆರೆ ನೀರಿನ ರಭಸಕ್ಕೆ ಕೆಳಭಾಗದಲ್ಲಿರುವ ಅನೇಕ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿತ್ತು. ಇದನ್ನು ಬೀದರ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕಳೆದ ಮೂರು ತಿಂಗಳಿಂದ ಕೆರೆ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.
ದೋಟಿಕೊಳ ಗ್ರಾಮದ ಸಣ್ಣ ನೀರಾವರಿ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಳೆಯಾಶ್ರಿತ ರೈತರು ಹಿಂಗಾರು ಬೆಳೆಗಳಿಗೆ ನೀರು ಪಡೆಯಲು ಮತ್ತು ಬೇಸಿಗೆ ದಿನಗಳಲ್ಲಿ ದನಕರುಗಳಿಗೆ, ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ನಿಶ್ಚಿತ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನಲ್ಲಿ ಕಳೆದ ವರ್ಷ ಸಾಕಷ್ಟು ಮಳೆ ಸುರಿದ್ದರಿಂದ ಹೂಡದಳ್ಳಿ,ದೋಟಿಕೊಳ, ನಾಗಾ ಇದಲಾಯಿ ಸಣ್ಣ ನೀರಾವರಿ ಕೆರೆಗಳ ಒಡ್ಡುಗಳು ಒಡೆದಿವೆ. ಅನೇಕ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಆದರೆ ಸರ್ಕಾರ ಇನ್ನೂವರೆಗೂ ಕೆರೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಮಣ್ಣುಕೊಚ್ಚಿಕೊಂಡುಹೋಗಿರುವ ಹೊಲದಲ್ಲಿ ರೈತರು ಈ ವರ್ಷ ಬಿತ್ತನೆಕಾರ್ಯವನ್ನು ಮಾಡಿಲ್ಲ. ಶಾಸಕರುಕೂಡಲೇ ಅನುದಾನ ಮಂಜೂರಿಗೊಳಿಸಿ, ಕೆರೆ ಒಡ್ಡು ನಿರ್ಮಿಸಿದರೆ ಹೊಲಗಳು, ಬೆಳೆಗಳು ಉಳಿಯುತ್ತವೆ.
ಭೀಮಶೆಟ್ಟಿ ಎಂಪಳ್ಳಿ,
ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ
ದೋಟಿಕೊಳ ಗ್ರಾಮದ ಕೆರೆ ಒಡ್ಡು ಧಾರಾಕಾರ ಮಳೆಗೆ ಒಡೆದು ಹೋಗಿ ವರ್ಷವಾಗಿದೆ. ಈಗ ವ್ಯರ್ಥವಾಗಿ ನೀರುಹರಿದು ಹೋಗುತ್ತಿದೆ. ಶಾಸಕ ಡಾ| ಅವಿನಾಶ ಜಾಧವ ಗಮನ ಹರಿಸಿಹೊಸ ಒಡ್ಡು ನಿರ್ಮಿಸಬೇಕು.
ಪದ್ಮಾಕರ, ರೈತ
*ಶಾಮರಾವ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.