ನೇತಾಜಿ-ಭಗತ್ ಚಿಂತನೆಯಲ್ಲಿದೆ ದೇಶದ ಭವಿಷ್ಯ
Team Udayavani, Feb 8, 2022, 12:50 PM IST
ವಾಡಿ: ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳಿಂದ ಹಚ್ಚಲಾಗುತ್ತಿರುವ ಧರ್ಮಾಂಧತೆ ಮತ್ತು ಜಾತಿಯತೆಯ ಕಿಚ್ಚು ಸರ್ವಜನಾಂಗದ ಏಕತೆಗೆ ಧಕ್ಕೆಯುಂಟಾಗುತ್ತಿದೆ. ಜಾತಿ ಧರ್ಮಗಳ ಚೌಕಟ್ಟು ಮೀರಿ ಜನರು ಒಗ್ಗಟ್ಟಾಗದಿದ್ದರೆ ನಮ್ಮ ಸರ್ವನಾಶಕ್ಕೆ ನಾವೇ ಕಾರಣರಾಗುತ್ತೇವೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಉಪಾಧ್ಯಕ್ಷ ವಿ.ಕೆ.ಶರಣು ಹೇಳಿದರು.
ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ವತಿಯಿಂದ ರಾವೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿ ಯುವಜನರ ಜನರ ಮಧ್ಯೆ ಕೋಮುವಾದ ಭುಗಿಲೆಬ್ಬಿಸಿ ಒಬ್ಬರ ವಿರುದ್ಧ ಮತ್ತೊಬ್ಬರು ತಿರುಗಿಬೀಳುವಂತಹ ಪ್ರಸಂಗವನ್ನು ಸೃಷ್ಟಿಸುತ್ತಿವೆ. ಎಲ್ಲಾ ಜಾತಿ ಧರ್ಮದ ಜನರು ಒಗ್ಗಟ್ಟಾಗಿ ಕೋಮು ಸೌಹಾರ್ದತೆಯಿಂದ ಬದುಕುವುದನ್ನು ಈ ರಾಜಕೀಯ ಪಕ್ಷಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಗೋಹತ್ಯೆ, ಬುರ್ಖಾ, ಹಿಜಾಬ್, ಮಂದಿರ, ಮಸೀದಿಗಳ ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತಂದು ಕೋಮು ಭಾವನೆ ಬಿತ್ತಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಒ ವಾಡಿ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಮಾತನಾಡಿ, ಸ್ವಾತಂತ್ರ್ಯ ಚಳವಳಿಗೆ ಕಾವು ನೀಡಿ ಬ್ರಿಟಿಷರ ಎದೆಗುಂಡಿಗೆ ನಡುಗಿಸಿದ ನೇತಾಜಿ ಸುಭಾಷಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಖುದಿರಾಮ ಬೋಸ್, ಅಶ್ಪಾಖುಲ್ಲಾ ಕಾನ್, ಸುಖದೇವ, ರಾಜಗುರು ಇತರ ಕ್ರಾಂತಿಕಾರಿಗಳು ಜಾತಿ ರಹಿತ ಧರ್ಮ ರಹಿತ ಸಮ ಸಮಾಜದ ಕನಸು ಕಂಡಿದ್ದರು. ಶೋಷಣೆ ಮುಕ್ತ ಭಾರತ ಸೃಷ್ಟಿಸಲು ಪಣ ತೊಟ್ಟಿದ್ದರು. ಆದರೆ ಅವರ ಕನಸು ಇಂದಿಗೂ ಸಾಕಾರಗೊಂಡಿಲ್ಲ. ಅದನ್ನು ನೆರವೇರಿಸುವ ಜವಾಬ್ದಾರಿ ಇಂದಿನ ವಿದ್ಯಾರ್ಥಿ ಯುವಜನರ ಮೇಲಿದೆ. ಮತಾಂಧತೆಯ ಬಂಧನಕ್ಕೆ ಸಿಕ್ಕು ಚಿದ್ರವಾಗದೇ ಸಂಘಟಿತರಾಗಿ ಹೋರಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಮುಖಂಡ ಅಮೀರ್ ಪಟೇಲ್ ನೇತಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಎಐಡಿಎಸ್‌ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಶರಣು ಹೇರೂರ, ಮಹೆಬೂಬ ಖಾನ್, ಜಗದೀಶ ಪೂಜಾರಿ, ಸಂಪತಕುಮಾರ ಪೂಜಾರಿ, ಸುದೀಪ, ಮಲ್ಲಣ್ಣ, ರಾಜೇಶ್, ಮಾಳಪ್ಪ ಪಾಲ್ಗೊಂಡಿದ್ದರು. ಅನವರ್ ಖಾನ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.