ಗೋಹತ್ಯೆ ನಿಷೇಧ ಕಾಯ್ದೆ ಅರಿವಿಲ್ಲದ್ದನ್ನು ಕಂಡು ಸಚಿವರೇ ಸುಸ್ತು!
ಜಾನುವಾರುಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ
Team Udayavani, Oct 9, 2021, 12:41 PM IST
ಕಲಬುರಗಿ: ಕಳೆದ ಎರಡು ವರ್ಷಗಳಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿ ಜಾರಿಗೆ ಬಂದ ಕಾಯ್ದೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ತಮ್ಮದೇ ಇಲಾಖೆಯ ಅಧಿಕಾರಿಗಳ ಅಸಮರ್ಪಕ ಉತ್ತರಗಳಿಗೆ ಸಚಿವ ಪ್ರಭು ಚವ್ಹಾಣ ಒಂದು ಕ್ಷಣ ದಿಗಿಲುಗೊಂಡಿದ್ದಲ್ಲದೇ, ಅಧಿಕಾರಿಗಳ ಮಾತು ಕೇಳಿ ಸುಸ್ತಾಗಿ ಹೋದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನೆ ಸಭೆಯನ್ನು ಸಚಿವ ಪ್ರಭು ಚವ್ಹಾಣ ನಡೆಸಿದರು. ಸಭೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಅಧಿಕಾರಿಗಳು ಮತ್ತು ವೈದ್ಯರು ಎಷ್ಟು ತಿಳಿದುಕೊಂಡಿದ್ದಾರೆ ಎಂದು ಪರೀಕ್ಷಿಸಲು ಸಚಿವರು ಪ್ರತಿಯೊಬ್ಬರಿಗೂ ಕಾಯ್ದೆ ಬಗ್ಗೆ ವಿವರಿಸಲು ತಿಳಿಸಿದರು.
ಆಗ ಇಲಾಖೆ ಅಧಿಕಾರಿಗಳಿಂದಲೇ ಸರಿಯಾದ, ಸಮರ್ಪಕ ಉತ್ತರ ಹಾಗೂ ವಿವರಣೆ ಬಾರದಿದ್ದ ಕಾರಣ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಈಗ ಹೊಸದಾಗಿ ಜಾರಿ ತರಲು ಹೊರಡಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಸಚಿವರು ಮಾಹಿತಿ ಕೇಳಿದರು. ಆದರೆ, ಹಲವು ಅಧಿಕಾರಿಗಳು ಹೊಸ ಕಾಯ್ದೆಯ ಅಂಶಗಳನ್ನು ಹೇಳಲು ತಡಬಡಾಯಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ಅರಿವಿಲ್ಲದ್ದಕ್ಕೆ ಗರಂ ಆದ ಸಚಿವರು, ಕಾಯ್ದೆ ಕುರಿತು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು- ಸಿಬ್ಬಂದಿಗೆ ಮುಂದಿನ ಒಂದು ತಿಂಗಳೊಳಗೆ ಅರಿವು ಮೂಡಿಸಬೇಕು ಎಂದು ಉಪನಿರ್ದೇಶಕರಾದ, ಡಾ| ಬಿ.ಎಸ್.ಪಾಟೀಲಗೆ ಸೂಚಿಸಿದರು.
ಪಶು ಸಹಾಯವಾಣಿ, ಪಶು ಸಂಜೀವಿನಿ ಸೇರಿದಂತೆ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆಯೂ ಅಧ್ಯಯನ ಮಾಡಬೇಕು. ಕೆಲಸದಲ್ಲಿ ಇಚ್ಛಾಶಕ್ತಿ ತೋರಿಸದಿದ್ದರೆ ಮುಲಾಜಿಲ್ಲದೇ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೇ ಜಿಲ್ಲೆಯಿಂದಲೇ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಕಸಾಯಿಖಾನೆಗಳಿಗೆ ಕಡಿವಾಣ ಹಾಕಿ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳಿಗೆ ಕಡಿವಾಣ ಹಾಕುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವ ಚವ್ಹಾಣ ಸೂಚನೆ ನೀಡಿದರು.
ಗೋವು ಸಂರಕ್ಷಣೆಗೆಂದೇ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು, ಇದನ್ನು ಸಮರ್ಪಕವಾಗಿಅನುಷ್ಠಾನಕ್ಕೆ ತರುವ ಮೂಲಕ ಮೂಕ ಪ್ರಾಣಿಗಳನ್ನು ಸಂರಕ್ಷಿಸಬೇಕು. ಪ್ರಾಣಿಗಳ ಸಂರಕ್ಷಣೆ ಸರ್ಕಾರದ ಸಂಕಲ್ಪವಾಗಿದೆ. ಇದಕ್ಕಾಗಿ ಇಲಾಖೆ ಅಧಿಕಾರಿಗಳು, ಪಶು ವೈದ್ಯರು 24 ಗಂಟೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಪ್ರಾಣಿ ಸಂರಕ್ಷಣೆ ಸಂತತಿ ಬೆಳವಣಿಗೆ ಪೂರಕ ಕ್ರಮ ಕೈಗೊಳ್ಳಬೇಕು. ವೈದ್ಯರು ಹಳ್ಳಿಗೆ ಹೋಗಲ್ಲ, ಪ್ರಾಣಿಗಳಿಗೆ ಸಮರ್ಪಕ ಔಷದೋಪಚಾರ ಮಾಡುವುದಿಲ್ಲ ಎಂದು ಸಾಮಾನ್ಯ ದೂರು ಕೇಳಿ ಬರುತ್ತಿದೆ. ಇದನ್ನು ನಾನು ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.
ನಾನು ಸಚಿವನಾದ ನಂತರ 24 ಗಂಟೆ ಸೇವೆ ಒದಗಿಸುವ ಪಶು ಸಹಾಯವಾಣಿ, ಪಶು ಸಂಜೀವಿನಿ ಆಂಬ್ಯುಲೆನ್ಸ್ ಸೇವೆ ಜಾರಿಗೆ ತರಲಾಗಿದೆ. ಅಲ್ಲದೇ ಪ್ರಾಣಿಗಳ ಹಿಂಸೆ ತಡೆಯಲು, ವೈಜ್ಞಾನಿಕ ಸಾಗಾಟ ಮತ್ತು ಸಂರಕ್ಷಣೆಗೆ ಸರ್ಕಾರಕ್ಕೆ ಆಗಾಗ ಸಲಹೆ ನೀಡಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಈ ಎಲ್ಲ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಶು ಆಸ್ಪತ್ರೆಗಳಿಗೆ ಬರುವ ಜಾನುವಾರುಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಮತ್ತು ಔಷಧೋಪಚಾರ ಮಾಡಬೇಕು. ಆಯಾ ಕಾಲಕ್ಕೆ ರೋಗಗಳು ಕಂಡುಬಂದಲ್ಲಿ ಸೂಕ್ತ ಲಸಿಕೆ, ಚುಚ್ಚುಮದ್ದು ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಹೊರಗಡೆಯಿಂದ ಔಷಧಿ ತರುವಂತೆ ಚೀಟಿ ನೀಡುವಂತಿಲ್ಲ ಎಂದು ಪಶು ವೈದ್ಯರಿಗೆ ಕಟ್ಟಪ್ಪಣೆ ಮಾಡಿದ ಸಚಿವರು, ಜಿಲ್ಲೆಯಲ್ಲಿ ಕೃತಕ ಗರ್ಭದರಣೆ ಹೆಚ್ಚಿಸಬೇಕು. ಸಹಾಯವಾಣಿಗೆ ಕರೆ ಬರುವ ಪ್ರತಿ ಕರೆಗೂ ಸ್ಪಂದಿಸಬೇಕು ಎಂದರು.
ಗೋಮಾಳ ಜಮೀನು ಕೊಡಿ
ಪ್ರತಿ ತಾಲೂಕಿನಲ್ಲಿರುವ ಗೋಶಾಲೆ ಸ್ಥಾಪನೆಗೆ ನಿರ್ಧರಿಸಲಾಗಿದೆ. ಆದ್ದರಿಂದ ಗೋಮಾಳ ಜಮೀನು ಗುರುತಿಸಿ ಇಲಾಖೆಗೆ ಹಸ್ತಾಂತರಿಸಿದಲ್ಲಿ ಗೋಶಾಲೆ ಸ್ಥಾಪನೆಗೆ ಸಹಾಯವಾಗಲಿದೆ. ಕಂದಾಯ ಇಲಾಖೆ ಈ ಬಗ್ಗೆ ತುರ್ತು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ ಅವರಿಗೆ ಸಚಿವರು ತಿಳಿಸಿದರು.
ನಗರದಲ್ಲಿ ಬರುವಾಗ ರಸ್ತೆಯಲ್ಲಿ ಬಿಡಾಡಿ ದನಗಳು ತಿರುಗುತ್ತಿರುವುದನ್ನು ನೋಡಿದ್ದೇನೆ. ರಸ್ತೆಯಲ್ಲಿ ಗೋವುಗಳು ಕಾಣಬಾರದು. ಎಲ್ಲವುಗಳನ್ನು ಸುರಕ್ಷಿತವಾಗಿ ಗೋಶಾಲೆಗೆ ಹಸ್ತಾಂತರಿಸಿ ಸಂರಕ್ಷಿಸಬೇಕೆಂದು ಸಲಹೆ ನೀಡಿದರು.
ಜಾನುವಾರು ಸಂಖ್ಯೆ ಇಳಿಕೆ
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ| ಬಿ.ಎಸ್.ಪಾಟೀಲ ಮಾತನಾಡಿ, ಇತ್ತೀಚೆಗೆ ನಡೆದ 20ನೇ ರಾಷ್ಟ್ರೀಯ ಜಾನುವಾರು ಗಣತಿಯಲ್ಲಿ ಜಿಲ್ಲೆಯಲ್ಲಿ ಪ್ರಾಣಿಗಳ ಸಂಖ್ಯೆ ಇಳಿಮುಖವಾಗಿದೆ ಎಂದಾಗ ಸಚಿವರು ಅಚ್ಚರಿ ವ್ಯಕ್ತಪಡಿಸಿದರು.
ಗೋಹತ್ಯೆ ಕಾಯ್ದೆ ಜಾರಿಗೆ ತಂದರೂ ಸಂಖ್ಯೆ ಇಳಿಮುಖವಾಗಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಪ್ರಾಣಿಗಳ ಸಂತತಿ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದ ಸರ್ವೇ ನಂ.23ರಲ್ಲಿ 19 ಎಕರೆ ಜಮೀನು ಗುರುತಿಸಿದ್ದು, ಸರ್ವೇ ಸಹ ಮಾಡಲಾಗಿದೆ ಎಂದು ತಿಳಿಸಿದ ಡಾ| ಬಿ.ಎಸ್.ಪಾಟೀಲ, 16 ಖಾಸಗಿ ಗೋಶಾಲೆಗಳಿವೆ. ಇದರಲ್ಲಿ 2ಕ್ಕೆ ಸಹಾಯನುದಾನ ನೀಡಲಾಗುತ್ತಿದೆ. ಮತ್ತೆ ಆರು ಗೋಶಾಲೆಗಳು ಸಹಾಯನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿವೆ ಎಂದರು.
ಕೆಎಂಎಫ್ ಡೈರಿ ವ್ಯವಸ್ಥಾಪಕ ನಿರ್ದೇಶಕ ಆರ್.ಪ್ರಕಾಶ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಘಗಳಿಂದ ಪ್ರತಿದಿನ ಕೇವಲ 54 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದು ದಕ್ಷಿಣ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ ಎಂದರು.
ಹಾಲು ಉತ್ಪಾದನೆ ಹೆಚ್ಚಿಸಲು ಕೃತಕ ಗರ್ಭ ಧಾರಣೆ ಹೆಚ್ಚಿಸಬೇಕು. ರೈತರಿಗೆ ಉತ್ತೇಜನ ಕ್ರಮಗಳನ್ನು ಹೆಚ್ಚಿಸಬೇಕು. ಹೈನುಗಾರಿಕೋದ್ಯಮವನ್ನು ಪ್ರೋತ್ಸಾಹಿಸಲು ಜಿಲ್ಲೆಯಲ್ಲಿ 5ಲಕ್ಷ ರೂ. ವೆಚ್ಚದಲ್ಲಿ 50 ಕಡೆ ನಂದಿನಿ ಪಾರ್ಲರ್ ಸ್ಥಾಪಿಸಿದೆ. ಮುಂದೆ 10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮೀಣ ಪ್ರದೇಶದಲ್ಲಿಯೂ 50 ಕಡೆ ಪಾರ್ಲರ್ ಸ್ಥಾಪನೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ್ ಸಸಿ, ಡಿಸಿಪಿ ಅಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ಹಾಗೂ ಪಶುಸಂಗೋಪನಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಪಶು ವೈದ್ಯರು ಹಾಜರಿದ್ದರು.
ಕಠಿಣ ಗೋಹತ್ಯೆ ಕಾಯ್ದೆಗೆ ಚಿಂತನೆ
ಗೋವುಗಳ ಸಂರಕ್ಷಣೆ ಉದ್ದೇಶದಿಂದ ಕಠಿಣವಾದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಕೆಲವರು ಪಿಐಎಲ್ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ ಎಂದು ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಹಳೆಯ 1964 ಕಾಯ್ದೆಯಲ್ಲಿ ಅಕ್ರಮವಾಗಿ ಪ್ರಾಣಿ ವಧೆ ಮಾಡಿದ ಆರೋಪ ಸಾಬೀತಾದಲ್ಲಿ ಗರಿಷ್ಠ 1000ರೂ.ವರೆಗೆ ದಂಡ ಮತ್ತು ಆರು ತಿಂಗಳು ಜೈಲು ಶಿಕ್ಷೆ ಮಾತ್ರ ಇತ್ತು. ಇದೀಗ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ ನಿಷೇಧ ಕಾಯ್ದೆ) ಮತ್ತು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಗರಿಷ್ಠ 10 ಲಕ್ಷ ರೂ. ವರೆಗೆ ದಂಡ ಮತ್ತು ಏಳು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿ ಸಬಹುದಾಗಿದೆ ಎಂದು ಸಚಿವರು ಹೇಳಿದರು.
ದೇಶದಲ್ಲಿ ಈ ಹಿಂದೆ ಜನರಿಗಿಂತ ಜಾನುವಾರುಗಳು ಅಧಿಕವಾಗಿದ್ದವು. ಈಗ ಜನರ ಸಂಖ್ಯೆ ಅಧಿಕವಾಗಿದ್ದು, ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಅಕ್ರಮವಾಗಿ ಜಾನುವಾರುಗಳ ವಧೆ ಪ್ರಕರಣಗಳಲ್ಲಿ ದೂರು ಬಂದಲ್ಲಿ, ಕೂಡಲೇ ಪಶು ಸಂಗೋಪನಾ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಎಫ್‌ಐಆರ್ ದಾಖಲಿಸಬೇಕು.
ಪ್ರಭು ಚವ್ಹಾಣ, ಸಚಿವ
ಪ್ರತಿ ತಾಲೂಕಿಗೆ ಪಶು ಸಂಜೀವಿನಿ ಆಂಬ್ಯುಲೆನ್
ಮುಖ ಜೀವಿಗಳಾದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿ ಪಶು ಸಂಜೀವಿನಿ ಯೋಜನೆಯನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿ ಮಾಡಲು ಒಲವು ತೋರಿಸಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಗೆ ತೆರಳಿದ್ದಾಗ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರು ನಮ್ಮ ಇಲಾಖೆ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ನಾವು ಜಾರಿಗೆ ತಂದ ಪಶು ಸಂಜೀವಿನಿ ಯೋಜನೆ ಅವರ ಗಮನ ಸೆಳೆಯಿತು. ಇದೀಗ ಪ್ರಧಾನಿ ಜತೆಗೆ ಚರ್ಚೆ ನಡೆಸಿ ಈ ಯೋಜನೆಯನ್ನು ದೇಶಾದ್ಯಂತ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದರು.
ಕರ್ನಾಟಕದ ಪಶು ಸಂಜೀವಿನಿ ಮಾದರಿಯಲ್ಲೇ ಮೊದಲ ಹಂತದಲ್ಲಿ ದೇಶದ 14 ರಾಜ್ಯಗಳಲ್ಲಿ ಇದನ್ನು ಅನುಷ್ಠಾನ ಮಾಡಲು ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ. ಜತೆಗೆ ನಮ್ಮ ರಾಜ್ಯದಲ್ಲಿ ಹೊಸದಾಗಿ 272 ಆಂಬ್ಯುಲೆನ್ಸ್‌ಗಳ ಖರೀದಿಗೆ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ ಎಂದರು.
ಆಂಬ್ಯುಲೆನ್ಸ್ ಖರೀದಿಯಲ್ಲಿ ಕೇಂದ್ರ ಶೇ.60ರಷ್ಟು ತನ್ನ ಪಾಲು ನೀಡಲಿದೆ. ಉಳಿದ ಶೇ.40ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಪ್ರತಿ ಆಂಬ್ಯುಲೆನ್‌ಗೆ 16 ಲಕ್ಷ ರೂ. ವೆಚ್ಚವಾಗಲಿದ್ದು, ರಾಜ್ಯದ ಎಲ್ಲ ವಿಧಾನ ಸಭಾಕ್ಷೇತ್ರ ಮತ್ತು ಪ್ರತಿ ತಾಲೂಕಿಗೊಂದು ಆಂಬ್ಯುಲೆನ್ಸ್ ಹಂಚಿಕೆ ಮಾಡಲಾಗುವುದು. ಪ್ರತಿಯೊಂದು ಆಂಬ್ಯುಲೆನ್ಸ್‌ನಲ್ಲಿ ಪಶು ನಿರೀಕ್ಷಕರು, ಪಶು ವೈದ್ಯರು ಹಾಗೂ ಒಬ್ಬ ಸಿಬ್ಬಂದಿ ಇರಲಿದ್ದಾರೆ ಎಂದು ವಿವರಿಸಿದರು.
ಪಶು ಲೋಕ ನಿರ್ಮಾಣ
ಬೆಂಗಳೂರಿನಲ್ಲಿ ಪಶುಲೋಕವನ್ನು ನಿರ್ಮಾಣ ಮಾಡಲು ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು ನೂರು ಎಕರೆ ಪ್ರದೇಶದಲ್ಲಿ ಪಶು ಲೋಕ ನಿರ್ಮಿಸಿ, ಅಲ್ಲಿ ಎಲ್ಲ ತಳಿಗಳ ಹಸು ಸೇರಿದಂತೆ ಪಶುಗಳನ್ನು ಸಾಕಲಾಗುವುದು ಎಂದು ಸಚಿವರು ತಿಳಿಸಿದರು.
ಪಶುಗಳ ತಳಿಯನ್ನು ಅಭಿವೃದ್ಧಿ ಮಾಡಲು ಸಹಕಾರಿ ಆಗುವುದರ ಜತೆಗೆ ಪ್ರವಾಸಿ ತಾಣವಾಗಿ ಬೆಳೆಸುವ ಉದ್ದೇಶವಿದೆ. ಅಲ್ಲದೇ, ಜನರು ಪ್ರವೇಶ ಶುಲ್ಕ ನೀಡಿ ಬರುವುದರಿಂದ ಇಲಾಖೆಗೊಂದು ಆದಾಯದ ಮೂಲವೂ ಆಗಲಿದೆ ಎಂದರು.
ಇದಕ್ಕೂ ಮುನ್ನ ಸಚಿವರು ಕುಸನೂರಿನಲ್ಲಿರುವ ಶ್ರಿಮಾಧವ ಗೋಶಾಲೆ ಮತ್ತು ಆಳಂದ ರಸ್ತೆಯಲ್ಲಿರುವ ನಂದಿ ಗೋ ಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಪೂಜೆ ಸಲ್ಲಿಸಿ, ಮಾಹಿತಿ ಪಡೆದುಕೊಂಡರು.
ಬಿಜೆಪಿ ನಗರಾಧ್ಯಕ್ಷ ಸಿದ್ಧಾಜಿ ಪಾಟೀಲ, ಪ್ರಾಣಿದಯಾ ಸಂಘದ ಸದಸ್ಯ ಕೇಶವ ಮೋಟಗಿ, ಮಾಧವ ಗೋಶಾಲೆಯ ಮಹೇಶ ಬೀದರಕರ್ ಮತ್ತಿತರರು ಇದ್ದರು.
ಪಶು ಇಲಾಖೆಯಲ್ಲಿ ಖಾಲಿಯಿರುವ 161 ವೈದ್ಯರನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇನ್ನೂ ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸರ್ಕಾರದ ಎದುರು ಸಲ್ಲಿಸಲಾಗಿದೆ.
ಪ್ರಭು ಚವ್ಹಾಣ
ಪಶು ಸಂಗೋಪನಾ ಸಚಿವ ಐಟಿ ದಾಳಿ ಸಾಮಾನ್ಯ ಪ್ರಕ್ರಿಯೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ಹೊಸದೇನಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಇದಕ್ಕೆ ರಾಜಕೀಯ ಬಣ್ಣ ಕೊಡುವುದು ಬೇಡ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.
ಸಿಂದಗಿ ಮತ್ತು ಹಾನಗಲ್ ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದ್ದು, ಆರ್‌ಎಸ್‌ಎಸ್ ಬಗ್ಗೆ ಅರಿತುಕೊಂಡು ಮಾತನಾಡಬೇಕು. ಆರ್‌ಎಸ್‌ಎಸ್ ಇಲ್ಲದೆ ಹೋಗಿದ್ದರೇ ಇಂದು ದೇಶವೇ ಇರುತ್ತಿರಲಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.