ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ
Team Udayavani, Jan 27, 2022, 10:08 AM IST
ಕಲಬುರಗಿ: ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗಳಿಗೆ ರಾಜ್ಯ ಸರ್ಕಾರ ಮೂರು ಜಿಲ್ಲೆಗಳ ಪ್ರಸ್ತಾವ ಸಲ್ಲಿಸುವುದು ಏಕೆ? ಈ ರೀತಿ ಪ್ರಸ್ತಾವಗಳಿಂದಲೇ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಯೋಜನೆಗಳು ಕೈತಪ್ಪುತ್ತಿವೆ.
ಹೀಗೆಂದು ಗುರುವಾರ ನಗರದ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ಆಯೋಜಿಸಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿಗಳು ಬೇಸರ ವ್ಯಕ್ತಪಡಿಸಿದರು.
ನಿಮ್ಜ್ ಸ್ಥಾಪನೆಗೆ ತುಮಕೂರು, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಹೆಸರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಐಐಟಿ ಸ್ಥಾಪನೆಗೂ ಮೂರು ಜಿಲ್ಲೆಗಳ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಎರಡೂ ಸಂಸ್ಥೆಗಳು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸ್ಥಾಪನೆಯೇ ಆಗಲಿಲ್ಲ. ಈಗ ಜವಳಿ ಪಾರ್ಕ್ ಆರಂಭಿಸಲಾಗುವುದು ಎಂದು ಘೋಷಣೆ ಮಾಡುತ್ತಿದ್ದೀರಿ. ಆದರೆ, ಇದಕ್ಕೂ ತುಮಕೂರು, ವಿಜಯಪುರ, ಕಲಬುರಗಿ ಜಿಲ್ಲೆಗಳ ಹೆಸರು ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿದ್ದಲ್ಲಿ ಜಿಲ್ಲೆಗೆ ಜವಳಿ ಪಾರ್ಕ್ ಬರುವುದು ಖಚಿತವೇ ಎಂದು ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗುಡಗಿ ಪ್ರಶ್ನಿಸಿದರು.
ಮೂಲ ಮೌಲ್ಯಗಳ ಹೆಸರಲ್ಲಿ ಹೊಸ ಯೋಜನೆಗಳು ಬೆಂಗಳೂರು ಸುತ್ತ-ಮುತ್ತಲಿನ ಜಿಲ್ಲೆಗಳಲ್ಲೇ ಸ್ಥಾಪನೆಯಾಗುತ್ತಿವೆ. ಈ ಭಾಗಕ್ಕೆ ಮಂಜೂರಾದ ಯೋಜನೆಗಳು ಕೈಗೂಡುತ್ತಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೈಗಾರಿಕೆ ನೀತಿಯನ್ನು ಮಾಡಿ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುರುಗೇಶ ನಿರಾಣಿ, ನಾನು ಕೂಡ ಉತ್ತರ ಕರ್ನಾಟಕ ಭಾಗದವನು. ಈ ಭಾಗದ ದೃಷ್ಠಿಯಿಂದಲೇ ಎರಡನೇ ಮತ್ತು ಮೂರನೇ ಹಂತದ ನಗರದಲ್ಲಿ ಉದ್ಯಮಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾಗುವುದು ಶತಸಿದ್ಧ ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೇ ಅತಿ ಹೆಚ್ಚು ಹತ್ತಿ ಉತ್ಪನ್ನ ಮಾಡಲಾಗುತ್ತದೆ. ಹೀಗಾಗಿ ಜವಳಿ ಪಾರ್ಕ್ ಇದೇ ಭಾಗ ಸೂಕ್ತವಾದ ಸ್ಥಳ. ಈ ಪಾರ್ಕ್‌ನಲ್ಲಿ ಬಟ್ಟೆ ಉದ್ಯಮ ಸ್ಥಾಪನೆಗೆ ಶೇ.40 ಸಬ್ಸಿಡಿ ಇರಲಿದೆ. ಸ್ಥಳೀಯರೇ ಬಂದು ಮುಂದೆ ಬಂದು ಉದ್ಯಮ ಸ್ಥಾಪನೆ ಮಾಡಬೇಕು. ಜತೆಗೆ ಇಲ್ಲಿ ಸಿಮೆಂಟ್ ಕಂಪನಿಗಳಿಗೂ ಹಲವು ಅವಕಾಶಗಳಿವೆ. ಉತ್ಕೃಷ್ಟ ಗುಣಮಟ್ಟದ ಕಲ್ಲು ಇಲ್ಲಿ ದೊರೆಯುತ್ತಿದ್ದು, ಸ್ಥಳೀಯ ಉದ್ಯಮಿಗಳು ಸ್ವಂತ ಕಂಪನಿ ಆರಂಭಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಚೀನಾ ಕಂಪನಿಗಳನ್ನು ಕರೆಸಿ
ಚೀನಾದಿಂದ ಇತ್ತೀಚೆಗೆ ಹಲವು ಕಂಪನಿಗಳು ಬೇರೆ ದೇಶಗಳಿಗೆ ವಲಸೆ ಹೋಗುತ್ತಿವೆ. ಅಲ್ಲಿಂದ ಹೊರ ಬರುವ ಕೈಗಾರಿಕೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಆಕರ್ಷಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಹೇಳಿದರು.
ಆಗ ಸಚಿವರು, ಚೀನಾದಿಂದ ಹೊರ ಬರುತ್ತಿರುವ ಕಂಪನಿಗಳಿಗೆ ಉತ್ತಮದರ್ಜೆಯ ಸೌಲಭ್ಯಗಳು ಇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂತಹ ಮೂಲಭೂತ ಸೌಲಭ್ಯಗಳು. ಹೀಗಾಗಿ ಅವುಗಳನ್ನು ಆಕರ್ಷಿಸುವುದು ಕಷ್ಟ. ಆದರೂ, ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ನೆಹರು ಗಂಜ್ ವರ್ತಕರ ಸಂಘದ ಅಧ್ಯಕ್ಷ ಶ್ರೀಮಂತ ಉದನೂರ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಸ್ವತ್ಛತೆ, ನೀರಿನ ವ್ಯವಸ್ಥೆಯೂ ಇಲ್ಲ. ಈ ಹಿಂದೆ ಎಪಿಎಂಸಿ ಅವರೇ ಎಲ್ಲ ನಿರ್ವಹಣೆ ಮಾಡುತ್ತಿದ್ದರು. ಆದರೆ, ಎಪಿಎಂಸಿ ತೆರಿಗೆ ಸಂಗ್ರಹ ಕಡಿಮೆಯಾಗಿದ್ದರಿಂದ ಅವರು ಪಾಲಿಕೆಯವರಿಗೆ ವಹಿಸಿದ್ದಾರೆ. ಪಾಲಿಕೆಯವರು ತೆರಿಗೆ ಪಡೆಯುತ್ತಿದ್ದರೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವ ನಿರಾಣಿ ಹೇಳಿದರು. ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್ ಪ್ರಾಸ್ತಾವಿಕ ಮಾತನಾಡಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ ನಮೋಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಎಚ್‌ಕೆಸಿಸಿಐ ಕಾರ್ಯದರ್ಶಿ ಶರಣಬಸಪ್ಪ ಪಪ್ಪಾ, ಮುಖಂಡರಾದ ವಿಕ್ರಂ ಪಾಟೀಲ, ಶಿವರಾಜ ಪಾಟೀಲ ರದ್ದೇವಾಡಗಿ ಭಾಗವಹಿಸಿದ್ದರು.
ಶಿಕ್ಷಣ ಮತ್ತು ಉದ್ಯಮದಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ಉದ್ಯಮಗಳಿಗೆ ಸಂಬಂಧಿಸಿದ ಯಾವುದೇ ಸಲಹೆ ನೀಡಿದರೆ ಅವುಗಳನ್ನು ಪರಿಗಣಿಸಲಾಗುತ್ತದೆ. ಜತೆಗೆ ಜಿಲ್ಲೆಗೆ ದೇಶ, ವಿದೇಶದ ಕೈಗಾರಿಕಾ ತಜ್ಞರನ್ನು ಕರೆಸಲು ತಿಳಿಸಿದರೆ, ಅದರ ಎಲ್ಲ ಖರ್ಚು ವೆಚ್ಚ ಭರಿಸಿ ತರಬೇತಿ, ಉಪನ್ಯಾಸ ಏರ್ಪಡಿಸಲು ಕ್ರಮ ಕೈಗುಳ್ಳಲಾಗುವುದು. -ಮುರುಗೇಶ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ
ಎರಡನೇ ರಿಂಗ್ ರಸ್ತೆ ನಿರ್ಮಾಣಕ್ಕೆ ಬೇಗ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಪಾಲಿಕೆ ತೆರಿಗೆ ನೀತಿಯಲ್ಲಿ ಸೂಕ್ತ ನಿಯಮ ರೂಪಿಸಬೇಕು. ಜವಳಿ ಪಾರ್ಕ್‌ನ್ನು ಜಿಲ್ಲೆಯಲ್ಲೇ ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕು. -ಪ್ರಶಾಂತ ಮಾನಕರ್, ಅಧ್ಯಕ್ಷ, ಎಚ್‌ಕೆಸಿಸಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.