ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿ; ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ
ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಿ ಗ್ರಾಮದ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು.
Team Udayavani, Jan 18, 2021, 4:27 PM IST
ಜೇವರ್ಗಿ: ಜನ ಸೇವೆ ಮಾಡಲು ಇದೊಂದು ಉತ್ತಮ ಸದಾವಕಾಶ ಸಿಕ್ಕಿದ್ದು, ಜನರ ವಿಶ್ವಾಸಕ್ಕೆ ಮೀರಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ನೂತನ
ಗ್ರಾಪಂ ಸದಸ್ಯರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಹೇಳಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಗ್ರಾಪಂ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ನಾಯಕತ್ವದಿಂದ ಗ್ರಾಮಸ್ಥರಿಗೆ ಒಳಿತಾಗಲಿ. ನಾಯಕತ್ವದಲ್ಲಿ ಎರಡು ಪ್ರಕಾರಗಳಿದ್ದು, ಒಬ್ಬರು ಸಮಸ್ಯೆಗಳನ್ನು ಸೃಷ್ಟಿಸಿ ನಾಯಕರಾಗುತ್ತಾರೆ.
ಇನ್ನೊಬ್ಬರು ಜನರ ಸಮಸ್ಯೆಗಳನ್ನು ಬಗೆಹರಿಸಿ ನಾಯಕರಾಗುತ್ತಾರೆ. ಪ್ರತಿಯೊಬ್ಬ ನೂತನ ಸದಸ್ಯರು ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಉತ್ತಮ ನಾಯಕರಾಗಲು ಪ್ರಯತ್ನಿಸಬೇಕು. ನೂತನ ಸದಸ್ಯರಿಗೆ ತಮ್ಮ ಗ್ರಾಮಗಳ ಸಮಸ್ಯೆ ಬಗ್ಗೆ ಈಗಾಗಲೇ ಮಾಹಿತಿ ಇದ್ದು, ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ತಮ್ಮ ಕರ್ತವ್ಯಗಳನ್ನು ನಿಭಾಯಿಸಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಈ ಸಭೆಯಲ್ಲಿ ಮಹಿಳಾ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಬೇಸರದ ಸಂಗತಿ. ಚುನಾಯಿತ ಮಹಿಳಾ ಗ್ರಾಪಂ ಸದಸ್ಯರು ಕಡ್ಡಾಯವಾಗಿ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಿ ಗ್ರಾಮದ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು. ಚುನಾವಣೆಯ ಸಂದರ್ಭದಲ್ಲಿ ನಡೆದ ಚಿಕ್ಕ ಪುಟ್ಟ ಗಲಾಟೆ, ಜಗಳ, ವೈಮನಸ್ಸು ಮರೆತು ಎಲ್ಲರೂ ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕು.
ನಿಯಮಾನುಸಾರ ಈ ನಿಗದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಯಾರ ಪ್ರಭಾವಕ್ಕೆ ಒಳಗಾಗದೇ ಚುನಾವಣಾ ಆಯೋಗದ ನಿರ್ದೇಶನದಂತೆ ನೂತನ
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲು ನಿಗದಿ ಮಾಡಲಾಗಿದೆ ಎಂದು ಹೇಳಿದರು. ನಂತರ ತಾಲೂಕಿನ 25 ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲು ಪ್ರಕ್ರಿಯೆ ನಡೆಸಲಾಯಿತು.
ಸಹಾಯಕ ಆಯುಕ್ತ ಬಲರಾಮ ಲಮಾಣಿ, ತಹಶೀಲ್ದಾರ್ ಸಿದರಾಯ ಭೋಸಗಿ, ತಾಪಂ ಇಒ ವಿಲಾಸರಾಜ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಚುನಾವಣಾ ಶಿರಸ್ತೇದಾರ್ ಇಸ್ತೇಕಾರ ಹುಸೇನ, ಆಹಾರ ಇಲಾಖೆ ಶಿರಸ್ತೇದಾರ ಡಿ.ಬಿ.ಪಾಟೀಲ, ಪಿಎಸ್‌ಐ ಸಂಗಮೇಶ ಅಂಗಡಿ, ಚುನಾವಣಾ ತರಬೇತುದಾರ ಡಾ.ಗಿರೀಶ ರಾಠೊಡ, ಮಹಾಂತೇಶ ಪುರಾಣಿಕ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ, ನೂತನ ಗ್ರಾಪಂ ಸದಸ್ಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.