ಲಸಿಕೆ ಹಾಕಲು ಮನೆ ಮುಂದೆ ತಮಟೆ!
ಲಸಿಕೆಗೆ ಹಿಂದೇಟು ಹಾಕುವ ಗ್ರಾಮಗಳಲ್ಲಿ ಜನರಿಗೆ ವಾಹನ ವ್ಯವಸ್ಥೆ ಗ್ರಾಪಂನಿಂದ ಜಾಗೃತಿ
Team Udayavani, Oct 21, 2021, 1:25 PM IST
ಹುಣಸೂರು: ಕೆಲ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಹಾಕಿಸುವುದು ಸವಾಲಾಗಿ ಪರಿಣಮಿಸಿದ್ದು, ಅಧಿಕಾರಿ ಗಳು ಹಾಗೂ ನೌಕರರು ಲಸಿಕೆ ಹಾಕಿಸಲು ತಮಟೆ ಬಾರಿಸಿ, ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ ಎಲ್ಲರಿಗೂ ಲಸಿಕೆ ಹಾಕಿಸುವ ಸಲುವಾಗಿ ಗ್ರಾಮ ಪಂಚಾಯ್ತಿ ಪಿಡಿಒ ಸೇರಿದಂತೆ ಸಿಬ್ಬಂದಿ ಮನೆ ಮನೆ ಭೇಟಿ, ತಮಟೆ ಬಾರಿಸುವ ಮೂಲಕ ಜನರ ಮನವೊಲಿಸುತ್ತಿದ್ದಾರೆ.
ಕೊರೋನಾ 3ನೇ ಅಲೆಯ ಪ್ರಭಾವವನ್ನು ತಗ್ಗಿಸುವ ಸಲುವಾಗಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಹುಣಸೂರು ತಾಲೂಕು ಪಂಚಾಯಿತಿ ಪಣತೊಟ್ಟಿದ್ದು, ತಾಪಂ ಇಒ ಎಚ್.ಡಿ.ಗಿರೀಶ್ ಸೂಚನೆಯಂತೆ 41 ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಆರೋಗ್ಯ-ಆಶಾ ಕಾರ್ಯಕರ್ತರ ಸಹಕಾರದೊಂದಿಗೆ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಾಹನ ವ್ಯವಸ್ಥೆ: ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಕ್ಕೆ ಬಾರದ ಜನರಿಗಾಗಿ ಇದೀಗ ವಾಹನ ವ್ಯವಸ್ಥೆ ಸಹ ಮಾಡಿದ್ದು, ಮನೆಯಿಂದ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಮನೆಗೆ ಬಿಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮನೆ ಮುಂದೆ ತಮಟೆ ಸದ್ದು: ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರನ್ನು ಮನವೊಲಿಸುವುದಕ್ಕಾಗಿ ಅಂತಹವರ ಮನೆ ಮುಂದೆ ತಮಟೆ ಚಳವಳಿ ಮಾಡುವ ಮೂಲಕ ಎಚ್ಚರಿಸುವ ಕೆಲಸವೂ ನಡೆದಿದೆ. ಜೊತೆಗೆ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದರಿಂದ ಅಂಗನವಾಡಿ ಕೇಂದ್ರ ಹಾಗೂ ಗ್ರಾಮದ ಪ್ರಮುಖ ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು.
ಆದರೂ ಸಹ ಮತ್ತಷ್ಟು ಜನರಲ್ಲಿ ಭಯವನ್ನಿಟ್ಟುಕೊಂಡಿದ್ದರಿಂದ ಅವರ ಮನವೊಲಿಸಿ ನಿರ್ಭೀತರನ್ನಾಗಿ ಮಾಡುವ ಉದ್ದೇಶದಿಂದ ಪಂಚಾಯಿತಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರೇ ಸ್ವತಃ ಲಸಿಕೆ ಪಡೆಯುವ ಮೂಲಕ ಜನರಲ್ಲಿರುವ ಭಯವನ್ನು ಹೋಗಲಾಡಿಸುತ್ತಿದ್ದಾರೆ. ಸವಾಲು: ಇನ್ನು ಗ್ರಾಮದ ಜನರನ್ನು ಆರೋಗ್ಯ ಕೇಂದ್ರಕ್ಕೆ ಕರೆಸಿಕೊಳ್ಳಲು ಸಾಕಷ್ಟು ಕ್ರಮವಹಿಸಿದ್ದು, ಪ್ರಾರಂಭದಲ್ಲಿ ಮೈಕ್ ಮೂಲಕ ಆಟೋ ಪ್ರಚಾರದ ಜೊತೆಗೆ ಸದಸ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ವಾಟ್ಸಾಪ್ ಗ್ರೂಪ್ ಮೂಲಕ ನಿರ್ದಿಷ್ಟ ಸ್ಥಳಗಳಲ್ಲಿ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಕೆಲವು ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ.90ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ.
ಎನ್‌ಜಿಒಗಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರ ಮನವಿಗೆ ಇನ್ನೂ ಸಹ ಹಾಡಿ ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಯೊಬ್ಬರು ಲಸಿಕೆ ಪಡೆಯಿರಿ: ಕೊರೊನಾ ವಿರುದ್ಧ ಹೋರಾಡುವ ಅಸ್ತ್ರವಾಗಿ ಲಸಿಕೆ ದೊರೆತಿದೆ. ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಪಡೆದುಕೊಳ್ಳುವುದು ಅತಿ ಮುಖ್ಯವಾಗಿದೆ. ಕೊರೊನಾ ಮುಕ್ತ ದೇಶವ ನ್ನಾಗಿಸಲು ಎಲ್ಲರ ಸಹಕಾರ ಅತ್ಯವಶ್ಯ. ಗ್ರಾಮದ ಪ್ರತಿಯೊಬ್ಬರೂ ಕೊರೊನಾ ಲಸಿಕೆಯನ್ನು ಹಾಕಿಸಿ ಕೊಳ್ಳಬೇಕು ಎಂದು ತಾಪಂ ಇಒ ಗಿರೀಶ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ;- ಎಲ್ಲರೂ ಪರಮಾತ್ಮನ ಮಕ್ಕಳು: ಚನ್ನವೀರ ಶಿವಾಚಾರ್ಯರು
ಶಾಸಕರ ಎಚ್ಚರಿಕೆ: ಈಗಾಗಲೇ ಶಾಸಕ ಮಂಜುನಾಥರು ಪಿಡಿಒ, ಕಂದಾಯ ಇಲಾಖಾಕಾರಿ ಗಳ ಸಭೆ ನಡೆಸಿದ್ದು, ಲಸಿಕಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲವೆಂಬ ದೂರಿದ್ದು, ಸಮನ್ವಯತೆಯಿಂದ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಸಹಕರಿಸದ ನೌಕರರ ವಿರುದ್ಧ ಜಿಲ್ಲಾಕಾರಿಗಳು ಸೂಕ್ತ ಕ್ರಮವಹಿಸಲಿದ್ದಾರೆಂದು ಎಚ್ಚರಿಸಿದ್ದಾರೆ.
ನಗರದಲ್ಲಿ 10 ಸಾವಿರ ಮಂದಿ ಬಾಕಿ-
ನಗರಸಭೆಯ ಎಲ್ಲಾ ಸಿಬ್ಬಂದಿ ತಮ್ಮ ದೈನಂದಿನ ಕೆಲಸ ಬಿಟ್ಟು ನಿತ್ಯ ವಾರ್ಡ್‌ಗಳಲ್ಲಿ ಸುತ್ತಾಡಿ ವಾಹನಗಳ ಮೂಲಕ ಪ್ರಚಾರ ನಡೆಸುತ್ತಿದ್ದರೂ ಕೆಲ ವಾರ್ಡ್‌ಗಳಲ್ಲಿ ಸಿಬ್ಬಂದಿಗಳೊಂದಿಗೆ ಜನರು ಜಗಳಕ್ಕೆ ನಿಲ್ಲುತ್ತಿದ್ದಾರೆ. ಇನ್ನೂ ಸುಮಾರು 10 ಸಾವಿರ ಮಂದಿ ಲಸಿಕೆ ಪಡೆಯಬೇಕಿದೆ ಎಂದು ನಗರಸಭೆ ಆಯುಕ್ತ ರಮೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.