ಅಕ್ಕತಮ್ಮನ ಬಾಂಧವ್ಯಕ್ಕೆ ಕೋವಿಡ್ ಅಡ್ಡಿ
ತಬ್ಬಲಿಯಾದ ಅನುಷಾ, ಆಕಾಶ್ ಭೇಟಿಗೆ ಅವಕಾಶ ಕಲ್ಪಿಸಿ
Team Udayavani, May 2, 2020, 3:35 PM IST
ಎಚ್.ಡಿ.ಕೋಟೆ: ತಂದೆತಾಯಿ ಕಳೆದಕೊಂಡ ತಬ್ಬಲಿ ಅಕ್ಕತಮ್ಮನ ಬಾಂಧವ್ಯಕ್ಕೆ ಕೋವಿಡ್ ಅಡ್ಡಿಯಾಗಿದ್ದು, ಒಡಹುಟ್ಟಿದ್ದ ಅಂಗ ವಿಕಲೆ ಅಕ್ಕನನು ಕಾಣುವ
ತವಕದಲ್ಲಿ ತಮ್ಮ ದಿನ ಕಳೆಯುತ್ತಿದ್ದು, ಬಿಸಿಲಿನಿಂದ ಎದ್ದು ಬೆಂಕಿಗೆ ಬಿದ್ದಂತಾಗಿದೆ. ತಂದೆತಾಯಿ ಕಳೆದುಕೊಂಡು ಶರೀರದ ಸ್ಪರ್ಶ ಜ್ಞಾನವಿಲ್ಲದೆ ಉಸಿರಾಡುತ್ತಿರುವ ಅಕ್ಕ ಅನುಷಾ(16)ಳನ್ನು ಸಹೋದರ ಆಕಾಶ (14) ಶಾಲೆ ಬಿಟ್ಟು ಕೂಲಿ ಮಾಡಿ ಪೋಷಣೆ ಮಾಡುತ್ತಿದ್ದ. ವಿಷಯ ತಿಳಿದ ದಾನಿಗಳು ಅಕ್ಕತಮ್ಮನಿಗೆ ಆಶ್ರಯ ಕಲ್ಪಿಸಿದ್ದರು. ಕೋವಿಡ್ ದಿಂದ ಅಕ್ಕತಮ್ಮ ಬೇರೆಬೇರೆಯಾಗಿ, ತಿಂಗಳು ಕಳೆದರೂ ಭೇಟಿಯಾಗದೇ ಅನುಷಾಳ ಆಗಮನಕ್ಕೆ
ತಮ್ಮ ಕಾಯುತ್ತಿದ್ದಾನೆ.
ಘಟನೆ ವಿವರ: ತಾಲೂಕಿನ ಆಲನಹಳ್ಳಿಯ ಕುಮಾರ ಮತ್ತು ಮಂಜುಳ ದಂಪತಿಗೆ ಅನುಷಾ ಮತ್ತು ಆಕಾಶ್ ಎಂಬ ಇಬ್ಬರು ಮಕ್ಕಳಿದ್ದರು. ಅನುಷಾ ಹುಟ್ಟಿದ 5
ವರ್ಷದ ಬಳಿಕ ವಿಚಿತ್ರ ರೋಗಕ್ಕೆ ಬಲಿಯಾಗಿ, ಶರೀರ ಚಲನೆ ಕಳೆದುಕೊಂಡಿದ್ದಾಳೆ. ಪೋಷಕರು ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗಿಲ್ಲ. ಈಕೆಯನ್ನು ತಂದೆತಾಯಿ ಪೋಷಣೆ ಮಾಡುತ್ತಿದ್ದರು. ಕಳೆದ 2 ವರ್ಷಗಳ ಹಿಂದೆ ತಂದೆತಾಯಿ ವಿಧಿವಶರಾದ ವೇಳೆ ಶಾಲೆ ಬಿಟ್ಟು ಆಕಾಶ್ ಅನುಷಾಳನ್ನು ಪೋಷಣೆ ಮಾಡುತ್ತಿದ್ದ. ವಿಚಾರ ತಿಳಿದ ಚುಗುರು ಸಂಸ್ಥೆ ಅನುಷಾಳಿಗೆ ಆಶ್ರಯ ಕಲ್ಪಿಸಿತ್ತು. ಆಕಾಶ್ ಕೂಡ ಮೈಸೂರಿನ ಆಶ್ರಯ ತಾಣವೊಂದರಲ್ಲಿದ್ದ. ಕೋವಿಡ್ ಹಿನ್ನೆಲೆಯಲ್ಲಿ ಆಶ್ರಯ ತಾಣದ ಎಲ್ಲರನ್ನೂ ಕಳುಹಿಸಿದಾಗ ಆಕಾಶ್ ತನ್ನ ಸ್ವಗ್ರಾಮ ಆಲನಹಳ್ಳಿಗೆ ಬಂದು ತಿಂಗಳು ಕಳೆದಿದೆ. ಆಕಾಶ್ ಮೈಸೂರಿನಲ್ಲಿರುವ ತನ್ನ ಅಕ್ಕನನ್ನು ನೋಡಲು ಸಾಧ್ಯವಾಗುತ್ತಿಲ್ಲ. ಅಕ್ಕನ ಆಗಮನ ನಿರೀಕ್ಷೆಯಲ್ಲಿದ್ದಾನೆ. ತಾಲೂಕು ಆಡಳಿತ ಇತ್ತ ಗಮನ ಹರಿಸಿ, ತಬ್ಬಲಿಯಾದ ಅನುಷಾ ಮತ್ತು ಆಕಾಶ್ ಇಬ್ಬರನ್ನು ಪರಸ್ಪರ ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.