ಹುಣಸೂರು: ತಿಂಗಳಿಗೆ ನೂರು ಅರ್ಜಿ ವಿಲೇವಾರಿಗೆ ಕ್ರಮವಾಗಲಿ: ಶಾಸಕ ಮಂಜುನಾಥ್
ರೈತರ ಸಾಗುವಳಿಗಾಗಿ ಅಲೆದಾಟ ತಪ್ಪಿಸಿ
Team Udayavani, Oct 21, 2022, 9:19 AM IST
ಹುಣಸೂರು: ಮುಂದಿನ ತಿಂಗಳು ನಡೆಯಲಿರುವ ಅಕ್ರಮ ಸಕ್ರಮ ಸಮಿತಿಗೆ ಕನಿಷ್ಠ ನೂರು ಅರ್ಜಿಗಳನ್ನು ಸಾಗುವಳಿ ಸಕ್ರಮಗೊಳಿಸಲು ತಾಲೂಕು ಕಂದಾಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಸೂಚನೆ ನೀಡಿದರು.
ನಗರದ ತಾಲೂಕು ಕಚೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಾಗುವಳಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ರೈತರು ಭೂಮಿ ಸಾಗುವಳಿಗಾಗಿ ಈ ಹಿಂದೆ ನಮೂನೆ 53 ಮತ್ತು 57 ರಲ್ಲಿ ಸಲ್ಲಿಸಿರುವ ಕನಿಷ್ಠ ನೂರು ಫೈಲ್ ಗಳನ್ನು ಮುಂದಿನ ಸಭೆಯಲ್ಲಿಡಬೇಕು. ಅರ್ಜಿ ಸಲ್ಲಿಸಿರುವ ಕುಟುಂಬಗಳ ಸಣ್ಣ ಪುಟ್ಟ ತಕರಾರುಗಳನ್ನು ಅಲ್ಲಿಯೇ ಕುಟುಂಬಸ್ಥರೊಂದಿಗೆ ಬಗೆಹರಿಸಿ ರೈತರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಬೇಕೆಂದು ತಿಳಿಸಿದರು.
ಗೋಮಾಳ ಜಮೀನಿಗೆ ಅರ್ಜಿ ಸಲ್ಲಿಸಿರುವ ರೈತರು ಸಾಗುವಳಿಗಾಗಿ ಕಚೇರಿಗೆ ಅಲೆಯಬೇಡಿ. ಸರ್ಕಾರ ಗೋಮಾಳ ಭೂಮಿಗೆ ಸಾಗುವಳಿ ನೀಡಲು ಅನುಮತಿ ನೀಡಿರುವುದಿಲ್ಲವೆಂದು ತಿಳಿಸಿ ಗೋಮಾಳ ಸಾಗುವಳಿಗಾಗಿ ನಿತ್ಯ ತಾಲೂಕು ಕಚೇರಿ ಹಾಗೂ ಮಧ್ಯವರ್ತಿಗಳ ಮೊರೆ ಹೋಗಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದರು.
53 ಅರ್ಜಿಗಳ ಪರಿಶೀಲನೆ:
ಇಂದಿನ ಸಭೆಯಲ್ಲಿ ಒಟ್ಟು 53 ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ನಮೂನೆ 57 ರಲ್ಲಿ ಸಲ್ಲಿಕೆಯಾಗಿದ್ದ 43 ಅರ್ಜಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ಬಂದ 10 ಅರ್ಜಿಗಳು ಪರಿಶೀಲನೆ ನಡೆಸಿ, ಈ ಪೈಕಿ 27 ಅರ್ಜಿಗಳನ್ನು ಸಕ್ರಮಗೊಳಿಸಿ ನೋಟಿಸ್ ಹೊರಡಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಹಾಗೂ ತಹಶೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಡಾ.ಅಶೋಕ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ನಾಗರಾಜ ಮಲ್ಲಾಡಿ, ವೆಂಕಟಮ್ಮ, ಗ್ರೇಡ್-2 ತಹಶೀಲ್ದಾರ್ ಶಕೀಲಾ ಬಾನ್ , ಎಡಿಎಲ್ ಆರ್ ಮಹಮದ್ ಹುಸೇನ್, ಉಪತಹಶೀಲ್ದಾರ್ ಚೆಲುವರಾಜ್ ವೆಂಕಟೇಶ್, ಆರ್.ಐ.ಗಳಾದ ನಂದೀಶ್, ಪ್ರಶಾಂತ್ ರಾಜೇಅರಸ್, ಪ್ರಭಾಕರ್, ಭಾಸ್ಕರ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.