Hunsur: ಶುಂಠಿ ಬೆಳೆ ಕಳ್ಳತನ; ಮೂವರು ಆರೋಪಿಗಳ ಬಂಧನ
Team Udayavani, Jul 25, 2023, 11:54 AM IST
ಹುಣಸೂರು: ಹೊಲದಲ್ಲಿ ಬೆಳೆದಿದ್ದ ಶುಂಠಿ ಬೆಳೆಯನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಪ್ರಕರಣ ಭೇದಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ವಾಹನ ಸಹಿತ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಚಂದ್ರು ಅ.ಕರಿಯ, ರಾಜು ಉ.ಬೆಲ್ಟು, ಸುರೇಶ್ ಉ.ಕರಿಸೂರಿ, ಭೈರನಾಯಕ ಅ.ಕರಿಯ ಬಂಧಿತರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಪಿಕಪ್ ಗೂಡ್ಸ್ ವ್ಯಾನ್, ಶುಂಠಿ ಮಾರಾಟ ಮಾಡಿದ್ದ 32 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಚೆನ್ನಸೋಗೆ ಗ್ರಾಮದ ರೈತ ಪ್ರಸನ್ನಕುಮಾರ್ ಹಾಗೂ ಸ್ನೇಹಿತರು ಸಣ್ಣೇನಹಳ್ಳಿಯ ಚಂದ್ರೇಗೌಡ ಜಮೀನಿನಲ್ಲಿ ಬೆಳೆದಿದ್ದ ಅರ್ಧ ಎಕರೆಯ ಜಾಗದಲ್ಲಿದ್ದ ಶುಂಠಿ ಬೆಳೆಯನ್ನು ಜುಲೈ 15ರ ಶನಿವಾರ ರಾತ್ರೋರಾತ್ರಿ ಭೂಮಿ ಬಗೆದು ಕಳವು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸನ್ನಕುಮಾರ್ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಬೆಳೆಗಳನ್ನು ಕಳ್ಳತನ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿವೈಎಸ್‌ಪಿ ಎಂ.ಕೆ.ಮಹೇಶ್, ಇನ್‌ಸ್ಪೆಕ್ಟರ್ ರವಿ ನೇತೃತ್ವದಲ್ಲಿ ತಂಡ ರಚಿಸಿದ್ದರು.
ಆರೋಪಿಗಳು ತಾಲೂಕಿನ ಚಿಲ್ಕುಂದ ಬಳಿಯಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಶುಂಠಿಯನ್ನು ಎಚ್.ಡಿ.ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ನಲ್ಲಿ ಮಾರಾಟ ಮಾಡಿರುವ ಬಗ್ಗೆ ತಿಳಿಸಿದರು.
ಶುಂಠಿ ಮಾರಾಟ ಮಾಡಿ ಬಂದಿದ್ದ 32 ಸಾವಿರ ರೂ. ನಗದನ್ನು ಜಪ್ತಿ ಕೃತ್ಯಕ್ಕೆ ಬಳಸಿದ್ದ ಮಹೇಂದ್ರಾ ಪಿಕಪ್ ಗೂಡ್ಸ್ ವಾಹನ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್.ಐ. ಸಿದ್ದರಾಜು, ಎಎಸ್‌ಐ ಅಂತೋಣಿ ಕ್ರೂಸ್, ಸಿಬ್ಬಂದಿಗಾಳಾದ ಮಂಜುನಾಥ್, ವಿಜಯರಘು, ಮೆಹರಾಜ್, ಇಮ್ರಾನ್ ಷರೀಫ್, ಮಂಜು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.