ಪೊಲೀಸ್ ಮಾದರಿ ತನಿಖೆ ಕಷ್ಟ: ಹರ್ಷಗುಪ್ತಾ
ಮೂಲ ಹುಡುಕುವುದಕ್ಕಿಂತ ಸೋಂಕು ತಡೆ ಮುಖ್ಯ
Team Udayavani, Apr 29, 2020, 1:06 PM IST
ಮೈಸೂರು: ಕೋವಿಡ್ ಸಂಬಂಧ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಕುರಿತು ತನಿಖೆ ನಡೆಸುವ ಜವಾಬ್ದಾರಿ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತಾ, ಜ್ಯುಬಿಲಿಯಂಟ್ ಪ್ರಕರಣದ ತನಿಖೆಗೆ ವೈಜ್ಞಾನಿಕ ವಿಧಾನ ಅಗತ್ಯವೇ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಕೋವಿಡ್ ನಿಯಂತ್ರಣ ಕಾರ್ಯಾಚರಣೆಯ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷಗುಪ್ತಾಗೆ ಸರ್ಕಾರ ಸೋಂಕು ಹರಡಿದ್ದು ಹೇಗೆ ಎಂಬುದರ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಿತ್ತು. ಈ ಸಂಬಂಧ ಶುಕ್ರವಾರ ಆದೇಶವನ್ನು ಕೂಡ ಹೊರಡಿಸಿತ್ತು. ಮರು ದಿನವೇ ವಿಚಾರಣೆ ಪ್ರಕ್ರಿಯೆ ಕುರಿತ ಕೆಲವು ಸಂಗತಿಗಳ ಬಗ್ಗೆ ತಮಗೆ ನಿರ್ದೇಶನ ನೀಡುವಂತೆ ಪತ್ರ ಬರೆದಿರುವ ಹರ್ಷಗುಪ್ತಾ ಅವರು ಸದ್ಯಕ್ಕೆ ವಿಚಾರಣೆಗಿಂತ ವೈರಾಣು ತಡೆಗಟ್ಟುವುದೇ ಮುಖ್ಯವಾಗಬೇಕಿದೆ ಎಂಬ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆನ್ನಲಾಗಿದೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿ ತನಿಖೆ ಅಗತ್ಯ ಕಾಣುತ್ತಿಲ್ಲ. ಪ್ರಕರಣದ ತನಿಖೆಗೆ ವೈಜ್ಞಾನಿಕ ವಿಧಾನಗಳಿದೆಯೇ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕೋವಿಡ್ ಸಾಂಕ್ರಾಮಿಕ ರೋಗವಲ್ಲ. ಅದು ಸರ್ವವ್ಯಾಪಿ ಪಿಡುಗು. ಇದಕ್ಕೆ ನಮ್ಮಲ್ಲಿ ಕಾಯ್ದೆಯಿಲ್ಲ. ಶಂಕಿತರು, ಸೋಂಕಿತರನ್ನು ಸಂಪರ್ಕಿಸಿ ಪೊಲೀಸ್ ಮಾದರಿ ತನಿಖೆ ಕಷ್ಟ ಎಂದು ತಿಳಿಸಿದ್ದಾರೆ.
ಈಗ ಮೂಲ ಹುಡುಕುವುದಕ್ಕಿಂತಲೂ ಹರಡುವುದನ್ನು ತಡೆಯುವುದು ಮುಖ್ಯ. ಆದ್ದರಿಂದ ತನಿಖೆ ಮಾಡಲು ಏನೂ ಇಲ್ಲ. ಈ ಸಂಬಂಧ ತನಿಖೆ ಶುರುವಾಗಿಲ್ಲ. ಏ.14ರಂದು ನನ್ನನ್ನು ಕೋವಿಡ್ ಮೇಲ್ವಿಚಾರಣೆಗಾಗಿ ಸರ್ಕಾರ ನೇಮಿಸಿತ್ತು. ಈಗ ತನಿಖೆ ಮಾಡಿ ಎಂದು ಹೇಳಿದೆ. ಆದ್ದರಿಂದ ಒಂದಷ್ಟು ತಾಂತ್ರಿಕ ಮಾರ್ಗದರ್ಶನ ಕೋರಿದ್ದೇನೆ. ಈ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಜ್ಯುಬಿಲಿಯೆಂಟ್ ನಲ್ಲಿ 1500 ಕಾರ್ಮಿ ಕರು ಇದ್ದಾರೆ. 70ಕ್ಕೂ ಹೆಚ್ಚು ಜನರು ಪಾಸಿಟಿವ್ ಆಗಿದ್ದಾರೆ. ಹೇಗೆ, ಯಾವ ರೀತಿ ತನಿಖೆ ಮುಂದುವರಿಸಬೇಕು ಎಂದು ಕೇಳಿದ್ದೇನೆ. ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಅವರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.