ಮೋದಿ ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜು
ಮದುವಣಗಿತ್ತಿಯಂತೆ ಸಿಂಗಾರಗೊಂಡ ರಸ್ತೆಗಳು ; ಐತಿಹಾಸಿಕ ಕ್ಷಣಕ್ಕೆಸಾಕ್ಷಿಯಾಗಲಿರುವ ಅರಮನೆ
Team Udayavani, Jun 20, 2022, 11:13 AM IST
ಮೈಸೂರು: ವಿಶ್ವಯೋಗ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏರ್ಪಡಿಸಿರುವ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಇವರ ಸ್ವಾಗತಕ್ಕೆ ಮೈಸೂರು ಸಜ್ಜುಗೊಂಡಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮೈಸೂರಿಗೆ ಮೂರನೇ ಬಾರಿಗೆ ಆಗಮಿಸುತ್ತಿದ್ದು, ಜೂ.20 ಮತ್ತು 21ರಂದು ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ. 21ರಂದು ಅರಮನೆ ಆವರಣದಲ್ಲಿ ನಡೆಯುವ ಯೋಗ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬೃಹತ್ ವೇದಿಕೆ ನಿರ್ಮಾಣ, ಯೋಗ ಪಟುಗಳಿಗೆ ಅನುಕೂಲವಾಗಲೆಂದು ಮ್ಯಾಟ್ ಅಳವಡಿಕೆ ಮಾಡಲಾಗಿದೆ.
ಮೋದಿ ಭಾಗವಹಿಸುವ ಕಾರ್ಯಕ್ರಮಗಳು: ಜೂ.20 ಸೋಮವಾರ ಸಂಜೆ 4.50ಕ್ಕೆ ಮೈಸೂರು ವಿಮಾನ ನಿಲ್ದಾಣ ಅಥವಾ ಹೆಲಿಪ್ಯಾಡ್‌ಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ನಗರದ ಮಹಾರಾಜ ಮೈದಾನಕ್ಕೆ ತೆರಳಿ, ಸಂಜೆ 6.5ಕ್ಕೆ ಫಲಾನುಭವಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವರು. ನಂತರ ರಾಮಸ್ವಾಮಿ ವೃತ್ತ, ಗನ್‌ಹೌಸ್ ಮಾರ್ಗವಾಗಿ 7ಕ್ಕೆ ಸುತ್ತೂರು ಮಠಕ್ಕೆ ತೆರಳಲಿದ್ದಾರೆ. ಈ ವೇಳೆ ವೇದ ಪಾಠಶಾಲೆ ಉದ್ಘಾಟಿಸಲಿದ್ದಾರೆ. 8.15ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ನಗರದ ರ್ಯಾಡಿಸನ್ ಬ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
21ರಂದು ಅರಮನೆ ಆವರಣದಲ್ಲಿ ಮುಂಜಾನೆ 6.30ರಿಂದ 7.41ರವರೆಗೆ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ 7.45ರಿಂದ 8 ಗಂಟೆಯವರೆಗಿನ ಸಮಯವನ್ನು ಕಾಯ್ದಿರಿಸಲಾಗಿದೆ. ನಂತರ ವಸ್ತುಪ್ರದರ್ಶನ ಆವರಣದಲ್ಲಿ ಆಯೋಜಿಸಿರುವ ಯೋಗ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9.25ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಕೇರಳದ ತಿರುವನಂತಪುರಕ್ಕೆ ತೆರಳಲಿದ್ದಾರೆ.
ಕಂಗೊಳಿಸುತ್ತಿರುವ ರಸ್ತೆ: ಪ್ರಧಾನಿ ಮೋದಿ ಸಂಚರಿಸುವ ಎಲ್ಲಾ ರಸ್ತೆಗಳು ದುರಸ್ತಿಯಾಗಿದ್ದು, ಮಂಕಾಗಿದ್ದ ಪಾದಚಾರಿ ಮಾರ್ಗ, ರಸ್ತೆ ವಿಭಜಕಗಳು, ಚರಂಡಿ ಮತ್ತು ವಿದ್ಯುತ್ ಕಂಬಗಳು ಸ್ವತ್ಛಗೊಂಡು ಕಂಗೊಳಿಸುತ್ತಿವೆ. ಇದಕ್ಕಾಗಿ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ನಗರದ 55 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಫ್ಲೆಕ್ಸ್, ಹೋಲ್ಡಿಂಗ್ಸ್ ತೆರವು ಮಾಡಿದ್ದು, ಮತ್ತೆ ಫ್ಲೆಕ್ಸ್ ಅಳವಡಿಸದಂತೆ ತಾಕೀತು ಮಾಡಲಾಗಿದೆ.
ಭದ್ರತಾ ತಂಡದಿಂದ ಪರಿಶೀಲನೆ: ವಿಧ್ವಂಸಕ ಕೃತ್ಯ ತಡೆ (ಬಾಂಬ್ ಪತ್ತೆ ದಳ) ತಂಡ ಹಾಗೂ ವಿಶೇಷ ಭದ್ರತಾ ಪಡೆ ಅಧಿಕಾರಿಗಳು ಅರಮನೆ, ಚಾಮುಂಡಿ ಬೆಟ್ಟ, ಮಹಾರಾಜ ಕಾಲೇಜು ಮೈದಾನ, ವಸ್ತು ಪ್ರದರ್ಶನ ಆವರಣ, ಸುತ್ತೂರು ಮಠ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗಗಳನ್ನು ತಪಾಸಣೆ ಮಾಡಿದರು.
ವಾಹನಗಳಿಗೆ ಪರ್ಯಾಯ ಮಾರ್ಗ: ಪ್ರಧಾನಿ ಮೋದಿ ಇಂದು (ಜೂ.20) ಮೈಸೂರು ನಗರಕ್ಕೆ ಭೇಟಿ ನೀಡಿ ಮಹಾರಾಜ ಕಾಲೇಜು ಮೈದಾನ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಸುತ್ತೂರು ಮಠ, ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದಂತೆ ಸಾರ್ವಜನಿಕರು ಮತ್ತು ವಾಹನಗಳಿಗೆ ನಿರ್ಬಂಧ ಹೇರಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಐತಿಹಾಸಿಕ ಕ್ಷಣಕ್ಕೆ ಅರಮನೆ ಸಾಕ್ಷಿ
ವಿಶ್ವವಿಖ್ಯಾತ ಮೈಸೂರು ಅರಮನೆ ಈ ಬಾರಿ ಮತ್ತೂಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಅಂಬಾವಿಲಾಸ ಅರಮನೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಜರುಗಲಿರುವ ವಿಶ್ವ ಯೋಗ ದಿನಾಚರಣೆ ಸಮಾರಂಭ ಚರಿತ್ರಾರ್ಹ ಕ್ಷಣಗಳಿಗೆ ವೇದಿಕೆ ಆಗಲಿದೆ. ಈ ಮೂಲಕ ಅರಮನೆ ಐತಿಹಾಸಿಕ ಘಟನೆಗಳಿಗೆ ಈ ಕಾರ್ಯಕ್ರಮ ಸೇರ್ಪಡೆಯಾಗಲಿದೆ. ಯೋಗ ಒಕ್ಕೂಟದ 5 ಸಾವಿರ ಸದಸ್ಯರು, 3 ಸಾವಿರ ಶಿಕ್ಷಕರು-ವಿದ್ಯಾರ್ಥಿಗಳು ಭಾಗವಹಿಸುವ ಜತೆಗೆ ಕಾರ್ಮಿಕ ಇಲಾಖೆ, ಡಿಎಫ್ ಆರ್‌ಎಲ್, ಎನ್ನೆಸ್ಸೆಸ್, ವಿಶೇಷ ಚೇತನರು, ತೃತೀಯ ಲಿಂಗಿಗಳು ಮತ್ತು ಕೆಎಸ್‌ಆರ್‌ಪಿ ಸಿಬ್ಬಂದಿ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ವಿಶೇಷ.
ಚಾ.ಬೆಟ್ಟ, ಅರಮನೆಗೆ ನಿರ್ಬಂಧ
ಭದ್ರತಾ ದೃಷ್ಟಿಯಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರು ಮತ್ತು ಖಾಸಗಿ ವಾಹನಗಳಿಗೆ ಅವಕಾಶ ನಿರ್ಬಂಧಿಸಲಾಗಿದೆ. ಮೆಟ್ಟಿಲು ಮೂಲಕ ಚಾಮುಂಡಿ ಬೆಟ್ಟ ಏರುವುದಕ್ಕೂ ನಿಷೇಧ ಮಾಡಲಾಗಿದೆ. 21ರಂದು ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವಯೋಗ ದಿನಾಚರಣೆ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಕಾರ್ಯಕ್ರಮಗಳು ಪ್ರಗತಿಯಲ್ಲಿರುವುದರಿಂದ ಭಾನುವಾರದಿಂದ ಸೋಮವಾರ ಮಧ್ಯಾಹ್ನ 12ಗಂಟೆಯವರೆಗೆ ಅರಮನೆಯ ಪ್ರವೇಶವನ್ನು ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಜತೆಗೆ ಅರಮನೆ ಆವರಣದಲ್ಲಿ ನಡೆಯುವ ಬೆಳಕು, ಧ್ವನಿ ಕಾರ್ಯಕ್ರಮಗಳನ್ನು ಶನಿವಾರದಿಂದ ಮಂಗಳವಾರದವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
15 ಸಾವಿರ ಮಂದಿ ಭಾಗಿ
ಮೈಸೂರು ಯೋಗ ನಗರಿ ಎಂದೇ ಹೆಸರುವಾಸಿ. ಈ ಪಾರಂಪರಿಕ ನಗರಿಯಲ್ಲಿ ಯೋಗ ಪರಂಪರೆ ಬೆಳೆದು ಬಂದಿದೆ. ಯೋಗ ಕಲಿಸುವ ಅನೇಕ ಸಂಘ-ಸಂಸ್ಥೆಗಳು ಈ ಸಾಂಸ್ಕೃತಿಕ ನಗರಿಯಲ್ಲಿದೆ. ಅಂತಾರಾಷ್ಟ್ರೀಯ ಯೋಗ ದಿನದಂದು ಅನೇಕ ಕಡೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಜೂನ್ 21ರಂದು ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ಅರಮನೆ ಆವರಣದಲ್ಲಿ ನಡೆಯುವ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಳ್ಳುವರು. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದೆ. ಇದಲ್ಲದೇ, ಮೈಸೂರಿನ ಅನೇಕ ಕಡೆ, ವಿವಿಧ ಬಡಾವಣೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಜೂ.21ರಂದು ಯೋಗ ಪ್ರದರ್ಶನ ನಡೆಯಲಿದೆ. ಮೈಸೂರಿನ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಮೈಸೂರಿನಲ್ಲಿ ನೂರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಯೋಗದಲ್ಲಿ ಅನೇಕರನ್ನು ಈ ಸಮಿತಿ ತಯಾರು ಮಾಡಿದೆ. ನೂರಾರು ಸಂಖ್ಯೆಯಲ್ಲಿ ಯೋಗ ಶಿಕ್ಷಕರಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಸಾಮೂಹಿಕ ಯೋಗ ಪ್ರದರ್ಶನ ನಡೆಸುವರು ಎಂದು ಸಮಿತಿ ಪ್ರಮುಖ ಎನ್.ಎಸ್.ಸತ್ಯನಾರಾಯಣ ತಿಳಿಸಿದ್ದಾರೆ.
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.