ಕನಸಿನಲ್ಲೂ ಸಿದ್ದರಾಮಯ್ಯಗೆ ಆರೆಸ್ಸೆಸ್ ಜಪ; ಸಂಸದ ಡಿ.ವಿ.ಸದಾನಂದಗೌಡ ಲೇವಡಿ
ಕುವೆಂಪು ಅವರಿಗೆ ಅಗೌರವ ತೋರಲಾಗಿದೆ ಎಂದು ಹಬ್ಬಿಸಲಾಗುತ್ತಿದೆ.
Team Udayavani, Jun 2, 2022, 5:24 PM IST
ಮೈಸೂರು: ಸಂಘ ಪರಿವಾರದ ಮೇಲಿನ ಭಯದಿಂದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕನಸಿನಲ್ಲೂ ಆರೆಸ್ಸೆಸ್ ಬಗ್ಗೆ ಜಪ ಮಾಡುತ್ತಿದ್ದಾರೆ. ಹೀಗಾಗಿ ಪದೇ ಪದೇ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಸದ ಡಿ.ವಿ. ಸದಾನಂದಗೌಡ ಲೇವಡಿ ಮಾಡಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಃಪತನದಲ್ಲಿದೆ. ಆದ್ದರಿಂದ ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಟ್ವೀಟ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ದೊಡ್ಡ ದನಿಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ, ವಕ್ತಾರ ಬ್ರಿಜೇಶ್ ಕಾಳಪ್ಪ ಆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ನಾವ್ಯಾರೂ ಪ್ರತಿಕ್ರಿಯೆ ಕೊಡುತ್ತಿಲ್ಲ: ಇತ್ತೀಚಿಗೆ ಸಿದ್ದರಾಮಯ್ಯ ವರ್ಸಸ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗಿದೆ. ಸಿದ್ದರಾಮಯ್ಯ ಅವರು ಯೋಗ್ಯವಲ್ಲದ ವಿಷಯಗಳನ್ನು ಪ್ರಸ್ತಾಪಿಸುತ್ತಿರುವುದರಿಂದ ನಾವ್ಯಾರೂ ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವಿನ ಒಳಜಗಳವನ್ನು ಶಮನ ಮಾಡುವ ಸಲುವಾಗಿ ಇಬ್ಬರನ್ನು ಕಾಂಗ್ರೆಸ್ ಹೈಕಮಾಂಡ್ ಪದೇ ಪದೆ ಕರೆಸಿಕೊಳ್ಳುತ್ತಿದೆ. ಇದು ಕಾಂಗ್ರೆಸ್ ಸಮಸ್ಯೆಗಳಲ್ಲಿ ಮುಳುಗಿರುವುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು. ಮೇಲ್ಮನೆಗಳು ಚಿಂತಕರ ಚಾವಡಿಯ ಬದಲಿಗೆ ಕೆಲವರಿಗೆ ಪುನರ್ವಸತಿ ಕೇಂದ್ರವಾಗಿದ್ದವು.
ರಾಜಕೀಯ ಪಕ್ಷಗಳಿಗೆ ಫಂಡಿಂಗ್ ಮಾಡಿದವರಿಗೆ ಅವಕಾಶ ಕೊಡುತ್ತಿದ್ದುದ್ದನ್ನು ಕಂಡಿದ್ದೇವೆ. ಮೇಲ್ಮನೆಗೆ ದುಡ್ಡಿನ ಚೀಲ ಇರುವವರನ್ನು ಕಳುಹಿಸುವ ಪ್ರತೀತಿ ಇತ್ತು. ಆದರೆ, ಅದಕ್ಕೆ ತದ್ವಿರುದ್ಧವಾಗಿ ನಮ್ಮ ಪಕ್ಷ ವಿಶೇಷ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ರಾಜ್ಯಸಭೆ ಹಾಗೂ ವಿಧಾನಪರಿಷತ್‌ಗೆ ಗೌರವ ತರುವಂತಹ ಕೆಲಸವನ್ನು ಪಕ್ಷ ಮಾಡುತ್ತಿದೆ ಎಂದು ಹೇಳಿದರು.
ರವಿಶಂಕರ್‌ಗೆ ಅಭೂತಪೂರ್ವ ಬೆಂಬಲ: ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗೆ ಅಭೂತಪೂರ್ವ ಬೆಂಬಲ ಕಂಡುಬರುತ್ತಿದೆ. ಪಕ್ಷಕ್ಕೆ ಫಲವತ್ತಾದ ನೆಲವಲ್ಲದ ಮಂಡ್ಯದಲ್ಲೂ ಬೆಂಬಲ ಸಿಗುತ್ತಿದೆ ಎಂದರೆ ನಮ್ಮ ಪರ ಒಲವಿರುವುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.
ಪದವೀಧರರ ಕ್ಷೇತ್ರದಲ್ಲಿ ನಮಗೆ ಪ್ರತಿಸ್ಪರ್ಧಿಗಳೇ ಇಲ್ಲ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ವ್ಯವಸ್ಥಿತವಾಗಿ ಚುನಾವಣೆಯನ್ನು ನಡೆಸುತ್ತಿದ್ದಾರೆ. ಅವರ ಕಾರ್ಯಯೋಜನೆ ನೋಡಿ ದಂಗಾದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರ ಕ್ರಮ ವಹಿಸಲಿದೆ: ಪಠ್ಯ ರಚನೆ ವಿಷಯದಲ್ಲಿ ಕೊರತೆಯಾಗಿದ್ದರೆ ಸರಿಪಡಿಸಲು ಸರ್ಕಾರ ಕ್ರಮ ವಹಿಸಲಿದೆ. ಕುವೆಂಪು ಅವರ ಬಗ್ಗೆ ವಿಶೇಷ ಗೌರವ ತೋರಿಸಿದವರು ನಾವು. ಅವರ ಗೀತೆಗಳನ್ನು ನಾಡಗೀತೆ ಹಾಗೂ ರೈತಗೀತೆ ಮಾಡಿದವರು ನಾವೇ ಹೊರತು ಕಾಂಗ್ರೆಸ್ ಅಥವಾ ಜೆಡಿಎಸ್‌ನವರಲ್ಲ ಎಂದು ಸಮರ್ಥಿಸಿಕೊಂಡರು.
ಕುವೆಂಪು ಅವರಿಗೆ ಅಗೌರವ ತೋರಲಾಗಿದೆ ಎಂದು ಹಬ್ಬಿಸಲಾಗುತ್ತಿದೆ. ಈ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಸ್ವಾಮೀಜಿ ಹಾಗೂ ಬುದ್ಧಿಜೀವಿಗಳು ಹೇಳಿದ್ದನ್ನು ಪರಿಶೀಲಿಸಲು ಸರ್ಕಾರ ಸಿದ್ಧವಿದೆ. ಸಾಹಿತಿಗಳು ಅಥವಾ ಲೇಖಕರು ಪತ್ರ ಬರೆದು ಸುಮ್ಮನೆ ಕೂರುವುದು ಸರಿಯಲ್ಲ. ಬದಲಾವಣೆ ಅಗತ್ಯವಿದ್ದರೆ ಬದಲಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದಾರೆ. ಜ್ವಲಂತ ವಿವಾದವಿದು. ಅದನ್ನು ತ್ವರಿತವಾಗಿ
ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್‌ಕುಮಾರ್ ಗೌಡ, ನಗರ ಘಟಕದ ವಕ್ತಾರ ಎಂ.ವಿ.ಮೋಹನ್, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿ ಮಂಜು, ಮುಖಂಡ ರಾದ ಶಿವಕುಮಾರ್, ಮಹೇಶ್‌ರಾಜೇ ಅರಸ್, ಕೇಬಲ್ ಮಹೇಶ್, ಪ್ರದೀಪ್ ಕುಮಾರ್ ಇದ್ದರು.
ಪಠ್ಯದಲ್ಲಿ ಯಾವ ವಿಚಾರವನ್ನು ತಿರುಚಿಲ್ಲ. ಆದಾಗ್ಯೂ ತಪ್ಪಾಗಿದ್ದರೆ ಸರಿಪಡಿಸಲಾಗುವುದು. ಸ್ವಾಮೀಜಿ ಅವರೊಂದಿಗೂ ಶಿಕ್ಷಣ ಸಚಿವರು ಕೂಡ ಸಮಾಲೋಚನೆ ನಡೆಸಿದ್ದಾರೆ. ಇಡೀ ಪ್ರಹಸನದ ಕುರಿತು ಮುಖ್ಯಮಂತ್ರಿ ಅವರಿಗೆ ವರದಿ ಕೊಡುವುದಾಗಿ ಶಿಕ್ಷಣ ಸಚಿವರು ಈಗಾಗಲೇ ಹೇಳಿದ್ದಾರೆ.
● ಡಿ.ವಿ.ಸದಾನಂದಗೌಡ, ಸಂಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.