Hunsur: ನಾಗರಹೊಳೆ ಉದ್ಯಾನದಲ್ಲಿ ಗುಂಡೇಟಿಗೆ ಕಾಡುಕೋಣ ಬಲಿ
Team Udayavani, Mar 25, 2024, 11:35 AM IST
ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ(ಇಂಡಿಯನ್ ಗಾರ್) ಬಲಿಯಾಗಿದ್ದು, ಕಳ್ಳ ಬೇಟೆಗಾರರು ಪರಾರಿಯಾಗಿದ್ದಾರೆ.
ನಾಗರಹೊಳೆ ಉದ್ಯಾನದ ಆನೆಚೌಕೂರು ವನ್ಯಜೀವಿ ವಲಯದ ಬಫರ್ ಪ್ರದೇಶಕ್ಕೆ ಸೇರಿರುವ ಚನ್ನಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ ಮಾ.24ರ ಭಾನುವಾರ ಈ ಕೃತ್ಯ ನಡೆದಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಪಿರಿಯಾಪಟ್ಟಣ ಮುಖ್ಯರಸ್ತೆಯಿಂದ ಪಾರದಕಟ್ಟೆ ಕಳ್ಳಬೇಟೆ ತಡೆ ಶಿಬಿರಕ್ಕೆ ಹೋಗುವ ರಸ್ತೆಯಲ್ಲಿ (ಮೈಸೂರು-ಕೊಡಗು ಚೈನ್‌ಗೇಟ್) ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿಗಳು ಅಣ್ಣಿಕೆರೆ ಬಳಿ ಗಸ್ತಿನಲ್ಲಿದ್ದಾಗ ಭಾನುವಾರ ಮುಂಜಾನೆ ಗುಂಡು ಹಾರಿಸಿದ ಶಬ್ಧ ಕೇಳಿದೆ. ತಕ್ಷಣ ಉಪ ವಲಯ ಅರಣ್ಯಾಕಾರಿ ಮತ್ತು ಸಿಬ್ಬಂದಿಗಳು ಬರುವುದನ್ನರಿತ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಧಾವಿಸಿ ಪರಿಶೀಲಿಸಲಾಗಿ ಯಾರೋ ದುಷ್ಕರ್ಮಿಗಳು ಗುಂಡು ಹಾರಿಸಿ ಸುಮಾರು 10-12 ವರ್ಷ ಪ್ರಾಯದ ಗಂಡು ಕಾಡುಕೋಣ ಹತ್ಯೆ ಮಾಡಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಸಹಾಯಕ ಅರಣ್ಯಸಂಕರಕ್ಷಣಾಕಾರಿ ದಯಾನಂದ್, ವಲಯ ಅರಣ್ಯಾಕಾರಿ ಡಿ.ದೇವರಾಜು ಭೇಟಿ ನೀಡಿದ್ದರು. ಉದ್ಯಾನದ ಮುಖ್ಯ ಪಶುವೈದ್ಯಾಕಾರಿ ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.
ದುಷ್ಕರ್ಮಿಗಳ ಪತ್ತೆಗೆ ತಂಡ: ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.