ಮನೆ ಹಾನಿ ಸಮೀಕ್ಷೆ ಅಧಿಕಾರಿಗಳ ನಿರ್ಲಕ್ಷ್ಯ! ಬಿದ್ದ ಮನೆಗಳ ಬಗ್ಗೆ ಅವಗಣನೆ, ಗ್ರಾಮಸ್ಥರ ಆರೋಪ
Team Udayavani, Oct 19, 2020, 1:26 PM IST
ಕಲಾದಗಿ: ಮಳೆಯಿಂದ ಚಿಕ್ಕಸಂಶಿ ಗ್ರಾಮದಲ್ಲಿ ಬಿದ್ದ ಮನೆಗಳನ್ನು ಕಂದಾಯ, ಪಂಚಾಯತರಾಜ್ ಇಲಾಖೆ ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಸತತ ಮಳೆಗೆ ಈ ಭಾಗದ ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ, ಖಜ್ಜಿಡೋಣಿ, ಗದ್ದನಕೇರಿ ತಾಂಡಾ, ದೇವನಾಳ, ತುಳಸಿಗಿರಿ, ಅಂಕಲಗಿ, ಉದಗಟ್ಟಿ ಇನ್ನೂ ಅನೇಕ ಗ್ರಾಮದಲ್ಲಿ ಮನೆಗಳು ಬಿದ್ದಿದ್ದು, ಜನರ ಬದುಕನ್ನು ಮೂರಾಬಟ್ಟೆಯಾಗಿಸಿ ಬೀದಿ ಬದುಕು, ಬಯಲು ವಾಸ ಮಾಡುವಂತಾಗಿದೆ.
ಚಿಕ್ಕಸಂಶಿ ಗ್ರಾಮದಲ್ಲೂ ಅನೇಕ ಮನೆಗಳು ಕುಸಿದು ಬಿದ್ದು, ಜನರು ಬೇರೆಡೆ ತಗಡಿನ ಶೆಡ್ಡುಗಳಲ್ಲಿ ಇಲ್ಲವೇ ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸತತ ಮಳೆಗೆ ಮಣ್ಣಿನ ಮೇಲ್ಛಾವಣಿ ಮನೆಗಳು ನೆನೆದು ಬೀಳುವ ಹಂತದಲ್ಲಿವೆ ಎನ್ನುವುದನ್ನು ಮನಗಂಡು ಮನೆ ವಾಸಿಗಳು ಮುಂಜಾಗ್ರತ ಕ್ರಮವಾಗಿ ಮೊದಲೇ ಬೇರೆಡೆ ವಾಸವಾಗಿದ್ದಾರೆ.
ಬೀಳುವ ಹಂತದಲ್ಲಿದ್ದ ಅಂತಹ ಮನೆಗಳು ಅ. 10ರಿಂದ ಸತತ ಸುರಿದ ಮಳೆಗೆ ಕುಸಿದು ಬಿದ್ದಿವೆ. ಇವುಗಳನ್ನು ಅಧಿ ಕಾರಿಗಳು ಪರಿಗಣನೆಗೆ ಮತ್ತು ಸರಕಾರದ ಪರಿಹಾರಕ್ಕೆ ವರದಿ ಮಾಡುತ್ತಿಲ್ಲ ಎಂದು ಚಿಕ್ಕಸಂಶಿ ನಿವಾಸಿ ಶಂಕರ ನಾಯ್ಕರ
ಆರೋಪಿಸುತ್ತಿದ್ದಾರೆ.
ಗ್ರಾಮದ ಕೆಲವರ ಮನೆಗಳು ನೆನೆದು ಕುಸಿದು ಬಿದ್ದಿವೆ. ಮುಂಜಾಗ್ರತ ಕ್ರಮವಾಗಿ ಕೆಲವರು ಮನೆ ಬೀಳುವ ಮೊದಲೇ ಮನೆ ಬಿಟ್ಟು ಬೇರೆಡೆ ವಾಸವಾಗಿದ್ದಾರೆ. ಅ ಧಿಕಾರಿಗಳು ಗ್ರಾಮದಲ್ಲಿ ಬಿದ್ದ ಮನೆಗಳ ಮಾಹಿತಿ ಪಡೆದು ಸರಕಾರದ ಪರಿಹಾರ ಕೊಡಿಸಬೇಕು.
– ನಾರಾಯಣ ಹಾದಿಮನಿ, ಚಿಕ್ಕಸಂಶಿ ಗ್ರಾಮ
ಈ ಹಿಂದಿನ ಗ್ರಾಮ ಲೆಕ್ಕಾ ಧಿಕಾರಿಗಳು ನನಗೆ ಚಾರ್ಜ್ ಕೊಡುವುದು ವಿಳಂಬವಾಗಿದ್ದರಿಂದ ಮಾಹಿತಿ ಪಡೆಯುವಲ್ಲಿ ವಿಳಂಬವಾಗಿದೆ. ಮಳೆಗೆ ನಾಲ್ಕು ಮನೆಗಳು ಬಿದ್ದಿರುವ ಪ್ರಾಥಮಿಕ ಮಾಹಿತಿಯಿದೆ. ಸೋಮವಾರ ಚಿಕ್ಕಸಂಸಿ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಲಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
– ಸಾಬಣ್ಣ ಹಳ್ಳಿ, ಚಿಕ್ಕಸಂಶಿ ಗ್ರಾಮಲೆಕ್ಕಾಧಿಕಾರಿ
ನಾನು ಸಹಿತ ಚಿಕ್ಕಸಂಶಿಗೆ ಭೇಟಿ ನೀಡಿ ಪರಿಶೀಲಿಸಿರುವೆ. ಕಂದಾಯ ಇಲಾಖೆ, ಪಂಚಾಯತ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಇಂಜಿನಿಯರ್ ಒಳಗೊಂಡ ಜಂಟಿ ತಂಡ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಲಿದೆ. ಮನೆ ಹಾನಿ ಮಾಹಿತಿ ಇದ್ದಲ್ಲಿ ಪಡೆಯಲು ಸೂಚನೆ ನೀಡಲಾಗಿದೆ.
– ಜಿ.ಎಸ್.ಹಿರೇಮಠ, ಬಾಗಲಕೋಟೆ ತಹಶೀಲ್ದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.