OBC ವಿದ್ಯಾರ್ಥಿಗಳಿಗೆ 100 ಹಾಸ್ಟೆಲ್- ಸಿಎಂಗೆ ಪ್ರಸ್ತಾವನೆ: ಶಿವರಾಜ ತಂಗಡಗಿ
ಕುಂದಾಪುರ ಬಿಜೆಪಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆ
Team Udayavani, Dec 6, 2023, 11:36 PM IST
ಬೆಳಗಾವಿ, ಡಿ. 6: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಕನಿಷ್ಠ 100 ಹಾಸ್ಟೆಲ್‌ಗಳನ್ನು ಆರಂಭಿಸಲು ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಕುಂದಾಪುರ ಬಿಜೆಪಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆಗೆ ಉತ್ತರಿಸಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹಾಸ್ಟೆಲ್‌ಗಳ ಕೊರತೆ ಇರುವುದು ನಿಜ. ಹೀಗಾಗಿ ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಮಾಸಿಕ 1500 ರೂ.ಗಳನ್ನು 10 ತಿಂಗಳವರೆಗೆ ವಿದ್ಯಾಸಿರಿ ಯೋಜ ನೆಯಡಿ ನೀಡಲಾಗುತ್ತಿದ್ದು, ಇದುವರೆಗೆ 38.07 ಕೋಟಿ ರೂ.ವಿನಿಯೋಗಿ ಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕಿರಣ್ ಕುಮಾರ್ ಕೊಡ್ಗಿ, ಕಾಲೇಜು ಆರಂಭವಾದ ಮೂರ್‍ನಾಲ್ಕು ತಿಂಗಳ ಅನಂತರ ಹಾಸ್ಟೆಲ್‌ಗಳನ್ನು ಆರಂಭಿಸಲಾ ಗುತ್ತಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಪಿಜಿಗಳಲ್ಲಿ ಇರುವಂತಾಗಿದೆ. ಉಡುಪಿ ಜಿಲ್ಲೆಗೆ ಹೆಚ್ಚುವರಿಯಾಗಿ ಬಾಲಕ-ಬಾಲಕಿಯರ ಹಾಸ್ಟೆಲ್ ಮಂಜೂರು ಮಾಡುವಂತೆ ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಯಶಪಾಲ್ ಸುವರ್ಣ, ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತಮುತ್ತಲ ಐದಾರು ಜಿಲ್ಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಹಾಸ್ಟೆಲ್‌ಗಳಿಲ್ಲ. ಹೀಗಾಗಿ ಹೆಚ್ಚುವರಿ ಹಾಸ್ಟೆಲ್ ಅಗತ್ಯವಿದೆ ಎಂದರು. ಆರಗ ಜ್ಞಾನೇಂದ್ರ ಬೆಂಬಲಿಸಿ, ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಹೋಗುವ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಇಲ್ಲದೆ ಪರಿತಪಿಸುವಂತಾಗಿದೆ ಎಂದು ಗಮನ ಸೆಳೆದರು.
ಇದೆಲ್ಲಕ್ಕೂ ಉತ್ತರಿಸಿದ ಸಚಿವ ತಂಗಡಗಿ, ಕೋವಿಡ್ ಸಂದರ್ಭದಲ್ಲಿ ಕೆಲವು ಪರೀಕ್ಷೆಗಳು ತಡವಾಗಿ ಆರಂಭವಾಗಿ, ಫಲಿತಾಂಶ ಪ್ರಕಟನೆಯಲ್ಲಿ ಏರುಪೇರಾದ್ದರಿಂದ ಈ ರೀತಿಯಾಗಿದೆ. ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಆಗಸ್ಟ್ ಒಳಗಾಗಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದರೆ ಸುಲಭವಾಗಲಿದೆ. ಅಲ್ಲಿವರೆಗೆ ವಿದ್ಯಾಸಿರಿ ಬಳಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.
ಬಿ.ಪಿ. ಹರೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಶೇ.25 ರಷ್ಟು ಸಾಮರ್ಥ್ಯ ಹೆಚ್ಚಿಸಿದ್ದು, 30 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹರಿಹರ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಮೆಟ್ರಿಕ್‌ಪೂರ್ವ ಹಾಗೂ 5 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿದ್ದು, ಹೊಸದಾಗಿ ಯಾವುದೇ ಹಾಸ್ಟೆಲ್ ನಿರ್ಮಿಸುವ ಪ್ರಸ್ತಾವನೆ ಇಲ್ಲ ಎಂದರು.
ಹಿಂದಿನ ಸರಕಾರ ರಚಿಸಿದ ಸುಮಾರು 10 ನಿಗಮ-ಮಂಡಳಿಗಳು ನೋಂದಣಿಯೂ ಆಗಿಲ್ಲ, ಅನುದಾನವನ್ನೂ ನಿಗದಿಪಡಿಸಿಲ್ಲ. ಈ ಬಗ್ಗೆ ನಮ್ಮ ಸರಕಾರ ಕ್ರಮ ವಹಿಸಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಧೀರಜ್ ಮುನಿರಾಜು, ಅನೇಕ ನಿಗಮ ಮಂಡಳಿಗೆ ಅನುದಾನವನ್ನೇ ಕೊಟ್ಟಿಲ್ಲ. ಗಂಗಾಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ತಲಾ ಒಬ್ಬ ಫಲಾನುಭವಿ ಆಯ್ಕೆ ಮಾಡಲು ಶಾಸಕರಿಗೆ ಹೊಣೆ ನೀಡಲಾಗಿದೆ.
ಆದರೆ, ಸಾವಿರಾರು ಆಕಾಂಕ್ಷಿಗಳಿದ್ದು, ಹೇಗೆ ಆಯ್ಕೆ ಮಾಡುವುದು ಎಂದು ಪ್ರಶ್ನಿಸಿದರು. ಬೆಂಬಲಿಸಿ ಮಾತನಾಡಿದ ಚಂದ್ರಪ್ಪ, ನಿಗಮ-ಮಂಡಳಿಗೆ ಹಣವನ್ನೇ ಇಡದೆ ಫಲಾನುಭವಿಗಳಿಂದ ಅರ್ಜಿಯನ್ನೇಕೆ ಕರೆದಿದ್ದೀರಿ? ಆನ್‌ಲೈನ್ ಅರ್ಜಿ ಸಲ್ಲಿಸಿದವರು ಶಾಸಕರ ಮನೆ ಮುಂದೆ ಬಂದು ನಿಲ್ಲುತ್ತಿದ್ದಾರೆ. ಇದಕ್ಕೆ ಪರಿಹಾರ ಏನು ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಇಲಾಖೆಯಡಿ ಈಗಾಗಲೇ ಇರುವ 10 ನಿಗಮ-ಮಂಡಳಿಗಳಿಗೆ ಅನುದಾನವೂ ಇದೆ, ಅರ್ಜಿ ಹಾಕಿದವರಿಗೆ ಸವಲತ್ತೂ ಸಿಗಲಿದೆ. ಆದರೆ, ಹಿಂದಿನ ಸರಕಾರ 10 ನಿಗಮ-ಮಂಡಳಿಗಳನ್ನು ರಚಿಸಿ ಸರಕಾರಿ ಆದೇಶವನ್ನಷ್ಟೇ ಮಾಡಿದ್ದು, ಅವುಗಳ ನೋಂದಣಿ ಮಾಡಿಲ್ಲ ಅನುದಾನ ಇಟ್ಟಿರಲಿಲ್ಲ. ಅಂತಹವುಗಳಿಗೆ ಅರ್ಜಿ ಸಲ್ಲಿಸಲೂ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.