Fishing: ಮೀನುಗಾರಿಕೆ ಬಂದರು ಹೂಳೆತ್ತಲು 125 ಕೋಟಿ ರೂ. ಮೀಸಲಿಡಲು ಆಗ್ರಹ
Team Udayavani, Nov 12, 2023, 12:33 AM IST
ಬೆಂಗಳೂರು: ರಾಜ್ಯದ ಬಹುತೇಕ ಮೀನುಗಾರಿಕೆ ಬಂದರುಗಳಲ್ಲಿ ಹೂಳು ತುಂಬಿಕೊಂಡಿದ್ದು, ಹೂಳೆತ್ತಲು ಕ್ರಮ ತೆಗೆದುಕೊಳ್ಳಬೇಕು ಹಾಗೂ 5 ವರ್ಷಗಳಿಗೆ ಕನಿಷ್ಠ 125 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಗೆ ಕರ್ನಾಟಕ ಒಳನಾಡು ಜಲಸಾರಿಗೆ ಮಂಡಳಿ ಸಿಇಒ ಪತ್ರ ಬರೆದಿದ್ದಾರೆ.
ಇದಿಷ್ಟೇ ಅಲ್ಲದೆ, ಬಂದರುಗಳಿಂದ ಬರುವ ಆದಾಯವನ್ನು ಸರಕಾರಕ್ಕೆ ಕೊಡಲಾಗುತ್ತಿದ್ದು, ಇದನ್ನು ಮಂಡಳಿಗೇ ಬಿಟ್ಟುಕೊಡುವಂತೆ ಆರ್ಥಿಕ ಇಲಾಖೆಗೂ ಪತ್ರ ಬರೆದು ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಭಟ್ಕಳ, ತದ್ರಿ, ಬೇಲೇಕೇರಿ, ಉಡುಪಿ ಜಿಲ್ಲೆಯ ಗಂಗೊಳ್ಳಿ, ಮಲ್ಪೆ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೀನುಗಾರಿಕೆ ಬಂದರುಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ-ಕೋಟೆಪುರ, ಬೊಳ್ಳೂರು-ಬೊಕ್ಕಪಟ್ಟಣಂ, ಮೂಲ್ಕಿ, ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ, ಹಂಗಾರಕಟ್ಟೆ, ಕೋಡಿಬೇಂಗ್ರೆ, ಕೋಡಿ ಕನ್ಯಾನ, ಬೊಬ್ಬರ್ಯ ಪದ, ಕುಂದಾಪುರ ಕೋಡಿ, ಮರವಂತೆ, ಕೊಡೇರಿ, ಶೀರೂರು, ತೆಂಗಿನಗುಂಡಿ, ಅಳ್ವೆಕೋಡಿ, ಬೆಳ್ಕೆ, ಉತ್ತರ ಕನ್ನಡ ಜಿಲ್ಲೆಯ ವನ್ನಾಳಿ, ಕಾಗಲ್, ಗಂಗಾವಳಿ, ಸಸಿಹಿತ್ಲು, ಹೆಗಡೆ ಅಂಬಿಕಾಗಿರಿ, ಕಿಮ್ಮನಿ ಹೊರಭಾಗ, ಅಳ್ವೆದಂಡೆ, ಮಂಜುಗುಣಿ ಸಹಿತ 25 ಮೀನುಗಾರಿಕೆ ಇಳಿದಾಣ ಕೇಂದ್ರ ಗಳಲ್ಲೂ ಹೂಳು ತುಂಬಿಕೊಂಡಿದೆ.
ಇದರಿಂದ ಮೀನುಗಾರಿಕೆಗೆ ಅಪಾರ ತೊಂದರೆಯಾಗುತ್ತಿದ್ದು, ಮೀನುಗಾರರ ದೋಣಿಗಳಿಗೆ ಅಪಾರ ಹಾನಿಯಾಗುತ್ತಿರುವುದೂ ಅಲ್ಲದೆ, ಆದಾಯ ಕೂಡ ಕುಂಠಿತವಾಗುತ್ತಿದೆ. ಬಂದರುಗಳ ವಾರ್ಷಿಕ ನಿರ್ವಹಣೆ ಮಾಡದಿರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು, ಅಗತ್ಯ ಸಂಪನ್ಮೂಲದ ಕೊರತೆಯೂ ಇದೆ ಎಂಬುದನ್ನು ಮನವರಿಕೆ ಮಾಡಿಸಲು ಜಲಸಾರಿಗೆ ಮಂಡಳಿ ಪ್ರಯತ್ನಿಸಿದೆ.
ಇತ್ತೀಚೆಗೆ ಸಚಿವ ಮಂಕಾಳ ಎಸ್. ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದು, ಎರಡೂ ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
125 ಕೋಟಿ ರೂ. ಕೊಡಿ
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಲ್ಪೆ, ಹೊನ್ನಾವರ, ಭಟ್ಕಳ, ಕುಂದಾಪುರ, ಬೇಲೆಕೇರಿ ಬಂದರುಗಳ ಹೂಳೆತ್ತುವ ಕಾರ್ಯ ಕೈಗೊಳ್ಳುವುದಾಗಿ ಸಿಎಂ ಪ್ರಕಟಿಸಿ ದ್ದರು. ಇದುವರೆಗೆ ಈ ಕಾಮಗಾರಿ ಆರಂಭ ವಾಗಿಲ್ಲ. ಹೂಳೆತ್ತುವ ಕಾಮಗಾರಿಯನ್ನು ವಹಿಸಲು ಅರ್ಹ ಖಾಸಗಿ ಗುತ್ತಿಗೆದಾರರನ್ನು ಆಯ್ಕೆ ಮಾಡಲು ಪಾರದರ್ಶಕ ಕಾಯ್ದೆ ಯಿಂದ ಮಂಡಳಿಗೆ ವಿನಾಯಿತಿ ನೀಡ ಬೇಕು. ಹೂಳಿನ ನಿರ್ವಹಣೆಗಾಗಿ ತಾಂತ್ರಿಕ ನೆರವು ಪಡೆಯಲು ಮಂಡಳಿಗೆ ಅನುಕೂಲ ಮಾಡಿಕೊಡಬೇಕು. ಜಿಎಸ್‌ಟಿ ಒಳಗೊಂಡು 5 ವರ್ಷಗಳಿಗೆ ಕನಿಷ್ಠ 125 ಕೋಟಿ ರೂ. ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಒತ್ತಾಯಿಸಲಾಗಿದೆ.
ಆದಾಯ ನಮಗೇ ನೀಡಿ
ಬಂದರುಗಳ ಮೂಲಕ ಜಲಸಾರಿಗೆ ಮಂಡಳಿ ಸಂಪಾದಿ ಸುತ್ತಿರುವ ಆದಾಯವನ್ನು ಸರಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಇದರಿಂದ ಮಂಡಳಿಯ ಅನೇಕ ಕಾರ್ಯಗಳಿಗೆ ಹಣ ಇಲ್ಲದಂತಾಗಿದೆ. ವಾರ್ಷಿಕ ಸರಾಸರಿ 35 ಕೋಟಿ ರೂ.ಗಳನ್ನು ಸರಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಕಂದಾಯ ವೆಚ್ಚಕ್ಕೆ 20 ಕೋಟಿ ರೂ. ಖರ್ಚಾಗುತ್ತಿದೆ. ಇದರಿಂದ ವಾರ್ಷಿಕ ನಿರ್ವಹಣೆ ಕಷ್ಟವಾಗುತ್ತಿದ್ದು, ಬಂದರು ಮೂಲಕ ಬರುವ ಆದಾಯವನ್ನು ಮಂಡಳಿಗೇ ಬಿಟ್ಟುಕೊಡುವಂತೆ ಆರ್ಥಿಕ ಇಲಾಖೆಗೆ ಮನವಿ ಮಾಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.