Finance: 2,400 ಕೋ. ರೂ. ಸರ್ಚಾರ್ಜ್ ಪ್ರಸ್ತಾವ ಕಡತಕ್ಕೆ ಸಿಎಂ ಕೊಕ್ಕೆ
ಅಡ್ವೊಕೇಟ್ ಜನರಲ್ ಒಳಗೊಂಡಂತೆ ಹಿರಿಯ ಸಚಿವರ ಸಮಿತಿ ರಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನ
Team Udayavani, Jan 19, 2024, 12:12 AM IST
ಬೆಂಗಳೂರು: ಖ್ಯಾತ ಉದ್ಯಮಿ ಅದಾನಿ ಸಮೂಹ ಹಾಗೂ ಯುಪಿಸಿಎಲ್‌ಗೆ ವಿದ್ಯುತ್ ಖರೀದಿ ಒಪ್ಪಂದದಲ್ಲಿ ತಡವಾಗಿ ಹಣ ಪಾವತಿಸಿದ ಪ್ರಕರಣದಲ್ಲಿ ಸರ್ಚಾರ್ಜ್ ರೂಪದಲ್ಲಿ ಸುಮಾರು 2,400 ಕೋಟಿ ರೂ. ಪಾವತಿಸುವಂತೆ ಇಂಧನ ಇಲಾಖೆ ಮಂಡಿಸಿದ ಕಡತಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೊಕ್ಕೆ ಹಾಕಿದ್ದು, ಈ ಬಗ್ಗೆ ಅಡ್ವೊಕೇಟ್ ಜನರಲ್ ಅವರನ್ನು ಒಳಗೊಂಡಂತೆ ಹಿರಿಯ ಸಚಿವರ ಸಮಿತಿ ರಚಿಸಿ ತೀರ್ಮಾನ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಅದಾನಿ ಸಮೂಹದ ಜತೆ ಸೇರ್ಪಡೆಯಾಗಿರುವ ಉಡುಪಿ ಪವರ್ ಕಾರ್ಪೊರೇಶನ್ ಹಾಗೂ ಯುಪಿಸಿಎಲ್ ಜತೆಗೆ ರಾಜ್ಯ ಸರಕಾರ 2010ರಿಂದಲೂ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದೆ. ನಿಗದಿತ ದರದ ಅನ್ವಯ ಖರೀದಿ ನಡೆದ ಬಳಿಕ ಹಣ ಪಾವತಿಯಲ್ಲಿ ವಿಳಂಬವಾಗಿದೆ. ಇದಕ್ಕಾಗಿ ಪ್ರಾಪ್ತಿ ಪೋರ್ಟಲ್ ಮೂಲಕ ಲೇಟ್ ಪೇಮೆಂಟ್ ಸರ್ಚಾರ್ಜ್ ಎಂದು ಅದಾನಿ ಸಂಸ್ಥೆ 1,348 ಕೋಟಿ ರೂ. ಹಾಗೂ ಯುಪಿಸಿಎಲ್ 1,061 ಕೋಟಿ ರೂ. ನೀಡುವಂತೆ ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂಗಳಿಗೆ ಬೇಡಿಕೆ ಸಲ್ಲಿಸಿತ್ತು. ಇದರ ಆಧಾರದಲ್ಲಿ ಈ ಎರಡು ಸಂಸ್ಥೆಗಳಿಗೆ ಹಣ ಸಂದಾಯ ಮಾಡುವಂತೆ ಸಂಪುಟ ಸಭೆಯ ಮುಂದೆ ಕಡತ ಮಂಡಿಸಲಾಗಿತ್ತು. ಆದರೆ ಈ ಎರಡೂ ಪ್ರಸ್ತಾವಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ.
ಹಣ ಬಿಡುಗಡೆ ನಿರಾಕರಿಸಿರುವುದು ಸಂಪುಟದ ಇಬ್ಬರು ಹಿರಿಯ ಸಚಿವರಿಗೆ ಇರಸುಮುರುಸು ಉಂಟಾಗಿದೆ ಎಂದು ತಿಳಿದು ಬಂದಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು.
ಸಾಲಕ್ಕೆ ಖಾತರಿ ನೀಡಲು ನಿರ್ಧಾರ
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈಗಾಗಲೇ ಹಣಕಾಸು ಸಂಸ್ಥೆಗಳಿಂದ ಪಡೆದಿರುವ 4,430.00 ಕೋಟಿ ರೂ. ಸಾಲಕ್ಕೆ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ. ವಿದ್ಯುತ್ ಸರಬರಾಜು ಕಂಪೆನಿಗಳು ವಿದ್ಯುತ್ ನಿಗಮ ನಿಯಮಿತಕ್ಕೆ ವಿದ್ಯುತ್ ಖರೀದಿ ಬಿಲ್ ಪಾವತಿಸಿಲ್ಲ. 2022-23ನೇ ಸಾಲಿನ ನಗದು ಒಳಹರಿವಿನ ಕೊರತೆ 8,664 ಕೋಟಿ ರೂ.ಗಳಾಗಿದ್ದರೆ, 2023-24ನೇ ಸಾಲಿನಲ್ಲಿ 5,134 ಕೋಟಿ ರೂ., 2023ರ ಸೆ.30ರ ಅಂತ್ಯಕ್ಕೆ ವಿದ್ಯುತ್ ಖರೀದಿ ಬಾಕಿ ಮೊತ್ತ ರೂ.17,366 ಕೋಟಿಗಳಾಗಿದೆ ಎಂದು ಅಂದಾಜಿಸಲಾಗಿದೆ.
ಸಾರಿಗೆ ಸೆಸ್
ಕರ್ನಾಟಕ ಮೋಟಾರು ಸಾರಿಗೆ ಮತ್ತು ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಮಂಡಳಿ ರಚಿಸಲು ನಿರ್ಧರಿಸಿ
ರುವ ಸರಕಾರ ಸೆಸ್ ರೂಪದಲ್ಲಿ ವಾರ್ಷಿಕ 300 ಕೋಟಿ ರೂ. ಸಂಗ್ರಹಿಸಲು ಮುಂದಾಗಿದೆ. ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಅಪಘಾತದಿಂದ ನಿಧನ ಹೊಂದಿದಲ್ಲಿ ಅಥವಾ ಶಾಶ್ವತ ದೌರ್ಬಲ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಅವಲಂಬಿಸಿರುವ ಕುಟುಂಬವು ಸಾಮಾಜಿಕ ಹಾಗೂ ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇವರ ರಕ್ಷಣೆ ನೀಡಲು ಕಾನೂನು ತರಲಾಗುತ್ತಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯ ಅನುದಾನದ ನೆರವಿನೊಂದಿಗೆ ವಿವಿಧ ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಸರಕಾರ ನಿರ್ಧರಿಸಿದೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಮತ್ತು ಇತರ 134 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 101.73 ಕೋಟಿ ರೂ., ಇದೇ ತಾಲೂಕಿನ ಹಂಪಾಪುರ ಮತ್ತು ಇತರ 48 ಜನವಸತಿ ತಾಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 65.07 ಕೋಟಿ ರೂ. ದೊಡ್ಡಬಾಗಿಲು ಮತ್ತು ಇತರ 24 ಜನವಸತಿ ತಾಲೂಕುಗಳಿಗೆ ಕುಡಿಯುವ ನೀರಿನ ಯೋಜನೆಗೆ 34 ಕೋಟಿ ರೂ. ಒದಗಿಸಲು ನಿರ್ಧರಿಸಲಾಗಿದೆ. ಹಾವೇರಿ ತಾಲೂಕಿನ ನೆಗಳೂರು ಹಾಗೂ ಇತರೆ 3 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 18 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ 24 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 245 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ.
ದತ್ತಪೀಠ ಆಕ್ಷೇಪ ಸಲ್ಲಿಕೆಗೆ ಸಂಪುಟ ಉಪಸಮಿತಿ
ಚಿಕ್ಕಮಗಳೂರು ಜಿಲ್ಲೆ ದತ್ತಪೀಠ ವಿಚಾರಕ್ಕೆ ಸಂಬಂಧಪಟ್ಟಂತೆ ಶಾ ಖಾದ್ರಿ ಸಯ್ಯದ್ ಗೌಸ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗೆ ರಾಜ್ಯ ಸರಕಾರದಿಂದ ಯಾವ ರೀತಿ ಆಕ್ಷೇಪ ಸಲ್ಲಿಸಬೇಕೆಂಬುದನ್ನು ನಿರ್ಧರಿಸಲು ಗೃಹ ಸಚಿವ ಡಾ| ಜಿ.ಪರಮೇಶ್ವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಸಚಿವ ಸಂಪುಟ ಉಪಸಮಿತಿ ನೀಡಿದ ವರದಿ ಆಧರಿಸಿ ದತ್ತಪೀಠದಲ್ಲಿ ಹಿಂದು ಅರ್ಚಕರನ್ನು ನೇಮಿಸುವ ಸಂಪುಟದ ನಿರ್ಧಾರ ಪ್ರಶ್ನಿಸಿ ಶಾ ಖಾದ್ರಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಕೆಯಾಗಿದೆ. ಇದಕ್ಕೆ ರಾಜ್ಯ ಸರಕಾರ ಆಕ್ಷೇಪ ಸಲ್ಲಿಸಬೇಕಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದತ್ತಪೀಠಕ್ಕೆ ಸಂಬಂಧಪಟ್ಟಂತೆ ಸರಕಾರದ ನಿಲುವು ಬದಲಾಗುವ ಸಾಧ್ಯತೆ ಇದೆ ಎಂಬುದು ಸಂಫುಟ ಉಪಸಮಿತಿ ರಚನೆಯಿಂದ ವೇದ್ಯವಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.