25 ಸಾ.ಕೋ.ರೂ. ಬಂಡವಾಳ ನಿರೀಕ್ಷೆ-ಅಮೆರಿಕ ಪ್ರವಾಸ ಬಗ್ಗೆ ಸಚಿವ ಪ್ರಿಯಾಂಕ್ ಮಾಹಿತಿ
Team Udayavani, Oct 12, 2023, 11:43 PM IST
ಬೆಂಗಳೂರು: ಈ ವರ್ಷಾಂತ್ಯ ಅಥವಾ 2025ರ ಜನವರಿಯಲ್ಲಿ ರಾಜ್ಯ ಸರಕಾರ ನಡೆಸಲು ಉದ್ದೇಶಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರಕಾರ ಬರೋಬ್ಬರಿ 25 ಸಾವಿರ ಕೋಟಿ ರೂ. ಬಂಡವಾಳವನ್ನು ನಿರೀಕ್ಷೆ ಮಾಡಿದೆ.
ಈ ಬಗ್ಗೆ 12 ದಿನಗಳ ಕಾಲ ವಿದೇಶ ಪ್ರವಾಸ ನಡೆಸಿದ್ದ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಅವರು ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. “12 ದಿನಗಳ ಪ್ರವಾಸದಲ್ಲಿ ಅಮೆರಿಕದ ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿವರೆಗೆ ಸಂಚರಿಸಿ ಬೇರೆ ಬೇರೆ ಕಂಪೆನಿಗಳ ಉನ್ನತ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಯಿತು. ಈ ವೇಳೆ ಒಟ್ಟು 36 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆವು. ಕೆಲವು ಸಂಸ್ಥೆಗಳ ಉತ್ಪಾದನ ಘಟಕಗಳಿಗೆ ತೆರಳಿ ಪರಿಶೀಲಿಸಿದ್ದೇವೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯಾವ ಕ್ಷೇತ್ರಗಳಿಗೆ ಆದ್ಯತೆ?
ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಏರೋ ಸ್ಪೇಸ್, ಆಟೋ, ಇವಿ, ಮೆಡ್-ಟೆಕ್ ವಲಯಗಳಿಂದ ಹೂಡಿಕೆ ಗಳನ್ನು ನಿರೀಕ್ಷಿಸಲಾಗಿದೆ. ಅಲ್ಲದೆ, ಅಪ್ಲೆ„ಡ್ ಮೆಟೀರಿ ಯಲ್, ಎಎಂಡಿ, ಗ್ಲೋಬಲ್ ಫೌಂಡ್ರಿಸ್, ಲ್ಯಾಮ್ ರಿಸರ್ಚ್, ಬೋಯಿಂಗ್, ಕ್ರಿಪ್ಟನ್, ಡೆಲ್, ಎಂಕೆಎಸ್ ಇನ್‌ಸ್ಟ್ರೆéಮೆಂಟ್ಸ್, ಟೆಡಾರೈನ್, ಜೆಇ ಹೆಲ್ತ್ ಕೇರ್, ಇಂಟೆಲ್ ಲ್ಯಾಬ್ಸ್, ಆರ್ಟಿ ಎಕ್ಸ್, ಟೆಕ್ಸಾಸ್ ಇನ್‌ವೆಸ್ಟ್‌ಮೆಂಟ್ಸ್, ಆಪಲ್, ವಾಟರ್ಸ್ ಕಾಪರ್‌ನಂತಹ ಮುಂಚೂಣಿ ಕಂಪೆನಿ ಜತೆಗೆ ಚರ್ಚಿಸಲಾಯಿತು ಎಂದರು.
ಕೌಶಲಯುತ ಮಾನವ ಸಂಪನ್ಮೂಲ
ಬಹುತೇಕ ಕಂಪೆನಿಗಳು ಭಾರತ ಎಂದರೆ, ಬೆಂಗಳೂರು ಎನ್ನುವಂತೆ ಬಿಂಬಿತವಾಗಿದೆ. ದೇಶದಲ್ಲಿ ಮಾನವ ಸಂಪನ್ಮೂಲವಿದೆ. ಆದರೆ, ಕೌಶಲಯುತ, ಉದ್ಯಮಶೀಲ ಮಾನವ ಸಂಪನ್ಮೂಲದ ಆವಶ್ಯಕತೆಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಇದಕ್ಕೆ ಅಗತ್ಯವಿರುವ ಒಪ್ಪಂದಗಳೂ ಹೂಡಿಕೆದಾರರ ಸಮಾವೇಶದಲ್ಲಿ ಆಗಲಿದೆ. ಹೂಡಿಕೆದಾರರಿಗೆ ಅಗತ್ಯ ಭೂಮಿ, ವಿದ್ಯುತ್, ನೀರು ಸಹಿತ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತದೆ. ಹೂಡಿಕೆದಾರ ಸ್ನೇಹಿಯಾಗಿರುವ ರಾಜ್ಯದಲ್ಲಿ ಬೆಂಗಳೂರಿನಿಂದ ಹೊರಗೆ ಹೂಡಿಕೆ ಮಾಡುವವರಿಗೆ ವಿಶೇಷ ಸವಲತ್ತುಗಳೂ ಸಿಗಲಿವೆ. ಎಂದು ಸಚಿವ ಎಂ.ಬಿ. ಪಾಟೀಲ್ ವಿವರಿಸಿದರು.
ಟಿಐಇ ಗ್ಲೋಬಲ್ ಇವೆಂಟ್‌ನಲ್ಲಿ ಕರ್ನಾಟಕ ಭಾಗಿ
2023ರ ನವೆಂಬರ್‌ನಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ಈ ವರ್ಷದ ಟಿಐಇ ಗ್ಲೋಬಲ್ ಇವೆಂಟ್‌ನಲ್ಲಿ ಕರ್ನಾಟಕ ಭಾಗಿಯಾಗಲಿದೆ. ಐಟಿ-ಬಿಟಿ ಇಲಾಖೆಯ ಎಲಿವೇಟ್ ಕಾರ್ಯಕ್ರಮದಡಿ ಪೋಷಣೆಗೊಂಡ 100 ಸ್ಟಾರ್ಟಪ್‌ಗ್ಳು ಭಾಗಿಯಾಗಲಿವೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ವಾರ್ಷಿಕ ಸಮ್ಮೇಳನ ನಡೆಸಲು ಟಿಐಇ ಗೋಬಲ್‌ಗೆ ಮನವಿ ಮಾಡಲಾಗಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ವೈಮಾನಿಕ ಹಾಗೂ ರಕ್ಷಣ ವಲಯಕ್ಕೆ ನಮ್ಮ ರಾಜ್ಯವು ಶೇ. 60ರಷ್ಟು ಕೊಡುಗೆ ಕೊಡುತ್ತಿದೆ. ರಫ್ತು ಉದ್ಯಮದಲ್ಲಿ ಶೇ.40 ಕೊಡುಗೆ ಇದೆ. ಮುಂದಿನ ಡಿಸೆಂಬರ್ ಹಾಗೂ 2025ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಬೆಂಗಳೂರಿನಿಂದ ಹೊರಗೆ ಹೂಡಿಕೆ ಮಾಡುವವರಿಗೆ ವಿಶೇಷ ಪ್ರೋತ್ಸಾಹವಿರಲಿದೆ.
-ಎಂ.ಬಿ.ಪಾಟೀಲ್, ಕೈಗಾರಿಕೆ ಸಚಿವ
ಚೀನ ಮತ್ತಿತರ ದೇಶಗಳೊಂದಿಗೆ ಮಾತ್ರವಲ್ಲದೆ, ಹೂಡಿಕೆದಾರರನ್ನು ಆಕರ್ಷಿಸುವ ವಿಚಾರದಲ್ಲಿ ದೇಶದಲ್ಲಿನ ಇತರೆ ರಾಜ್ಯಗಳೊಂದಿಗೆ ಸ್ಪರ್ಧೆ ಇದೆ. ವಿದೇಶಿ ಹೂಡಿಕೆದಾರರು ವಿಂಡೋ ಶಾಪಿಂಗ್ ರೀತಿ ಮಾಡುವುದರಿಂದ ನಮ್ಮಲ್ಲಿನ ಸೌಲಭ್ಯಗಳನ್ನು ಅವರಿಗೆ ಮನವರಿಕೆ ಮಾಡಿಸಲು ಈ ಪ್ರವಾಸ ಫಲಪ್ರದವಾಗಲಿದೆ.
-ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.