Karnataka: 2027ರ ವೇಳೆಗೆ 3.300 ಮೆ.ವಾ.ವಿದ್ಯುತ್ ಉತ್ಪಾದನೆ ಗುರಿ
-ತುಮಕೂರು ಜಿಲ್ಲೆ ಪಾವಗಡದಿಂದಲೇ ರಾಜ್ಯದ ಬೇಡಿಕೆಯ ಶೇ.35ರಷ್ಟು ವಿದ್ಯುತ್ ಪೂರೈಕೆ
Team Udayavani, Oct 5, 2023, 9:48 PM IST
ಪಾವಗಡ(ಸೋಲಾರ್ ಪಾರ್ಕ್): ಅಂದುಕೊಂಡಂತೆ ಎಲ್ಲವೂ ನಡೆದರೆ, ರಾಜ್ಯದ ಪ್ರಸ್ತುತ ಒಟ್ಟಾರೆ ಬೇಡಿಕೆಯಲ್ಲಿನ ಶೇ.35ರಷ್ಟು ವಿದ್ಯುತ್ ಮುಂಬರುವ ದಿನಗಳಲ್ಲಿ ಪಾವಗಡವೊಂದರಿಂದಲೇ ಪೂರೈಕೆ ಆಗಲಿದೆ. ಈ ಮೂಲಕ ಅತಿ ಹಿಂದುಳಿದ ತಾಲೂಕು, ರಾಜ್ಯದ ಕಾಲುಭಾಗಕ್ಕೆ ಬೆಳಕಾಗಲಿದೆ!
ಪ್ರಸ್ತುತ ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ 2,050 ಮೆ.ವಾ. ಸೌರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರ ಯಶಸ್ಸು ಮತ್ತು ಸ್ಥಳೀಯವಾಗಿ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಈ ಯೋಜನೆ ವಿಸ್ತರಿಸಲು ಉದ್ದೇಶಿಸಿದ್ದು, ಮುಂದಿನ 4 ವರ್ಷಗಳಲ್ಲಿ ಅಂದರೆ 2027ರ ಅಂತ್ಯದೊಳಗೆ ಇಲ್ಲಿ ಇನ್ನೂ 3,300 ಮೆ.ವಾ. ವಿದ್ಯುತ್ ಉತ್ಪಾದನೆ ಆಗಲಿದೆ. ಇದರೊಂದಿಗೆ 5,550 ಮೆ.ವಾ. ಉದ್ದೇಶಿತ ಸೋಲಾರ್ ಪಾರ್ಕ್‌ನಿಂದ ಪೂರೈಕೆ ಆಗಲಿದೆ. ರಾಜ್ಯದ ಪ್ರಸ್ತುತ ವಿದ್ಯುತ್ ಬೇಡಿಕೆ ಅಂದಾಜು 15 ಸಾವಿರ ಮೆ.ವಾ. ಆಸುಪಾಸು ಇದೆ.
ವಿಸ್ತರಿಸಿದ ಯೋಜನೆಯನ್ನು 3 ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಕರ್ನಾಟಕ ಸೌರವಿದ್ಯುತ್ ಅಭಿವೃದ್ಧಿ ನಿಗಮ (ಕೆಎಸ್‌ಪಿಡಿಸಿಎಲ್) ಉದ್ದೇಶಿಸಿದ್ದು, ಮೊದಲಿಗೆ 300 ಮೆ.ವಾ. ಸೇರ್ಪಡೆಗೊಳಿಸಲು ಸಿದ್ಧತೆ ನಡೆದಿದೆ. ಇದಕ್ಕೆ ಈಗಾಗಲೇ 1,200 ಎಕರೆ ಭೂಮಿ ನಿಗಮದ ಬಳಿ ಲಭ್ಯವಿದ್ದು, ಅದರಲ್ಲಿ ಈ 300 ಮೆ.ವಾ. ವಿದ್ಯುತ್‌ನ ಸೋಲಾರ್ ಪ್ಯಾನೆಲ್‌ಗಳು ತಲೆಯೆತ್ತಲಿವೆ. ಇದನ್ನು 2025ರ ಡಿಸೆಂಬರ್ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ಗುರಿ ಹೊಂದಿದೆ ಎಂದು ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎನ್. ಅಮರನಾಥ್ ಮಾಹಿತಿ ನೀಡಿದರು.
ಇಂಧನ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪಾವಗಡಕ್ಕೆ ಮಾಧ್ಯಮ ನಿಯೋಗ ಭೇಟಿ ವೇಳೆ ಮಾತನಾಡಿದ ಅವರು, ಪಾವಗಡ ಸೋಲಾರ್ ಪಾರ್ಕ್ ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ಪಾರ್ಕ್ ಆಗಿದೆ. ರಾಜಸ್ಥಾನದ ಭಾದ್ಲಾ ಸೋಲಾರ್ ಪಾರ್ಕ್ 2,245 ಮೆ.ವಾ. ಮೂಲಕ ಮೊದಲ ಸ್ಥಾನ ಮತ್ತು ಚೀನಾದ ಹೈನನ್ 2,200 ಮೆ.ವಾ. ಮೂಲಕ ಎರಡನೇ ಸ್ಥಾನದಲ್ಲಿವೆ. 300 ಮೆ.ವಾ. ಸೇರ್ಪಡೆಯೊಂದಿಗೆ ಮೊದಲ ಸ್ಥಾನಕ್ಕೆ ಏರಲಿದೆ. ಸುಮಾರು 1,200 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.
ಇದರ ಜತೆ ಜತೆಗೆ ಇನ್ನೂ 500 ಮೆ.ವಾ. ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದ್ದು, ಸೌರವಿದ್ಯುತ್ ಡೆವಲಪರ್ಗಳಿಂದ ಇದು ತಲೆಯೆತ್ತಲಿದೆ. ಇದು ಕ್ಯಾಪ್ಟಿವ್/ ಗ್ರೂಪ್ ಕ್ಯಾಪ್ಟಿವ್ ಮತ್ತು ಥರ್ಡ್ ಪಾರ್ಟಿ ಬಳಕೆಗಾಗಿ ತಿರುಮಣಿ ಮತ್ತು ರಾಪ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸುಮಾರು ಎರಡು ಸಾವಿರ ಎಕರೆ ಭೂಮಿಯ ಅವಶ್ಯಕತೆ ಇದ್ದು, ಮೊದಲ ಹಂತದ ಮಾದರಿಯಲ್ಲೇ ರೈತರಿಂದ ಭೂಮಿಯನ್ನು ಲೀಸ್ ಪಡೆದು ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಖರೀದಿ ಅಥವಾ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ, ರಾಷ್ಟ್ರೀಯ ಶಾಖೋತ್ಪನ್ನ ಕೇಂದ್ರ (ಎನ್‌ಟಿಪಿಸಿ), ಭಾರತೀಯ ತೈಲ ನಿಗಮ (ಐಒಸಿ)ದಂತಹ ಕೇಂದ್ರದ ಸಾರ್ವಜನಿಕ ಸಂಸ್ಥೆಗಳಿಂದ ಇದೇ ಪಾವಗಡದಲ್ಲಿ 2,500 ಮೆ.ವಾ. ಸಾಮರ್ಥ್ಯದ ಸೌರವಿದ್ಯುತ್ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಅನ್ನದಾನಪುರ ಮತ್ತು ತಿರುಮಣಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ 10ರಿಂದ 12 ಸಾವಿರ ಎಕರೆ ಭೂಮಿಯ ಅವಶ್ಯಕತೆ ಇದ್ದು, ಅಂದಾಜು 10 ಸಾವಿರ ಕೋಟಿ ಯೋಜನೆ ಇದಾಗಿದೆ. ಖರೀದಿ ಆಸಕ್ತಿ ತಿಳಿಸಲು (ಎಕ್ಸ್‌ಪ್ರೆಷನ್ ಆಫ್ ಇಂಟರೆಸ್ಟ್) ಇದೇ 15 ಕೊನೆಯ ದಿನವಾಗಿದೆ. 2027ರ ಒಳಗೆ ಇದನ್ನು ಕಾರ್ಯರೂಪಕ್ಕೆ ತರುವ ಗುರಿ ಇದೆ ಎಂದು ಅಮರನಾಥ್ ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ ಸುಮಾರು 13 ಸಾವಿರ ಎಕರೆ ಭೂಮಿಯನ್ನು ಅಂದಾಜು ಮೂರು ಸಾವಿರ ರೈತರಿಂದ ಲೀಸ್ ಪಡೆಯಲಾಗಿದೆ. ಇದುವರೆಗೆ ಯಾವೊಬ್ಬ ರೈತರಿಂದ ಒಂದೇ ಒಂದು ಆಕ್ಷೇಪ ವ್ಯಕ್ತವಾಗಿಲ್ಲ. ಬದಲಿಗೆ ಇನ್ನಷ್ಟು ರೈತರು ಯೋಜನೆಗೆ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಅಂದುಕೊಂಡಂತೆ ಇದೆಲ್ಲವೂ ಸಾಧ್ಯವಾದರೆ, ಉದ್ದೇಶಿತ ಸೋಲಾರ್ ಪಾರ್ಕ್ ಸಾಮರ್ಥ್ಯ ಕೇವಲ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಸ್‌ಪಿಡಿಸಿಎಲ್ ಡಿಜಿಎಂ ಪ್ರಕಾಸ್ ಮತ್ತಿತರರು ಉಪಸ್ಥಿತರಿದ್ದರು.
ಪಾವಗಡವೇ ಯಾಕೆ?
ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಪಾವಗಡವನ್ನೇ ಆಯ್ಕೆ ಮಾಡಲು ಹಲವು ಪ್ರಮುಖ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಇಲ್ಲಿ ಅತಿ ಕಡಿಮೆ ವಾರ್ಷಿಕ 509 ಮಿ.ಮೀ. ಮಳೆ ಬೀಳುತ್ತದೆ. 365 ದಿನಗಳಲ್ಲಿ 300 ಸೂರ್ಯನ ದಿನಗಳಾಗಿವೆ. ಪ್ರತಿ ಚದರ ಮೀಟರ್‌ನಲ್ಲಿ ದಿನಕ್ಕೆ 6 ಕಿ.ವಾ. ವಿದ್ಯುತ್ ಉತ್ಪಾದನೆ ಆಗುತ್ತದೆ. ಇದು ರಾಷ್ಟ್ರೀಯ ಸರಾಸರಿ (4.5 ಕಿ.ವಾ.)ಗಿಂತ ಅಧಿಕವಾಗಿದೆ. ಮಳೆಯಾಶ್ರಿತ ಭೂಮಿಯನ್ನು ಅವಲಂಬಿಸಿದ ರೈತರಿಗೆ ಬರುವ ಆದಾಯವೂ ಅತಿ ಕಡಿಮೆಯಾಗಿದ್ದು, ನಂಜುಂಡಪ್ಪ ಆಯೋಗ ನೀಡಿದ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಪಾವಗಡವೂ ಒಂದಾಗಿದೆ.
* 13 ಸಾವಿರ ಎಕರೆ ಪ್ರದೇಶದಲ್ಲಿ ಒಟ್ಟು 44 ಸೌರವಿದ್ಯುತ್ ಬ್ಲಾಕ್‌ಗಳು
* 28 ಬ್ಲಾಕ್‌ಗಳು ಕೆಆರ್‌ಇಡಿಎಲ್
* 12 ಬ್ಲಾಕ್‌ಗಳು ಎನ್‌ಟಿಪಿಸಿ
* 4 ಬ್ಲಾಕ್‌ಗಳು ಎಸ್‌ಇಸಿಐ
* 2,050 ಮೆ.ವಾ. ಒಟ್ಟಾರೆ ಉತ್ಪಾದನೆ
* 1,200 ಮೆ.ವಾ. ಕೆಆರ್‌ಇಡಿಎಲ್‌ಗೆ ಹೋಗುತ್ತದೆ
* 600 ಮೆ.ವಾ. ಎನ್‌ಟಿಪಿಸಿಗೆ
* 200 ಮೆ.ವಾ. ಉತ್ತರ ಪ್ರದೇಶಕ್ಕೆ ಪೂರೈಕೆ
* ಒಂದು ಮೆ.ವಾ. ಸೌರವಿದ್ಯುತ್ ಉತ್ಪಾದನೆಗೆ ತಗಲುವ ವೆಚ್ಚ ಅಂದಾಜು 4 ಕೋಟಿ ರೂ.
* 3.50 ರೂ. ಇಲ್ಲಿನ ಪ್ರತಿ ಯೂನಿಟ್‌ಗೆ ಮಾರಾಟವಾಗುವ ವಿದ್ಯುತ್ ದರ
* 14 ಸಾವಿರ ಎಕರೆ ಎರಡನೇ ಹಂತಕ್ಕೆ ಬೇಕಾಗುವ ಭೂಮಿ
* 13,500 ಕೋಟಿ ರೂ. ಎರಡನೇ ಹಂತದ ಅಂದಾಜು ವೆಚ್ಚ
ವಿಜಯ ಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.