30 ಗಂಟೆ ಸಮುದ್ರದಲ್ಲಿ ಈಜಿ ದಡ ಸೇರಿದ ಮೀನುಗಾರ : ಪೊಲೀಸರ ತನಿಖೆ ಆರಂಭ
Team Udayavani, Jan 9, 2022, 4:47 PM IST
![1-asdsad](https://www.udayavani.com/wp-content/uploads/2022/01/1-asdsad-620x398.jpg)
![1-asdsad](https://www.udayavani.com/wp-content/uploads/2022/01/1-asdsad-620x398.jpg)
ಕಾಸರಗೋಡು: ಮೀನುಗಾರಿಕೆ ಸಂದರ್ಭ ಸಮುದ್ರಕ್ಕೆ ಬಿದ್ದ ತಮಿಳುನಾಡು ನಿವಾಸಿ ಜೋಸೆಫ್ (58) ಅವರು 30 ಗಂಟೆ ಈಜಿ ದಡ ಸೇರಿದ್ದಾರೆ.
ಡಿ. 31ರಂದು ಮಂಗಳೂರಿನಿಂದ ಹೊರಟ ಮೀನು ಗಾರಿಕೆ ದೋಣಿಯಲ್ಲಿದ್ದ 8 ಮಂದಿಯಲ್ಲಿ ಜೋಸೆಫ್ ಒಬ್ಬರು. ಗುರುವಾರ (ಜ. 6) ಮುಂಜಾನೆ 2 ಗಂಟೆಗೆ ಬಲೆ ಬೀಸಿದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಜೋಸೆಫ್ ನಾಪತ್ತೆಯಾಗಿದ್ದರು. ಆಗ ದೋಣಿ ದಡ ದಿಂದ ಸುಮಾರು 36 ನಾಟಿಕಲ್ ಮೈಲ್ ದೂರದಲ್ಲಿತ್ತು. ಬೆಳಗ್ಗೆ 11 ಗಂಟೆಯ ವರೆಗೂ ಹುಡುಕಾಡಿದರೂ ಅವರ ಪತ್ತೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ದೋಣಿ ಮಾಲ ಕರಿಗೆ ಮಾಹಿತಿ ನೀಡಲಾಯಿತು. ಅವರು ಕರಾವಳಿ ಕಾವಲು ಪೊಲೀಸರಿಗೆ ಮತ್ತು ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದರು. ಆದರೆ ಕೇಸು ದಾಖಲಿಸಿರಲಿಲ್ಲ. 1 ದಿನ ಕಾದು ನೋಡೋಣ ಎಂದು ದೂರು ನೀಡಲು ಬಂದವರಿಗೆ ಹೇಳಿ ಕಳುಹಿಸಿ ಕೊಡಲಾಗಿತ್ತು.
ಜ. 7ರಂದು ಮೀನುಗಾರಿಕೆಗೆ ತೆರಳಿದ್ದ ಕಾಸರ ಗೋಡು ಕೀಯೂರು ಕಡಪ್ಪುರದ ದಿನೇಶ್, ಸುರೇಶ್, ಸೈನನ್ ಅವರು ಸಮುದ್ರದಲ್ಲಿ ವ್ಯಕ್ತಿಯೊಬ್ಬರನ್ನು ಕಂಡಿದ್ದು, ಕೂಡಲೇ ಅವರನ್ನು ದೋಣಿಯಲ್ಲಿ ದಡಕ್ಕೆ ಕರೆ ತಂದು ಆಸ್ಪತ್ರೆಗೆ ದಾಖಲಿಸಿದರು. ದೋಣಿಯಿಂದ ನಾಪತ್ತೆಯಾಗಿದ್ದ ಜೋಸೆಫ್ ಇವರೇ ಎಂಬುದು ಈಗ ತಿಳಿದುಬಂದಿದೆ.
ಅವರು ಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನೆ ಬಗ್ಗೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಜೋಸೆಫ್ ಭಿನ್ನ ಹೇಳಿಕೆ ನೀಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.