33% Reservation: ಭವಿಷ್ಯದಲ್ಲಿ ವಿಧಾನಸಭೆಗೆ 74 ಮಂದಿ ಮಹಿಳೆಯರ ಪಾರುಪತ್ಯ
ರಾಜ್ಯದಿಂದ ಲೋಕಸಭೆಗೆ 9ರಿಂದ 10
Team Udayavani, Sep 21, 2023, 12:21 AM IST
ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆಯಲ್ಲೂ ಮಹಿಳೆಯ ರಿಗೆ ಶೇ.33ರಷ್ಟು ಮೀಸಲಾತಿ ಘೋಷಣೆ ಮಾಡಿದರೆ, ಭವಿಷ್ಯದಲ್ಲಿ ರಾಜ್ಯ ರಾಜಕಾರಣದಲ್ಲಿ ಕೂಡ ಸಂಚಲನ ಮೂಡಿಸುವುದು ನಿಶ್ಚಿತ.
ಮಸೂದೆ ಅಂಗೀಕಾರಗೊಂಡು, ಅಧಿಸೂಚನೆಯೊಂದಿಗೆ ಎಲ್ಲ ಪ್ರಕ್ರಿಯೆಗಳು ಅಂದುಕೊಂಡಂತೆ ನಡೆದರೆ, ರಾಜ್ಯದಲ್ಲಿ ಲೋಕಸಭೆಯ ಈಗಿನ ಲೆಕ್ಕಾಚಾರದ ಪ್ರಕಾರ 28 ಮತ್ತು ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಶೇ. 33ರಷ್ಟು ಅಂದರೆ ಕ್ರಮವಾಗಿ 9- 10 ಹಾಗೂ 74 ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಮಹಿಳೆಯರು ಪಾರುಪತ್ಯ ಮೆರೆಯಲಿದ್ದಾರೆ.
ಇದರೊಂದಿಗೆ ಭವಿಷ್ಯದಲ್ಲಿ ಸ್ಥಾಪಿತ ಹಿತಾಸಕ್ತಿಗಳ ತಳಹದಿ ಅಲುಗಾಡಲಿದೆ. ಮಸೂದೆ ಅಂಗೀಕಾರಗೊಂಡು, ಕಾನೂನು ಜಾರಿಯಾದ ಬಳಿಕ ಚುನಾವಣ ಆಯೋಗದಿಂದ ಕ್ಷೇತ್ರಗಳ ಮರು ವಿಂಗಡಣೆ, ಇದಕ್ಕೂ ಮುನ್ನ ಜನಗಣತಿ ಆಗಲಿದೆ. ಆಗ ಈ ಕ್ಷೇತ್ರಗಳ ಲೆಕ್ಕಾಚಾರದಲ್ಲಿ ತುಸು ಏರುಪೇರು ಆಗುವ ಸಾಧ್ಯತೆಯೂ ಇದೆ. ಆದರೆ ಸದ್ಯದ ಕ್ಷೇತ್ರಗಳ ಚಿತ್ರಣದಂತೆ ಲೋಕಸಭೆಯಲ್ಲಿನ 9 ರಿಂದ 10 ಸ್ಥಾನಗಳು ಮಹಿಳೆಯರ ಪಾಲಾಗಲಿದೆ. ವಿಧಾನಸಭೆಯಲ್ಲಿ 74 ಕ್ಷೇತ್ರ ಗಳು ಮಹಿಳೆಯರಿಗೆ ಲಭಿಸುತ್ತದೆ. ದೇಶದಲ್ಲಿ ಮಹಿಳಾ ಮೀಸಲಾತಿ ಇಲ್ಲದ ಸಂದರ್ಭದಲ್ಲೂ ತಮಿಳುನಾಡು, ಪಶ್ಚಿಮ ಬಂಗಾಲ, ರಾಜಸ್ಥಾನ ಸೇರಿ ಕೆಲವೇ ರಾಜ್ಯಗಳು ಮಹಿಳಾ ನಾಯಕತ್ವಕ್ಕೆ ಮುನ್ನುಡಿ ಬರೆದಿವೆ. ಮೀಸಲಾತಿಯಿಂದ ಇತರ ರಾಜ್ಯ ಗಳಲ್ಲೂ ಮುಂದಿನ ದಿನಗಳಲ್ಲಿ ಮಹಿಳಾ ನಾಯಕಿಯರು ಹೊರಹೊಮ್ಮಲು ವೇದಿಕೆ ಆಗಲಿದೆ.
ಪ್ರಸ್ತುತ ರಾಜಕಾರಣದಲ್ಲಿ ಪುರುಷರೇ ಏಕಸ್ವಾಮ್ಯತೆ ಹೊಂದಿದ್ದಾರೆ. ಮಹಿಳಾ ಮೀಸಲಾತಿಯಿಂದ ಅಂತಹ ಸ್ಥಾಪಿತ ಹಿತಾಸಕ್ತಿಗಳು ಹೋಗುತ್ತವೆ. ಅಲ್ಲೆಲ್ಲಾ ಮಹಿಳೆಯರು ಲಗ್ಗೆ ಇಡುತ್ತಾರೆ. ಆದರೆ ಇದು ಚುನಾವಣೆಗೆ ಸೀಮಿತವಾಗಬಾರದು; ರಾಜಕೀಯ ಪಕ್ಷಗಳಲ್ಲೂ ಇದು ಅನ್ವಯ ಆಗಬೇಕು. ವಿವಿಧ ಹಂತಗಳಲ್ಲಿ ಪ್ರಾತಿನಿಧ್ಯ ಸಿಗಬೇಕು. ಅಷ್ಟೇ ಅಲ್ಲ, ಸರಕಾರ ರಚನೆ ಸಂದರ್ಭದಲ್ಲೂ ಶೇ. 33ರಷ್ಟು ಮೀಸಲಾತಿ ಅನುಸರಣೆ ಆಗಬೇಕು. ಆಗ ಇದಕ್ಕೆ ಹೆಚ್ಚು ಅರ್ಥ ಬರುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಅಭಿಪ್ರಾಯಪಡುತ್ತಾರೆ. ಮಹಿಳಾ ಮೀಸಲಾತಿಯಲ್ಲೇ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ನೀಡಿದರೆ, ಸಮಾನ ಅವಕಾಶಗಳು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಕೆಲವೇ ವರ್ಗಗಳಿಗೆ ಅದರ ಅನುಕೂಲಗಳು ಆಗಲಿವೆ ಎಂಬ ಆಕ್ಷೇಪವೂ ಇದೆ. ಈ ಹಿಂದೆ ಕೂಡ ಇದೇ ಕಾರಣಕ್ಕೆ ವಿರೋಧಗಳು ವ್ಯಕ್ತವಾಗಿದ್ದವು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
ದೇಶದ ಇತಿಹಾಸದಲ್ಲಿ ಸ್ತ್ರೀ ಸಮಾನತೆಯ ಕೂಗು ಮೊದಲು ಕೇಳಿ ಬಂದಿದ್ದು ನಮ್ಮ ಕರುನಾಡ ನೆಲದ ಅನುಭವ ಮಂಟಪದಲ್ಲಿ. 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಮಹಿಳಾ ಹಕ್ಕುಗಳನ್ನು, ಈ ಶತಮಾನದಲ್ಲಿ ಸಾಕಾರಗೊಳಿಸುವ ದಿಟ್ಟ ಹೆಜ್ಜೆಯನ್ನಿಟ್ಟಿರುವ ಮೋದಿ ಅವರಿಗೆ ವಿಶೇಷ ಅಭಿನಂದನೆಗಳು.
ಬಿ. ಎಸ್. ಯಡಿಯೂರಪ್ಪ, ಮಾಜಿ ಸಿಎಂ
ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಿರುವುದು ಕ್ರಾಂತಿಕಾರಿ ನಿರ್ಣಯ. ಎಲ್ಲ ಪಕ್ಷಗಳನ್ನು ಒಪ್ಪಿಸಿ ಬಿಲ್ ಪಾಸ್ ಮಾಡುವುದು ಮುಖ್ಯ. ಕೇಂದ್ರ ಈಗ ಎಲ್ಲರ ಒಪ್ಪಿಗೆ ಪಡೆದು ಕಾಯ್ದೆ ಯಾಗಿ ಜಾರಿಗೆ ತರುತ್ತದೆ ಎನ್ನುವ ವಿಶ್ವಾಸವಿದೆ.
ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವುದನ್ನು ಸ್ವಾಗತಿಸುತ್ತೇನೆ. ದೇವೇಗೌಡರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿಯೇ 1996 ಸೆ. 12ರಂದು ರಾಜ್ಯಸಭೆ ಯಲ್ಲಿ ಈ ಐತಿಹಾಸಿಕ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ಅವರ ಸಂಯುಕ್ತ ರಂಗ ಮೈತ್ರಿಕೂಟದ ಕೆಲವು ಮಿತ್ರ ಪಕ್ಷಗಳೇ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಆ ಮಸೂದೆ ಅಂಗೀಕಾರ ಆಗಲಿಲ್ಲ. ಈಗ ಮರುಜೀವ ಪಡೆದಿರುವುದು ಸಂತೋಷ ಉಂಟುಮಾಡಿದೆ.
ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ
ಮಹಿಳಾ ಮೀಸಲಾತಿ ಬಗ್ಗೆ ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಮೋದಿಯವರು ಸದಾ ದೇಶದ ಹಿತಾಸಕ್ತಿಯನ್ನು ಗಮನಿಸಿ, ದೂರಗಾಮಿ ಪರಿಣಾಮ ಹೊಂದಿರುವ ಉತ್ತಮ ನಿರ್ಧಾರ ಗಳನ್ನು ಕೈಗೊಳ್ಳುತ್ತಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಅಧಿಕಾರ ನೀಡುವಲ್ಲಿ ಈ ಮಸೂದೆ ಯಶ ಕಾಣಲಿದೆ.
ಭಾಗೀರಥಿ ಮುರುಳ್ಯ, ಸುಳ್ಯ ಶಾಸಕಿ
ರಾಜಕೀಯ ನಾಯಕರ ಪಕ್ಷಾತೀತ ಸ್ವಾಗತ
ಮಹಿಳೆಯರಿಗೆ ಸಂಸತ್ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಶೇ. 33 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿರುವುದನ್ನು ರಾಜ್ಯದ ರಾಜಕೀಯ ಪಕ್ಷಗಳ ಮುಖಂಡರು, ಮಹಿಳಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸ್ವಾಗತಿಸಿದ್ದಾರೆ. ಬಿಜೆಪಿ ನಾಯಕರು ಇದೊಂದು ಐತಿಹಾಸಿಕ ತೀರ್ಮಾನ. ಮಹಿಳೆಯರ ಸಶಕ್ತೀಕರಣದ ದೃಷ್ಟಿಯಿಂದ ಇಡಲಾಗಿರುವ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಜೆಡಿಎಸ್ ಸಹ ಮಹಿಳಾ ಮೀಸಲಾತಿಯನ್ನು ಸ್ವಾಗತಿಸಿದ್ದು, ಎಚ್.ಡಿ. ದೇವೇಗೌಡ ಅವರು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಪ್ರಯತ್ನ ನಡೆಸಿದ್ದರು ಎಂದು ಸ್ಮರಿಸಿದೆ. ಅತ್ತ ಕಾಂಗ್ರೆಸ್ ಮಹಿಳಾ ಮೀಸಲಾತಿ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಸಹ ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ತೀರ್ಮಾನ ಕೈಗೊಳ್ಳುತ್ತಿರುವ ಉದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.