ಮುಂಡಾಜೆ ಸಹಿತ 4 ಮೊರಾರ್ಜಿ ಶಾಲೆ ಇನ್ನು ಕ್ರೀಡಾ ವಸತಿ ಶಾಲೆ
ಪ್ರತೀ ಶಾಲೆಗೆ 1.25 ಕೋ.ರೂ. ಮೀಸಲು
Team Udayavani, Dec 19, 2021, 7:20 AM IST
ಬೆಳ್ತಂಗಡಿ: ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯಾಚರಿಸುತ್ತಿರುವ ರಾಜ್ಯದ 826 ಮೊರಾರ್ಜಿ ದೇಸಾಯಿ ಶಾಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಿತ ಒಟ್ಟು 4 ಮೊರಾರ್ಜಿ ಶಾಲೆಗಳನ್ನು ಕ್ರೀಡಾ ವಸತಿ ಶಾಲೆಗಳನ್ನಾಗಿ ಉನ್ನತೀಕರಿಸಿ ಸರಕಾರ ಆದೇಶಿಸಿದೆ.
ಸಾಮಾಜಿಕವಾಗಿ ಅತ್ಯಂತ ಹಿಂದುಳಿದ 1,92,000 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿರುವ ಪ್ರತಿಭೆಗಳನ್ನು ಒರೆಗೆ ಹಚ್ಚುವ ಸಲುವಾಗಿ ಸರಕಾರ 2020-21ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಮೂಲಸೌಕರ್ಯ ಒದಗಿಸಿ ಕ್ರೀಡಾ ಶಾಲೆಯನ್ನಾಗಿ ಉನ್ನತೀಕರಿಸುವ ನಿರ್ಧಾರಕ್ಕೆ ಮುಂದಾಗಿದೆ.
4 ಕಂದಾಯ ವಿಭಾಗವಾರು ಆಯ್ಕೆ
ರಾಜ್ಯದ ಕಂದಾಯ ವಿಭಾಗವಾರು ಮೈಸೂರು, ಬೆಂಗಳೂರು, ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿ ಈಗಿರುವ ಶಾಲೆಗಳ ಮೂಲಸೌಕರ್ಯ ಆಧರಿಸಿ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಿಭಾಗದಲ್ಲಿ ದ.ಕ. ಜಿಲ್ಲೆಯ ಮುಂಡಾಜೆ ಶಾಲೆಯನ್ನು ಆಯ್ಕೆ ಮಾಡಿದ್ದು, ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ ಹೊಳಲ್ಕೆರೆಯ ಚಿತ್ರಹಳ್ಳಿ, ಬೆಳಗಾವಿ ವಿಭಾಗದಲ್ಲಿ ಧಾರವಾಡದ ಹೆಬ್ಬಳ್ಳಿ, ಕಲಬುರಗಿ ವಿಭಾಗದಡಿ ರಾಯಚೂರು ಮೊರಾರ್ಜಿ ಶಾಲೆ ಆಯ್ಕೆಯಾಗಿವೆ.
ಕಂದಾಯ ವಿಭಾಗದಡಿ ವಿದ್ಯಾರ್ಥಿಗಳ ಆಯ್ಕೆ
ಕಂದಾಯ ವಿಭಾಗವಾರು ಕ್ರೀಡಾ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ಮೈಸೂರು ವಿಭಾಗದಲ್ಲಿ ಮೈಸೂರು, ಹಾಸನ, ಚಿಕ್ಕಮಗಳೂರು, ಮಂಡ್ಯ, ಉಡುಪಿ, ಮಂಗಳೂರು, ಕೊಡಗು ಜಿಲ್ಲೆಗಳಿವೆ. ಈ ವ್ಯಾಪ್ತಿಯ ವಿದ್ಯಾರ್ಥಿಗಳು ಆಯಾಯ ಮೊರಾರ್ಜಿ ದೇಸಾಯಿ ಶಾಲೆಗೆ 6ನೇ ತರಗತಿಗೆ ದಾಖಲಾಗುವ ಅವಧಿಯಲ್ಲಿ ಕ್ರೀಡಾ ಶಾಲೆಗೆಂದೇ ಹೊಸ ನಮೂನೆಯನ್ನು ಸರಕಾರ ಆರಂಭಿಸಲಿದೆ. ಈ ವಿಭಾಗವಾರು ಜಿಲ್ಲೆಗಳ ಕ್ರೀಡಾ ಪ್ರತಿಭಾನ್ವಿತರು ಪರೀಕ್ಷೆ ಬರೆದ ಬಳಿಕ ಕ್ರೀಡಾ ಶಾಲೆಗೆ ಆಯ್ಕೆಯಾಗುವರು.
ಇದನ್ನೂ ಓದಿ:ಮಕ್ಕಳೇ ನಿಂತು ಅಮ್ಮನ ಮದುವೆ ಮಾಡಿದರು : ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡ ಮಗಳು
ಸವಾಲುಗಳು ಇವೆ
ಕ್ರೀಡಾ ಶಾಲೆ ಎಂದಾಕ್ಷಣ ಕ್ರೀಡೆ ಸಹಿತ ಪಠ್ಯಕ್ಕೆ ಸಂಬಂಧಿಸಿದ ಖಾಯಂ ಶಿಕ್ಷಕರ ಆವಶ್ಯಕತೆ ಇದೆ. ಕ್ರೀಡೆಯಲ್ಲಿ ಪರಿಣತ ಕನಿಷ್ಠ ಮೂವರು ಶಾರೀರಿಕ ಶಿಕ್ಷಣ ಶಿಕ್ಷಕರ ನೇಮಕ ಆಗಬೇಕಿದೆ. ವಸತಿ ಸಹಿತ ಅಗತ್ಯ ಸೌಕರ್ಯ ಒದಗಿಸಬೇಕಿದೆ. ಪ್ರಸ್ತುತ ಭಾರತ ಕ್ರೀಡಾ ರಂಗವು ಒಲಿಂಪಿಕ್ ಸಹಿತ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಳು ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಸರಕಾರವು ಸಮಾಜ ಕಲ್ಯಾಣ ಇಲಾಖೆಯಡಿ ಆರ್ಥಿಕ ಹಿಂದುಳಿದಿರುವ ಪ.ಜಾತಿ ಮತ್ತು ಪ.ಪಂ.ವಿದ್ಯಾರ್ಥಿಗಳನ್ನು ಪೋಷಿಸುವಲ್ಲಿ ಮಹತ್ತರ ಚಿಂತನೆ ನಡೆಸಿದೆ. ಅಗತ್ಯಗಳನ್ನೆಲ್ಲ ಪೂರೈಸಿದಲ್ಲಿ ಭವಿಷ್ಯದಲ್ಲಿ ಗ್ರಾಮೀಣ ಕ್ರೀಡಾ ಶಾಲೆಗಳಿಂದ ಉತ್ತಮ ಕ್ರೀಡಾಪಟುಗಳು ದೇಶಕ್ಕೆ ಅರ್ಪಣೆಯಾಗಬಹುದು.
ಸಮಗ್ರ ಅಭಿವೃದ್ಧಿಗೆ ಆದ್ಯತೆ
ಆಯ್ಕೆಯಾದ ಶಾಲೆಗೆ 5 ಕೋಟಿ ರೂ. ಮೀಸಲಿಡಲಾಗಿದೆ. ಆರಂಭದ ವರ್ಷದಲ್ಲಿ ಸ್ಟಾರ್ಟಪ್‌ಗಾಗಿ ಅಗತ್ಯ ಸೌಕರ್ಯ ಒದಗಿಸಲು ಪ್ರತೀ ಶಾಲೆಗೆ 1.25 ಕೋ.ರೂ. ಮೀಸಲಿಡಲಾಗಿದೆ. ಕಾಂಪೌಂಡ್, ಆಡಿಟೋರಿಯಂ, ಕ್ರೀಡಾಂಗಣ, ಕೊಳವೆಬಾವಿ, ಶಿಕ್ಷಕರಿಗೆ ವಸತಿಗೃಹ ಸಿದ್ಧಗೊಳ್ಳಲಿದೆ. ಇದಕ್ಕಾಗಿ ಕ್ರೀಡಾ ಮತ್ತು ಯುವಜನ ಇಲಾಖೆಯಲ್ಲಿರುವ ಎನ್‌ಡಿಎ, ಎನ್‌ಎಸಿ, ಒಲಿಂಪಿಕ್, ಸೈನಿಕ್ ತರಬೇತಿ ಪಡೆದ ಮಾಸ್ಟರ್ ಟ್ರೈನರ್‌ಗಳನ್ನು ನೇಮಿಸಲಾಗುವುದು.
ರಾಜ್ಯದ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿರುವ ಪ.ಜಾ./ಪ.ಪಂ. ವಿದ್ಯಾರ್ಥಿಗಳ ಕ್ರೀಡಾ ಸಾಧನೆಗಾಗಿ ಮೂಲಸೌಕರ್ಯ ವೃದ್ಧಿಸಿಕೊಂಡು ಸಮಗ್ರವಾಗಿ ಕ್ರಿಡಾ ಸೌಕರ್ಯ ಒದಗಿಸುವ ಸಲುವಾಗಿ ಆಯ್ದ 4 ಶಾಲೆಗಳಿಗೆ ತಲಾ 1.25 ಕೋ.ರೂ.ಗಳಂತೆ ಪ್ರಸಕ್ತ ಸಾಲಿನಲ್ಲಿ 5 ಕೋ.ರೂ. ಮೀಸಲಿಡಲಾಗಿದೆ. ಹಂತಹಂತವಾಗಿ ಆವಶ್ಯಕತೆ ಗಳನ್ನು ಪೂರೈಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಚಿವ
– ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.