54th IFFI: ಭವಿಷ್ಯದ ಸಿನಿಮಾ ಕರ್ತರು ಎಲ್ಲಿ ಸೃಷ್ಟಿಯಾಗುತ್ತಾರೆ?
ನಾಳೆಯ ಭರವಸೆಯ ಸಿನಿಮಾ ಪ್ರತಿಭೆಗಳು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿರುವುದು ವಿಶೇಷ ಸಂಗತಿ.
Team Udayavani, Nov 20, 2023, 10:18 AM IST
ಪಣಜಿ, ನ. 20: ಭವಿಷ್ಯದ ಸಿನಿಮಾ ಕರ್ತರು ಎಲ್ಲಿ ಸೃಷ್ಟಿಯಾಗುತ್ತಾರೆ? ಈ ಮಾತು ಕೆಲವು ವರ್ಷಗಳ ಹಿಂದೆ ಕೇಳಿದರೆ ’ಚಲನಚಿತ್ರೋತ್ಸವಗಳಲ್ಲಿ’ ಎನ್ನುವ ಮಾತಿತ್ತು. ಕ್ರಮೇಣ ಈ ಮಾತಿನಿಂದ ಚಿತ್ರೋತ್ಸವಗಳೇ ಕೊಂಚ ದೂರವಾಗುತ್ತಾ ಬಂದವು. ಈಗ ಮತ್ತೆ ಮರಳಿ ಚಲನಚಿತ್ರರಂಗದ ಹೊಸ ಬೆಳೆಯ ಜತೆಗೆ ಚಿತ್ರೋತ್ಸವಗಳು ಹೆಜ್ಜೆ ಇಡಲು ಆರಂಭಿಸಿದ್ದಾವೆಯೇ?
ಈ ಮಾತನ್ನು ಸಂಪೂರ್ಣ ಹೌದು ಎನ್ನದಿದ್ದರೂ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ [ಇಫಿ] ಮೂರು ವರ್ಷಗಳಿಂದ ಅಂಥದೊಂದು ಸಣ್ಣ ಪ್ರಯತ್ನ ನಡೆಯುತ್ತಿದೆ.
ಭಾರತವು ಸ್ವಾತಂತ್ರ್ಯ ಸಂಭ್ರಮದ ಎಪ್ಪತ್ತೈದನೇ ವರ್ಷದ ಸಂಭ್ರಮದಲ್ಲಿದ್ದಾಗ ಅದರ ಸವಿನೆನಪಿಗೆಂದು ಆರಂಭವಾದದ್ದು ’75 ಪ್ರತಿಭಾವಂತ ಭವಿಷ್ಯದ ಚಲನಚಿತ್ರ ಕರ್ತೃಗಳನ್ನು ಹುಡುಕುವ, ಬೆಳೆಸುವ ಕಾರ್ಯಕ್ರಮ. ಅದು 75 ಕ್ರಿಯೇಟಿವ್ ಮೈಂಡ್ಸ್ ಎಂಬುದು.
ಅದರ ಮೂರನೇ ಆವೃತ್ತಿಯೂ ಈ ಬಾರಿ ಜೋರಾಗಿ ನಡೆಯುತ್ತಿದೆ. ಹಿರಿಯ ಸಿನಿಮಾ ಕರ್ತರು, ಚಲನಚಿತ್ರರಂಗದ ಪರಿಣಿತರು ಸೇರಿದ ಆಯ್ಕೆದಾರರ ಪಟ್ಟಿ ಈ ಪ್ರತಿಭಾವಂತರನ್ನು ಆಯ್ಕೆ ಮಾಡುತ್ತದೆ. ಈ ಬಾರಿ ನಾಳೆಯ ಭರವಸೆಯ ಸಿನಿಮಾ ಪ್ರತಿಭೆಗಳು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿರುವುದು ವಿಶೇಷ ಸಂಗತಿ.
ಆಂಧ್ರ ಪ್ರದೇಶ, ತಮಿಳುನಾಡು, ಅಸ್ಸಾಂ, ಬಿಹಾರ, ದಿಲ್ಲಿ, ಗೋವಾ, ಗುಜರಾತ್, ಹರಿಯಾಣ, ಜಮ್ಮು ಮತ್ತುಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ ಪ್ರತಿಭೆಗಳು ಈ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ವಿಷಾದದ ಸಂಗತಿಯೆಂದರೆ ಕರ್ನಾಟಕದ ಒಬ್ಬರೂ ಇಲ್ಲಿ ಸ್ಥಾನ ಪಡೆದಿಲ್ಲ. ಎಲ್ಲರೂ ಮೂವತ್ತೖದು ವರ್ಷಗಳೊಳಗಿನವರು.
ಈ ಎಲ್ಲ ಭರವಸೆಯ ಸಿನಿಮಾ ಕರ್ತೃಗಳಿಗೆ ಮಾಸ್ಟರ್ ಕ್ಲಾಸ್‌ಗಳು, ತರಬೇತಿ ಇತ್ಯಾದಿಯನ್ನು ವಿಶೇಷವಾಗಿ ಚಿತ್ರೋತ್ಸವಗಳಲ್ಲಿ ಆಯೋಜಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಈ ಬಾರಿ ಆಯ್ಕೆಗೊಂಡವರಲ್ಲಿ ಕೆಲವು ಗ್ರಾಮೀಣ ಪ್ರತಿಭೆಗಳೂ ಇದ್ದಾರೆ.
ಚಲನಚಿತ್ರ ಕ್ಷೇತ್ರದ ನಿರ್ದೇಶನ, ಚಿತ್ರಕಥೆ, ಛಾಯಾಗ್ರಹಣ, ನಟನೆ, ಸಂಕಲನ, ಹಿನ್ನೆಲೆ ಗಾಯನ, ಸಂಗೀತ ಸಂಯೋಜನೆ, ವೇಷಭೂಷಣ-ಮತ್ತು-ಮೇಕಪ್, ಕಲಾ ವಿನ್ಯಾಸ ಮತ್ತು ಅನಿಮೇಷನ್, ವಿಷುವಲ್ ಎಫೆಕ್ಟ್ಸ್ (VFX), ಎ ಆರ್, ವಿಆರ್, ವರ್ಧಿತ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR) ವಿಭಾಗಗಳು ಇದರಲ್ಲಿ ಸೇರಿವೆ.
“48 ಗಂಟೆಗಳ ಫಿಲ್ಮ್ ಮೇಕಿಂಗ್ ಚಾಲೆಂಜ್” ನ ಭಾಗವಾಗಿ ಕಿರುಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಅದು ಸ್ಪರ್ಧೆಯಾಗಿದ್ದು, ಎಲ್ಲರೂ ಭಾಗವಹಿಸುವರು. ಈ ಹಿಂದಿನ ಎರಡು ವರ್ಷಗಳಲ್ಲಿಯೂ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.