Fraud: ಹಾಲಶ್ರೀ ಮಠದಲ್ಲಿ 56 ಲಕ್ಷ ರೂ. ತಂದಿಟ್ಟ ವಕೀಲ
Team Udayavani, Sep 21, 2023, 12:43 AM IST
ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಅಭಿನವ ಹಾಲಶ್ರೀ ಸಿಸಿಬಿ ಬಲೆಗೆ ಬೀಳುತ್ತಿದ್ದಂತೆ ಅವರ ಆಪ್ತ ಪ್ರಣವ್ 56 ಲಕ್ಷ ರೂ. ನಗದನ್ನು ಹಾಲಸ್ವಾಮಿ ಮಠಕ್ಕೆ ಕೊಟ್ಟು ತೆರಳಿರುವುದು ಕುತೂಹಲಕ್ಕೀಡು ಮಾಡಿದೆ.
ಹಾಲಶ್ರೀ ಸಿಕ್ಕಿ ಬಿದ್ದರೆ ಪ್ರಕರಣದಲ್ಲಿರುವ ದೊಡ್ಡವರ ಹೆಸರೂ ಬಹಿರಂಗಗೊಳ್ಳಲಿದೆ ಎಂದು ಚೈತ್ರಾ ಕುಂದಾಪುರ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಮಾಧ್ಯಮಗಳ ಮುಂದೆ ಹೇಳಿದ್ದಳು. ಇದೀಗ ಹಾಲಶ್ರೀಗಳಿಗೆ ಸಿಸಿಬಿ ಡ್ರಿಲ್ ಮಾಡುತ್ತಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಪ್ರಭಾವಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಇದರ ಬೆನ್ನಲ್ಲೇ ಹಾಲಶ್ರೀ ಆಪ್ತ ಪ್ರಣವ್ ಈ ಕುರಿತಾಗಿ ವೀಡಿಯೋ ಹೇಳಿಕೆ ನೀಡಿ, ಬ್ಯಾಗ್‌ವೊಂದರಲ್ಲಿದ್ದ 56 ಲಕ್ಷ ರೂ. ನೋಟನ್ನು ತೋರಿಸಿ ಇದು ಅಭಿನವ ಹಾಲಶ್ರೀಗೆ ಸೇರಿದ್ದು ಎಂದಿದ್ದಾರೆ. ಬಳಿಕ ದುಡ್ಡಿನ ಬ್ಯಾಗ್ ಅನ್ನು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠದಲ್ಲಿ ಇಟ್ಟು ತೆರಳಿದ್ದಾರೆ. ಇದೀಗ ಸಿಸಿಬಿ ಪೊಲೀಸರು ಈ ದುಡ್ಡಿನ ಮೂಲದ ಬಗ್ಗೆ ಕೆದಕುತ್ತಿದ್ದು, ಹಾಲಶ್ರೀಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವೀಡಿಯೋದಲ್ಲೇನಿದೆ?
ಹಡಗಲಿ ಮಠದ ಅಭಿನವ ಹಾಲಶ್ರೀ ಈ ಹಣವನ್ನು ನನ್ನ ಮೈಸೂರಿನ ಕಚೇರಿಯಲ್ಲಿ ಅವರ ಕಾರು ಚಾಲಕ ರಾಜು ತಂದುಕೊಟ್ಟಿರುತ್ತಾನೆ. ಈ ಹಣ ಯಾರಿಗೆ ಸೇರಬೇಕು ಎಂಬುದು ನನಗೆ ಮಾಹಿತಿ ಇಲ್ಲ. ಈಗ ಅವರ ತಂದೆ ಹಡಗಲಿ ಮಠದಲ್ಲಿ ವಾಸವಿದ್ದು, ಅವರಿಗೆ ಈ ಹಣ ತಲುಪಿಸಲು ಈಗ ಹೋಗುತ್ತಿದ್ದೇನೆ. ಹಾಲಶ್ರೀ 60 ಲಕ್ಷ ರೂ. ಕೊಟ್ಟಿದ್ದರು. ಅದರಲ್ಲಿ 4 ಲಕ್ಷ ರೂ. ಅನ್ನು ಅವರ ಕಾರು ಚಾಲಕ ವಕೀಲರ ಶುಲ್ಕವೆಂದು ಕೊಟ್ಟಿದ್ದಾನೆ. 56 ಲಕ್ಷ ರೂ. ನನ್ನ ಕಚೇರಿಯಲ್ಲಿ ಇಟ್ಟು ಹೋಗಿರುತ್ತಾರೆ. ಇಷ್ಟು ದಿನವಾದರೂ ಅವರು ಬಾರದ ಕಾರಣ ಈ ಹಣವನ್ನು ಹಾಲಶ್ರೀ ಅಪ್ಪನವರಿಗೆ ಕೊಡುತ್ತೇನೆ ಎಂದು ಒಂದು ವೀಡಿಯೋದಲ್ಲಿ ಪ್ರಣವ್ ಹೇಳಿದ್ದಾರೆ. ಇದಾದ ಅನಂತರ ಮಠದಲ್ಲಿ ದುಡ್ಡನ್ನು ಇಟ್ಟಿರುವ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.
ಡಿಸಿಪಿಗೆ ಬರೆದ ಪತ್ರ; ಏನಿದೆ?
ಪ್ರಕರಣದ ತನಿಖಾಧಿಕಾರಿ ಸಿಸಿಬಿ ಡಿಸಿಪಿ-2 ಅಬ್ದುಲ್ ಅಹದ್ ಅವರಿಗೂ ಪ್ರಣವ್ ಪತ್ರ ಬರೆದಿದ್ದಾರೆ. ನಾನು ವಕೀಲ ವೃತ್ತಿ ಮಾಡಿಕೊಂಡಿದ್ದೇನೆ. ಅಭಿನವ ಹಾಲಶ್ರೀ ಸ್ವಾಮೀಜಿಗೂ, ನನಗೂ, ನನ್ನ ಕುಟುಂಬಸ್ಥರಿಗೂ ಪರಿಚಯವಿತ್ತು. ಸದಾ ಸ್ವಾಮೀಜಿಯ ಜತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದೆವು. ಅನಂತರ ಕರೆ ಮಾಡಿದ ಚಾಲಕ ರಾಜು ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದರು. ಜತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು. ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ನನಗೆ ಜೀವ ಭಯವಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ದುಡ್ಡು ವಾಪಾಸ್ ಕೊಡುತ್ತೇನೆ
ಗೋವಿಂದ ಬಾಬು ಪೂಜಾರಿಗೆ ಈಗಾಗಲೇ 50 ಲಕ್ಷ ವಾಪಾಸ್ ಕೊಟ್ಟಿದ್ದು, ಉಳಿದ ದುಡ್ಡನ್ನು ಕೊಡುವುದಾಗಿ ಹೇಳಿದ್ದಾರೆ ಎಂದು ಸಿಸಿಬಿ ವಿಚಾರಣೆ ವೇಳೆ ಹಾಲಶ್ರೀ ಹೇಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗೋವಿಂದ ಪೂಜಾರಿಯನ್ನು ಬೇರೆಯವರು ಪರಿಚಯ ಮಾಡಿಸಿದ್ದಾರೆ. ಟಿಕೆಟ್ ಕೊಡಿಸುವುದಾಗಿ ದುಡ್ಡು ಪಡೆದಿಲ್ಲ. ನಾನು ಪಡೆದ ದುಡ್ಡಿಗೆ ಮಾತ್ರ ನಾನು ಹೊಣೆಯಾಗುತ್ತೇನೆ ಹೊರತು ಬೇರೆಯವರ ಹಣದ ಬಗ್ಗೆ ಗೊತ್ತಿಲ್ಲ ಎಂದು ಪ್ರಕರಣದಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರನ್ನು ವಿಚಾರಣೆ ನಡೆಸಿ ಕೆಲವೊಂದು ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಸೆ. 29ರ ವರೆಗೆ ಹಾಲ ಶ್ರೀ ಸಿಸಿಬಿ ವಶಕ್ಕೆ
ಮಂಗಳವಾರ ಬಂಧನಕ್ಕೊಳಗಾಗಿದ್ದ ಹಾಲಶ್ರೀಗಳನ್ನು ಸಿಸಿಬಿ ಪೊಲೀಸರು ಬುಧವಾರ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ, ಮಹಜರು ಪ್ರಕ್ರಿಯೆ ಮಾಡಲು ವಶಕ್ಕೆ ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಸಿಸಿಬಿಯ ಈ ಮನವಿ ಪುರಸ್ಕರಿಸಿದ ಕೋರ್ಟ್ ಹಾಲಶ್ರೀಗಳನ್ನು ಸೆ. 29ರ ವರೆಗೆ ಸಿಸಿಬಿ ವಶಕ್ಕೆ ನೀಡಿದೆ. ಮತ್ತೂಂದೆಡೆ ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆ ಕಾಯ್ದಿರಿಸಲಾಗಿದೆ.
ಅರ್ಚಕರ ವೇಷದಲ್ಲೂ ಹುಡುಕಾಟ
ಹಾಲಶ್ರೀ ಬಂಧನಕ್ಕೂ ಮುನ್ನ ಸಿಸಿಬಿಯ ಕೆಲ ಸಿಬಂದಿ ಹಾಲಶ್ರೀಗಳನ್ನು ಬೆನ್ನತ್ತಿ ಹೋದ ಸಂದರ್ಭದಲ್ಲಿ ಅರ್ಚಕರ ವೇಷದಲ್ಲಿ ಕೆಲವೊಂದು ದೇವಾಲಯಗಳಿಗೆ ಭೇಟಿ ಕೊಟ್ಟು ಹುಡುಕಾಟ ನಡೆಸಿದ್ದರು. ಒರಿಸ್ಸಾದ ಪೂರಿ ಜಗನ್ನಾಥ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು. ಅರ್ಚಕರ ಸೋಗಿನಲ್ಲಿ ಪೂಜೆ ಸಲ್ಲಿಸಿ ಸ್ವಾಮೀಜಿ ಕುರಿತು ವಿಚಾರಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.