ಡೀಮ್ಡ್ ಅರಣ್ಯದಿಂದ 6.5 ಲಕ್ಷ ಎಕರೆ ಭೂಮಿ ಹೊರಗೆ: ಬೊಮ್ಮಾಯಿ
Team Udayavani, Apr 28, 2022, 7:10 AM IST
ಮಂಗಳೂರು: ರಾಜ್ಯದ 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಹೊರಗಿಡುವ ಮೂಲಕ ಬಹುಜನರ ಸುದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ ಹಾಗೂ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 374.71 ಕೋ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಮೂಡುಬಿದಿರೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಡೀಮ್ಡ್ ಫಾರೆಸ್ಟ್ ಕಾರಣದಿಂದ ಬಹಳಷ್ಟು ಜನರು ಕಿರುಕುಳ ಅನುಭವಿಸುತ್ತಿದ್ದಾರೆ. ಸುದೀರ್ಘ ಕಾಲದ ಈ ಸಮಸ್ಯೆ ಪರಿಹಾರವನ್ನೇ ಕಂಡಿಲ್ಲ. ಆದರೆ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇದೀಗ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಇದೇ ರೀತಿ ಕರಾವಳಿ ಭಾಗದ ಬಹುಕಾಲದ ಸಮಸ್ಯೆ ಕುಮ್ಕಿ, ಕಾನ ಬಾಣೆ, ಸೊಪ್ಪಿನ ಬೆಟ್ಟ ಸಮಸ್ಯೆಯನ್ನೂ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಅಭಿವೃದ್ಧಿ ಪರ್ವ
ರಾಜ್ಯದಲ್ಲಿ ಈ ವರ್ಷ ಅಭಿವೃದ್ಧಿ ಪರ್ವ. ಕರಾವಳಿಯು ಅದಕ್ಕೆ ನಾಯಕತ್ವ ವಹಿಸಬೇಕು. ಈ ಮೂಲಕ ಕರ್ನಾಟಕಕ್ಕೆ ಪ್ರೇರಣೆ ಸಿಗಲಿದೆ. ಆ ಕಾರಣಕ್ಕಾಗಿಯೇ ಕರಾವಳಿಗೆ ಬಂದಿದ್ದೇನೆ. ಜನರ ಆಶೀರ್ವಾದ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಹಾಗೂ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಶಾಸಕ ಉಮಾನಾಥ ಕೋಟ್ಯಾನ್ ಮೂಲಕ ಮೂಡುಬಿದಿರೆಯಲ್ಲಿ ಅಭಿವೃದ್ಧಿ ಪರ್ವ ಆರಂಭ ಆಗಿದೆ. ಕುಡಿಯುವ ನೀರು, ಆಡಳಿತ ಸೌಧ ಸಹಿತ ವಿವಿಧ ಅಭಿವೃದ್ಧಿ ಚಟುವಟಿಕೆಯ ಕಾಮನ ಬಿಲ್ಲು ಕಾಣಿಸಿಕೊಂಡಿದೆ. ಸಿಎಂ ಆಗಿ ನಾನು ನನ್ನ ಕ್ಷೇತ್ರದಲ್ಲಿ ಮಾಡದಷ್ಟು ಯೋಜನೆ ಯನ್ನು ಕೋಟ್ಯಾನ್ ಇಲ್ಲಿ ಸಾಕಾರ ಮಾಡಿದ್ದಾರೆ.ಶಾಸಕರ ಕೋರಿಕೆ ಮೇರೆಗೆ ಆಡಳಿತ ಸೌಧದ ಪೀಠೊಪಕರಣಕ್ಕೆ 2 ಕೋ.ರೂ ಹಾಗೂ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆ ಎಂದರು.
ಕ್ರಿಯಾಶೀಲ ಶಾಸಕ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮಾತನಾಡಿ, ಒಬ್ಬ ಕ್ರಿಯಾಶೀಲ ಶಾಸಕ ತಾಲೂಕಿನ ಅಭಿವೃದ್ಧಿಗೆ ಯಾವ ರೀತಿ ಪ್ರಯತ್ನ ಮಾಡುತ್ತಾನೆ ಎಂಬುದಕ್ಕೆ ಉಮಾನಾಥ ಕೋಟ್ಯಾನ್ ಉದಾಹರಣೆ. ಶಾಸಕನಾದ ಬಳಿಕ ಕ್ಷೇತ್ರದ ಸಮಸ್ಯೆಗಳನ್ನು ಅರ್ಥ ಮಾಡಿ ಪರಿಹಾರ ಕಂಡು ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಅವರು ಮಾಡಿರುವ ಕಾರಣಕ್ಕೆ ಇಂದು ಕ್ಷೇತ್ರ ಬೆಳವಣಿಗೆ ಕಾಣುವಂತಾಗಿದೆ ಎಂದರು.
ನುಡಿದಂತೆ ನಡೆದ ಕೋಟ್ಯಾನ್
ಸಂಸದ ನಳಿನ್ ಕುಮಾರ್ ಮಾತನಾಡಿ, ನುಡಿದಂತೆ ನಡೆದು ಇಚ್ಛಾಶಕ್ತಿ ಪ್ರದರ್ಶಿಸಿ ಶಾಸಕ ಕೋಟ್ಯಾನ್ ಅವರು ಅಭಿವೃದ್ಧಿಯ ಮಹಾಪರ್ವ ಆರಂಭಿಸಿದ್ದಾರೆ. ತನ್ನ ಅವಧಿಯಲ್ಲಿ 1,400 ಕೋ.ರೂಗಳ ಯೋಜನೆ
ಗಳನ್ನು ಅನುಷ್ಠಾನಿಸಿದ್ದಾರೆ. ಮೂಲ್ಕಿಯ ಲ್ಲಿಯೂ ಮುಂದಿನ ವರ್ಷ ಆಡಳಿತ ಸೌಧ ನಿರ್ಮಾಣವಾಗಲಿದೆ. ಬಿಕರ್ನಕಟ್ಟೆ- ಮೂಡುಬಿದಿರೆ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಕೋಸ್ಟ್‌ಗಾರ್ಡ್ ಕೂಡ ಈ ಕ್ಷೇತ್ರದಲ್ಲಿ ಸಾಕಾರವಾಗಲಿದೆ ಎಂದರು.
ಶಾಸಕ ಎ. ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ವಿ. ಸುನಿಲ್ ಕುಮಾರ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸೋಮಣ್ಣ, ಬಿ.ಸಿ. ನಾಗೇಶ್, ಡಾ| ಕೆ. ಸುಧಾಕರ್, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯ್ಕ, ರಘುಪತಿ ಭಟ್, ವಿವಿಧ ನಿಗಮಗಳ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ನಿತಿನ್ ಕುಮಾರ್, ಸಂತೋಷ್ ಕುಮಾರ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮೇಘನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಜಿ.ಪಂ. ಸಿಇಒ ಡಾ| ಕುಮಾರ್, ಎಡಿಸಿ ಕೃಷ್ಣಮೂರ್ತಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸ್ವಾಗತಿಸಿದರು. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಜೈನಮಠ, ಸಾವಿರ ಕಂಬದ ಬಸದಿಗೆ ಮುಖ್ಯಮಂತ್ರಿ
ಮೂಡುಬಿದಿರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಮೂಡುಬಿದಿರೆ ಶ್ರೀ ಜೈನ ಮಠ ಹಾಗೂ ಸಾವಿರ ಕಂಬ ಬಸದಿಗೆ ಭೇಟಿ ನೀಡಿದರು.
ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸ್ವಾಗತಿಸಿ ಅಭಿನಂದನ ಪತ್ರ ನೀಡಿ ಗೌರವಿಸಿದರು. ಬಸದಿ ಹಾಗೂ ಶ್ರೀ ಮಠದ ಜೀರ್ಣೋದ್ಧಾರಕ್ಕೆ 5 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು ಶೀಘ್ರ ಬಿಡುಗಡೆಯಾಗಲಿ. ಅಂತಾರಾಷ್ಟ್ರೀಯ ಜೈನ ಪುರಾತತತ್ವ ವಸ್ತು ಸಂಗ್ರಹಾಲಯ, ರಮಾರಾಣಿ ಶೋಧ ಸಂಸ್ಥಾನಕ್ಕೆ ಸೂಕ್ತ ಅನುದಾನ ಸಿಗಲಿ ಎಂದು ವಿವಿಧ ಬೇಡಿಕೆಗಳ ಯೋಜನಪತ್ರವನ್ನು ಮುಖ್ಯಮಂತ್ರಿಯವ ರಿಗೆ ನೀಡಿದರು. ಸಚಿವ ಸುನಿಲ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್ ಮೊದಲಾದವರಿದ್ದರು.
ನಮ್ಮದು “ಪೀಪಲ್ಸ್ ಪಾಲಿಟಿಕ್ಸ್’!
ಜನರ ಸಮಸ್ಯೆಗಳನ್ನು ಹಾಗೆಯೇ ಇರಿಸಿಕೊಂಡು ಅದರ ಮೂಲಕವೇ ರಾಜಕಾರಣ ಮಾಡುವವರು ಹಲವರಿದ್ದಾರೆ. ಯಾಕೆಂದರೆ ಸಮಸ್ಯೆ ಪರಿಹಾರ ವಾದರೆ ಅವರ ಜತೆಗೆ ಯಾರೂ ಇರುವುದಿಲ್ಲ. ಸಮಸ್ಯೆ ಇದ್ದರೆ ಮಾತ್ರ ಜನರು ಜತೆಗೇ ಅಲೆದಾಡುತ್ತಿರುತ್ತಾರೆ ಎಂಬುದು ಅವರ ಅನಿಸಿಕೆ. ಅಂತಹ ಪವರ್ ಪಾಲಿಟಿಕ್ಸ್ ನಮ್ಮದಲ್ಲ; ನಮ್ಮದು ಪೀಪಲ್ಸ್ ಪಾಲಿಟಿಕ್ಸ್. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ಕಾಯಕ. ಶುದ್ಧ ರಾಜಕಾರಣ ಮಾಡುವವರು ನಾವು ಎಂದು ಬೊಮ್ಮಾಯಿ ಹೇಳಿದರು.
ವಿಪಕ್ಷದವರು ಕೆಲಸಕ್ಕೆ ಬಾರದ ಕೆಲವು ವಿಚಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ರಾಜ್ಯದ ಅಭಿವೃದ್ಧಿಯೇ ನನಗೆ ಮುಖ್ಯ. ನನಗೆ ಅಭಿವೃದ್ಧಿ ಕೆಲಸ ಮಾಡಲು ದಿನದ 24 ಗಂಟೆಯೂ ಸಾಲದು. ಹೀಗಾಗಿ ಸರಿ ತಪ್ಪು ಏನು ಎಂಬುದನ್ನು ಜನರು ತೀರ್ಮಾನ ಕೈಗೊಳ್ಳಲಿ ಎಂದರು.
1,468 ಕೋ.ರೂ. ಯೋಜನೆ ಸಾಕಾರ: ಕೋಟ್ಯಾನ್
ಶಾಸಕನಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 1,468 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಡಳಿತ ಸೌಧದ ಕಚೇರಿ ಸರ್ವ ಇಲಾಖೆಗೂ ಹಾಗೂ ಜನರಿಗೆ ಸೇತುವಾಗಿ ಸೇವೆ ಸಲ್ಲಿಸಲಿದೆ. ಕಾರ್ಯಕರ್ತರು ಹಾಗೂ ಜನಸಾಮಾನ್ಯರ ನಿರಂತರ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದಾಗಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.